ಮಹಿಳೆ-ಮನೆ-ಬದುಕು

ಕಲ್ಲು ಕಲ್ಲೆನುತಾ...

ಕಲ್ಲು ಕಲ್ಲೆನುತಾ...
Published On :

ಹಳೆಯ ಕಾಲದ ಮನೆಗಳಿನ್ನೂ ಕೆಲವೆಡೆ ಪಳೆಯುಳಿಕೆಗಳಾಗಿ ಉಳಿದುಕೊಂಡಿವೆ. ಒಂದು ಕಾಲದಲ್ಲಿ ಅವು ಅವಿಭಕ್ತ ಕುಟುಂಬಕ್ಕೆ ನೆಲೆಯಾಗಿದ್ದರಿಂದ ತಿಂಡಿಗೆ ಊಟಕ್ಕೆ ಸಾಲಾಗಿ ಕೂಡುತ್ತಿದ್ದವರ ಸಂಖ್ಯೆ ಐವತ್ತಕ್ಕಿಂತ ಅಧಿಕವಿರುತ್ತಿತ್ತು. ನೂರಕ್ಕಿಂತ ಹೆಚ್ಚು ಜನಗಳಿದ್ದ ಮನೆಗಳೂ ಇದ್ದವು. ವಿದ್ಯುತ್ ಎಂಬ ಹೆಸರು ಕೇಳಿ ಗೊತ್ತಿರದ ಆ ದಿನಗಳಲ್ಲಿ ಢಾಳಾಗಿ ಕಟ್ಟಿಗೆಯ ಉರಿಯ ಒಲೆಗಳಲ್ಲಿ ಪಾಕಗಳು ಸಿದ್ಧವಾಗುತ್ತಿದ್ದವು.

ಹಾಗೆಯೇ ಗ್ರೈಂಡರ್ ಮಿಕ್ಸಿಗಳ ಸುದ್ದಿಯಿರಲಿಲ್ಲ. ಚಕ್ಕುಲಿ ಮಾಡಲು ಅಕ್ಕಿ ಉದ್ದು ಬೀಸಿ ಹಿಟ್ಟು ಮಾಡುತ್ತಿದ್ದ ಬೃಹದಾಕೃತಿಯ ಬೀಸುಗಲ್ಲುಗಳು ಬಳಕೆಯಾಗುತ್ತಿದ್ದವು. ಇಂದಿನವರಿಗೆ ಅದರ ಮೇಲುಭಾಗವನ್ನು ಎತ್ತಿಡಲೂ ಶಕ್ತಿ ಸಾಲದು. ಆದರೆ ಅಂದಿನ ಮಹಿಳೆಯರು ಹಿಡಿ ತುಂಬ ಧಾನ್ಯ ಹಾಕುತ್ತ ಒಬ್ಬೊಬ್ಬರೇ ಈ ಕಲ್ಲುಗಳನ್ನು ತಿರುಗಿಸಿ ಹಿಟ್ಟು ಮಾಡುತ್ತಿದ್ದರು.
ಆಗ ಬಹುತೇಕ ಮನೆಗಳಲ್ಲಿ ಭತ್ತದ ಬೇಸಾಯ ಇತ್ತು. ಭತ್ತವನ್ನು ಅಕ್ಕಿ ಮಾಡಲು ಬೇಕಾದ ಒರಳು ಕಲ್ಲಿನಿಂದ ತಯಾರಾಗುತ್ತಿತ್ತು. ಚೌಕಾಕೃತಿಯ ಶಿಲೆಗೆ ನಡುವೆ ವೃತ್ತಾಕೃತಿಯ ಗುಳಿ ತೋಡಿ ಅದನ್ನು ನೆಲಮಟ್ಟಕ್ಕೆ ಹೂಳುತ್ತಿದ್ದರು. ಈ ಗುಳಿಯಲ್ಲಿ ಭತ್ತವನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ತಾಳೆಮರದಿಂದ ತಯಾರಿಸಿದ ಒನಕೆಯಿಂದ ಕುಟ್ಟಿ ಕುಟ್ಟಿ ಅಕ್ಕಿ ಮಾಡಲಾಗುತ್ತಿತ್ತು.
ತಿಂಡಿಗೆ ಬೇಕಾದ ಧಾನ್ಯದಿಂದ ಹಿಟ್ಟು ಮಾಡುತ್ತಿದ್ದರು. ಜೊತೆಗೆ ತೆಂಗಿನಕಾಯಿ ಅರೆಯಲು ಕಲ್ಲುಗಳೇ ಬಳಕೆಯಾಗುತ್ತಿದ್ದವು. ವೃತ್ತಾಕಾರವಾದ ಭಾರಿ ಶಿಲೆಯ ನಡುವೆ ಗುಳಿ ತೋಡಿ ಅದಕ್ಕೆ ಹೊಂದುವ ಗುಂಡುಕಲ್ಲು ತಯಾರಿಸುತ್ತಿದ್ದರು. ಗುಂಡುಕಲ್ಲಿನ ತಲೆಗೆ ತೂತು ಕೊರೆದು ಮರದ ಹಿಡಿಕೆಯನ್ನು ಭದ್ರಗೊಳಿಸುತ್ತಿದ್ದರು. ಇದರಲ್ಲಿ ಹಿಡಿದು ಗುಂಡನ್ನು ತಿರುಗಿಸುತ್ತ ನಿತ್ಯ ಪದಾರ್ಥಗಳಿಗೆ ಬೇಕಾದ ಮಸಾಲೆ ಸಿದ್ಧವಾಗುತ್ತಿತ್ತು. ಇನ್ನು ಹಲಸಿನಕಾಯಿ ಹಪ್ಪಳ ಮಾಡಲು ಗುಂಡಿನಿಂದ ತಿರುವುತ್ತಿರಲಿಲ್ಲ. ಹಲಸಿನಕಾಯಿಯ ಬೇಯಿಸಿದ ತೊಳೆಗಳನ್ನು ಗುಳಿಯಲ್ಲಿ ಹಾಕಿ ಮರದಿಂದ ತಯಾರಿಸಿದ ದಪ್ಪ ಗಾತ್ರದ ಬಲಗೆ ಎಂಬ ಸಾಧನದಿಂದ ಕುಟ್ಟುತ್ತಿದ್ದರು.
ಕಲ್ಲಿನ ಬಳಕೆ ಎಷ್ಟೊಂದು ವ್ಯಾಪಕವಾಗಿತ್ತೆಂದರೆ ಪ್ರತಿಮನೆಯಲ್ಲೂ ಪತ್ತುಕಲ್ಲು ಎಂಬ ನೀಳ ಆಕಾರದ ಕಲ್ಲುಗಳಿರುತ್ತಿದ್ದವು. ಎಳೆಯ ಶಿಶುಗಳು ಮತ್ತು ಬಾಣಂತಿಯರಿಗೆ ಮೈಗೆ ಲೇಪಿಸಲು ಹಸಿರೆಲೆ ನಾರು-ಬೇರುಗಳ ಮದ್ದನ್ನು ಅರೆಯಲು ಈ ಕಲ್ಲಿನ ಬಳಕೆಯಾಗುತ್ತಿತ್ತು.
ಹಾಗೆಯೇ ಹತ್ತಾರು ದನಗಳನ್ನು ಸಾಕುತ್ತಿದ್ದ ಆ ಕಾಲದಲ್ಲಿ ಏಕಶಿಲೆಯಿಂದ ತಯಾರಿಸಿದ ದೊಡ್ಡ ಬಾನಿಗಳನ್ನು ಹಟ್ಟಿಯ ಬಳಿಯಲ್ಲಿ ನಿಲ್ಲಿಸುತ್ತಿದ್ದರು. ಇದರಲ್ಲಿ ನೂರಾರು ಲೀಟರ್ ನೀರು ತುಂಬಬಹುದು. ಮೇದು ಬಂದ ಜಾನುವಾರುಗಳಿಗೆ ಏಕಕಾಲದಲ್ಲಿ ದಾಹ ನೀಗಿಸಿಕೊಳ್ಳಲು ನೀರು ಕುಡಿಯಲು ಬಾನಿ ನೆರವಾಗುತ್ತಿತ್ತು. ಹಾಗೆಯೇ ನಶ್ಯದ ಚಟವಿದ್ದವರು ತಂಬಾಕಿನಿಂದ ನಶ್ಯ ಅರೆಯಲು ಕಲ್ಲಿನ ಪುಟ್ಟ ಒರಳನ್ನು ಇರಿಸಿಕೊಂಡಿದ್ದರು.

ಕಾಲ ಬದಲಾಗಿದೆ. ಹೊಸಯುಗದಲ್ಲಿ ಕಲ್ಲಿನ ಉಪಕರಣಗಳ ಬಳಕೆ ನಿಂತುಹೋಗಿದೆ. ಅವಿಭಕ್ತ ಕುಟುಂಬಗಳು ಅಗೋಚರವಾಗುತ್ತ ಬಂದಂತೆ ಹಿಂದಿನ ಪೀಳಿಗೆಯನ್ನು ಸಾಕಿ ಸಲುಹಿದ ಕಲ್ಲಿನ ಉಪಕರಣಗಳ ಅವಶೇಷವೂ ಉಳಿಯದಂತೆ ಕಾಲಗರ್ಭದೊಳಗೆ ಐಕ್ಯವಾಗುತ್ತಿವೆ.

- ಪ.ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.