ಆ ದಿನಗಳು
ಹೆಣ್ತನ ಅದೆಷ್ಟು ಚೆನ್ನ. ದೈವೀ ಭಾವ ಕೊಡುವ, ಎಲ್ಲದರ ಮೂಲಾಧಾರವಾಗಿರುವ ಈ ಹೆಣ್ಣುಜನ್ಮ ಸಾರ್ಥಕ ಎನಿಸುತ್ತೆ. ಆದರೆ ಕೆಲವೊಮ್ಮೆ ಹೆಣ್ಣಾಗಿ...

ಹೆಣ್ತನ ಅದೆಷ್ಟು ಚೆನ್ನ. ದೈವೀ ಭಾವ ಕೊಡುವ, ಎಲ್ಲದರ ಮೂಲಾಧಾರವಾಗಿರುವ ಈ ಹೆಣ್ಣುಜನ್ಮ ಸಾರ್ಥಕ ಎನಿಸುತ್ತೆ. ಆದರೆ ಕೆಲವೊಮ್ಮೆ ಹೆಣ್ಣಾಗಿ ಹುಟ್ಟಿದ್ದೇ ನನ್ನ ಕರ್ಮ ಎನಿಸಿಬಿಡುತ್ತದೆ.
ಶತಮಾನದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಬಹಿಷ್ಠೆಯಾದ ಹೆಣ್ಣು ದೋಷಪೂರಿತೆ ಎಂದು ಬಿಂಬಿತಳಾಗಿದ್ದಾಳೆ. ಈ ಅನುಭವ ಹೆಣ್ಣು ಋತುಮತಿ ಆದಾಗಿನಿಂದ ಕಡೆಯವರೆಗೂ ಅನುಭವಿಸಲೇಬೇಕಾದ ಹಣೆಬರಹವಾಗಿ ಹೋಗಿದೆ. ಬಹುಶಃ ಪುರುಷ ಪ್ರಧಾನ ಸಮಾಜದಲ್ಲಿ ಅತ್ತೆ ಮನೆಯವರಿಂದ, ಗಂಡನಿಂದ ಪ್ರತಿನಿತ್ಯ ದಬ್ಬಾಳಿಕೆಗೆ ಒಳಗಾಗುತ್ತಿದ್ದ ಹೆಣ್ಣನ್ನು ಪುಷ್ಪವತಿ ಆದ ಸಮಯದಲ್ಲಿ ಇಂಥ ದೌರ್ಜನ್ಯದಿಂದ ತಪ್ಪಿಸಲು ಬಹಿಷ್ಠೆ ಆದ ಹೆಣ್ಣಿಗೆ ಮೈಲಿಗೆ ಎಂಬ ಹೆಸರಿಟ್ಟು ತಿಂಗಳ ಮೂರು ದಿನವಾದರೂ ವಿಶ್ರಾಂತಿ ಕೊಡುವ ಒಳಗುಟ್ಟು ಇರಬಹುದು ಅಥವಾ ಪರಿಶುದ್ಧತೆಯ ಪ್ರಶ್ನೆಯಿಂದ ಪೂಜೆ ಪುನಸ್ಕಾರದ ಸಮಯ ದೂರವಿಟ್ಟಿರಬೇಕು. ಆ ವೇಳೆ ಆಕೆಯ ದೇಹವೇ ಹಿಂಸೆ ಅನುಭವಿಸುತ್ತಿರುವಾಗ ಕೆಲಸ ಮಾಡಲು, ಬಂದವರಿಗೆ ಆತಿಥ್ಯ ಒದಗಿಸಲು, ಪೂಜೆ ಪುನಸ್ಕಾರ ಇತ್ಯಾದಿಗಳಲ್ಲಿ ತೊಡಗಲು ಮನಸ್ಸಾದರೂ ಎಲ್ಲಿಂದ ಬಂದೀತು?
ಇಂತಹದೇ ಕಾರಣಗಳು ಕಾಲಕ್ರಮೇಣ ಮೂಲಾರ್ಥ ಕಳೆದುಕೊಂಡು ಮೂಢ ಅಂಧಾಚರಣೆಗೆ ಗುರಿಯಾಗಿವೆ. ಮಹಿಳೆಯರು ಕೆಲವು ವ್ರತಾಚರಣೆಗಳಿಗೆ, ಕೆಲವು ಪೂಜೆಗಳಿಗೆ ನಿಷಿದ್ಧ. ಆಕೆಗೆ ಋತುಚಕ್ರ ಪ್ರಾರಂಭಕ್ಕೆ ಮುನ್ನ ಅಥವಾ ಋತುಚಕ್ರ ನಿಂತ ಮೇಲೆ, ಮಾತ್ರವೇ ಪೂಜೆಗೆ ಅವಕಾಶ. ಯುವತಿಯರಿಗೆ, ಮಧ್ಯ ವಯಸ್ಸಿನವರಿಗೆ ಅವಕಾಶವಿಲ್ಲ. ಹಾಗಾದರೆ ಈ ವಯೋವಾನದವರಿಗೆ ಭಕ್ತಿ ಭಾವ ಇರುವುದಿಲ್ಲವಾ? ಇದೆಂಥ ನೀತಿ?
ಅದೇ ಹೆಣ್ಣು ಋತುಮತಿ ಆಗದಿದ್ದರೆ ಕಂಕಣ ಭಾಗ್ಯವೇ ಕೂಡಿಬರುವುದಿಲ್ಲ. ಆ ಹಂತ ತಲುಪದ ಹೊರತು ಮಗುವಿಗೆ ಜನ್ಮ ನೀಡಲು ಸಾಧ್ಯವೇ ಇಲ್ಲ. ಯಾವ ಸ್ರಾವದಿಂದ ಹೆಣ್ಣು 'ಮಲೀನೆ'ಯಾಗುತ್ತಾಳೋ ಅದೇ ದ್ರವ್ಯ ಮತ್ತೊಂದು ಜೀವ ಸೃಷ್ಟಿಗೆ ಆಧಾರ. ಆ ಶಿಶು ಗಂಡು ಮಗುವಾದರೆ ಅವನಿಗೆ ಯಾವ ವಯಸ್ಸಿನವನಾದರೂ ಮೈಲಿಗೆ ಇಲ್ಲ. ಅವನಿಗೆ ದೇವರ ಮೂರ್ತಿಯನ್ನು ಸ್ಪರ್ಶಿಸಲು, ದೇವರ ಮೇಲೆ ಹಾಕಿದ ಬಟ್ಟೆಯನ್ನು ಧರಿಸಲು ಅವಕಾಶವಿದೆ. ಬಹಿಷ್ಠೆಯಾಗುವ ವಯಸ್ಸಿರುವ ಹೆಣ್ಣಿಗೆ ಮಾತ್ರ ಇವೆಲ್ಲ ನಿಷಿದ್ಧವೇಕೆ? ಆ ಹೆಣ್ಣಿನ ಗರ್ಭಸಂಜಾತನಾದ ಗಂಡು ಮಾತ್ರ ಪವಿತ್ರವಾದಾನು ಹೇಗೆ? ದೇಹದ ಮಾಂಸ ಖಂಡಗಳು ಹೆಣ್ಣಿನ ರಕ್ತವೇ ಅಲ್ಲವೆ? ಅದನ್ನು ಕಳಚಿ ನಾನು ಶುದ್ದ, ಹೆಣ್ಣು ಮಲೀನ ಎನ್ನುತ್ತಾರಾ?
ಇಲ್ಲಿ ಅಂಧಾನುಕರಣೆಗೆ ಪುರುಷರನ್ನು ಮಾತ್ರ ಹೊಣೆ ಮಾಡುವುದು ಪೂರ್ತಿ ಸರಿಯಲ್ಲ. ಅತ್ತೆ ಎನಿಸಿಕೊಂಡವಳೂ ಅಷ್ಟೆ. ಹಳ್ಳಿಯ ಕಡೆ ಮುಟ್ಟಾದ ಹೆಣ್ಣು ಸೊಂಟ, ಹೊಟ್ಟೆ, ಕಾಲುನೋವು ಎಂದು ಮಲಗಿದರೆ ಗೊಣಗುತ್ತಾರೆ. 'ನಾನು ಸೊಸೆಯಾಗಿದ್ದಾಗ ಇಂಥ ಸಮಯದಲ್ಲೂ ಹೊಲದಲ್ಲಿ ದುಡಿಯುತ್ತಿದ್ದೆ. ನಿನ್ನ ಹಾಗೆ ಕುಂಟು ನೆಪ ಹೇಳುತ್ತಿರಲಿಲ್ಲ' ಎಂಬುದು ಅವಳ ಗೊಣಗು. ಸೊಸೆ ಈ ಪರಿಸ್ಥಿತಿಯಲ್ಲೂ ದುಡಿದು ತಂದ ಕಾಳು-ಕಡಿಗಾದರೆ ಮನೆಯೊಳಗೆ ಪ್ರವೇಶವಿದೆ. ಆಕೆ ಮಾತ್ರ ಎಲ್ಲಾ ಋತುಮಾನದಲ್ಲೂ ಋತುಮತಿಯಾದಾಗ ಹರಕು ಚಾಪೆ ಮೇಲೆ ಮನೆ ಹೊರಗೆ ವಿರಮಿಸಬೇಕು.
ನಾಳೆ ಹಬ್ಬವಿದ್ದಾಗ, ಮನೆಗೆ ನೆಂಟರು ಬಂದಾಗ, ಹೊಲದಲ್ಲಿ ಕೂಲಿ ಆಳುಗಳು ಇದ್ದು ಕೆಲಸ ಜಾಸ್ತಿ ಇದ್ದಾಗ, ಮುಟ್ಟಾಗಿ ಮೂಲೆ ಹಿಡಿದ ಸೊಸೆ ಮೂರು ದಿನದವರೆಗೆ ಕೂರುವಂತಿಲ್ಲ. ಒಂದೇ ದಿನದಲ್ಲಿ ಮೂರು ಸ್ನಾನದ ಶಾಸ್ತ್ರ ಮುಗಿಸಿ ಒಳಗೆ ಹೋಗಬಹುದು. ಆಗ ಮೈಲಿಗೆ ಇಲ್ಲ. ಇವರ ಆತುರಕ್ಕೆ ಋತುಸ್ರಾವ ನಿಲ್ಲಲು ಸಾಧ್ಯವೇ? ಸೊಸೆ ಪ್ರವಾಸಕ್ಕೆ, ತವರಿಗೆ, ಗೆಳೆಯರ ಶುಭ ಕಾರ್ಯಕ್ಕೆ ಹೊಗುವ ಸಂದರ್ಭದಲ್ಲಿ 'ಬೇಡ, ಬೇಡ ಮುಟ್ಟಾಗಿ ಹೋಗಬಾರದು' ಎನ್ನುತ್ತಾರೆ. ಅಪ್ಪಿತಪ್ಪಿ ಮುಟ್ಟಾದ ಹೆಣ್ಣು ಮನೆಯೊಳಗೆ ಬಂದು ಕಾಕತಾಳೀಯವೆಂಬಂತೆ ಮನೆಯಲ್ಲಿ ಕಷ್ಟ, ದುರಂತ ವಿಷ ಜಂತುಗಳು ಕಾಣಿಸಿಕೊಂಡರೆ ಎಲ್ಲದಕ್ಕೂ ಇವಳೇ ಹೊಣೆಯಾಗುತ್ತಾಳೆ.
ಆ ದಿನಗಳಲ್ಲಿ ಶುಚಿ, ಶಾಂತ, ನೆಮ್ಮದಿಯ ವಾತಾವರಣ ಇರಬೇಕು. ಹಾರ್ಮೋನುಗಳ ಕಾರಣದಿಂದ ಕಿರಿಕಿರಿ ಇದ್ದೇ ಇರುತ್ತದೆ. ಜತೆಗೆ ಗೊಣಗು, ಬೈಗುಳ ಸೇರಿಕೊಂಡರೆ ಆ ಹಿಂಸೆ ಯಾರಿಗೂ ಬೇಡ. ನಗರಗಳಲ್ಲಿ ಈ ಮಟ್ಟಿನ ಹಿಂಸೆ ಇರಲಿಕ್ಕಿಲ್ಲ. ಆದರೆ ಕೆಲಸದ ಒತ್ತಡಗಳು ಇದ್ದೇ ಇರುತ್ತವಲ್ಲ!
- ಶಿಲ್ಪಶ್ರೀ ಯು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


