ಗಟ್ಟಿಮನೆ
ಮುಂಗಾರು ಎದುರಿಸಲು ಎಲ್ಲ ಸಿದ್ಧತೆಗಳನ್ನು ನೀವೇ ಮಾಡಬೇಕು. ನಿಮ್ಮನ್ನು ಮತ್ತು ನಿಮ್ಮ ಆಸ್ತಿಪಾಸ್ತಿಯನ್ನು..

ಮುಂಗಾರು ಎದುರಿಸಲು ಎಲ್ಲ ಸಿದ್ಧತೆಗಳನ್ನು ನೀವೇ ಮಾಡಬೇಕು. ನಿಮ್ಮನ್ನು ಮತ್ತು ನಿಮ್ಮ ಆಸ್ತಿಪಾಸ್ತಿಯನ್ನು ಸುರಕ್ಷಿತವಾಗಿಡಲು ಮನೆಯೊಳಗೆ, ಹೊರಗೆ ನೀವು ಮಾಡಬೇಕಾದ್ದು ಬೇಕಾದಷ್ಟಿವೆ...
ಅಯ್ಯೋ, ಮಳೆ ಬಂದೇ ಬಿಡ್ತಾ? ಚಾವಣಿ ರಿಪೇರಿ ಮಾಡೇ ಇಲ್ಲ, ನೀರು ಸೋರುತ್ತಿದೆ, ಏನಪ್ಪಾ ಸೊಳ್ಳೆಗಳ ಕಾಟ... ಹೀಗೆ ನಿಮಗೆ ಎದುರಾಗುವ ಸಮಸ್ಯೆಗಳಿಗೆ ಮಳೆಯನ್ನು ದೂರಬೇಡಿ. ಮುಂಗಾರು ಎದುರಿಸಲು ಎಲ್ಲ ಸಿದ್ಧತೆಗಳನ್ನು ನೀವೇ ಮಾಡಬೇಕು. ನಿಮ್ಮನ್ನು ಮತ್ತು ನಿಮ್ಮ ಆಸ್ತಿಪಾಸ್ತಿಯನ್ನು ಸುರಕ್ಷಿತವಾಗಿಡಲು ಮನೆಯೊಳಗೆ, ಹೊರಗೆ ನೀವು ಮಾಡಬೇಕಾದ್ದು ಬೇಕಾದಷ್ಟಿವೆ.
ಉದ್ಯಾನವನ
- ಮಳೆಗಾಲ ಬಂತೆಂದರೆ ಗಿಡಗಳೆಲ್ಲ ಹಸಿರಿನಿಂದ ಕಂಗೊಳಿಸಲು ಹಾತೊರೆಯುತ್ತಿರುತ್ತವೆ. ಬೇಸಿಗೆಯ ಧಗೆಗೆ ಮಣ್ಣು ಒಣಗಿರುವುದರಿಂದ ಮೊದಲ ಮಳೆಯ ನೀರು ಗಿಡಗಳ ಬೇರಿನವರೆಗೆ ಇಳಿಯುವುದಿಲ್ಲ. ಹಾಗಾಗಿ ಮಳೆಗಾಲದಲ್ಲಿ ಗಿಡಗಳ ಬುಡದಲ್ಲಿನ ಮಣ್ಣನ್ನು ಸ್ವಲ್ಪ ಲೂಸ್ ಆಗುವಂತೆ ಕೆದಕಿಟ್ಟುಬಿಡಿ.
- ನಿರಂತರ ಮಳೆಯಿಂದಾಗಿ ಗಿಡಗಳ ಸುತ್ತಮುತ್ತ ಹೆಚ್ಚುವರಿ ನೀರು ನಿಂತು ಅದು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿ ಕೇಂದ್ರಗಳಾಗಬಹುದು. ಹಾಗಾಗಿ ಹೆಚ್ಚುವರಿ ನೀರು ಹೋಗಲು ಸೂಕ್ತ ವ್ಯವಸ್ಥೆ ಮಾಡಿ. ಜತೆಗೆ, ರಸಗೊಬ್ಬರ ಬಳಕೆ ಮೂಲಕ ಗಿಡಗಳು ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳಿ.
- ಕಿಟಕಿಗಳು ಹಾಗೂ ಗೋಡೆಗಳ ನಡುವೆ ಕೆಲವೊಂದು ಬಿರುಕುಗಳಿರುತ್ತವೆ. ಸಿಮೆಂಟ್‌ಗಳ ಮೂಲಕ ಅವುಗಳನ್ನು ಸರಿಪಡಿಸಿ. ಬಿರುಕು ದೊಡ್ಡದಾಗಿದ್ದರೆ ವಾಟರ್‌ಪ್ರೂಫಿಂಗ್ ಅಂಶಗಳಿರುವ ಪ್ಲಾಸ್ಟರ್‌ನಿಂದ ಮುಚ್ಚಿರಿ.
- ಮರದಲ್ಲಿನ ಸಂಕೋಚನದಿಂದಾಗಿ ಬಾಹ್ಯ ಬಾಗಿಲುಗಳು ಹಾಗೂ ಕಿಟಕಿಯ ಫ್ರೇಮ್‌ಗಳ ನಡುವೆ ಕೂದಲೆಳೆಯಷ್ಟು ಗ್ಯಾಪ್ ನಿರ್ಮಾಣವಾಗುತ್ತವೆ. ಮಳೆ ಜೋರಾಗಿ ಬರುತ್ತಿದ್ದರೆ ಆ ಗ್ಯಾಪ್‌ಗಳ ಮೂಲಕ ಮಳೆನೀರು ಒಳಕ್ಕೆ ಚಿಮ್ಮುವ ಸಾಧ್ಯತೆಯಿರುತ್ತದೆ. ಇದಕ್ಕೆ ಪರಿಹಾರವೆಂದರೆ ಸಿಲಿಕಾನ್ ಟ್ಯೂಬ್. ಗ್ಯಾಪ್‌ಗಳಲ್ಲಿ ಈ ರಾಸಾಯನಿಕವನ್ನು ಒಮ್ಮೆ ಹಿಂಡಿದರೆ ಸಾಕು, ಬಿರುಕು ಮಾಯವಾಗುತ್ತದೆ.
- ಮನೆಯ ಛಾವಣಿಗೆ ವಾಟರ್‌ಪ್ರೂಫಿಂಗ್ ಪದರವನ್ನು ಅಳವಡಿಸಲು ಮೊದಲೆಲ್ಲ ಬಿಟುಮನ್ ಪೇಂಟ್ ಬಳಸಲಾಗುತ್ತಿತ್ತು. ಅಂಥದ್ದೇ ಇನ್ನೊಂದು ಮಾರ್ಗವೆಂದರೆ, ಎಪಾಕ್ಸಿ ಆಧಾರಿತ ಜಲಸ್ತಂಭಕದ ಬಳಕೆ. ಇದು ಬೇಡವೆಂದರೆ, 'ಬ್ರಿಕ್ ಕೋಬಾ' ತಂತ್ರಜ್ಞಾನ ಬಳಸಬಹುದು. ಇದರಲ್ಲಿ ವೈಜ್ಞಾನಿಕವಾಗಿ ಪರೀಕ್ಷಿಸಲಾದ ಕೆಲವೊಂದು ಪದರಗಳಿರುತ್ತವೆ. ಇವು ನೀರು ತಡೆಯುವ ಅಂಶಗಳನ್ನೂ ಹೊಂದಿರುತ್ತವೆ. ಬೇಕೆಂದರೆ ಇದನ್ನು ವೃತ್ತಿಪರರೇ ಬಂದು ಅಳವಡಿಸುತ್ತಾರೆ.
- ಮಳೆಗಾಲವೆಂದರೆ ಕ್ರಿಮಿಕೀಟಗಳು, ಗೆದ್ದಲುಗಳು ಉತ್ಪತ್ತಿಯಾಗುವ ಸಮಯ. ಹಾಗಾಗಿ ಮಳೆಗಾಲದಲ್ಲಿ ನಿಮ್ಮ ಮನೆಯಲ್ಲಿ ಜಿರಳೆ, ಚಿಮ್ಮುಂಡಿ ಹುಳ, ಕಣಜದ ಹುಳು, ಇರುವೆ ಮುಂತಾದವುಗಳನ್ನು ತಡೆಯಲು ಬೇಕಾದ ಕ್ರಮಕೈಗೊಳ್ಳಿ.
- ಅಡುಗೆ ಕೋಣೆಯೊಳಗೆ ಆಗಾಗ್ಗೆ ಧೂಪ ಹಾಕುತ್ತಿರಿ. ಈ ಮೂಲಕ ಸಂಗ್ರಹಿಸಿಟ್ಟ ದವಸಧಾನ್ಯಗಳ ಪಾತ್ರೆಗಳು, ಆಹಾರ ವಸ್ತುಗಳೊಳಗೆ ಕ್ರಿಮಿಕೀಟಗಳು ಧಾಳಿ ಮಾಡದಂತೆ ನೋಡಿಕೊಳ್ಳಿ.
- ಕ್ರಿಮಿಕೀಟಗಳು ಸುಲಭವಾಗಿ ಮನೆಯೊಳಗೆ ಪ್ರವೇಶಿಸದಂತೆ ತಡೆಯಲು ಬಾಗಿಲು, ಕಿಟಕಿಗಳು ಹಾಗೂ ನೀರು ಹೊರಹೋಗುವ ಪ್ರದೇಶದಲ್ಲಿ ವೈರ್ ಜಾಲರಿಗಳನ್ನು ಅಳವಡಿಸಿ.
- ಸೂರ್ಯ ಮುಳುಗುವ ಮುಂಚೆಯೇ ಕ್ರಿಮಿಕೀಟ ನಿರೋಧಕಗಳನ್ನು ಬಳಸಿರಿ.
- ಮನೆ ನಿರ್ಮಿಸುವಾಗಲೇ ನೆಲಕ್ಕೆ ಡ್ಯಾಂಪ್ ಪ್ರೂಫಿಂಗ್ ಕೋರ್ಸ್ (ಡಿಪಿಸಿ) ಅಂದರೆ ತೇವ ರಕ್ಷಕ ವ್ಯವಸ್ಥೆಯ ಪ್ರಕ್ರಿಯೆಯನ್ನು ಅನುಸರಿಸಲಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ. ಆಗ ಮಳೆಗಾಲದಲ್ಲಿ ನೀರಿನ ಸೋರಿಕೆ ತಡೆಯಬಹುದು.
- ಮರದ ಫ್ಲೋರ್‌ಗಳಾಗಿದ್ದರೆ ಆರ್ದ್ರತೆಯು ಒಳಕ್ಕೆ ಸೋರಿಕೆಯಾಗದಂತೆ ತಡೆಯಲು ಆಗಾಗ್ಯೆ ವ್ಯಾಕ್ಸ್ ಮಾಡುತ್ತಿರಿ.
- ನಿಮ್ಮ ಮನೆಯಲ್ಲಿ ಸಂಪೂರ್ಣವಾಗಿ ಕಾರ್ಪೆಟ್ ಬಳಸಲಾಗಿದ್ದರೆ, ಡಿಹ್ಯೂಮಿಡಿಫೈಯರ್ ಅನ್ನು ಮೊದಲು ಖರೀದಿಸಿ. ಏಕೆಂದರೆ ಸಿಲಿಕಾ ಜೆಲ್ ಆಧಾರಿತ ತೇವ ತೆಗೆಯುವ ಜೆಲ್ ಅನ್ನು ಖರೀದಿಸಿದರೆ ಅದನ್ನು ಆಗಾಗ್ಗೆ ಬದಲಿಸಬೇಕಾಗುತ್ತದೆ. ಹೀಗಾಗಿ ಜೆಲ್‌ಗಾಗಿಯೇ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
- ಕಿಟಕಿಗಳಿಗೆ ಮೇಲ್ಕಟ್ಟುಗಳನ್ನು ಅಳವಡಿಸಿ. ಜತೆಗೆ, ಅದು ಹೊರಭಾಗಕ್ಕೆ ಚಾಚಿರಲಿ.
- ಗಾರ್ಡನ್‌ನ ಅಂಚುಗಳು ಮನೆಯ ಗೋಡೆಗಿಂತ ಕೆಲವೊಂದು ಅಡಿ ದೂರವಿರುವಂತೆ ನೋಡಿಕೊಳ್ಳಿ.
- ಮನೆಯಿಂದ ಸ್ವಲ್ಪ ದೂರದಲ್ಲಿ ಇಳಿಜಾರಿನ ನೆಲಗಟ್ಟು ಅಥವಾ ಕಲ್ಲುಹಾಸು ನಿರ್ಮಿಸಿ. ಈ ಮೂಲಕ ಮಳೆ ನೀರು ಹರಿದುಹೋಗುವಂತೆ ಮಾಡಿ. ಗೋಡೆಯ ಕೆಳಗೆ ನೀರು ನಿಂತರೆ ಅದು ಮನೆಯ ಅಡಿಪಾಯದೊಳಕ್ಕೆ ಹೋಗಿ ಕಟ್ಟಡವನ್ನು ದುರ್ಬಲಗೊಳಿಸುವ ಸಾಧ್ಯತೆಯಿರುತ್ತದೆ.
- ಮುಂಗಾರು ಆರಂಭವಾಗುವ ಕೆಲ ತಿಂಗಳ ಮುನ್ನವೇ ಹಾರ್ಡ್‌ವುಡ್ ನೆಲಗಳನ್ನು ಪಾಲಿಷ್ ಮಾಡಿಕೊಳ್ಳಿ. ಇದರಿಂದ ನೆಲ ವಿರೂಪವಾಗುವುದನ್ನು ತಡೆಯಬಹುದು. ಲ್ಯಾಮಿನೇಟ್ ಮಾಡಿದ್ದರೆ ಅದನ್ನು ಪಾಲಿಷ್ ಮಾಡಬೇಕಾದ ಅಗತ್ಯವಿರುವುದಿಲ್ಲ.
- ಮಳೆಗಾಲದಲ್ಲಿ ಫರ್ನಿಚರ್‌ಗಳನ್ನು ಪಾಲಿಷ್ ಮಾಡುವ ತವಕ ಬೇಡ. ಏಕೆಂದರೆ, ಅದು ಒಣಗದೇ ಇರಬಹುದು. ಪೀಠೋಪಕರಣಗಳನ್ನು ಸಂರಕ್ಷಿಸುವ ಉತ್ತಮ ವಿಧಾನವೆಂದರೆ ಪಾಲಿಯುರಥೇನ್ ಕೋಟಿಂಗ್.
- ಪುಸ್ತಕಗಳು, ಸಿಡಿಗಳು, ಚರ್ಮದ ವಸ್ತುಗಳನ್ನು ಇಡಲೆಂದು ಬಳಸುವ ಕಪಾಟುಗಳಲ್ಲಿ ಸಣ್ಣ ಸಿಲಿಕಾ ಜೆಲ್‌ನ ಪ್ಯಾಕೆಟ್‌ಗಳನ್ನು ಇಟ್ಟುಬಿಡಿ.
- ಕರ್ಪೂರ ಹಾಗೂ ಲವಂಗದ ತುಂಡನ್ನು ನಿಮ್ಮ ಬಟ್ಟೆಬರೆಗಳ ನಡುವೆ ಇಟ್ಟುಬಿಡಿ. ಇದು ವಾರ್ಡ್‌ರೋಬ್‌ನಲ್ಲಿನ ವಸ್ತುಗಳನ್ನು ತೇವಾಂಶದಿಂದ ಕಾಪಾಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


