ಪಿಜಿ ಇನ್ & ಔಟ್!
ವಲಸೆ ಬಂದ ಹಕ್ಕಿಗಳು ಹೊಸ ಜಾಗದಲ್ಲೊಂದು ತಾತ್ಕಾಲಿಕ ಗೂಡು ಕಟ್ಟುತ್ತವಲ್ಲ, ಈ ಪೇಯಿಂಗ್‌ಗೆಸ್ಟ್‌ಗಳೂ ಹಾಗೆಯೇ.. ಬಾಡಿಗೆ ಮನೆಗಳಲ್ಲಿರುವಂತೆ ವರ್ಷಗಟ್ಟಲೆ ಇರಬೇಕೆಂಬ ಒಪ್ಪಂದ ಇಲ್ಲಿಲ್ಲ. ಅಗತ್ಯವಿದ್ದಷ್ಟು ದಿನ ಪೇಯಿಂಗ್‌ಗೆಸ್ಟ್ ಆಗಿ ಉಳಿದುಕೊಳ್ಳಬಹುದು. ಊರು ಬಿಟ್ಟು- ಪರ ಊರಿಗೆ ವಿದ್ಯೆ, ಉದ್ಯೋಗ ಅರಸಿ ಬರುವವರಿಗೆ ದುಬಾರಿ ಬಾಡಿಗೆ ಮನೆಯ ಬದಲು ಪಿಜಿಗಳು ಉತ್ತಮ ಪರ್ಯಾಯ. ಜತೆಗಾರರನ್ನು ಹುಡುಕಬೇಕಾದ ಅನಿವಾರ್ಯತೆಯೂ ಇರದು. ಇಲ್ಲೇ ಆಹಾರ ಸೌಲಭ್ಯವಿರುವುದರಿಂದ ಅಡುಗೆ ಮಾಡಿಕೊಳ್ಳಬೇಕಾದ ಅಥವಾ ನಿತ್ಯ ಹೊರಗಡೆಯ ಆಹಾರ ಸೇವಿಸಬೇಕಾದ ಸಮಸ್ಯೆ ಇರದು. ಹೊಸ ಜಾಗಕ್ಕೆ ಬಂದವರು ಮಂಚ, ಕುರ್ಚಿ, ಮೇಜು, ಮತ್ತಿತರೆ ವಸ್ತುಗಳನ್ನು ದುಬಾರಿ ಬೆಲೆ ತೆತ್ತು ಕೊಳ್ಳುವ ಕಷ್ಟವೂ ಇರದು. ಜಾಗರೂಕತೆಯಿಂದ ಪಿಜಿ ಆಯ್ಕೆ ಮಾಡಿಕೊಂಡಲ್ಲಿ ಅಗತ್ಯ ಸುರಕ್ಷತೆ, ಇತರೆ ಸೌಲಭ್ಯಗಳ ಜತೆಗೆ ಆರಾಮದಾಯಕ ದಿನಗಳನ್ನು ಕಳೆಯಬಹುದು.
ಸೌಕರ್ಯ
ಕೆಲ ಪಿಜಿಗಳು ತೀರ ಅಗತ್ಯವಿರುವ ವಸ್ತುಗಳನ್ನಷ್ಟೇ ಒದಗಿಸುತ್ತವೆ. ಅದು ಮಂಚ, ಕಪಾಟು, ಬಿಸಿ ನೀರಿನ ವ್ಯವಸ್ಥೆ, ಎರಡು ಅಥವಾ ಮೂರು ಬಾರಿಯ ಊಟೋಪಚಾರ, ಹಾಗೂ ಹಾಲ್‌ನಲ್ಲೊಂದು ಕಾಮನ್ ಟಿವಿಗೆ ಸೀಮಿತವಾಗಬಹುದು. ವಸತಿ ಸೌಕರ್ಯವನ್ನು ಮಾತ್ರ ನೀಡುವ ಪಿಜಿಗಳೂ ಇವೆ. ಆಗ ಊಟ-ತಿಂಡಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಕೆಲ ಲಗ್ಜುರಿ ಪಿಜಿಗಳಲ್ಲಿ ವೈ-ಫೈ ಇಂಟರ್ನೆಟ್, ಪ್ರತಿ ರೂಮಲ್ಲೂ ಟಿವಿ, ಏಸಿ, ವಾಶಿಂಗ್ ಮಷೀನ್, ವಾರ್‌ಡ್ರೋಬ್, ಮತ್ತು ಡ್ರೆಸ್ಸಿಂಗ್ ಟೇಬಲ್ಲುಗಳೂ ಇರುತ್ತವೆ. ಕನ್ನಡಿಯ ಮುಂದೆ ಹೆಚ್ಚು ಸಮಯ ಕಳೆಯುವವರು ನೀವಾದಲ್ಲಿ ಈ ಬಗ್ಗೆಯೂ ಯೋಚಿಸಿ. ಇವೆಲ್ಲ ಬೇಕು ಅಂದ್ರೆ ಪಾಕೆಟ್‌ನಿಂದ ಕೊಂಚ ಹೆಚ್ಚು ಹಣ ಬಿಚ್ಚ ಬೇಕಾಗುತ್ತದೆಯಷ್ಟೇ...
ತಿಂಗಳ ಬಾಡಿಗೆ
ಪಿಜಿಯಲ್ಲಿ ದೊರಕುವ ಸೌಲಭ್ಯ, ಊಟ-ತಿಂಡಿ, ಒಂದು ರೂಮಲ್ಲಿ ಎಷ್ಟು ಜನರನ್ನ ನಿಯುಕ್ತಿ(ಝಛ್ಠ್ಝಟ್ಜಿ) ಮಾಡಿದ್ದಾರೆ, ಮತ್ತು ಯಾವ ಏರಿಯಾದಲ್ಲಿ ಪಿಜಿ ಇದೆ ಎನ್ನುವುದರ ಆಧಾರದ ಮೇಲೆ ದರ ನಿರ್ಧಾರವಾಗುತ್ತದೆ. ಬೆಂಗಳೂರಿನಂಥಾ ದೊಡ್ಡ ಸಿಟಿಯಲ್ಲಿ ಮೂರೂವರೆ ಸಾವಿರದಿಂದ ಎಂಟು ಸಾವಿರದ ವರೆಗಿನ ಪಿಜಿಗಳೂ ದೊರೆಯುತ್ತವೆ. ಒಬ್ಬರೇ ಪ್ರತ್ಯೇಕ ರೂಂ ಬಯಸಿದಲ್ಲಿ ಆರೇಳು ಸಾವಿರದವರೆಗೂ ಕೊಡಬೇಕಾಗಬಹುದು. ಒಂದೊಮ್ಮೆ ಆಹಾರ ಸೌಲಭ್ಯ ಇಲ್ಲವಾದಲ್ಲಿ ಎರಡರಿಂದ ನಾಲ್ಕು ಸಾವಿರದಲ್ಲೇ ಸಿಗಲೂಬಹುದು.
ಸುರಕ್ಷತಾ ಮುಂಗಡ
ಇದು ಸಾಮಾನ್ಯವಾಗಿ ತಿಂಗಳ ಬಾಡಿಗೆಯಷ್ಟೇ ಇರುತ್ತದೆ. ನೀವು ಪಿಜಿಯಲ್ಲಿ ಉಳಿಯುವ ಸಮಯದಲ್ಲಿ ನಿಮ್ಮಿಂದ ಏನಾದರೂ ಹಾನಿಯಾದಲ್ಲಿ ಪರಿಹಾರಕ್ಕಾಗಿ ಎಂದು ಪಡೆಯಲಾಗುತ್ತದೆ. ಪಿಜಿ ಬಿಡುವಾಗ ನಿರ್ವಹಣಾ ವೆಚ್ಚವಾಗಿ ಐನೂರರಿಂದ- ಸಾವಿರವನ್ನು ಮುರಿದುಕೊಂಡು ಉಳಿದ ಮೊತ್ತವನ್ನು ಹಿಂದಿರುಗಿಸುತ್ತಾರೆ.
ಗಮನದಲ್ಲಿಡಲೇಬೇಕಾದ ಅಂಶಗಳು:
ವಸತಿ ಮಾತ್ರವೇ ಅಥವಾ ವಸತಿಯ ಜತೆಗೆ ಊಟೋಪಚಾರವೂ ಇದೆಯೇ, ಇದ್ದಲ್ಲಿ ಸಸ್ಯಾಹಾರ, ಮಾಂಸಾಹಾರ ಮತ್ತು ದಕ್ಷಿಣ ಅಥವಾ ಉತ್ತರ ಭಾರತದ ಶೈಲಿಯ ಆಹಾರವೇ ಪರಿಶೀಲಿಸಿಕೊಳ್ಳಿ.
ರೂಮಿನ ವಿಸ್ತಾರ, ಗಾಳಿ-ಬೆಳಕು, ಸ್ವಚ್ಛತೆ, ಮತ್ತು ಇತರೆ ಸೌಲಭ್ಯಗಳು (ಇಂಟರ್‌ನೆಟ್, ಟಿವಿ, ವಾಹನವಿದ್ದಲ್ಲಿ ಪಾರ್ಕಿಂಗ್ ಸ್ಥಳ ಇತ್ಯಾದಿ.)
ಹಂಚಿಕೆ (sharing)- ನೀವು ಉಳಿದುಕೊಳ್ಳುವ ರೂಮಿಗೆ ಎಷ್ಟು ಜನರನ್ನ ನಿಯುಕ್ತಿಗೊಳಿಸುತ್ತಾರೆ ಎಂಬುದನ್ನು ಮೊದಲೇ ಖಾತ್ರಿ ಮಾಡಿಕೊಳ್ಳಿ.
ಸುರಕ್ಷತಾ ಮುಂಗಡ, ತಿಂಗಳ ಬಾಡಿಗೆ, ಪ್ರತಿ ಬಾರಿ ಕಟ್ಟಲು ನಿಗದಿ ಪಡಿಸಿದ ಅವಧಿ. ಪಿಜಿ ಬಿಡುವಾಗ ಮರುಪಾವತಿಯಾಗುವ ಮೊತ್ತ. ಎಲ್ಲದರ ರಸೀತಿ ಕಾಯ್ದಿಟ್ಟುಕೊಳ್ಳಿ.
ಒಂದೊಮ್ಮೆ ಪಿಜಿ ಬಿಡುವಿರಾದರೆ ಮುಂಚಿತವಾಗಿಯೇ ಪಿಜಿ ನಿರ್ವಾಹಕರಿಗೆ ತಿಳಿಸಬೇಕಾಗುತ್ತದೆ. ಈ ಅವಧಿಯ ಬಗ್ಗೆ ಲಕ್ಷ್ಯವಿರಲಿ.
ಬಸ್‌ಸ್ಟಾಪ್, ಮೇನ್‌ರೋಡ್, ನಿಮ್ಮ ಕಾಲೇಜು ಅಥವಾ ಕಂಪನಿಗೆ ಇರುವ ಅಂತರವನ್ನು ವಿಚಾರಿಸಿಕೊಳ್ಳಿ. ಸರಿಯಾಗಿ ಆಯ್ಕೆ ಮಾಡಿಕೊಳ್ಳದಿದ್ದಲ್ಲಿ ನಿತ್ಯ ತೊಂದರೆ ಎದುರಿಸಬೇಕಾಗಬಹುದು.
ನಿಮ್ಮ ರೂಮಿಗೇ ಪ್ರತ್ಯೇಕ ಬಾತ್‌ರೂಮ್ ಇದ್ದಲ್ಲಿ ಅನುಕೂಲ. ಕಾಮನ್ ಬಾತ್‌ರೂಮ್ ಆದರೆ ಕ್ಯೂ ನಿಲ್ಲಬೇಕಾಗಬಹುದು, ಗಮನವಿರಲಿ.
ಪಿಜಿ ನಡೆಸುವವರ ಗಮನಕ್ಕೆ
ಪಿಜಿಗಳು ಹಾಸ್ಟೆಲ್‌ಗಳಿಗಿಂತ ವಿಭಿನ್ನ. ಇಲ್ಲಿ ತೀರ ಕಟ್ಟಳೆ- ಕಟ್ಟುಪಾಡುಗಳನ್ನು ಇಡಲು ಬರುವುದಿಲ್ಲ. ಇಟ್ಟರೂ ಅಂಥ ಕಡೆ ಯಾರೂ ಉಳಿಯಲಾರರು. ಪಿಜಿ ಕೇಳಿಕೊಂಡು ಬಂದವರ ಗುರುತಿನ ಚೀಟಿ, ವಿಳಾಸ, ಕೆಲಸ ಮಾಡುತ್ತಿರುವ ಕಂಪನಿ ಇತ್ಯಾದಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿಯೇ ನೀಡುವುದೊಳಿತು. ಇಲ್ಲವಾದಲ್ಲಿ ಮುಂದೆ ಸಮಸ್ಯೆಗಳು ಎದುರಾಗಬಹುದು ಎಚ್ಚರವಿರಲಿ.
ಪಿಜಿಯ ನಿಯಮಗಳು
ಪಿಜಿಯ ಒಳಬರುವ ಮತ್ತು ಹೊರ ಹೋಗುವ ಸಮಯ, ಊಟ-ತಿಂಡಿಗೆ ನಿಗದಿಪಡಿಸಿದ ವೇಳೆ ಹಾಗೂ ಕಾಮನ್ ಟಿವಿ ಇತ್ಯಾದಿಗಳನ್ನು ಬಳಸುವಾಗ ಇರುವ ನಿಬಂಧನೆಗಳು. ಸ್ನೇಹಿತರು ಬಂದು- ಹೋಗುವುದಕ್ಕೆ ಇರುವ ನಿರ್ಬಂಧ. ಇವೆಲ್ಲವನ್ನ ಹೊರತುಪಡಿಸಿ ಇತರರಿಗೆ ತೊಂದರೆಯಾಗದಿರಲಿ ಎಂದು ಕೆಲ ಸಾಮಾನ್ಯ ನಿಯಮಗಳು ಇರುತ್ತವಷ್ಟೇ.
-ಗುರುಪ್ರಸಾದ ಹೆಗಡೆ
prasad.hgd@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

