ಮಹಿಳೆ-ಮನೆ-ಬದುಕು

ಪುರೋಹಿತ ಗೃಹ

ಪುರೋಹಿತ ಗೃಹ
Published On :

ಶತಮಾನಗಳ ಹಿಂದಿನ ಊರಿನ ಪುರೋಹಿತರ ಮನೆಯಿದು. ಬಲು ಅಪರೂಪವಾದ ಮೂರಂತಸ್ತಿನ ಈ ಮನೆಗೆ ಪುರೋಹಿತ ವರ್ಗದವರ ಮನೆಗಳಿಗೆ ಮಾತ್ರ ಬಳಕೆಯಾಗುತ್ತಿದ್ದ ಧ್ವಜಾಯವನ್ನು ಬಳಸಲಾಗಿದೆ. ಇಂದು ವಾಸ್ತು ಎನ್ನುವುದಕ್ಕೆ ಆ ಕಾಲದಲ್ಲಿ ಸಲ್ಲುತ್ತಿದ್ದ ಹೆಸರೇ 'ಆಯ'.
ಬೆಳ್ತಂಗಡಿ ತಾಲೂಕಿನ ಬದ್ಯಾರಿನ ಬಳಿಯ ಕಡಂಬು ಎಂಬಲ್ಲಿರುವ ಮನೆಗೆ ಶತಮಾನ ದಾಟಿದೆಯೆಂದರೆ ನಂಬಲಾಗದು. ಅದರ ಗೋಡೆಗಳು ಮೊಳೆ ಹೊಡೆಯಲಾಗದಷ್ಟು ದೃಢವಾಗಿವೆ. ಈಗ ಇಲ್ಲಿ ವಾಸವಾಗಿರುವವರು ಮನೆತನದ ವೃತ್ತಿಯನ್ನು ಮುಂದುವರಿಸಿರುವ ರಂಗನಾಥ ನೂರಿತ್ತಾಯರು.
'ನನ್ನ ಅಜ್ಜ ಸುಬ್ರಾಯ ನೂರಿತ್ತಾಯರು ಕೇರಳದಿಂದ ಶಿಲ್ಪಿಗಳನ್ನು ಕರೆಸಿ ಇದನ್ನು ಕಟ್ಟಿಸಿದರಂತೆ. ಗೋಡೆ ಇಟ್ಟು ಮಾಡು ಮಾಡಿದ ಮೇಲೆಯೇ ಶಿಲ್ಪಿಗಳು ಇಲ್ಲಿಂದ ಹೋದದ್ದು' ಎನ್ನುತ್ತಾರೆ ಅವರು.
'ಕೆಂಪು ಕಲ್ಲಿನಿಂದ ಕಟ್ಟಿದ ಗೋಡೆಗೆ ಸುಣ್ಣ ಮತ್ತು ಬೆಲ್ಲ ಬಳಸಿ ಗಾರೆ ಮಾಡಲಾಗಿದೆ. ಸಿಮೆಂಟ್ ಉಪಯೋಗಿಸಿಲ್ಲ. ಈಗ ನಾಲ್ಕು ಪಾಲು ಮಾಡುವಷ್ಟು ದಪ್ಪದ ಮರದ ಸಾಮಗ್ರಿಗಳನ್ನು ಮಾಡಿಗೆ (ಗೋಡೆಯಲ್ಲಿ ಏನಾದರೂ ಇಡಲು ಮಾಡಿರುವ ಸ್ಥಳ) ಹಾಕಿದ್ದಾರೆ. ಮಂಗಳೂರು ಹೆಂಚು ಹೊದೆಸಿರುವುದರಿಂದ ಬೇಸಿಗೆಯಲ್ಲಿ ತಂಪು. ಮಳೆಗಾಲದಲ್ಲಿ ಒಳಗೆಲ್ಲ ಬೆಚ್ಚಗೆ. ಒಳಗಿನ ಹಜಾರಕ್ಕೆ ಪ್ರವೇಶಿಸುವ ದ್ವಾರಕ್ಕೆ ಚೌಕಟ್ಟಿಲ್ಲ. ಗೋಡೆಯನ್ನೇ ಕಮಾನಿನಂತೆ ಬಾಗಿಸಿದ್ದಾರೆ. ಎರಡು ಸಾವಿರ ಚದರಡಿ ವಿಸ್ತಾರ ಕೆಳಗಿದೆ. ಮರದ ಹಲಗೆ ಮೇಲೆ ಮಣ್ಣು ಹಾಕಿ ತಯಾರಿಸಿದ ಎರಡು ಉಪ್ಪರಿಗೆಗಳು ಇವೆ. ಅಲ್ಲಿ ಅಷ್ಟೇ ಸ್ಥಳಾವಕಾಶವೂ ಉಂಟು. ದೇವರ ಕೋಣೆ ದಾಸ್ತಾನು ಕೋಣೆ ಅಡುಗೆ ಕೋಣೆಗಳು ಅಂತ ನಾಲ್ಕು ಕೋಣೆಗಳಿದ್ದು ಕೆಳಗಿರುವಷ್ಟೇ ಸಂಖ್ಯೆಯ ಕೋಣೆಗಳು ಮೇಲಿನಂತಸ್ತಿನಲ್ಲಿವೆ. ಮೂರನೇ ಮಹಡಿಯಲ್ಲಿ ಒಂದೇ ಕೋಣೆಯಿದೆ.ಮೇಲೇರಲು ಆ ಕಾಲದ ಮರದ ಮೆಟ್ಟಿಲುಗಳು ಈಗಲೂ ಸುಭದ್ರ.ಹಜಾರದಲ್ಲಿ ಕಲಾತ್ಮಕ ಬೋದಿಗೆ ಕಂಬಗಳಿವೆ. ಕಂಬದ ಬುಡದಲ್ಲಿ ಅಭ್ಯಾಗತರು ಕೂಡಲು ವ್ಯವಸ್ಥೆ, ವಿಶಾಲವಾದ ಕಿಟಕಿಗಳು ತೆರೆದೇ ಇದ್ದು ಸದಾ ಗಾಳಿ ಬೆಳಕು ಹರಿದು ಬರಲು ಅನುಕೂಲವಾಗಿದೆ. ಕಿಟಕಿ ತಳಭಾಗದ ಕಂಬಿಗಳನ್ನು ಮುಚ್ಚಲು ವಿಶಿಷ್ಟ ವ್ಯವಸ್ಥೆಯಿದೆ. ಮಹಡಿಯಲ್ಲಿ ಕೃಷಿಯ ಫಸಲನ್ನು ದಾಸ್ತಾನಿಡಲು ಅನುಕೂಲವಿದೆ.
ನವರಾತ್ರಿಯ ಪೂಜೆ ಮಹಾಲಯ ಶ್ರಾದ್ಧ ಗೋಕುಲಾಷ್ಠಮಿ ಆಚರಣೆ ಕೈಬಿಟ್ಟಿಲ್ಲ. ಅತಿಥಿ ಸತ್ಕಾರವೂ ನಡೆದು ಬಂದಿದೆ. ರಂಗನಾಥರ ತಂದೆ ರಾಮಕೃಷ್ಣ ನೂರಿತ್ತಾಯರು ಯಕ್ಷಗಾನ ಭಾಗವತರಲ್ಲದೆ ಅರ್ಥಧಾರಿಯೂ ಆಗಿದ್ದರು. ಅವರು ಬಳಸುತ್ತಿದ್ದ ಮೃದಂಗ, ಸೇರಿದಂತೆ ಅಳತೆ ಮಾಡುವ ಕಳಸೆ ಸಾಂಬಾರ ಪದಾರ್ಥಗಳ ಮರಿಗೆ ಇತ್ಯಾದಿ ಅಮದಿನ ಬಳಕೆಯ ವಸ್ತುಗಳು ಈ ಮನೆಯಲ್ಲಿ ಉಸಿರಾಡುತ್ತಿವೆ. ಅಜ್ಜನ ಕಾಲದ ಹಳೆಯ ಮನೆಯ ಗೋಡೆಗೆ ತಾರಸಿ ಮಾಡುವ ಯೋಚನೆಯಿರುವ ರಂಗನಾಥರಿಗೆ ಅದರ ಗೋಡೆ ಶಾಶ್ವತ ಉಳಿಯಬೇಕೆಂಬ ಬಯಕೆಯಿದೆ ಎಂಬುದು ರಂಗನಾಥರ ಮಾತು.

- ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.