ಮಹಿಳೆ-ಮನೆ-ಬದುಕು

ತಲವೆರ್ ಝಲಕ್

Published On :

ಟೈಲ್ಸ್ ಆಕರ್ಷಣೆಯ ಸಂಕೇತ. ಅದರಲ್ಲೂ ಮೆಕ್ಸಿಕನ್ ತಲವೆರ್ ಟೈಲ್ಸ್‌ನದ್ದು ಅದ್ಭುತ ಮೈಬಣ್ಣ. ಅಡುಗೆ ಕೋಣೆ ಅಥವಾ ಸ್ನಾನದ ಕೋಣೆಗಳಲ್ಲಿ ಶುಚಿತ್ವ ಕಾಪಾಡುವುದರೊಂದಿಗೆ ಒಪ್ಪ ಓರಣವಾಗಿಡುವುದು ಎಲ್ಲರ ಇಚ್ಛೆ. ಮೆಕ್ಸಿಕನ್ ಟೈಲ್ಸ್ ನಿಮ್ಮ ಪಾಲಿಗೆ ಅತ್ಯುತ್ತಮ ಆಯ್ಕೆ.
ಚಿತ್ತ ಚಿತ್ತಾರ ವಿನ್ಯಾಸದ ಈ ಟೈಲ್ಸ್ ಅನ್ನು ಜೋಡಿಸಿಡುವುದೂ ಮನೆ ಕಟ್ಟುವವರಿಗೆ ದೊಡ್ಡ ಸವಾಲು. ಇದರ ಉಸಾಬರಿಯೇ ಬೇಡ ಅಂತ ನೆಲಕ್ಕೆ ಹಾಕುವ ಟೈಲ್ಸ್ ಅನ್ನೇ ಅಡುಗೆ ಕೋಣೆ, ಬಾತ್‌ರೂಮ್‌ಗಳಿಗೂ ಸೂಚಿಸಿ ಸುಮ್ಮನಿದ್ದುಬಿಡುತ್ತಾರೆ. ಆದರೆ ತರಾವರಿ ಬಣ್ಣಗಳಲ್ಲಿ ಸಿಗುವ ತಲವೆರ್ ಟೈಲ್ಸ್ ಅಂದವೇ ಬೇರೆ.

ತಲವೆರ್ ಪರಿಚಯ
ಮೆಕ್ಸಿಕೋದ ಸಾಂಪ್ರದಾಯಿಕ ಬಣ್ಣಗಳ ಹದವಾದ ಮಿಶ್ರಣದಿಂದ ಮಾಡಿದ ಟೈಲ್‌ಗಳಿವು. ಗೋಡೆಯಲ್ಲಿ ವಿವಿಧ ಟೈಲ್‌ಗಳ ಮಧ್ಯೆ ಮೆಕ್ಸಿಕನ್ ಸಂಸ್ಕೃತಿ ರಾರಾಜಿಸಿದರೆ ಅದರಲ್ಲಿ ಅಚ್ಚರಿಪಡಬೇಕಿಲ್ಲ. ಟೈಲ್ಸ್‌ಗಳ ಮೇಲೆ ಬಿಡಿಸಲಾಗುವ ಸುಂದರ ಚಿತ್ತಾರಗಳೇ ತಲವೆರ ಕಲೆ. ಮೆಕ್ಸಿಕೋದ ಪ್ಯೂಬೆಲಾ ನಗರದಲ್ಲಿ ಹುಟ್ಟಿದ ಈ ಕಲೆಗೆ ಸುಮಾರು ನಾಲ್ಕೈದು ಶತಮಾನಗಳ ಇತಿಹಾಸವಿದೆ. ಮೆಕ್ಸಿಕೋದ ಸ್ಥಳೀಯ ಕರಕುಶಲ ಕಲೆಯೊಂದಿಗೆ ಇಟಾಲಿಯನ್, ಸ್ಪಾನಿಷ್ ತಂತ್ರಗಳೂ ಮೇಳೈಸಿರುವುದನ್ನು ನಾವು ಕಾಣಬಹುದು. ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿ ಬಿಡಿಸುವ ಚಿತ್ರಗಳಾದರೂ ಹಳದಿ, ಕಪ್ಪು, ಹಸಿರು, ಕಿತ್ತಳೆ, ಕೆನ್ನೀಲಿ ಬಣ್ಣಗಳನ್ನು ಬಳಸುವುದಿದೆ. ಇದೀಗ ನಾವೀನ್ಯತೆಯೊಂದಿಗೆ ಹತ್ತು ಹಲವು ಬಣ್ಣಗಳನ್ನೂ ಪ್ರಯೋಗಿಸಿ ಯಶಸ್ವಿಯಾದದ್ದಿದೆ. ಇದೇ ವಿನ್ಯಾಸಗಳನ್ನು ಅಚ್ಚು ಹೊಡೆಸಲಾಗಿರುವ ತಲವೆರ್ ಟೈಲ್ ಇಂದು ವಿಶ್ವ ಪ್ರಸಿದ್ಧ.

ಎಲ್ಲೆಂದರಲ್ಲಿ ಫಿಕ್ಸ್
ಇದನ್ನು ಎಲ್ಲಿ ಬೇಕಾದರಲ್ಲಿ ಅಳವಡಿಸಬಹುದು. ಆದರೆ, ಬೇಕಾದ ಕಡೆ ಮಾತ್ರ ಜೋಡಿಸಿಡುವುದು ಉತ್ತಮ ಮನೆಯ ಸಿಟೌಟ್, ಕಿಚನ್, ಬಾತ್‌ರೂಂ, ಬಾಲ್ಕನಿಗಳು ಸೂಕ್ತ ತಾಣಗಳು. ಡೈನಿಂಗ್ ರೂಂ, ಬೆಡ್ ರೂಂ, ಹಾಲ್‌ಗಳಲ್ಲಿ ಬಳಸಬಾರದೆಂದು ಏನೂ ಇಲ್ಲ. ಮನೆ ತುಂಬಾ ಅಳವಡಿಸುವುದೆಂದರೆ ಅನವಶ್ಯಕ ವೆಚ್ಚ ಕೂಡ. ಉಳಿದ ಟೈಲ್ಸ್‌ನಂತೆ ಒಂದೇ ವಿನ್ಯಾಸದಲ್ಲಿ ಜೋಡಿಸುವುದಕ್ಕಿಂತ ಹಲವು ವಿನ್ಯಾಸಗಳನ್ನು ವಿವಿಧ ರೀತಿಯಲ್ಲಿ ಜೋಡಿಸಿದರೆ ವೈವಿಧ್ಯಮ. ಮಧ್ಯ ಮಧ್ಯ ಸಾದಾ ಟೈಲ್‌ಗಳನ್ನು ಬಳಸಿ ಖರ್ಚು, ವೆಚ್ಚಗಳನ್ನು ಸರಿದೂಗಿಸಬಹುದು. ಇದರಿಂದ ಚಿತ್ರಗಳ ಏಕತಾನತೆಗೂ ಒಂದು ವಿರಾಮ ಸಿಗುತ್ತದೆ.
ಇದರಿಂದ ಈ ಟೈಲ್‌ಗಳು ಸುಂದರ ಹೂಗಳ ನಡುವೆ ಶೋಭಿಸುವ ಚೆಂಗುಲಾಬಿಯಂತೆ ಮುದ ನೀಡುವುದರಲ್ಲಿ ಸಂಶಯವಿಲ್ಲ. ಟೈಲ್‌ಗಳನ್ನು ಆಯ್ಕೆಮಾಡುವಾಗ ಬೆಳಕಿನ ಪರಿಣಾಮಗಳ ಬಗ್ಗೆ ಎಚ್ಚರವಿರಬೇಕು. ಸಾಮಾನ್ಯವಾಗಿ ಗೋಡೆ ಬಣ್ಣ ಹಾಗೂ ಟೈಲ್‌ಗಳು ಬೆಳಕನ್ನು ಹೆಚ್ಚು ಹಿಡಿದಿಟ್ಟುಕೊಳ್ಳುವ ಗುಣದ್ದಾದರೆ, ಮನೆಯಲ್ಲಿ ಕಿರಿಕಿರಿ ಅನ್ನಿಸೀತು.
ಹಾಗಾಗಿ ಈ ಟೈಲ್ಸ್ ಅನ್ನು ಮನೆಗೆ ಅಳವಡಿಸುವ ಮುನ್ನ ಸಾಧ್ಯಾಸಾಧ್ಯತೆಗಳ ಬಗ್ಗೆ ಸಾಕಷ್ಟು ಲೆಕ್ಕಾಚಾರ ಹಾಕಿ ಮುನ್ನಡೆಯುವುದು ಒಳಿತು. ಇಷ್ಟು ಮಾಡಿದಿರೆಂದರೆ ಮನೆಯೊಳಗೂ ಬಣ್ಣ ಬಣ್ಣದ ರಂಗೋಲಿ, ಮನ ಅರಳಿಸುವ ಚಿತ್ತಾರ. ಅಂತೂ ನಿಮ್ಮ ಮನೆಗಿದು ವಿಶಿಷ್ಟ ಗ್ರಾಮೀಣ ಸೊಗಡನ್ನು ತಂದುಕೊಡದಿದ್ದರೆ ಮತ್ತೆ ಕೇಳಿ...

- ಗಣಪ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.