ಮಹಿಳೆ-ಮನೆ-ಬದುಕು

ಮಿಸ್ಸೂ.. ಮಿಸ್ಟೇಕೂ...

ಮಿಸ್ಸೂ.. ಮಿಸ್ಟೇಕೂ...
Published On :

ಅದು ಗಣಿತ ಕ್ಲಾಸು. ಟೀಚರ್ ಪಾಠ ಮಾಡ್ತಾ ಇದ್ರು.
ಅವ್ರು 'ಭಾಳ ಒಳ್ಳೇವ್ರ್‌ನಮ್ ಮಿಸ್ಸು' ಥರದವರು. ಅವ್ರಂದ್ರೆ ಎಲ್ಲ ಮಕ್ಳಿಗೂ ತುಂಬ ಇಷ್ಟ. ಅವ್ರಿಗೆ ಚಿಂಟು ಅಂದ್ರೆ ತುಂಬಾ ಇಷ್ಟ.
 ಪಾಠದ ಮಧ್ಯೆ ಚಿಂಟುಗೆ ಒಂದು ಪ್ರಶ್ನೆ ಕೇಳಿದ್ರು.
'ಚಿಂಟೂ.. ನಿಂಗೆ ನಾನೊಂದ್ ಡೈರಿ ಮಿಲ್ಕು, ಹೆಡ್‌ಮಿಸ್ ಎರಡು ಡೈರಿ ಮಿಲ್ಕು ಕೊಟ್ರೆ ಒಟ್ಟು ನಿನ್ನ ಹತ್ರ ಎಷ್ಟು ಡೈರಿ ಮಿಲ್ಕ್ ಇದ್ದ ಹಾಗಾಗತ್ತೆ?'
ಚಿಂಟೂ ಇದೇನ್ ಮಹಾ ಪ್ರಶ್ನೆ ಅನ್ನೋ ರೀತಿ 'ನಾಲ್ಕು' ಅಂದ.
ಚಿಂಟೂ ತಪ್ಪು ಉತ್ತರ ಹೇಳಿದ್ದಕ್ಕೆ ಟೀಚರ್‌ಗೆ ನಿರಾಶೆ ಆಯ್ತು.  ಚಿಂಟು ಸರಿಯಾಗಿ ಕೇಳಿಸ್ಕೊಂಡಿಲ್ಲ ಅನ್ಸುತ್ತೆ ಅಂತ ಮತ್ತೊಮ್ಮೆ ಅರ್ಥ ಆಗೋ ಹಾಗೆ ಪ್ರಶ್ನೆ ಕೇಳಿದ್ರು.
'ಚಿಂಟೂ ಸರಿ ಕೇಳಿಸ್ಕೋ.. ನಾನು ಒಂದು ಡೈರಿ ಮಿಲ್ಕ್ ಕೊಡ್ತೀನಿ. ಹೆಡ್‌ಮಿಸ್ ಎರಡು ಡೈರಿ ಮಿಲ್ಕ್ ಕೊಡ್ತಾರೆ. ಆಗ ನಿನ್ನ ಹತ್ರ ಒಟ್ಟು ಎಷ್ಟ್ ಡೈರಿ ಮಿಲ್ಕ್ ಇದ್ದ ಹಾಗಾಗುತ್ತೆ?'
ಮಿಸ್ಸಿನ ಸಪ್ಪೆ ಮುಖ ನೋಡಿ, ಅವ್ರಿಗೆ ತನ್ನ ಉತ್ತರ ಕೇಳಿ ಬೇಜಾರಾಗಿರೋದು ಚಿಂಟೂಗೆ ಅರ್ಥಆಯ್ತು. ತನ್ನ ಉತ್ತರ ಸರಿಯೋ ತಪ್ಪೋ ಅನ್ನೋ ಬಗ್ಗೆ ಯೋಚಿಸೋದಕ್ಕಿಂತ ಟೀಚರ್‌ಗೆ ಬೇಜಾರು ಮಾಡಬಾರದು ಅನ್ನೋದೇ ಚಿಂಟೂಗೆ ಮುಖ್ಯ ಅನಿಸಿತು. ಈ ಸಲ ಕೈ ಬೆರಳೆಲ್ಲ ಬಳಸಿ ಲೆಕ್ಕ ಹಾಕಿದ.
ಆದರೆ ಏನೇ ಲೆಕ್ಕ ಹಾಕಿದ್ರೂ ಅವನ ಉತ್ತರ ಅದೇ ಆಗಿತ್ತು.
ಹಿಂಜರಿಕೆಯಿಂದ 'ಮಿಸ್ಸ್.....  ನಾಲ್ಕು' ಅಂದ.
ಮಿಸ್‌ಗೆ ತನ್ನ ಮೆಚ್ಚಿನ ಸ್ಟೂಡೆಂಟ್ ಇಷ್ಟು ಸಿಂಪಲ್ ಪ್ರಶ್ನೆಗೆ ತಪ್ಪು ಉತ್ತರ ಕೊಡ್ತಿದಾನಲ್ಲ ಅಂತ ತುಂಬಾನೇ ಬೇಸರ ಆಯ್ತು. ಹೇಗಾದರೂ ಇವನಿಗೆ ಸುಲಭವಾಗಿ ಉತ್ತರ ಹೇಳೋ ಥರ ಕಲಿಸಬೇಕು ಅಂತ, ಡೈರಿ ಮಿಲ್ಕ್ ಬದಲು ಬೇರೆ ಚಾಕಲೇಟ್ ಉದಾಹರಣೆ ತಗೊಂಡು ನೋಡೋಣ ಅಂತ, ಮತ್ತೆ ಮುಖದಲ್ಲಿ ನಗು ತಂದುಕೊಂಡು ಉತ್ಸಾಹದಿಂದ,  'ಓಕೆ.. ನಾನು ನಿಂಗೆ ಒಂದು ಲಾಲಿ ಪಾಪ್ ಕೊಡ್ತೀನಿ. ಹೆಡ್‌ಮಿಸ್ ಎರಡು ಲಾಲಿಪಾಪ್ ಕೊಡ್ತ್ತಾರೆ. ಆಗ ನಿನ್ನ ಹತ್ರ ಎಷ್ಟು ಲಾಲಿಪಾಪ್ ಇರತ್ತೆ?'
ಟೀಚರ್ ಮುಖದಲ್ಲಿ ನಗು, ಉತ್ಸಾಹ ನೋಡಿ ಚಿಂಟೂಗೆ ಹುಮ್ಮಸ್ಸು ಬಂತು. ಚಕಚಕನೆ ಕೈಬೆರಳು ಲೆಕ್ಕ ಹಾಕಿ ಖಾತರಿ ಇದ್ರೂ ಒಂಚೂರು ಡೌಟಲ್ಲೇ 'ಮೂರು...' ಅಂದ.
ಟೀಚರ್ರಿಗೆ ಏನೋ ಗೆದ್ದ ಖುಷಿ. ಅಬ್ಬಾ ಚಿಂಟೂಗೆ ಕೊನೆಗೂ ಪ್ರಶ್ನೆ ಅರ್ಥ ಆಯಿತು ಅಂತ, ವೆರಿ ಗುಡ್ ಅನ್ನೋಕೆ ಹೊರಟವರು .. ಈಗ ಡೈರಿ ಮಿಲ್ಕ್ ಪ್ರಶ್ನೆ ಕೇಳಿ ನೋಡೋಣವೆಂದು ಮತ್ತೊಮ್ಮೆ ಮೊದಲು ಕೇಳಿದ್ದ ಪ್ರಶ್ನೆಯನ್ನೇ ಕೇಳಿದ್ರು.
'ಸರಿ...  ಈಗ  ನಿಂಗೆ ನಾನೊಂದ್ ಡೈರಿ ಮಿಲ್ಕು, ಹೆಡ್‌ಮಿಸ್ ಎರಡು ಡೈರಿ ಮಿಲ್ಕು ಕೊಟ್ರೆ ಒಟ್ಟು ನಿನ್ನ ಹತ್ರ ಎಷ್ಟು ಡೈರಿ ಮಿಲ್ಕ್ ಇದ್ದ ಹಾಗಾಗತ್ತೆ?'
ಚಿಂಟೂ ಈ ಬಾರಿ ಹೆಚ್ಚು ಆತ್ಮವಿಶ್ವಾಸದಿಂದ ಇದ್ದ . 'ನಾಲ್ಕು' ಅಂದ.
ಈ ಬಾರಿ ಟೀಚರ್ ನಿಜಕ್ಕೂ ತುಂಬಾ ಗಲಿಬಿಲಿಗೊಳಗಾದರು. ಸ್ವಲ್ಪ ತಾಳ್ಮೆ ಕಳಕೊಂಡು ರೇಗಿದರು.
'ಏನ್ ಹೇಳ್ತಿದೀಯ ಚಿಂಟೂ? ಇದು ತಪ್ಪು ಉತ್ತರ. ಹೇಗೆ ನಾಲ್ಕಾಗುತ್ತೆ ವಿವರಿಸು ನೋಡೋಣ?'
ಮಿಸ್ಸಿನ ಕೋಪದ ಮುಖ ನೋಡಿ ಚಿಂಟೂ ಪೂರ್ತಿ ಮಂಕಾಗಿ ಹೋದ.
ಇಳಿದನಿಯಲ್ಲಿ  ಹೇಳಿದ 'ಮಿಸ್... ನನ್ ಬ್ಯಾಗಲ್ಲಿ ಒಂದು ಡೈರಿ ಮಿಲ್ಕ್ ಇದೆ. ನೀವೊಂದು, ಹೆಡ್‌ಮಿಸ್ ಎರಡು ಡೈರಿ ಮಿಲ್ಕ್ ಕೊಟ್ರೆ ಒಟ್ಟು ನಾಲ್ಕಾಗಲ್ವ ಮಿಸ್?'
ಯಾರಿಗಾದರೂ ನಾವೊಂದು ಪ್ರಶ್ನೆ ಕೇಳಿದಾಗ ನಾವು ಅಂದ್ಕೊಂಡಿದ್ದಕ್ಕಿಂತ ಭಿನ್ನವಾದ ಉತ್ತರ ಬಂದಾಗ ನಾವು ಬಹುತೇಕ ಸಂದರ್ಭಗಳಲ್ಲಿ ಅವರ ಉತ್ತರ ತಪ್ಪು ಅಂತ ನಿರ್ಧರಿಸಿಬಿಡುತ್ತೇವೆ.
ಅವರು ನೀಡಿರೋ ಉತ್ತರಕ್ಕೆ ಅವರ ದೃಷ್ಟಿಕೋನದಲ್ಲಿ ಅದರದ್ದೇ ಆದ ಸ್ಪಷ್ಟತೆ ಇರುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಂಡಿರುವುದೇ ಇಲ್ಲ.
ಹಾಗಾಗಿ ನಮ್ಮ ಪ್ರಶ್ನೆಗಳಲ್ಲಿ ಸ್ಪಷ್ಟತೆ ಇರುವುದು ಎಷ್ಟು ಮುಖ್ಯವೋ ಉತ್ತರಿಸುವವನ ಉತ್ತರದ ಹಲವು ಸಾಧ್ಯತೆಗಳ ಬಗೆಗೆ ಯೋಚಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಅಲ್ವೇ?

- ನವೀನ್ ಸಾಗರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.