ಬಂಧನ
ಅಂದು ಗೋಧೂಳಿ ಕಾಲ. ಅದೇಕೋ ಬೇಜಾರು, ನೆರೆ ಮನೆಯ ಗೆಳತಿ ನಿರ್ಮಲಾಳನ್ನು ಮಾತನಾಡಿಸಲು ಹೋದೆ. ಹರಟುತ್ತಿರುವಾಗ ಅದೇನೋ ಭಯ. ಇವಳ ಅತ್ತೆಯೋ, ಗಂಡನೋ ಬಂದುಬಿಟ್ಟರೆ ನಾನು ಏನು ಹೇಳಿಕೊಟ್ಟೆನೋ ಎಂದು ಅನುಮಾನಪಟ್ಟು ಅವಳನ್ನು ಬೈದುಬಿಡುತ್ತಾರೆಂಬ ಅವ್ಯಕ್ತ ಅಂಜಿಕೆ. ಹೋಗಿಬರಲೆ ಎಂದರೆ, 'ಬೇಡ ಅಕ್ಕ, ಕರೆಂಟ್ ಹೋಗಿದೆ. ಸ್ವಲ್ಪ ಹೊತ್ತು ಕುಳಿತಿರಿ' ಎಂದಳು. ನಿರೀಕ್ಷೆಯಂತೆ ಅವಳ ಗಂಡ ಬಂದೇ ಬಿಟ್ಟ. ನಮ್ಮನ್ನು ನೋಡಿ ಮುಖ ಊದಿಸಿಕೊಂಡು ರೂಮಿಗೆ ಹೋಗಿಬಿಟ್ಟ. ಆತ ಬಂದನೆಂದು ನಾನು ಮಾತು ಅರ್ಧಕ್ಕೆ ನಿಲ್ಲಿಸಿ ಎದ್ದು ಹೋಗುವ ಹಾಗಿರಲಿಲ್ಲ. ಏನೋ ಸಂಸಾರ ಒಡೆಯುವ ಮಾತು ಹೇಳುತ್ತಿದ್ದಳು, ಎಂದಾಗಿಬಿಟ್ಟರೆ?
ಅಷ್ಟರಲ್ಲಿ ಆಕೆಯ ಗಂಡನ ಮೊಬೈಲ್‌ನಿಂದ ಒಬ್ಬಳು ಹುಡುಗಿ, ದಂಪತಿ ಮಾತು ಕೇಳಿ ಬರುತ್ತಿತ್ತು. ಯಾವುದೊ ಸಿನಿಮಾ ಸಂಭಾಷಣೆ ಇರಬೇಕೆಂದುಕೊಂಡೆ. ಆದರೆ ಆ ಧ್ವನಿ ನಿರ್ಮಲಾಮತ್ತು ಅವಳ ತಂದೆ ತಾಯಿಯರದ್ದು. ಆಶ್ಚರ್ಯದಿಂದ ಅವಳ ಮುಖ ನೋಡಿದೆ! 'ಅದು ನನ್ನದೇ ಧ್ವನಿ ಅಕ್ಕ. ತವರು ಮನೆಗೆ ಫೋನ್ ಮಾಡಿಕೊಡಿ, ಅಪ್ಪ ಅಮ್ಮನೊಟ್ಟಗೆ ಮಾತಾಡುವ ಮನಸ್ಸಾಗಿದೆ ಎಂದರೆ ಇವರು ರೆಕಾರ್ಡರ್ ಆನ್ ಮಾಡಿ ಕೊಡುತ್ತಾರೆ. ಅದಕ್ಕೇ ನಾನು, ಊಟವಾಯಿತೆ? ತಿಂಡಿ ಆಯಿತೆ? ಎಂದು ಮಾತನಾಡಿ ಸುಮ್ಮನಾಗುತ್ತೇನೆ' ಎಂದಳು.
ಛೆ! ಎಂಥ ನೀಚ ಬುದ್ಧಿ. ತನ್ನ ಭಾವನೆ, ನೋವು-ನಲಿವು, ಆಸೆ-ಆಕಾಂಕ್ಷೆಗಳನ್ನು ಹೆತ್ತವರ ಜತೆ ಹಂಚಿಕೊಳ್ಳಲೂ ಮುಕ್ತ ವಾತಾವರಣ ಬೇಡವೆ? ಅದನ್ನು ಆಫ್ ಮಾಡಿದರೆ 'ಯಾವನ್ ಜತೆ ಮಾತಾಡಿದೆ, ನಿಮ್ ಅಮ್ಮ ಏನೇನ್ ಹೇಳಿ ಕೊಟ್ಟಳು' ಅಂತ ಕೇಳುತ್ತಾನಂತೆ! ಇದೆಂಥ ಹೇಯ?
ಸೊಸೆಯಾಗಿ ಬಂದ ಮಾತ್ರಕ್ಕೆ ಆತ್ಮ ಗೌರವ ಭಾವಾಭಿವ್ಯಕ್ತಿಗಳನ್ನು ಕೊಂದುಕೊಂಡು ಬಾಳಬೇಕೆ? ಹೆತ್ತವರು, ಸ್ನೇಹಿತರೊಟ್ಟಿಗೆ ಮುಕ್ತವಾಗಿ ಮಾತಾಡುವ ಅವಕಾಶ ಆಕೆಗೆ ಬೇಡವೆ? ಸೊಸೆ ಆದವಳಿಗೆ ವ್ಯಕ್ತಿಗತ ಸ್ವಾತಂತ್ರ್ಯ ಬೇಕು ಆಗಲೆ ಅವಳ ಸ್ಥಾನಕ್ಕೂ ಬೆಲೆ. ಸೊಸೆಯೂ ಸಂತೋಷವಾಗಿರುತ್ತಾಳೆ, ಮನೆಯೂ ನಂದನವನವಾಗಿರುತ್ತದೆ.
-ಶಿಲ್ಪಶ್ರೀ ಯು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

