ಮಕ್ಕಳಾಟ ಮರೀಬೇಡಿ

ಚೈಲ್ಡ್ ಥರ ಆಡ್ಬೇಡ!
ಹೀಗೆ ಅವಾಗಾವಾಗ ದೊಡ್ಡವರ ಕೈಯಲ್ಲಿ ಬೈಸಿಕೊಳ್ಳೋದೇ ಚಂದ. ಮಕ್ಕಳಾಟದ ಚಮತ್ಕಾರವೇ ಅಂಥಾದ್ದು. ಎಷ್ಟೇ ದೊಡ್ಡವರಾದ್ರೂ ಅಳಿಸಿ ಹೋಗದಂತಹ ತುಂಟ ಬುದ್ಧಿ. ಅದರಲ್ಲೂ ಪ್ರೀತಿಯ ಸಂಗಾತಿಯಿಂದ 'ಮಕ್ಕಳ ಥರ ಆಡ್ಬೇಡ!' ಅಂತ ಕಿವಿ ಹಿಂಡಿಸಿಕೊಳ್ಳೋದಂತೂ ಬಹಳ ಮಜಾ. ಒಂದರ್ಥದಲ್ಲಿ ಜವಾಬ್ದಾರಿಯಿಂದ ಇರು ಎಂಬುದೇ ಅದರ ಹಿಂದಿರುವುದು ಅಕ್ಕರೆ.
ಆಕೆ ಆಫೀಸಿಗೆ ಹೊತ್ತಾಯಿತೆಂದು ತರಾತುರಿಯಲ್ಲಿ ಹೊರಡುತ್ತಿದ್ದಳು. 'ಮಧ್ಯಾಹ್ನಕ್ಕೆ ನಿಂಗಿಷ್ಟವಾದ ತಿಂಡೀನ ಡಬ್ಬಿನಲ್ಲಿ ತುಂಬಿಸಿದ್ದೀನಿ. ನನ್ ನೆನಪು ಮಾಡ್ಕೊಂಡು ತಿನ್ನು. ನೀರು ಜತೇಲ್ ಇಟ್ಟಿದ್ದೀನಿ ಕೊಂಡುಹೋಗು. ಮರೀಬೇಡ. ಸಂಜೆ ನಾನು ಬೇಗ ಬಂದಿರ್ತೀನಿ. ನೀನೂ ಅಷ್ಟೇ, ರಾತ್ರಿ ಜಾಸ್ತಿ ಹೊತ್ತು ಆಫೀಸಲ್ಲೇ ಕೂರಬೇಡ. ಕಾಯ್ತಾ ಇರ್ತೀನಿ. ಲವ್ ಯು ಪುಟ್ಟ' ಅಂತ ಮುದ್ದಾಗಿ ಹೇಳುತ್ತಿದ್ದವಳು ಹೊರಡೋ ಗಡಿಬಿಡಿಯಲ್ಲಿ ಮರೆತೇಬಿಟ್ಟಳು. ಹಾಗಂತ ಇವನು ಬಿಡ್ತಾನ? ಮೆಲ್ಲನೆ ಓಡಿಹೋಗಿ ಆಕೆ ಚಪ್ಪಲಿಗಳನ್ನು ಅಡಗಿಸಿಟ್ಟನು.
ಅಯ್ಯೋ... ಚಪ್ಪಲಿ ಕಾಣ್ತಿಲ್ವೆ? ಈ ತರ್ಲೆ ಕೆಲಸ ಮಾಡಿದವರಾರು ಅಂತ ಊಹಿಸಿಕೊಳ್ಳೋದು ಆಕೆಗೇನೂ ಕಷ್ಟದ ಕೆಲಸ ಅಲ್ಲ. 'ಎಲ್ಲಿ ಇಟ್ಟಿದಿಯ ಹೇಳೋ? ಮಕ್ಕಳಾಡ್ದಾಗೆ ಆಡ್ಬೇಡ' ದಾಂಗುಡಿ ಪ್ರಾರಂಭಿಸಿಬಿಟ್ಳು. 'ಹಾಗಿದ್ರೆ ನೀನ್ ಯಾವಾಗ್ಲು ಹೇಳ್ತಿದ್ದಾಗೆ ಇವತ್ತೂ ಹೇಳ್ಬೇಕು' ಇವನ ತಕರಾರು. 'ತಡ ಆಯ್ತು ಕಣೋ, ಬಂದ ಮೇಲೆ ನಿನ್ ಯೋಗಕ್ಷೇವು ವಿಚಾರಿಸ್ತೀನಿ' ಅಂತ ಹೇಳಿದ್ರೂ ಕೇಳ್ತಿಲ್ಲ. ಒಂದು ಮುತ್ತು ಕೊಟ್ರೆ ಮಾತ್ರ ಹುಡುಕಿಕೊಡ್ತೀನಿ ಎಂಬ ಹಠ ಇವನದು. ಈತನ ಮಕ್ಕಳಾಟಕ್ಕೆ ಜಯ ಸಿಕ್ಕಿತು. ಮುತ್ತು ಪಡೆದ ಹಿಗ್ಗಿನಲ್ಲಿ ಆಕೆಯನ್ನು ತುಸು ಬೇಗನೆ ಆಫೀಸಿಗೆ ಡ್ರಾಪ್ ಮಾಡಿಬಂದ. ತನ್ನ ಕೆಲಸವನ್ನು ಒಂದು ಗಂಟೆ ಮುಂದೆ ಹಾಕಿದ್ದ. ಹುಡುಗಾಟ, ತುಡುಗು ಬುದ್ಧಿ, ತರಲೆ, ತುಂಟಾಟಿಕೆ, ಪುಂಡಾಟ ಎಲ್ಲವೂ ಪ್ರೀತಿಯ ಸುತ್ತಲು ಗಿರಕಿ ಹೊಡೆಯುವಂಥವುಗಳು. ಇವೆಲ್ಲವೂ ಹಿತಮಿತವಾಗಿದ್ದರೆ ಸಮರಸದ ಬದುಕು ಸಾಧ್ಯ. ತುಸು ಜೋರಾದರೂ ವಿರಸವೂ ಸೇರಿಬಿಡುತ್ತದೆ. ಹುಸಿ ಮುನಿಸು, ತುಸು ಕೋಪ ಮಾಡಿಕೊಂಡಾಗೆಲ್ಲ 'ಸಣ್ಣ ಮಕ್ಕಳ ಹಾಗೆ ಮಾಡ್ತಾನೆ' ಎಂದು ಬೈಯ್ಯುವುದಿದೆ. ನಿಮ್ಮ ಕೋಪ ಹೆಚ್ಚು ಹೊತ್ತು ಇರೋದಿಲ್ಲ. ಮತ್ತೆ ಮಾತಾಡ್ತಾನೆ ಅನ್ನೋ ಗ್ಯಾರಂಟಿ ಬೈದವರಿಗೆ ಇರುತ್ತದೆ.
ಹಾಗಂತ 'ಇಷ್ಟ್ ದೊಡ್ಡವನಾದ್ರೂ ಬುದ್ಧಿ ಬಂದಿಲ್ಲ...' ಅಂತ ಸೀರಿಯಸ್ ಆಗಿ ಬೈತಿದ್ರೆ ತನ್ನ ಮನಸ್ಸು ಮಗು ಥರ ಎಂದು ಕಡೆಗಣಿಸಬೇಡಿ. ದೊಡ್ಡ ತಪ್ಪು ಮಾಡಿರುತ್ತೀರಿ ಎಂದೇ ಅರ್ಥ. ಅಂತಹ ಸಮಯದಲ್ಲಿ ಉಡಾಫೆ ಮಾಡದೆ ಸ್ಸಾರಿ ಕೇಳಿ ತಪ್ಪನ್ನು ತಿದ್ದಿಕೊಳ್ಳುವುದು ಜಾಣತನ.
ಮಗುವಿನ ಮನಸ್ಸು ಮರುಳಾಗಿಸುವ ಪರಿ ಅಗಣಿತ. ಹಠ, ಕಿರಿಕಿರಿ ಮಾಡುವ ಗುಣ, ತಮಾಷೆ, ತರಲೆ ಬದುಕಲ್ಲಿ ಇದ್ದಷ್ಟು, ಸಂಬಂಧಗಳೂ ಗಟ್ಟಿಯಾಗುತ್ತವೆ. ಮಕ್ಕಳು ಎಂಬ ಪಟ್ಟ ಕಳೆದುಕೊಂಡ ನಂತರ ತಂಟೆ ಮಾಡಬಾರದು, ಹುಡುಗಾಟ ಮಾಡಬಾರದು ಎಂಬ ನಿಯಮಗಳೇನೂ ಇಲ್ಲವಲ್ಲ. ಜವಾಬ್ದಾರಿಯುತ ತುಂಟಾಟ ಧಾರಾಳವಾಗಿ ಮಾಡಬಹುದು. ತನ್ನ ತುಂಟತನದಿಂದ ಕೋಪಗೊಂಡ ಸಂಗಾತಿಯನ್ನು ತಣಿಸುವ ಹರಸಾಹಸ ಹಿಮಾಲಯ ಪರ್ವತವೇರಿದಂತೆ. ಏನೋ ಒಂಥರಾ ಥ್ರಿಲ್!
'ಕಪಿಚೇಷ್ಟೆ' ಎಂದು ಪ್ರೀತಿಯಿಂದ ಹಳಿಯುವುದಿದೆ. ಅದು ಒಂಥರಾ ಮಕ್ಕಳಾಟಿಕೆ. ತರಲೆ ಮಾಡುತ್ತ ಮಗುವನ್ನು ಅಳಿಸಿ ಮತ್ತೆ ಮುದ್ದಿಸಿ ಮುತ್ತಿಕ್ಕಿದಾಗ ಆ ಮಗುವಿನ ಮುಖದ ಮಂದಹಾಸ ಮನಮೋಹಕ. ಉಪದ್ರ ಮಾಡಿದವರಿಗೆ ತನ್ನಮ್ಮನ ಕೈಲಿ ಹೊಡೆಸಬೇಕು ಎಂದು ಹಠಕ್ಕೆ ಬೀಳುವ ಮಗು. ಅಮ್ಮ ಹೊಡೆದಂತೆ ಅಭಿನಯಿಸಿದಾಗ ಖುಷಿಯಿಂದ ಬೀಗುವ ಪುಟಾಣಿ. ಮತ್ತೆ ಮತ್ತೆ ಮಾಡಬೇಕೆನಿಸುತ್ತದೆ. ತುಂಟಾಟ ಮಕ್ಕಳಿಗಷ್ಟೇ ಸೀಮಿತ ಎನ್ನುವವರ ಬಗ್ಗೆ ನಿಜಕ್ಕೂ ಕೋಪ ಬರುತ್ತದೆ. ಬದುಕಿನುದ್ದಕ್ಕೂ ತುಂಟಾಟ ಅಂಟಿಕೊಂಡಿರಬೇಕು. ವಿವೇಕದ ಉಡಾಫೆ ತಪ್ಪಾಗುವುದಿಲ್ಲ. ಯಾಕೆ ಸುಮ್ಮನೆ ಕಾಲೆಳೆಯುವುದು? ಯಾಕೆ ಸುಮ್ಮನೆ ಹಾಗೆಲ್ಲ ತಮಾಷೆ ಮಾಡುವುದು? ಇನ್ನೊಬ್ಬರಿಗೆ ಉಪದ್ರ ಮಾಡುವುದು ಸರಿಯಲ್ಲ... ಎಂಬ ಸ್ವಯಂ ನಿರ್ಮಿತ ನಿಯಮ ದೂರವಿರಿಸಿ. ಹೆಚ್ಚು ಪ್ರೀತಿಪಾತ್ರರನ್ನು ಛೇಡಿಸಿ, ಕಾಲೆಳೆದು, ಗೋಳಾಡಿಸಿ ನಂತರ ಮುದ್ದಿಸಿ. ತುಸು ತಮಾಷೆ, ಹೆಚ್ಚು ಪ್ರೀತಿ ಮಾಡುವುದೇ ಸಂತೋಷದ ಗುಟ್ಟು.
- ಮಂಜುನಾಥ್ .ಎಲ್.ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


