ಮಹಿಳೆ-ಮನೆ-ಬದುಕು

ಕ್ಲಿಕ್.. ಕ್ಲಿಕ್..

ಕ್ಲಿಕ್.. ಕ್ಲಿಕ್..
Published On :

ಲಕ್ಷಾಂತರ ರುಪಾಯಿ ಖರ್ಚು ಮಾಡಿ ಚೆಂದದ ಮನೆ ಕಟ್ಟಿಸಿಕೊಂಡಿದ್ದೀರಿ. ಅದಕ್ಕೆ ತಕ್ಕಂತೆ ಮನೆಯಲ್ಲಿ ಒಳ್ಳೆಯ ಪೀಠೋಪಕರಣಗಳು, ಬೆಲೆಬಾಳುವ ವಸ್ತುಗಳಿವೆ. ಅದರ ರಕ್ಷಣೆಯದೇ ಚಿಂತೆ ಈಗ. ಒಂದಿಷ್ಟು ಯುಕ್ತಿ ಇದ್ದರೆ ಇವನ್ನೆಲ್ಲ ಜೋಪಾನ ಮಾಡಿಕೊಳ್ಳುವುದು ಸುಲಭ. ಜತೆಗೆ ನಿಮ್ಮನ್ನೂ ನೀವು ರಕ್ಷಿಸಿಕೊಳ್ಳಬಹುದು.
ಅದಕ್ಕಾಗಿ ನೀವು ಮೊರೆ ಹೋಗಬೇಕಿರುವುದು ಸೆಕ್ಯುರಿಟಿ ಏಜೆನ್ಸಿಗಲ್ಲ. ಬದಲಾಗಿ ಕಣ್ಗಾವಲು (ಸರ್ವಿಲೆನ್ಸ್) ಕ್ಯಾಮೆರಾಗೆ. ಹೌದು. ಇತ್ತೀಚಿನ ದಿನಗಳಲ್ಲಿ ಕಳ್ಳತನ, ರೌಡಿಗಳ ಅಟ್ಟಹಾಸ, ಮಹಿಳೆಯರಷ್ಟೇ ಇರುವ ಮನೆಗೆ ನುಗ್ಗುತ್ತಿರುವ ಪುಡಿರೌಡಿಗಳು, ಕೊಲೆಯಂತಹ ಅಪರಾಧಿ ಕೃತ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಒಂಟಿ ಮನೆಗಳಿರುವಲ್ಲಿ ಇವು ಹೆಚ್ಚು. ಇಂಥವನ್ನೆಲ್ಲ ತಡೆಯಲು ಈ ಕ್ಯಾಮೆರಾವೇ ನಿಮ್ಮ ಆಪ್ತರಕ್ಷಕ.
ಮನೆಗೆ ಅಳವಡಿಸುವ ಸರ್ವಿಲೆನ್ಸ್ ಕ್ಯಾಮೆರಾದಲ್ಲಿ ಎರಡು ರೀತಿ ಇದೆ. ಮೊದಲನೆಯದು ಮನೆ ಹೊರಗಡೆ ಅಳವಡಿಸುವ ಔಟ್‌ಡೋರ್ ಕ್ಯಾಮೆರಾ. ಮನೆಯ ಒಳಗಡೆ ಅಳವಡಿಸುವ ಇನ್‌ಡೋರ್ ಕ್ಯಾಮೆರಾ ಅಥವಾ ಡೋರ್ ಕ್ಯಾಮೆರಾ.
ನೀವು ಬಂಗಲೆ ಅಥವಾ ಅಧಿಕ ವಿಸ್ತೀರ್ಣದ ಮನೆಗಳಲ್ಲಿ ವಾಸ ಮಾಡುತ್ತಿದ್ದರೆ, ಹೊರಗಡೆ ಸರ್ವಿಲೆನ್ಸ್ ಕ್ಯಾಮೆರಾ ಅಳವಡಿಸುವುದು ಉತ್ತಮ. ಮುಖ್ಯದ್ವಾರದ ಮುಂಭಾಗದಲ್ಲಿ, ಅಥವಾ ಮುಂಭಾಗದ ಮೇಲುಗಡೆ ಕ್ಯಾಮೆರಾ ಅಳವಡಿಸಿದರೆ ಉತ್ತಮ. ಒಂದಕ್ಕಿಂತ ಹೆಚ್ಚು ಕ್ಯಾಮೆರಾಗಳಿದ್ದರೆ ಇನ್ನೂ ಉತ್ತಮ.
ಕಣ್ಗಾವಲು ಕ್ಯಾಮೆರಾ ಎಲ್ಲರಿಗೂ ಕಾಣುವಂತೆ ಅಳವಡಿಸಬೇಡಿ. ಆದರೆ, ಎಲ್ಲರೂ ಕಾಣುವಂತೆ ಅಥವಾ ಹೆಚ್ಚು ಜನರು ಓಡಾಡುವ ಜಾಗದಲ್ಲಿ ಹಾಕಿದರೆ ಒಳ್ಳೆಯದು. ಅದು ನಿಮ್ಮ ಮನೆಗೆ ಒಬ್ಬ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಯಷ್ಟೇ ರಕ್ಷಣೆ ಒದಗಿಸುತ್ತದೆ. ಸಾಮಾನ್ಯವಾಗಿ ಇತ್ತೀಚಿನ ಎಲ್ಲಾ ಕಣ್ಗಾವಲು ಕ್ಯಾಮೆರಾಗಳು ವೈರ್‌ಲೆಸ್‌ಗಳೇ (ತಂತಿರಹಿತ) ಆಗಿವೆ. ಹೀಗಾಗಿ ನೀವು ಪ್ರತ್ಯೇಕವಾಗಿ ವೈರ್ ಅಳವಡಿಸುವ ಅಗತ್ಯತೆ ಇಲ್ಲ. ಹೊರಗೆ ಕ್ಯಾಮೆರಾ ಅಳವಡಿಸಿದ ನಂತರ ಅದನ್ನು ನಿಮ್ಮ ಪ್ರತ್ಯೇಕ ಕೊಠಡಿಯಲ್ಲಿರುವ ಟಿವಿ/ ವಿಸಿಡಿಗೆ ಕನೆಕ್ಷನ್ ಕೊಡಿ. ನೀವು ಅಳವಡಿಸಿರುವ ಕ್ಯಾಮೆರಾವು ಕನಿಷ್ಠವೆಂದರೂ 50 ಅಡಿಯಷ್ಟು ದೂರದವರೆಗಿನ ಚಿತ್ರ/ದೃಶ್ಯವನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿರುತ್ತದೆ. ಅದು ಸೆರೆ ಹಿಡಿಯುವ ಪ್ರತಿಯೊಂದು ಚಿತ್ರ/ ದೃಶ್ಯವೂ ಸಂಗ್ರಹ (ರೆಕಾರ್ಡ್) ಆಗುತ್ತಲೇ ಇರುತ್ತದೆ. ಜತೆಗೆ ಅದು ನಿಮ್ಮ ವಿಸಿಡಿ/ಟಿವಿ ಮೇಲೆ ಬಿತ್ತರವಾಗುತ್ತಲೆ ಇರುತ್ತದೆ.
ಕಣ್ಗಾವಲು ಕ್ಯಾಮೆರಾಗೆ ವಿದ್ಯುತ್ ಅಳವಡಿಸಲೇಬೇಕು ಎಂದೇನಿಲ್ಲ. ಇದಕ್ಕೆ ಕನಿಷ್ಠ 9 ವೋಲ್ಟ್‌ನಷ್ಟು ವಿದ್ಯುತ್ ಒದಗಿಸಿದರೆ ಸಾಕು. ಹೀಗಾಗಿ ಬ್ಯಾಟರಿ ಚಾಲಿತ ಕ್ಯಾಮೆರಾವನ್ನು ಮನೆಗೆ ಅಳವಡಿಸಿ. ಜತೆಗೆ ಹೆಚ್ಚು ರೆಕಾರ್ಡ್ ಮಾಡುವ ಕ್ಯಾಮೆರಾ ಇದ್ದರೆ ಇನ್ನೂ ಒಳ್ಳೆಯದು.
ಬಾಗಿಲಿಗೆ ಕ್ಯಾಮೆರಾ
ಮನೆಗೆ ಬಂದವರು ಯಾರು ಎಂದು ಮೊದಲೇ ತಿಳಿದುಕೊಳ್ಳಲು ಸುರಕ್ಷತೆಯ ದೃಷ್ಟಿಯಿಂದ ಬಾಗಿಲಿಗೆ ಕ್ಯಾಮೆರಾ ಅಳವಡಿಸಿಕೊಳ್ಳುವುದು ಉತ್ತಮ. ಬಾಗಿಲಿಗೆ ಕ್ಯಾಮೆರಾ ಅಳವಡಿಸಿದರೆ ಎದುರಿಗೆ ಇದ್ದವರು ಕಾಣುವಂತೆ ಇರಲಿ. ಬಾಗಿಲಿನ ಮೇಲಿರುವ ಮೂಲೆಯಲ್ಲಿಯೂ ಕ್ಯಾಮೆರಾ ಅಳವಡಿಸಬಹುದು. ಆದರೆ, ಅವರು ಸ್ಪಷ್ಟವಾಗಿ ಕಾಣಿಸುವಂತೆ ಇರಬೇಕು. ಬ್ಯಾಟರಿ ಚಾಲಿತ ಕ್ಯಾಮೆರಾ ಇದ್ದರೆ ಒಳ್ಳೆಯದು. ಇದರಲ್ಲಿಯೂ ಕೂಡ ವೈರ್‌ಲೆಸ್ ಕ್ಯಾಮೆರಾಗಳಿದ್ದು, ಇಲ್ಲಿಂದಲೂ ಟಿವಿ/ವಿಸಿಡಿಗೆ ಸಂಪರ್ಕ ಕೊಡಬಹುದು.
ಕ್ಯಾಮೆರಾಗಳು ನಿಮಗೆ ಎಷ್ಟೇ ಸಹಾಯ ಮಾಡಿದರೂ, ಕೆಲವೊಮ್ಮೆ ನಿಮಗೆ ಕೈಕೊಡುತ್ತವೆ. ಹೀಗಾಗಿ ಅವುಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಒಳ್ಳೆಯ ನಿರ್ವಹಣೆಯೂ ಅಗತ್ಯ. ಎಲ್ಲದಕ್ಕೂ ಮೊದಲು ಅವುಗಳನ್ನು ಖರೀದಿಸುವಾಗ ಗುಣಮಟ್ಟದ ಬಗ್ಗೆ ಎಚ್ಚರಿಕೆ ಇರಲಿ. <
ಕ್ಯಾಮೆರಾ ಕಣ್ಣು ಜೋಪಾನ
- ನಿಮ್ಮ ಮನೆಗೆ ಎಂತಹ ಕ್ಯಾಮೆರಾ, ಎಷ್ಟು ಕ್ಯಾಮೆರಾ ಬೇಕು ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.
-ಮನೆಯ ಯಾವ ಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದರೆ ಸೂಕ್ತ ಎಂಬುದನ್ನು ನಿರ್ಧರಿಸಿ. ಸುಲಭವಾಗಿ ಎಲ್ಲರ ಕೈಗೆ ಸಿಗುವಂತೆ ಕ್ಯಾಮೆರಾಗಳನ್ನು ನೇತು ಹಾಕಬೇಡಿ.
- ಮನೆಯ ಸುತ್ತಲೂ ನಿಮ್ಮ ಕ್ಯಾಮೆರಾ ಕಣ್ಣಾಗಿರಬೇಕಾದರೆ ಕೊಳ್ಳುವ ಮೊದಲು ಆಲೋಚಿಸಿ ಅಂತಹ ಕ್ಯಾಮೆರಾವನ್ನೇ ಕೊಳ್ಳಿ. ನಂತರ ಕ್ಯಾಮೆರಾ ಕಂಪನಿಯವರು ಸೂಚಿಸಿದ ಸಲಹೆ, ಸೂಚನೆಗಳನ್ನು ಅನುಸರಿಸಿ.
-ಕೊಳ್ಳುವ ಮೊದಲು ಅದು ಸರಿಯಾಗಿ ಕೆಲಸ ಮಾಡುತ್ತದೆಯೇ ಅಥವಾ ಇಲ್ಲವೋ ಎಂಬುದು ಖಚಿತಪಡಿಸಿಕೊಳ್ಳಿ.
-ನಿಮ್ಮ ಹವಾಮಾನಕ್ಕೆ ಒಗ್ಗುವಂತಹ ಕ್ಯಾಮೆರಾವನ್ನೇ ಕೊಳ್ಳಿ. ಯಾಕೆಂದರೆ ಎಲ್ಲ ಕಾಲದಲ್ಲಿಯೂ ಅದು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ವಾಟರ್‌ಪ್ರೂಫ್‌ನಂತಹ ಕ್ಯಾಮೆರಾಗಳು ಒಳ್ಳೆಯದು. ಒಂದು ವೇಳೆ ವಾಟರ್‌ಪ್ರೂಫ್ ಕ್ಯಾಮೆರಾ ಇಲ್ಲವಾದಲ್ಲಿ ಕ್ಯಾಮೆರಾ ರಕ್ಷಾ ಕವಚಗಳೂ ಸಿಗುತ್ತವೆ. ಅದನ್ನು ಅಳವಡಿಸಿದರೆ ಸಾಕು.
- ಕ್ಯಾಮೆರಾಗಳನ್ನು ಅಳವಡಿಸಿದ ನಂತರ ನಿಯಮಿತವಾಗಿ ಅವುಗಳನ್ನು ಪರೀಕ್ಷೆ ಮಾಡುತ್ತಲೇ ಇರಿ.

- ಬ್ರಹ್ಮಾನಂದ ಎನ್. ಹಡಗಲಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.