weಚ್ಛೇದನ

'ಇದೇನು ಇಷ್ಟೊಂದು ಡೈವೋರ್ಸ್‌ಗಳೋ? ಮದುವೆಯಾಗಲಿಕ್ಕಿಲ್ಲ, ಅವನು ಆಗಲೇ ಡೈವೋರ್ಸ್ ತಗೊಂಡನಂತೆ. ಇವಳು ಗಂಡನಿಂದ ಬೇರೆಯಾದ್ಲಂತೆ..ಬರೀ ಇಂಥವೇ ಸುದ್ದಿಗಳು. ಭಯವಾಗುತ್ತೆ ರೀ...' ಎಂದ ಅಮ್ಮನ ಮಾತಿಗೆ ನೆನಪಾಗಿದ್ದು ಕೃಪಾ. ನಿನ್ನೆಯಷ್ಟೇ ಹೇಳುತ್ತಿದ್ದಳು, 'ಯಾಕೋ ಜೀವನ ಅಸಹನೀಯ ಕಣೇ. ಸದಾ ನನ್ನ ನಿಂದಿಸ್ತಾನೆ ಅವನು. ನಾನು ಮದುವೆಯಾಗಿ ತಪ್ಪು ಮಾಡಿದೆ. ಯಾವುದರಲ್ಲೂ ಸಮಾನ ಅಭಿರುಚಿ ಇಲ್ಲ. ಎತ್ತು ಏರಿಗೆ ಎಳೆದ್ರೆ ಕೋಣ ನೀರಿಗೆ ಅಂತಾರಲ್ಲಾ ಹಾಗೆ. ಆದರೂ ಒಂದೇ ಸೂರಿನಡಿ ಇರ್ಬೇಕು.' ಅವಳು ನಿಟ್ಟುಸಿರಿಟ್ಟಾಗ, ಇನ್ನೂ ಏನೇನೊ ಇದೆ. ಅದೆಲ್ಲಾ ಹೇಳಕ್ಕೆ ಆಗ್ತಿಲ್ಲ ಅನಿಸಿತು. ಕೃಪಾಳ ಮಾತು ಕೇಳಿದ ಮೇಲೆ ಎದೆಯಲ್ಲಿ ಸಣ್ಣಗೆ ನಡುಕ, ಕನಸುಗಳು ಹೊತ್ತಿ ಉರಿದಂತೆ. ಛೆ, ಯಾರಿಗೋ ಏನೋ ಆದರೆ ಅವರ ಫೇಟ್. ನನಗೇಕೆ ಎಂದುಕೊಂಡು ಮುನ್ನಡೆಯುವಾಗಲೇ ಅನಘ ಸಿಕ್ಕಿದಳು.
'ಅರೆ ವಾಹ್!' ಉದ್ಘರಿಸಿದಳು. ಹಿಂದಿನಂತೆಯೇ ಇದ್ದಾಳೆ, ಕರಿಮಣಿ ಸರ ತೆಗೆದಿರುವುದು ಬಿಟ್ಟರೆ. ಕೈ ಹಿಡಿದು ಕಾಮತ್ ಹೋಟೆಲ್ ಕಡೆ ನಡೆಸಿದಳು. ಮೂಲೆ ಹಿಡಿದು ಕೂತಾಗ 'ನೀನು ಡೆಲ್ಲಿಯಿಂದ ಯಾವಾಗ ಬಂದಿ?' ಅಂತ ಕೇಳಿದಳು. 'ಒಂದು ತಿಂಗಳಾಯ್ತು. ಮೂವತ್ತಾಯ್ತು ಮಾರಾಯ್ತಿ. ಮದುವೆಯಾಗು ಅಂತ ಇದ್ಯಲ್ಲ ಅಮ್ಮನ ರಗಳೆ. ನನ್ನದಿರಲಿ ನೀ ಹೇಗಿದ್ದಿ ಹೇಳು?' ಕೇಳುತ್ತಲೇ ಅವಳ ಕಣ್ಣುಗಳು ಕೊಳವಾಗಿ ಕಾಣಿಸಿತು. ಕೈ ಹಿಡಿದುಕೊಂಡೆ. 'ಗೊತ್ತಾಯ್ತಾ ನನ್ನ ಜೀವನದಲ್ಲಿ ಏನೆಲ್ಲಾ ನಡೆದುಹೋಯ್ತು ಅಂತ?'
'ಹಮ್.. ಅಮ್ಮ ಹೇಳಿದಳು. ಯಾಕೆ ಹೀಗಾಯ್ತು? ನೀವು ಇಷ್ಟಪಟ್ಟು ಮದುವೆಯಾದವರು. ಮಗಳಿಗೆ 13 ವರ್ಷವಿರಬೇಕು ಅಲ್ವಾ..ಎಲ್ಲಿದಾಳೆ?'
'ಅವನು ಹೈದರಾಬಾದ್‌ಗೆ ವರ್ಗ ತಗೊಂಡ. ಅಲ್ಲೊಬ್ಬಳನ್ನು ಕಟ್ಟಿಕೊಂಡ. ಎಲ್ಲರಿಗೂ ಹೇಳಿದ್ದು ಮಗಳಿಗಾಗಿ ಕೇರ್‌ಟೇಕರ್ ಅಂತ.. ಒಳಗೇ ಮದುವೆಯಾಗಿದಾನೆ' ಎಂದು ಮುಖ ನೋಡಿದಳು. ಆ ಸಮಯ ಅವಳಿಗೇ ಬಿಟ್ಟರೆ ಒಳ್ಳೆಯದು. ಹೇಳಿಕೊಂಡು ಹಗುರವಾಗಲಿ ಅಂದುಕೊಂಡೆ.
'ನೋಡೇ ನನ್ನ ಕ್ಯಾರೆಕ್ಟರ್ ಸರಿಯಿಲ್ಲ ಅಂತ ಹಬ್ಬಿಸಿಬಿಟ್ಟ. ಅವನೊಡನೆ ನನಗೂ ಸಾಕುಸಾಕಾಗಿತ್ತು. ಸದ್ಯ ಡೈವೋರ್ಸ್ ಸಿಕ್ಕರೆ ಸಾಕು ಅಂದುಕೊಂಡೆ. ಅವನಿಂದ ಬಿಡಿಗಾಸೂ ಬೇಡವೆಂದೆ. ಅವನೇ ಬೇಡ ಅಂದ ಮೇಲೆ ಅವನ ದುಡ್ಡಿನ ಹಂಗೇಕೆ ಹೇಳು? ನಾನು ನನ್ನ ಪರವಾಗಿ ಲಾಯರ್‌ನ ಕೂಡಾ ಇಟ್ಟುಕೊಳ್ಳಲಿಲ್ಲ. ವಾದಿಸುವುದು ಏನಿತ್ತು? ಅನಗತ್ಯ ಮಾತುಗಳು. ಅವನಿಗೆ ನಾಟಕವಾಡುವುದು ಕರಗತವಾಗಿತ್ತು. ಅವನ ಪರ ಲಾಯರ್ ಹೇಳಿದಲ್ಲಿ ಸಹಿ ಮಾಡಿ ಎದ್ದು ಬಂದೆ. ನಮ್ಮಪ್ಪ ಬೇರೆ ಕೋರ್ಟ್ ಮೆಟ್ಟಿಲು ಹತ್ತಿದ್ದಕ್ಕೆ ಅಪ್ಸೆಟ್ ಆಗಿದ್ದರು. ನಾನು ಹೆತ್ತಮಗಳ ಕೈಹಿಡಿದು ಬರುವಾಗ...'ಮೇಡಂ ಮಗು ನಿಮ್ಮ ಕಸ್ಟಡಿಗೆ ಬರೋದಿಲ್ಲ. ಅಪ್ಪನ ಹತ್ತಿರವೇ ಇರ್ತಾಳೆ' ಅಂತ ಅವನ ಲಾಯರ್ ಗಟ್ಟಿಯಾಗಿ ಹೇಳಿದರು. 'ನಾನು ಬದುಕಿರೋವಾಗ ಸಾಧ್ಯವಿಲ್ಲ' ಅರಚಿದೆ. 'ನೀವೇ ಈಗ ತಾನೇ ಸಹಿ ಮಾಡಿದಿರಿ' ಎಂದರು. ಬಿಕ್ಕಿದೆ, ಬೇಡಿದೆ. ಸ್ಕೂಲ್‌ಗೆ ರಜವಿದ್ದಾಗ ನೀವೂ ಒಂದೆರಡು ದಿನ ಇಟ್ಟುಕೊಳ್ಳಬಹುದು' ಎಂದು ಕಾರ್ ಹತ್ತಿ ಹೋದ್ರು. ಅವಳು ಮಾತು ನಿಲ್ಲಿಸಿದಳು. ಕಾಫಿ ಬಂತು. ಕೈಗೆ ತೆಗೆದುಕೊಂಡೆವು.
'ರಜಾ ಇದ್ದಾಗ ಬರ್ತಾಳಾ?' ನಾನೇ ಕೇಳಿದೆ. 'ಹಮ್..ಬೇಸಿಗೆ ರಜೆ, ಕ್ರಿಸ್‌ಮಸ್ ಅಂತ ಬರ್ತಾಳೆ. ನಾನು ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದೀನಿ. ಕೂಡಿಟ್ಟ ಹಣದಲ್ಲಿ ಅವಳಿಗೆ ಬೇಕು ಅನ್ನೋದೆಲ್ಲ ಕೊಡಿಸಿ ಕಳಿಸ್ತೀನಿ ಕಣೇ' ಅನ್ನೋವಾಗ ಕಣ್ಣಲ್ಲಿ ನೀರು ಬಸಿಯಿತು. ನನ್ನ ಕರುಳು ಚುರ್ ಅಂದಿತು. ಮಗಳು ಇವಳ ಸ್ಥಿತಿನಾ ಎಲ್ಲೋ ಅಡ್ವಾಂಟೇಜ್ ಮಾಡಿಕೊಂಡಳೇ ಅನಿಸಿ, 'ಅಲ್ಲ 13-14 ವರ್ಷದವಳಿಗೆ ಅಮ್ಮನಿಗೂ ಕೇರ್‌ಟೇಕರ್‌ಗೂ ವ್ಯತ್ಯಾಸ ತಿಳಿಯಲ್ವಾ? ಬೇಕಾದ್ದೆಲ್ಲ ತೆಗೆಸಿಕೊಳ್ಳಕ್ಕೆ ತಿಳಿಯತ್ತೆ' ಅಂದೆ.
'ಏನೋ ಕಣೇ. ಅವಳು ಅಪ್ಪನಿಗೇ ಸಪೋರ್ಟ್. ಆರು ವರ್ಷ ಆಯ್ತು ನೋಡು, ತಮಗೆ ಬೇಕಾದ ಹಾಗೆ ಅವಳ್ನ ತಿದ್ದಿದ್ದಾರೆ. ಡೈವೋರ್ಸ್ ಆದಾಗ ಜನರ ಕುಹಕ ಸಹಿಸಲಾರದೇ ಕೆಲಸ ಬಿಟ್ಟೆ. ಅದನ್ನೇ ಅವನ ಮಗು ಸಾಕಕ್ಕೆ ಉದ್ಯೋಗವಿಲ್ಲ ಅಂತ ಕೋರ್ಟ್‌ನಲ್ಲಿ ಹೇಳಿ ಮಗಳ್ನ ಕಿತ್ಕಂಡ'. ಕೃಪಾ ಬಹಳ ಹಿಂದಕ್ಕೆ ಹೋಗಿದ್ದಳು. 'ಮುಂದೆ ಏನು?' ನನ್ನ ಪ್ರಶ್ನೆಗೆ ಅವಳು ನಕ್ಕು 'ಹೆಣ್ಣಿಗೆ ಕಷ್ಟ ಕಣೆ. ಗಂಡಸರಿಗೆ ನಲವತ್ತಕ್ಕೂ ಒಂದು ನೆಲೆಯಾಗುತ್ತದೆ. ಇದೇ ಜೀವದ ಜೊತೆ ವರ್ಷಗಟ್ಟಲೆ ಕಷ್ಟಸುಖ ಎಲ್ಲವನ್ನೂ ಹಂಚಿಕೊಂಡು, ಬಿಡಬೇಕು ಅನ್ನಿಸಿದಾಗ ಮಾನವೀಯತೆ ಮರೀತಾರಲ್ಲ, ಅದು ತರೋ ಸಂಕಟ ನನ್ನ ಶತ್ರುವಿಗೂ ಬೇಡ ಕಣೇ' ಅವಳು ತಲೆ ಕೆಳಗೆ ಹಾಕಿ ಕುಳಿತಳು.
ಹೌದು, ಒಬ್ಬ ಸ್ನೇಹಿತ(ಳ)ನನ್ನು ದೂರದೂರಿಗೆ ಬೀಳ್ಕೊಡುವಾಗ ನಮ್ಮಲ್ಲಿ ಒಂದು ಸೌಜನ್ಯದ ನಡವಳಿಕೆ ಇರುತ್ತದೆ. ರೈಲಿನಲ್ಲೋ ಬಸ್ಸಿನಲ್ಲೋ ಪರಿಚಯವಾದ ಸಹ ಪ್ರಯಾಣಿಕರಿಗೆ ಬೈ ಹೇಳಬೇಕಾದಾಗಲೂ ನಾವು ನಾಗರಿಕತೆ ತೋರುವುದಿದೆ. ಹಾಗಿರುವಾಗ ಇಲ್ಲಿವರೆಗೂ ಈ ಬದುಕಿಗೆ ಹೆಗಲು ಕೊಟ್ಟವರನ್ನು, ಇಷ್ಟು ದಿನ ಬಿಸಿಲು ಬೆಳದಿಂಗಳಲ್ಲಿ ಜೊತೆಜೊತೆಯಾಗಿ ನಡೆದು ಬಂದವರನ್ನ ಅಪಮಾನಿಸುವುದೇ? ಬಿಡುಗಡೆ ಬೇಕೆನ್ನುವುದೇ ಆಗಿದ್ದರೂ ಕಡೆಗೊಂದು ಹನಿ ಅಂತಃಕರಣ, ಇಷ್ಟು ದಿನದ ಬದುಕಿನಿಂದ ಸರಿದುಹೋಗುವ ಮುನ್ನ ಸ್ವಲ್ಪ ಮಾನವೀಯತೆ, ಗೌರವ ತೋರಿ ಬೀಳ್ಕೊಟ್ಟರಾಗದೇ? ನನ್ನೇ ಕೇಳಿಕೊಂಡೆ. ಭಾವುಕತೆಗೆ ಬಲಿಯಾಗಿ ನನಗೇ ಬಿಕ್ಕುವಂತಾಯಿತು.
- ಭಾಗ್ಯ ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


