ಹಕ್ಕು ಚ್ಯುತಿ

ನಿಂದನೆಗೆ ಇರಲಿ ನಿರ್ಬಂಧ
ಆಕೆಗಿನ್ನೂ 5 ವರ್ಷ. ಹೆಸರು ತಿಳಿ. ಆಟಪಾಠಗಳಲ್ಲಿ ಮುಂದು. ಅಜ್ಜಿಯ ಮುದ್ದಿನ ಮೊಮ್ಮಗಳು. ಶಿಕ್ಷಕರ ನೆಚ್ಚಿನ ವಿದ್ಯಾರ್ಥಿನಿ.
ಒಮ್ಮೆ ತಾಯಿಯೊಂದಿಗೆ ಅವರ ಸಂಬಂಧಿಕರ ಮನೆಗೆ ಹೋಗಿದ್ದಳು. ಆ ಮನೆಯಲ್ಲಿ ಮತ್ತೊಂದು ಮಗು ಇತ್ತು.
ಹೆಸರು ಗುಬ್ಬಿ. ಆಕೆಯೂ ಕಿರಿಯ ಪ್ರತಿಭೆ. ಸಣ್ಣ ವಯಸ್ಸಿಗೆ ಎಲ್ಲರ ಮೆಚ್ಚುಗೆ ಗಳಿಸಿದವಳು.
'ಗುಬ್ಬಿಯಂತೂ ಎಷ್ಟು ಚೆನ್ನಾಗಿ ನೃತ್ಯ ಮಾಡುತ್ತಾಳೆ? ನನ್ನ ಮಗಳಿಗೋ ನೆಟ್ಟಗೆ ನಡೆಯಲೇ ಬರುವುದಿಲ್ಲ. ಜತೆಗೆ ವಿಪರೀತ ಹಟ ಬೇರೆ' ಎಂದು ಆಕೆಯ ತಾಯಿ ಎಲ್ಲರ ಮುಂದೆ ನಿಂದಿಸಿದರು. ಮಗಳನ್ನು ನಿಂದಿಸುವ ಮೂಲಕ ಆಕೆಯನ್ನು ತಿದ್ದುತ್ತಿದ್ದೇನೆ ಎಂದು ಆಕೆ ಭಾವಿಸಿದಂತಿತ್ತು. ಆದರೆ ಆಗಿದ್ದೇ ಬೇರೆ.
ಮಗು ದಿನೇದಿನೇ ಮಂಕಾಗತೊಡಗಿತು. ಆದರಿದು ಪೋಷಕರ ಗಮನಕ್ಕೆ ಬರಲೇ ಇಲ್ಲ. ಡಲ್ಲಾಗಿರುವ ಮಗಳ ಕಂಡು 'ಬರ್ತಾ ಬರ್ತಾ ರಾಯನ ಕುದುರೆ ಕತ್ತೆಯಾಗ್ತಾ ಬಂತಂತೆ' ಎಂದರು. ಉದಾಸೀನ ಹೆಚ್ಚು ಎಂದು ಹಂಗಿಸಿದರು. ತಮ್ಮ ಮಾತನ್ನು ಹೆಚ್ಚು ಹೆಚ್ಚು ಮೊನಚುಗೊಳಿಸುತ್ತಲೇ ಹೋದರು. ಪ್ರತಿ ಪ್ರಸಂಗವೂ ಮಗುವಿನ ಮನಸ್ಸಿನ ಮೇಲೆ ಘಾಸಿಯಾಯಿತು. ವರ್ಷಗಳ ನಂತರ ಮಗಳ ಸಮಸ್ಯೆ ಅರಿತರು. ಸದ್ಯ ಆಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇಂಥ ಪ್ರಸಂಗಗಳು ಇಂದು ಹೊಸತೇನಲ್ಲ. ಮಕ್ಕಳ ಮನಸ್ಸು ಸೂಕ್ಷ್ಮ. ಅವರ ಜತೆ ವರ್ತಿಸುವುದು ಹೇಗೆ, ಪ್ರೀತಿಯಿಂದ ಮಕ್ಕಳಿಗೆ ಎಲ್ಲವನ್ನೂ ಕಲಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳದಿದ್ದರೆ ಸಮಸ್ಯೆಯ ಗಂಟು ಬಿಗಿಯಾಗುತ್ತಲೇ ಹೋಗುತ್ತದೆ.
ನಿಂದೆಯ ಮುಂದೆ?
ನಿಂದನೆ, ಅವಮಾನ ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಇದರಿಂದ ಮಗು ಸದಾ ಒಂಟಿಯಾಗಿರ ತೊಡಗುತ್ತದೆ. ಯಾವ ಕೆಲಸದಲ್ಲೂ ಆಸಕ್ತಿ ತೋರುವುದಿಲ್ಲ. ಮಂಕಾಗಿರುತ್ತದೆ. ಊಟ ತಿಂಡಿ, ಓದಿನಲ್ಲೂ ಆಸಕ್ತಿ ಕಳೆದುಕೊಳ್ಳುತ್ತದೆ. ನಿಧಾನವಾಗಿ ಇದು ಖಿನ್ನತೆಗೆ ಎಡೆ ಮಾಡಿ ಬಿಡುತ್ತದೆ. ಇಲ್ಲವೇ ವಿಪರೀತ ಸಿಟ್ಟು, ಹಟ ಬೆಳೆಸಿಕೊಳ್ಳಲೂಬಹುದು. ಕದಿಯುವುದು, ಸುಳ್ಳು ಹೇಳುವ ದುಶ್ಚಟಕ್ಕೂ ನಿಂದೆ ದಾರಿಯಾದೀತು.
ಪ್ರೀತಿಯೇ ದಾರಿ
ಬೆಂಗಳೂರಿನ ಚೈಲ್ಡ್ ರೈಟ್ ಟ್ರಸ್ಟ್‌ನ ನಾಗಸಿಂಹ ಜಿ.ರಾವ್ ಪೋಷಕರಿಗೊಂದಿಷ್ಟು ಸಲಹೆ ನೀಡಿದ್ದಾರೆ-
ಮನೆಯ ಒಳಗೆ ಅಥವಾ ಹೊರಗೆ ಮಕ್ಕಳನ್ನು ನಿಂದಿಸುವುದನ್ನು ಬಿಟ್ಟು ಬಿಡಿ. ನಿನಗೆ ಅದು ಗೊತ್ತಿಲ್ಲ, ಇದು ಗೊತ್ತಿಲ್ಲ ಎಂದು ಮೂದಲಿಸುವುದು, ಇನ್ನೊಂದು ಮಗುವಿನೊಂದಿಗೆ ಹೋಲಿಸಿ ಮಾತನಾಡುವುದು, ಬೇರೆ ಮಕ್ಕಳು, ಹಿರಿಯರು ಇರುವಾಗ ಮಕ್ಕಳಿಗೆ ನೋವಾಗುವಂತೆ ನಡೆದುಕೊಳ್ಳುವುದು ಬಿಡಿ. ಜನ್ಮ ಕೊಟ್ಟ ಹಕ್ಕನ್ನು ಹೇಗೆ ಬೇಕೆಂದ ಹಾಗೆ ಚಲಾಯಿಸುವುದು ಸರಿಯಲ್ಲ. ಮನೆಯಲ್ಲೇ ಹೀಗೆ ಮಾಡಿದರೆ ಮಕ್ಕಳು ತಮ್ಮ ಸಮಸ್ಯೆಯನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಮನಸ್ಸಿನೊಳಗೇ ನೋವನ್ನು ಅನುಭವಿಸುತ್ತವೆ. ಮಗು ಎಲ್ಲದರಲ್ಲೂ ಪಾರಂಗತನಾಗಿರಲು ಸಾಧ್ಯವಿಲ್ಲ. ಯಾವುದರಲ್ಲಿ ಪ್ರತಿಭೆ ಇದೆಯೋ ಅದಕ್ಕೆ ನೀರೆರೆಯಿರಿ. ಸುಮ್ಮನೆ ಅತಿಯಾದ ನಿರೀಕ್ಷೆಗಳು ಮಗುವಿಗೆ ವಯಸ್ಸಿಗೆ ಮೀರಿದ ಹೊರೆಯಾಗುತ್ತವೆ.
ಒಂದು ವೇಳೆ ಮಕ್ಕಳ ಸ್ನೇಹಿತರು ಅವರನ್ನು ಈ ರೀತಿ ನಡೆಸಿಕೊಂಡು ಅವಮಾನಿಸಿದ್ದರೆ, ನೀವು ಸಾಂತ್ವನ ಹೇಳಿ. ಮಕ್ಕಳು ಯಾರೊಂದಿಗೆ ಮಾತನಾಡಿದರು, ಯಾವ ರೀತಿ ಚರ್ಚೆ ನಡೆಸಿದರು ಎಂಬುದನ್ನು ಪ್ರತಿದಿನ ಕೂಲಂಕುಶವಾಗಿ ವಿಚಾರಿಸಿ. ನೋವು ಹಂಚಿಕೊಳ್ಳಲು ತಿಳಿಸಿ. ಮನೆಯ ಕಣ್ಮಣಿ ಮಂಕಾಗದಿರಲಿ. ಒಂದು ವೇಳೆ ನಿಮ್ಮ ಮನೆಯ ಮುದ್ದು ಕಂದ ಮೇಲ್ಕಂಡ ಸಮಸ್ಯೆಗಳಿಗೆ ಒಳಗಾಗಿದ್ದಲ್ಲಿ ತಡ ಮಾಡದೇ ಅವರನ್ನು ಮಕ್ಕಳ ಮಾನಸಿಕ ತಜ್ಞರ ಬಳಿ ಕರೆದೊಯ್ಯಿರಿ. (ಚೈಲ್ಡ್ ರೈಟ್ ಟ್ರಸ್ಟ್ ಸಂಪರ್ಕ: 94484 72513, 98804 77198)
ಮಕ್ಕಳನ್ನು ಅವಮಾನಿಸಬಾರದು. ಇದರಿಂದ ಮಕ್ಕಳು ಮಾನಸಿಕ ಖಿನ್ನತೆಗೊಳಗಾಗುತ್ತಾರೆ. ಪೋಷಕರು ಹಾಗೂ ಅವರಿಗಿಂತ ಹಿರಿಯರು ಈ ಬಗ್ಗೆ ಎಚ್ಚರ ವಹಿಸಬೇಕು.
- ಎನ್.ವಿ.ವಾಸುದೇವ ಶರ್ಮ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


