ಗಾಡ್ ಮದರ್

'ಗುಮ್ಮನ ಕರೆಯದಿರೆ... ಅಮ್ಮಾ' ಎಂದು ಕೃಷ್ಣ ತನ್ನ ಅಮ್ಮನನ್ನು ಕೇಳಿದ್ದನಂತೆ. ಆ ಹಾಡು ಇಂದಿಗೂ ತಾಯಿ ಮಕ್ಕಳ ಬಾಂಧವ್ಯವನ್ನು ಗಟ್ಟಿಗೊಳಿಸುವಂತಿದೆ. ಅಮ್ಮ ಎಂದರೆ ಅಮ್ಮನೇ. ಬೇರೆ ಹೋಲಿಕೆಗಳು ಅನಗತ್ಯ.
ದೇವರು ಮತ್ತು ಅಮ್ಮನ ನಡುವೆ ಅದೇನೋ ಹೊಸ ರೀತಿಯ ಬಾಂಧವ್ಯ ಇದೆ ಎನ್ನುವುದು ಅಕ್ಷರಶಃ ಸತ್ಯ. ಸ್ನಾನ ಮಾಡಿಸಿದ ನಂತರ ತಾಯಿ ಮಗುವಿನ ಕೈಗಳನ್ನು ಜೋಡಿಸಿ ಹಿಡಿದು ದೇವರನ್ನು ಪ್ರಾರ್ಥಿಸುವಂತೆ ಹೇಳುತ್ತಾಳೆ. ಮಗು ಹಾಗೇ ಮಾಡುತ್ತದೆ. 'ಸ್ವಾಮಿ ಆಂಜನೇಯ ಕಾಪಾಡಪ್ಪ. ವಿದ್ಯೆಬುದ್ಧಿ ಕೊಡಪ್ಪ. ಅನ್ನ ಕೊಡಪ್ಪ. ಅಹಂಕಾರ ಕೊಡಬೇಡಪ್ಪ. ಕೆಟ್ಟಬುದ್ಧಿ ಕಿತ್ತಾಕಪ್ಪ' ಅಂತ ಒಂದೊಂದೇ ಹೇಳಿಕೊಡುತ್ತಿದ್ದಳು.. ಅಮ್ಮನ ಆ ಮಾತು ಅದೇನೋ ಹಿತ ಎನಿಸುತ್ತಿತ್ತು. ದೇವರು ಇದ್ದಾನೋ, ಇಲ್ಲವೋ ತಿಳಿಯದು. ಆದರೆ ನಂಬಿಕೆಯ ಬುನಾದಿಯನ್ನು ಹುಟ್ಟುಹಾಕುವ ಪರಿಯಂತೂ ಅಸಾಧ್ಯವಾದುದು.
ಜಾಗತಿಕವಾಗಿ ನಾವು ಅದೆಷ್ಟೇ ಬೆಳೆದರೂ ದೇವರ ಮೇಲಿನ ನಂಬಿಕೆ ಮಾತ್ರ ಹೋಗಲಾರದು. ಚಿಕ್ಕಂದಿನಿಂದಲೂ ಎಲ್ಲ ವಿಷಯಗಳಲ್ಲೂ ಅಮ್ಮ ತನ್ನ ಮಕ್ಕಳಿಗೆ ಆತ್ಮವಿಶ್ವಾಸವನ್ನು ತುಂಬುತ್ತಾಳೆ. ಯಾವುದೇ ರೀತಿಯ ನೋವಾದರೂ ತಕ್ಷಣವೇ ನೆನೆಯುವುದು ದೇವರನ್ನು. ಅದೆಂಥ ಭಾವವೋ ತಿಳಿಯದು. ಮಗು ಹಠ ಮಾಡಿದರೂ ದೇವರನ್ನು ತೋರಿಸಿಯೇ ಹೆದರಿಸುತ್ತಾರೆ. 'ಹಾಗೆಲ್ಲ ಮಾಡಬಾರದು ಪುಟ್ಟ ದೇವರು ಕಣ್ಣು ಕುಕ್ಕುತ್ತಾನೆ' ಎಂದು ಹೇಳಿ ಸುಮ್ಮನಿರಿಸುತ್ತಾಳೆ.
ಒಮ್ಮೆ ನನ್ನ ತಾಯಿ, ಪೂಜೆಯಲ್ಲಿ ನಾನು ಆಸಕ್ತಿ ತೋರಿಸುತ್ತಿಲ್ಲ ಎಂಬ ಕಾರಣಕ್ಕೆ 'ನಿನಗೆ ಭಯ, ಭಕ್ತಿ ಇಲ್ಲ. ದೇವರೆಂದರೆ ತಾತ್ಸಾರ. ಕಷ್ಟ ಬಂದಾಗ ವೆಂಕಟರಮಣ ಅನ್ನೋದಕ್ಕಿಂತ ಈಗಲೇ ಭಕ್ತಿಯಿಂದ ನಡೆಯೋದನ್ನ ಕಲಿ. ಓದಿದ ಮಾತ್ರಕ್ಕೆ ಎಲ್ಲವೂ ನಿನ್ನಿಂದಲೇ ಆಗುತ್ತದೆ ಎಂದು ಅಂದ್ಕೋಬೇಡ. ದೇವರಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ' ಎಂದು ಹರಿಹಾಯ್ದಿದ್ದಳು.
ನನ್ನ ತಾಯಿ ದೇವರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಳು. ಹಾಗಂತ ಕಷ್ಟವೆಂಬುದು ಇರಲಿಲ್ಲ ಎಂದೇನಿಲ್ಲ. ಆದರೂ ದೇವರಿದ್ದಾನೆ ಎಂಬ ನಂಬಿಕೆಯೇ ಅವಳಿಗೆ ನೆಮ್ಮದಿಯನ್ನು ನೀಡುತ್ತಿತ್ತು. ಒಮ್ಮೆ ನಾನು 'ಏನಮ್ಮ ದೇವರಿದ್ದಾನೆ ಎಂದು ಹೇಳುತ್ತಿದ್ದೆ ಈಗ ಎಲ್ಲಿ ಹೋದ ನಿನ್ನ ದೇವರು' ಎಂದು ಹಾಸ್ಯ ಮಾಡಿದ್ದೆ. ಅಮ್ಮನ ಉತ್ತರ ಕೇಳಿ ನಿಜಕ್ಕೂ ನಾನು ದಂಗಾಗಿದ್ದೆ, 'ದೇವರು ನಮ್ಮನ್ನು ಪರೀಕ್ಷೆಗೆ ಒಳಪಡಿಸಿದ್ದಾನೆ. ಕಷ್ಟದಲ್ಲೂ, ಸುಖದಲ್ಲೂ ದೇವರನ್ನು ನೆನೆದಾಗ ಮಾತ್ರ ಆತ ನಮ್ಮ ಕಷ್ಟವನ್ನು ಪರಿಹರಿಸುತ್ತಾನೆ' ಎಂದಿದ್ದಳು. ಅಬ್ಬಾ ಅದೆಂಥ ಭಕ್ತಿ. ನಿಜಕ್ಕೂ ಆಕೆಯ 'ದೇವರಿದ್ದಾನೆ' ಎಂಬ ಆತ್ಮವಿಶ್ವಾಸವನ್ನು ಮೆಚ್ಚಲೇಬೇಕು. ಅದೆಂತಹ ಕಷ್ಟ ಬಂದರೂ ಕುಂದದೆ ನಂಬಿಕೆಯ ನೆಲೆಯಲ್ಲಿ ಬದುಕಬೇಕೆಂಬ ಸತ್ಯವನ್ನು ಆಕೆಯಿಂದ ತಿಳಿಯಬೇಕು. ಅದೇನೇ ಆದರೂ ಚಿಕ್ಕಂದಿನಿಂದ ನಮ್ಮನ್ನು ತಿದ್ದಿ ತೀಡಿ ದೇವರು ಎಂಬ ನಂಬಿಕೆಯ ಮೂಲಕ ಆತ್ಮಸ್ಥೈರ್ಯವನ್ನು ತುಂಬುವ ತಾಯಂದಿರಿಗೆ ನಮ್ಮ ನಮನ.
- ರಮ್ಯಶ್ರೀ .ಜಿ.ಎನ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


