ತೂಗು ದೀಪ!

ಅವಳ ಕಿವಿಯಲ್ಲಿ ನವಿಲುಗರಿ! ಇವಳ ಕಿವಿಯಲ್ಲಿ ಬಣ್ಣದ ಚಿಟ್ಟೆ! ಅವಳಿಗೆ ಉದ್ದದ ಹ್ಯಾಗಿಂಗ್ಸ್ ಇಷ್ಟ. ಇವಳಿಗೆ ಕಾಣಿಸದಷ್ಟು ಪುಟ್ಟದಾಗಿದ್ದರೆ ಚೆಂದ. ಪ್ರತಿದಿನ ಡ್ರೆಸ್‌ಗೆ ತಕ್ಕಂತೆ ಕಿವಿಯೋಲೆ ಬದಲಾಯಿಸುವುದೇ ಕೆಲವರ ಹವ್ಯಾಸ. ಫ್ಯಾನ್ಸಿ ಕಿವಿಯೋಲೆ ಎಂಬುದು ಮಾನಿನಿಯರ ಮನದನ್ನೆ.
ಕಿವಿಯೋಲೆಯೂ ಫ್ಯಾಶನ್ ಬೇಕೆಂದು ಕಿವಿಯೂದಿದರೆ? ಬಣ್ಣಬಣ್ಣದ ಚಿತ್ತಾರ, ಕಣ್ಮನ ಸೆಳೆಯುವ ಅಂದಚೆಂದದ ಡಿಸೈನ್ ಓಲೆಗಳಲ್ಲಿ ಒನಪು ಮೂಡಿಸಿವೆ. ಈಗಿನ ಟ್ರೆಂಡ್‌ಗೆ ಸರಿಹೊಂದುವಂಥ ಕಿವಿಯೋಲೆಗಳಿಗೆ ಮರುಳಾಗದವರಿಲ್ಲ. ಕಿವಿಯೋಲೆ ಖರೀದಿಯೂ ಅಷ್ಟೇ ಕುತೂಹಲದ ಕೆಲಸ. ಫ್ಯಾನ್ಸಿ ಒಳ ಹೋದರೆ ಅಲ್ಪಾವಧಿಯಲ್ಲಿ ಹೊರಬರುವ ಮಾತೇ ಇಲ್ಲ. ಗಂಟೆಗಟ್ಟಲೆ ಫ್ಯಾನ್ಸಿಯಲ್ಲಿ ಕಿವಿಯೋಲೆ ಆರಿಸುವಲ್ಲೇ ಮುಳುಗಿ ಹೋಗುತ್ತಾರೆ. ತನ್ನ ಕಿವಿಗಾಗುವ ಸೈಜು. ಮನಸ್ಸಿಗೆ ಇಷ್ಟವಾಗುವ ಡಿಸೈನು. ಹೊಂದಿಕೆ ಆಗುವ ಬಣ್ಣ ಇವೆಲ್ಲವನ್ನು ಕೂಲಂಕುಷ ಪರಿಶೀಲಿಸಬೇಕು. ಅಷ್ಟೊಂದು ಟೈಂ ತಗೊಂಡರೂ ಕಡೆಗೆ ಕೊಳ್ಳುವುದು ಒಂದೋ, ಎರಡೋ!
ಹೈಸ್ಕೂಲು ಹುಡುಗಿಯರಿಂದ ಕಾಲೇಜು ಯುವತಿಯರ ತನಕ ಎಲ್ಲರೂ ಹೆಚ್ಚಾಗಿ ಫ್ಯಾನ್ಸಿ ಕಿವಿಯೋಲೆಯನ್ನೇ ಬಯಸುತ್ತಾರೆ. ಚಿನ್ನದ ಕಿವಿಯೋಲೆ ಇಷ್ಟಡಪಡುವವರು ಕಡಿಮೆ. ಚಿನ್ನದ ಕಿವಿಯೋಲೆಯಲ್ಲಿ ಯಾವುದಾದರೂ ಮನಸ್ಸಿಗೆ ಇಷ್ಟವಾಗುವ ಡಿಸೈನ್ ಮಾಡಿಸಿದರೆ ಬದಲಿಸುವ ಮಾತೇ ಇಲ್ಲ. ಅದೆಷ್ಟೇ ಬೋರ್ ಆದರೂ ಅದನ್ನೇ ಹಾಕಬೇಕು. ತಪ್ಪಿಯೂ ಮೂಲೆಗೆ ಹಾಕುವಂತಿಲ್ಲ. ಹೊಸತು ಮಾಡಿಸುವ ಹಾಗೆ ಇಲ್ಲವಲ್ಲ? ಆದರೆ, ಫ್ಯಾನ್ಸಿ ಕಿವಿಯೋಲೆ ಹಾಗಲ್ಲ. ಯಾವಾಗ ಬೇಕಾದರೂ ಬದಲಿಸಬಹುದು. ಹಳೆಯದಾದಂತೆ ಮುಲಾಜಿಲ್ಲದೆ ಎಸೆಯಬಹುದು.
ಹಾಸ್ಟೆಲ್, ಪಿಜಿಯಲ್ಲಿರುವ ಹುಡುಗಿಯರು ಹೆಚ್ಚಾಗಿ ಫ್ಯಾನ್ಸಿ ಆಭರಣಗಳನ್ನೇ ಇಷ್ಟಪಡುತ್ತಾರೆ. ಚಿಟ್ಟೆ, ಮೀನು, ಹೂವು, ಹಕ್ಕಿ ಹೀಗೆ ನಾನಾ ಥರದ ಡಿಸೈನ್ ಹದಿಹರೆಯದ ಯುವತಿಯರ ಕಿವಿಯ ಮೇಲೆ ರಾರಾಜಿಸುತ್ತಿರುತ್ತದೆ. ಆದರೆ, ಇನ್ನು ಕೆಲವರು ಇದಕ್ಕೆ ತದ್ವಿರುದ್ಧ. ದೂರದಿಂದ ನೋಡಿದಾಗ ಕಿವಿಯೋಲೆ ಹಾಕಿಲ್ಲ ಎಂಬ ಸಂಶಯ ಬರುವಷ್ಟು ಸಣ್ಣ ಕಿವಿಯೋಲೆ ಧರಿಸುತ್ತಾರೆ.
ಹಿಂದಿನ ಕಾಲದಲ್ಲಿ ಗಂಡು ಮಕ್ಕಳಿಗೂ ಕಿವಿ ಚುಚ್ಚುವ ಸಂಪ್ರದಾಯವಿತ್ತು. ಸಣ್ಣ ಗುಂಡಿನಂಥ ಓಲೆ ಹಾಕಿದರೆ ಮತ್ತೆ ಅದನ್ನು ತೆಗೆಯುವಂತಿರಲಿಲ್ಲ. ಕೆಲವು ವರ್ಷಗಳ ಹಿಂದೆ ಹುಡುಗರು ಕಿವಿಯೋಲೆ ಧರಿಸಲು ಹಿಂದೇಟು ಹಾಕುತ್ತಿದ್ದರು. ನಾನೇನು ಹುಡುಗಿಯಾ ಕಿವಿ ಚುಚ್ಚಿಸಲು, ಸ್ಕೂಲಲ್ಲಿ ಎಲ್ಲರೂ ನಗುತ್ತಾರೆ. ನಾನೊಲ್ಲೆ ಎನ್ನುತ್ತಿದ್ದರು. ಕಾಲ ಬದಲಾಗಿದೆ. ಯುವಕರು ಬಣ್ಣಬಣ್ಣದ ಕಿವಿಯೋಲೆಗಳನ್ನು ಸಿಕ್ಕಿಸಿ ಸ್ಟೈಲ್ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಕೆಲವರಿಗೆ ಓಲೆ ಹಾಕಬೇಕು, ಆದರೆ ಚುಚ್ಚಿಸಲು ಭಯ. ಅದಕ್ಕೂ ಇದೀಗ ಉಪಾಯ ಬಂದಿದೆ. ಅದು ಮ್ಯಾಗ್ನಟಿಕ್ ಸ್ಟಡ್. ಬೇಕೆಂದಾಗ ಹಾಕಿ ಬೇಡವೆಂದಾಗ ತೆಗೆಯಬಹುದು.
ಚಿನ್ನದ್ದಾದರೆ ತುಂಬಾ ಜಾಗರೂಕತೆ ಅಗತ್ಯ. ಅಮ್ಮನೂ ಆಗಾಗ ನೆನಪಿಸುತ್ತಿರುತ್ತಾಳೆ. ಫ್ಯಾನ್ಸಿ ಆಭರಣವಾದರೆ ಕಿರಿಕಿರಿಯಿಲ್ಲ.
-ಅನನ್ಯ, ಕಾಲೇಜು ವಿದ್ಯಾರ್ಥಿನಿ
- ಅನಿತಾ ಬನಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


