ಬಾಲ್ಯದ ಕ್ಯಾಸೆಟ್ಟು
ಮೊನ್ನೆ ನಾನು ಆಫೀಸಿಗೆ ಹೋಗುವಾಗ ರಸ್ತೆಯಲ್ಲಿ ಇಬ್ಬರು ತುಂಟ ಮಕ್ಕಳು ಅಮ್ಮನ ಕೈ ಹಿಡಿದು, ಕುಣಿದಾಡುತ್ತ ಶಾಲೆಗೆ ಹೋಗುತ್ತಿದ್ದರು...

ಮೊನ್ನೆ ನಾನು ಆಫೀಸಿಗೆ ಹೋಗುವಾಗ ರಸ್ತೆಯಲ್ಲಿ ಇಬ್ಬರು ತುಂಟ ಮಕ್ಕಳು ಅಮ್ಮನ ಕೈ ಹಿಡಿದು, ಕುಣಿದಾಡುತ್ತ ಶಾಲೆಗೆ ಹೋಗುತ್ತಿದ್ದರು. ರಸ್ತೆಯ ಪಕ್ಕದ ಶಾಲೆಯಲ್ಲಿ ಒಂದಷ್ಟು ಮಕ್ಕಳು ಬೇಗನೆ ಬಂದು ಹೆಣಭಾರದ ಬ್ಯಾಗನ್ನು ಪಕ್ಕಕ್ಕೆ ಇಟ್ಟು ಆಟ ಶುರುಮಾಡಿಯಾಗಿತ್ತು. ಮತ್ತೊಂದಷ್ಟು ಮಕ್ಕಳು ಶಾಲೆ ಹೊರಗಿನ ಅಂಗಡಿಯಲ್ಲಿ ಚಾಕೊಲೇಟ್ ತಿನ್ನೋದರಲ್ಲಿ ನಿರತರಾಗಿದ್ರು. ಅದನ್ನು ನೋಡಿ ನನಗೂ ಒಮ್ಮೆ ನನ್ನ ಬಾಲ್ಯದ ನೆನಪು ಕಣ್ಮುಂದೆ ರಪ್ಪನೆ ಬಂದು, ಕಣ್ಣಾಲಿಗಳು ತೇವವಾಗಿ ಮುಖದಲ್ಲಿ ನಗು ಮೂಡಿತು.
ಪುಸ್ತಕದಲ್ಲಿ ಓದಿದ ವಿಷಯವನ್ನು, ಗುರುಗಳು ಮೊಳೆ ಹೊಡೆದಿದ್ದನ್ನು ಕೆಲವೊಮ್ಮೆ ಮರೆಯುತ್ತೇವೆ. ಆದರೆ ಬಾಲ್ಯದ ಸವಿನೆನಪು, ಮೊದಲ ಪ್ರೀತಿ ನಮ್ಮ ನೆನಪಲ್ಲಿ ಸದಾ ಹಸಿರು. ಬಾಲ್ಯ ಅನ್ನೋದು ಹಾಗೇ ಕಣ್ರೀ 'ಮುಂಗಾರುಮಳೆ' ಡೈಲಾಗ್ ಥರ ಮರೀಬೇಕು ಅಂದರೂ ಮರೆಯೋಕ್ಕಾಗಲ್ಲ. ಅದೊಂದು ಕಲರ್‌ಫುಲ್ ಸಿನಿಮಾ ಇದ್ದ ಹಾಗೆ. ಎಷ್ಟು ಸಲ ನೆನಪಿಸಿಕೊಂಡರೂ ಬೇಜಾರಾಗಲ್ಲ.
ಬಾಲ್ಯ ಅಂದ ಕೂಡಲೆ ಮೊದಲಿಗೆ ನೆನಪಾಗೋದು ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೇಳಿದಂಥ ಕಾಗಕ್ಕ ಗುಬ್ಬಕ್ಕನ ಕಥೆಗಳು, ಮೊಲ ಸಿಂಹದ ಕಥೆಗಳು, ಸಿಂಹ ಇಲಿಯ ಕಥೆಗಳು ಹೀಗೆ ಹೇಳ್ತಾ ಹೋದರೆ ಅದೇ ದೊಡ್ಡ ಪಟ್ಟಿಯಾಗುತ್ತೆ. ಈ ಕಥೆಗಳು ಇಂಟೆರೆಸ್ಟಿಂಗ್ ಆಗಿರೋದರ ಜತೆಗೆ ಒಳ್ಳೆಯ ನೀತಿಯನ್ನು ಮತ್ತು ಬದುಕಿನ ಪಾಠವನ್ನು ತಿಳಿಹೇಳುತ್ತಿದ್ದವು. ಒಟ್ಟಿನಲ್ಲಿ ಯೋಗರಾಜ ಭಟ್ರ ಸಾಹಿತ್ಯದ ಥರ ಮಕ್ಕಳಿಗೆ ಇಷ್ಟನೂ ಆಗುವಂಥ, ತತ್ತ್ವನೂ ಹೇಳುವಂಥ ಕಥೆಗಳು.
ನಡೆಯೋದು ಕಲಿತಾಯ್ತು, ಕಥೆ ಕೇಳಾಯ್ತು, ಮುಂದೆ ನಮ್ಮ ಪಯಣ ಎಲ್‌ಕೆಜಿ, ಯುಕೆಜಿ ಅಥವಾ ಅಂಗನವಾಡಿಯ ಕಡೆಗೆ. ಈ ವಯಸ್ಸಿನಲ್ಲೇ ಮಕ್ಕಳು ಶಾಲೆಗೆ ಹೋಗಲ್ಲ ಅಂತ ಬೆಳಗ್ಗೆ ಜಾಸ್ತಿ ಅಳೋದು. ಹೇಗೂ ಅಪ್ಪ ಅಮ್ಮ ನಮ್ಮನ್ನ ಮುದ್ದುಮಾಡಿ, ಅಂಗಿಕಿಸೆಗೆ ಕರ್ಚೀಫ್ ಸಿಕ್ಕಿಸಿ ಶಾಲೆಗೆ ಕರೆದೊಯ್ಯುವಾಗ ದಾರಿಯಲ್ಲಿ ಕುಣಿದಾಡುತ್ತ ಹೋಗೋದೇ ಒಂದು ಖುಷಿ.
ಬಾಲ್ಯದಲ್ಲಿ ನಮ್ಮೊಂದಿಗೆ ಆಡಿದ, ಟೈಮ್‌ಪಾಸ್ ಮಾಡಿದ, ಮುನಿಸಿಕೊಂಡ ನಮ್ಮ ಚಡ್ಡಿದೋಸ್ತ್‌ಗಳನ್ನು ಮರೆಯೋದಿಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಅವರಿಲ್ಲದ ಬಾಲ್ಯ ಊಹಿಸಲಸಾಧ್ಯ. ಅವರ ಜತೆಗೆ ನಾವಾಡಿದ ಆಟಗಳು, ಆಟದ ಮೈದಾನಗಳು, ತಿಂದ ಹಣ್ಣುಗಳು, ಐಸ್‌ಕ್ಯಾಂಡಿಗಳು, ನಮ್ಮಿಂದ ಏಟು ತಿಂದ ಮಾವಿನ, ಪೇರಳೆ ಅಥವಾ ಸೀಬೆ ಮರಗಳು, ಶಾಲೆಯಲ್ಲಿ ತೂಕಡಿಸಿದ್ದು, ಬಸ್‌ನಲ್ಲಿ ಕಿಟಕಿ ಪಕ್ಕದಲ್ಲಿ ಕೂರಲು ಮಾಡಿದ ಗಲಾಟೆಗಳು, ನಾವು ಈಜಿದ ಕೆರೆ, ಹೊಳೆಗಳು, ನಾವು ಮೊದಲ ಬಾರಿ ಪಟಾಕಿ ಸಿಡಿಸಲು ಹೆದರಿದ ಕ್ಷಣ ಇವೆಲ್ಲ ನಮ್ಮ ಬಾಲ್ಯವೆಂಬ ಕಲರ್‌ಫುಲ್ ದುನಿಯಾದ ದೃಶ್ಯಗಳು.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮಕ್ಕಳು ಶಾಲೆಯಲ್ಲಿ ಚೆನ್ನಾಗಿ ಓದ್ತಾ ಇದ್ದರೆ ಅಥವಾ ಪರೀಕ್ಷೆಯಲ್ಲಿ ಚೆನ್ನಾಗಿ ಸ್ಕೋರ್ ಮಾಡಿದರೆ ಮನೇಲಿ ಒಂದು ವಾಚ್ ಕೊಡಿಸಿದರೆ ಅದೇ ಹೆಚ್ಚು. ಆಗ ಮಕ್ಕಳಿಗೆ ವಾಚ್ ಕಟ್ಟಿಕೊಂಡು ಶಾಲೆಗೆ ಹೋಗೋದೇ ಒಂದು ಖುಷಿ, ಹೆಮ್ಮೆ.
ಬಾಲ್ಯ ಅಂದ ಕೊಡಲೇ ನೆನಪಾಗೋ ಇನ್ನೊಂದು ವಿಚಾರ, ಬೈಸಿಕಲ್ ಕಲಿತಿದ್ದು. ಆಗ ಪ್ರತಿಯೊಬ್ಬರ ಮನೆಯಲ್ಲೂ ಸೈಕಲ್ ಇದ್ದೇ ಇರುತ್ತಿತ್ತು. ಆ ಸೈಕಲ್‌ನ ಎತ್ತರದ ಅರ್ಧದಷ್ಟೂ ನಾವು ಇಲ್ಲದೇ ಹೋದರೂ, ಕಾಲಿಗೆ ಸೈಕಲ್ ಪೆಡಲ್ ಸಿಕ್ಕದೆ ಹೋದರೂ ತೊಂದರೆ ಇಲ್ಲ, ನಾವು ಮಾತ್ರ ಸೈಕಲ್ ಹೊಡೆಯೋದನ್ನು ಅಭ್ಯಾಸ ಮಾಡ್ತಾ ಇದ್ದುದು ದೊಡ್ಡ ಸೈಕಲ್‌ನಲ್ಲೇ. ನಾವು ಮೊದಲು ಕಲಿಯುತ್ತಿದ್ದುದು ವಾಲ್‌ಪೆಡಲ್ ತುಳಿಯೋದನ್ನ.
ನನ್ನ ಪ್ರಕಾರ ಸೈಕಲ್ ಕಂಡುಹಿಡಿದವನು ಕೂಡ, ಜನ ಮುಂದೆ ಈ ಥರನೂ ಸೈಕಲ್ ಹೊಡೀಬಹುದು ಅಂತಊಹಿಸಿರಲಿಕ್ಕಿಲ್ಲ. ವಾಲ್ ಪೆಡಲ್ ಹೊಡೆಯೋದು ಅಂದರೆ ಎಡಗೈಯಿಂದ ಸೈಕಲ್ ಸೀಟ್ ಹಿಡಕೊಂಡು, ಬಲಗೈಯಿಂದ ಸೈಕಲ್ ಹ್ಯಾಂಡಲ್ ಹಿಡಿದು ಸೈಕಲ್ ಓಡಿಸೋದು.
ಏಳನೇ ಕ್ಲಾಸ್ ಅಥವಾ ಹತ್ತನೇ ಕ್ಲಾಸ್ ಮುಗಿದ ಕೊಡಲೇ ಹೊಸ ಸೈಕಲ್‌ಗೋಸ್ಕರ ಮನೇಲಿ ಗಲಾಟೆ ಮಾಡಿದ್ದು ಯಾರುತಾನೇ ಮರೆಯೋಕೆ ಸಾಧ್ಯ? ಆದರೆ, ಈಗ ದೊಡ್ಡ ಸೈಕಲ್‌ಗಳು ರಸ್ತೆಯಲ್ಲಿ ಜಾಸ್ತಿ ನೋಡ್ಲಿಕ್ಕೆ ಸಿಗಲ್ಲಾ ಅನ್ನೋದೂ ಒಂದು ಕೊರಗು.
ಶಾಲೆಯಲ್ಲಿ ಬೆಂಚ್ ಮೇಲೆ ನಿಂತದ್ದು, ಶಾಲಾ ವಾರ್ಷಿಕೋತ್ಸವಗಳು, ಸ್ಟೇಜ್ ಮೇಲೆ ಮೊದಲು ಮಾಡಿದ ನಾಟಕ, ನೃತ್ಯ, ನಾವು ಕೈಗೊಂಡ ಪ್ರವಾಸಗಳು, ಹೋಮ್‌ವರ್ಕ್ ಮಾಡದೆ ಶಾಲೆಗೆ ಹೋದದ್ದು, ಶನಿವಾರ- ಭಾನುವಾರದ ರಜೆಗಾಗಿ ಕಾದಿದ್ದು, ಅಪ್ಪ ಅಮ್ಮನ ಜತೆಯಲ್ಲಿ ಹೋದ ಜಾತ್ರೆ, ತೇರುಗಳು, ಕೊಂಡ ಆಟಿಕೆ ಸಾಮಾನುಗಳು, ಹಗಲಿನಿಂದ ಇರುಳಿನವರೆಗೆ ಸ್ನೇಹಿತರೊಡಗೂಡಿ ಆಡಿದ ಆಟಗಳು... ಇಂಥ ನೂರಾರು ನೆನಪುಗಳ ಬುತ್ತಿಯೇ ನಮ್ಮ ಸುಂದರ ಬಾಲ್ಯ.
- ವಿಘ್ನೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


