ರಾಜೀನಾಮೆ
ಆ ಮನೆಯಲ್ಲಿ ಸಂಭ್ರಮ ಎಷ್ಟಿತ್ತೆಂದರೆ ಅತ್ತೆ-ಮಾವ ಮೊಮ್ಮಗನನ್ನು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ. ತಮ್ಮ ಮೊಮ್ಮಗನ ತುಂಟಾಟ ನೋಡಿ ಹಿರಿಯ...

ಆ ಮನೆಯಲ್ಲಿ ಸಂಭ್ರಮ ಎಷ್ಟಿತ್ತೆಂದರೆ ಅತ್ತೆ-ಮಾವ ಮೊಮ್ಮಗನನ್ನು ಒಂದು ಕ್ಷಣವೂ ಬಿಟ್ಟಿರುತ್ತಿರಲಿಲ್ಲ. ತಮ್ಮ ಮೊಮ್ಮಗನ ತುಂಟಾಟ ನೋಡಿ ಹಿರಿಯ ಜೀವಗಳು ಆನಂದದಲ್ಲಿ ತೇಲುತ್ತಿದ್ದವು. ಹೀಗೆ ಮೊಮ್ಮಗ ನೀಡುತ್ತಿದ್ದ ಖುಷಿಯಲ್ಲೇ ಆರು ತಿಂಗಳು ಕಳೆದುಹೋಯಿತು.
ಶಿಲ್ಪಾಗೆ ಮೆಟರ್ನಿಟಿ ಲೀವ್ (ಹೆರಿಗೆ ರಜೆ) ಮುಗಿಯುತ್ತಾ ಬಂತು. ಆಕೆ ಪ್ರತಿಷ್ಠಿತ ಕಂಪನಿಯೊಂದರ ಉದ್ಯೋಗಿ. ಮಾನವ ಸಂಪನ್ಮೂಲ ವಿಭಾಗದಲ್ಲಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆಕೆಗೆಕೆಲಸಕ್ಕೆ ಬರುವಂತೆ ಕಂಪನಿಯಿಂದ ಆಹ್ವಾನ ಬಂತು. ಈ ವಿಷಯವನ್ನು ಗಂಡನ ಮುಂದೆ ಪ್ರಸ್ತಾಪಿಸಿದಾಗ ಆತ ಸಹಜವಾಗಿಯೇ ಇದ್ದ. ಶಿಲ್ಪಾ ಮದುವೆಗೂ ಮುಂಚೆ ತನ್ನ ಗಂಡನಿಗೆ ತಾನು ಯಾವುದೇ ಕಾರಣಕ್ಕೂ ಕೆಲಸ ಬಿಡುವುದಿಲ್ಲ ಎಂಬ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಗಂಡ ಕೂಡ ಸಮ್ಮತಿಸಿದ್ದ.
ತವರುಮನೆಯಲ್ಲಿ ಶಿಲ್ಪಾ ಬಾಣಂತನ ಮುಗಿಸಿಕೊಂಡು ಇನ್ನೇನು ಗಂಡನ ಮನೆಗೆ ಹೋಗಬೇಕು, ಆ ಸಮಯದಲ್ಲಿ ಶಿಲ್ಪಾಳ ಗಂಡ ಫೋನ್ ಮಾಡಿ 'ಸದ್ಯಕ್ಕೆ ಕೆಲಸಕ್ಕೆ ಹೋಗುವುದು ಬೇಡ. ರಜೆಯನ್ನು ಇನ್ನೊಂದಷ್ಟು ದಿನ ವಿಸ್ತರಿಸಿಕೊ' ಎಂದು ಹೇಳಿದ.
ಮಗು ಇನ್ನೂ ಚಿಕ್ಕದು. ಅದರ ಆರೈಕೆ, ಪೋಷಣೆ ಮುಖ್ಯವಲ್ಲವೇ? ನೀನು ಕೆಲಸಕ್ಕೆ ಹೋದರೆ ಕಂದಮ್ಮನಿಗೆ ತಾಯಿ ಪ್ರೀತಿ, ಮಮತೆ ದೊರೆಯುವುದಾದರೂ ಹೇಗೆ? ಎಂಬ ಅಂಶಗಳನ್ನು ಹೆಂಡತಿ ಮುಂದೆ ಇಡುತ್ತಾನೆ. ಅನಿವಾರ್ಯವಾಗಿ ಶಿಲ್ಪಾ ಕೆಲಸಕ್ಕೆ ರಾಜೀನಾಮೆ ನೀಡುತ್ತಾಳೆ.
ಅಶಾ ಕೂಡ ಸಾಫ್ಟ್ವೇರ್ ಎಂಜಿನಿಯರ್. ಕೈ ತುಂಬಾ ಸಂಬಳ. ಆಕೆ ಕೂಡ ಮೆಟರ್ನಿಟಿ ಲೀವ್ ಮುಗಿಸಿಕೊಂಡು ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ. ಅಶಾ ಪತಿರಾಯನದೂ ಅದೇ ರಾಗ. ಆದರೆ ಅಶಾ ಮಾತ್ರ ತಾನು ಕೆಲಸ ತೊರೆಯುವುದಿಲ್ಲ ಎಂದು ಹಠಹಿಡಿದಳು, ಸಫಲಳೂ ಆದಳು. ಇದರಿಂದ ಪತಿ-ಪತ್ನಿ ನಡುವೆ ಬಿರುಕು ಏರ್ಪಟ್ಟಿತ್ತು.
ಇದು ಕೇವಲ ಒಬ್ಬಳು ಶಿಲ್ಪಾ ಅಥವಾ ಅಶಾಳ ಕಥೆಯಲ್ಲ. ಸಮಾಜದಲ್ಲಿರುವ ಎಷ್ಟೋ ಹೆಣ್ಣು ಮಕ್ಕಳ ಪರಿಸ್ಥಿತಿ ಇದೇ ಆಗಿದೆ. ಮಗುವನ್ನು ಹೆತ್ತ ಮಾತ್ರಕ್ಕೆ ಕೆಲಸಕ್ಕೆ ಹೋಗಬಾರದು ಎಂಬ ನಿರ್ಬಂಧ ಸಲ್ಲದು.
ಮೆಟರ್ನಿಟಿ ಲೀವ್ ಮುಗಿಸಿದ ಮೇಲೆ ಮಹಿಳೆಯರು ಕೆಲಸಕ್ಕೆ ತೆರಳಲು ಮುಂದಾದಾಗ ಹಲವಾರು ಕುಟುಂಬಗಳಲ್ಲಿ ತಗಾದೆ ಶುರುವಾಗುತ್ತದೆ. ಮಹಿಳೆಯರು ಮನೆ, ಕಚೇರಿ ಕೆಲಸ ಮಾಡಿಕೊಂಡು ಮಗು ಪಾಲನೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲರು. ಕೆಲಸ ಮಾಡಿಕೊಂಡು ಮಗುವನ್ನು ಉತ್ತಮವಾಗಿ ಸಾಕಬಲ್ಲೆ, ಸಂಸಾರವನ್ನು ಬಹಳ ಚೆನ್ನಾಗಿಯೇ ನಿರ್ವಹಿಸಬಲ್ಲೆ, ಗಂಡನನ್ನು ಪ್ರೀತಿಪೂರ್ವಕವಾಗಿ ಕಾಣಬಲ್ಲೆ ಎಂಬುದಕ್ಕೆ ಹಲವಾರು ಮಹಿಳೆಯರು ಸಾಕ್ಷಿಯಾಗಿದ್ದಾರೆ.
ನಗರ ಪ್ರದೇಶಗಳಲ್ಲಿ ಗಂಡ-ಹೆಂಡತಿ ಇಬ್ಬರೂ ದುಡಿಯಲೇಬೇಕು ಎಂಬ ಪರಿಸ್ಥಿತಿ ಇದೆ, ಬೆಲೆ ಏರಿಕೆ, ರಿಸೆಷನ್ ನಡುವೆ ಕೆಲಸ ಬಿಟ್ಟು ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ. ದುಡಿದರೆ ಮಾತ್ರ ಜೀವನ ಸಾಗುವುದು. ಇಲ್ಲಿ ಗಂಡ-ಹೆಂಡತಿ ತಮ್ಮ ಪ್ರತಿಷ್ಠೆ ಬದಗಿಟ್ಟು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗಿದರೆ ಕುಟುಂಬ ನೆಮ್ಮದಿಯಿಂದ ಇರಲು ಸಾಧ್ಯ.
ಗಂಡ ಮಾತ್ರ ಕೆಲಸಕ್ಕೆ ಹೋಗಬೇಕು. ಹೆಂಡತಿ ಮಗುವಿನ ಲಾಲನೆ, ಪಾಲನೆಯಲ್ಲಿ ತೊಡಗಬೇಕು ಎಂಬ ನಿಯಮ ಇಲ್ಲ. ಇಬ್ಬರೂ ಸರಿಸಮವಾಗಿ ದುಡಿದರೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ. ಹಾಗಂತ ಮಗುವಿನ ಲಾಲನೆಪಾಲನೆ ಬಿಟ್ಟು ಬಿಡಿ ಎಂದಲ್ಲ. ಮನೆಯಲ್ಲಿ ಇದ್ದಷ್ಟು ಸಮಯ ಮಗು ಜತೆ ಕಳೆಯಿರಿ. ಉಳಿದಂತೆ ಮನೆಯ ಹಿರಿಯರೊಂದಿಗೆ ಮಗುವಿನ ಲಾಲನೆ ಪಾಲನೆ ನಡೆಯಲಿ. ಮಕ್ಕಳು ಹಿರಿಯರ ಜತೆ ಬೆಳೆದರೆ ಅವರ ತಾಳ್ಮೆ, ಒಳ್ಳೆಯ ಗುಣಗಳನ್ನು ಮಗು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುವುದು.
ಇದಕ್ಕೆ ಕುಟುಂಬ ಸದಸ್ಯರು ಗಂಡ-ಹೆಂಡತಿಗೆ ನೆರವಾದರೆ ಒಂದು ಕುಟುಂಬ ಸದಾ ನೆಮ್ಮದಿಯಿಂದ ಇರಲು ಸಾಧ್ಯ. ಸಾಧಕ ಬಾಧಕಗಳನ್ನು ಅರ್ಥ ಮಾಡಿಕೊಂಡು ಸಾಗಿದರೆ, ದುಡಿಮೆ ಇಂದಿನ ಅವಶ್ಯಕ ಎಂಬುದನ್ನು ಅರಿತು ನಡೆದರೆ ಸ್ವರ್ಗದಂತಹ ಸಂಸಾರ, ಸಂಭ್ರಮ ತುಂಬಿದ ಜೀವನ ನಡೆಸಲು ಸಾಧ್ಯ. ಸಮಸ್ಯೆಗಳನ್ನು ದೊಡ್ಡದು ಮಾಡುತ್ತಾ ಸಾಗಿದರೆ ಬದುಕಿನ ಹಳಿ ತಪ್ಪುವುದು ಖಂಡಿತ. ಹಾಗಾಗದಂತೆ ಎಚ್ಚರ ವಹಿಸಿ ನಡೆದಾಗ ಬದುಕು ಸಾರ್ಥಕ ಎನಿಸುತ್ತದೆ.
- ಜ್ಯೋತಿ. ಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


