ಪಾಕಸ್ಥಾನ
Published On :
ಮನೆ ನೋಡಲು ಸುಂದರವಾಗಿದ್ದರೆ ಸಾಲದು, ಅಡುಗೆಮನೆ ಕೂಡ ಅಷ್ಟೇ ಶುಚಿಯಾಗಿರಬೇಕು. ಪುಟ್ಟದಾಗಿರಲಿ, ದೊಡ್ಡದಾಗಿರಲಿ ಒಪ್ಪ ಓರಣವಾಗಿ ಪಾತ್ರೆಗಳನ್ನು ಜೋಡಿಸಿಟ್ಟರೆ ನೋಡಲು ಆಕರ್ಷಕ. ಎಲ್ಲೆಂದರಲ್ಲಿ ಕಸ ಬಿಸಾಕುವ, ಪಾತ್ರೆಗಳನ್ನು ಬೇಕಾಬಿಟ್ಟಿ ಇಡುವ ಪ್ರವೃತ್ತಿ ಒಳ್ಳೆಯದಲ್ಲ. ಶುಭ್ರ, ಶುಚಿ ಅಡುಗೆಮನೆಗೆ ಇಲ್ಲಿವೆ ಕೆಲವು ಟಿಪ್ಸ್...
- ನಿತ್ಯ ಗ್ಯಾಸ್ ಮತ್ತು ಕಟ್ಟೆಯನ್ನು ಸೋಪ್ ಪೌಡರ್ ಅಥವಾ ಇನ್ನಿತರೆ ರಾಸಾಯನಿಕ ಬಳಸಿ ಸ್ವಚ್ಛವಾಗಿ ತೊಳೆಯಬೇಕು.
- ಸಿಂಕ್‌ನಲ್ಲಿ ಯಾವತ್ತೂ ಪಾತ್ರೆಗಳನ್ನು ಗುಡ್ಡೆ ಹಾಕಬೇಡಿ. ನಿತ್ಯ ಸ್ವಚ್ಛವಾಗಿ ತೊಳೆದು ಅಚ್ಚುಕಟ್ಟಾಗಿ ಜೋಡಿಸಿಡಿ. ಜಾಸ್ತಿ ಪಾತ್ರೆಗಳು ತುಂಬಿಕೊಂಡರೆ ದುರ್ವಾಸನೆ ಹರಡುತ್ತದೆ.
- ದಿನಾಲೂ ಕಸ ಗುಡಿಸಿದರೆ ಸಾಲದು. ಸ್ವಚ್ಛವಾಗಿ ನೆಲ ಒರೆಸುವ ರೂಢಿ ಬೆಳೆಸಿಕೊಳ್ಳಿ. ಇದರಿಂದ ಮನೆ ಶುಚಿಯಾಗಿರುತ್ತದೆ.
- ಮನೆಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯಬೇಡಿ. ಕಸದ ಬುಟ್ಟಿಗೆ ಹಾಕಿ ನೀಟಾಗಿಡಿ. ಮುಚ್ಚಳವಿರುವ ಕಸದ ಬುಟ್ಟಿ ಉಪಯೋಗಿಸುವುದು ಒಳಿತು.
- ಹಸಿ ತರಕಾರಿ, ಹಾಲು, ಮೊಸರಿನ ಪ್ಯಾಕೆಟ್ ಹಾಗೂ ಹಣ್ಣಿನ ಸಿಪ್ಪೆ ಸೇರಿದಂತೆ ಇತರೆ ವಸ್ತುಗಳ ಮೇಲೆ ಕ್ರಿಮಿಕೀಟಗಳು ಉತ್ಪತ್ತಿಯಾಗುವುದು ಸಾಮಾನ್ಯ. ಹಾಗಾಗದಂತೆ ಮುನ್ನೆಚ್ಚರಿಕೆ ವಹಿಸಿ. ನೀಟಾಗಿ ಕಸದ ಬುಟ್ಟಿಯಲ್ಲಿ ಹಾಕಿಡಿ. ನಿತ್ಯ ಕಸ ತೆಗೆಯಿರಿ.
- ಕೆಲವರಿಗೆ ಮಾರುಕಟ್ಟೆಯಲ್ಲಿ ನೋಡಿದ್ದನ್ನೆಲ್ಲಾ ತಂದು ಫ್ರಿಡ್ಜ್‌ನಲ್ಲಿಡುವ ಅಭ್ಯಾಸ ಇರುತ್ತದೆ. ಹೀಗೆ ತರುವ ಮೊದಲು ಫ್ರಿಡ್ಜ್ ಶೆಲ್ಫ್‌ಗಳನ್ನು ಸ್ವಚ್ಛವಾಗಿರಿಸಬೇಕು.
- ಯಾವುದೇ ವಸ್ತುಗಳ ಪ್ಯಾಕೆಟನ್ನು ಓಪನ್ ಮಾಡಿ ತುಂಬಾ ದಿನ ಬಿಡಬೇಡಿ. ಇದರಿಂದ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ. ಅದರಲ್ಲೂ ಪೌಷ್ಟಿಕಭರಿತ ಹಣ್ಣುಗಳನ್ನು ಕೊಯ್ದು ಇಡಬೇಡಿ. ಕ್ರಿಮಿಕೀಟಗಳಿಂದ ಹಾಳಾಗುತ್ತದೆ.
- ಅಡುಗೆ ಮಾಡುವಾಗ ಕೈ ಒರೆಸಿಕೊಳ್ಳಲು ಪ್ರತ್ಯೇಕವಾದ ಶುಭ್ರ ಬಿಳಿ ಬಟ್ಟೆ ಇಟ್ಟುಕೊಳ್ಳಿ.
- ಕುಡಿಯುವ ನೀರಿನ ಪಾತ್ರೆ ಬಾಯಿ ತೆರೆದು ಬಿಡಬೇಡಿ. ಕಸ ಗುಡಿಸುವಾಗ ಇಲ್ಲವೇ ಇನ್ನಿತರ ಕೆಲಸ ಮಾಡುವ ವೇಳೆ ಅದರಲ್ಲಿ ಧೂಳು ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.
- ಕೇವಲ ಸಿಂಕ್, ಗ್ಯಾಸ್ ಕಟ್ಟೆ ಒರೆಸಿದ ಮಾತ್ರಕ್ಕೆ ಅಡುಗೆಮನೆ ಸ್ವಚ್ಛವಾಗಿರುವುದಿಲ್ಲ. ಕನಿಷ್ಠ ವಾರಕ್ಕೊಮ್ಮೆಯಾದರೂ ಸಂದಿ ಗೊಂದಿಗಳನ್ನು ಸ್ವಚ್ಛಗೊಳಿಸಿ.
- ಅಡುಗೆ ಮನೆ ಸ್ವಚ್ಛತೆಯಲ್ಲಿ ಅಡಗಿದ ಆರೋಗ್ಯ ವೈದ್ಯ ವಿಜ್ಞಾನ ಹೇಳುವ ಮಾತಿದು. ಪೌಷ್ಟಿಕಾಂಶಯುಕ್ತ ಆಹಾರ ತಯಾರಿಸುವಲ್ಲಿ ತೋರುವ ಆಸಕ್ತಿಯನ್ನು ಶುಚಿತ್ವಕ್ಕೂ ಕೊಡಬೇಕು.
- ಡೈನಿಂಗ್ ಟೇಬಲ್‌ನಲ್ಲಿ ಕುಳಿತು ಊಟ ಮಾಡಿದ ನಂತರ ಆಮೇಲೆ ತೆಗೆದರಾಯಿತು ಬಿಡು ಎಂಬ ಧೋರಣೆ ಬೇಡ. ಆಗಿಂದಾಗಲೇ ಎಲ್ಲವನ್ನೂ ಕ್ಲೀನ್ ಮಾಡಿ. ಎಲ್ಲ ಪದಾರ್ಥಗಳ ಮೇಲೆ ಮುಚ್ಚಳ ಹಾಕಿ.
- ಅನಗತ್ಯ ಉತ್ಪನ್ನಗಳನ್ನು ಅಡುಗೆಮನೆಯಿಂದ ದೂರವಿಡಿ. ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ ವಸ್ತುಗಳನ್ನು ಆದಷ್ಟು ಬೇಗ ಹೊರ ಹಾಕಿ. ಬಳಕೆಗೆ ಬಾರದ ಹಾಗೂ ಅನಗತ್ಯ ವಸ್ತುಗಳು ಅಡುಗೆ ಮನೆಯಲ್ಲಿಟ್ಟರೆ ಧೂಳು ಸಂಗ್ರಹಕ್ಕೆ ಅವಕಾಶವಾಗುತ್ತದೆ. ಇದರಿಂದ ಕೆಮ್ಮು, ಅಸ್ತಮಾ, ಅಲರ್ಜಿ ಸೇರಿದಂತೆ ಇತರೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ಅಡುಗೆಮನೆ ಎಷ್ಟರ ಮಟ್ಟಿಗೆ ನೀಟಾಗಿ ಇಟ್ಟಿರುತ್ತೇವೆಯೋ ಹಾಗೆಯೇ ನಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಇಲ್ಲದಿದ್ದರೆ ಅನಾರೋಗ್ಯ ನಿಶ್ಚಿತ.
- ಅಶ್ವಿನಿ ಮೂಲಿಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

