ಸಾಕು ಸಾಕು ಬಂಜೆ ಬಳ್ಳಿಯ ದತ್ತು ಹೂವು
'ಹಾಳಾದ ಮನುಸ್ಯರು, ನರಬಲಿ ತಕ್ಕೋಬಿಟ್ರು ಅಕ್ಕಾ' ಎಂದು ಮುಸಿಮುಸಿ ಮಾಡ್ತಾ ಕೆಲಸದ ಗೌರಿ ಬಂದಾಗ ತಡವಾಗಿದೆ, ಅದಕ್ಕೆ ಚೋಳ್ತಾಳೆ ಅಂದುಕೊಂಡು...

'ಹಾಳಾದ ಮನುಸ್ಯರು, ನರಬಲಿ ತಕ್ಕೋಬಿಟ್ರು ಅಕ್ಕಾ' ಎಂದು ಮುಸಿಮುಸಿ ಮಾಡ್ತಾ ಕೆಲಸದ ಗೌರಿ ಬಂದಾಗ ತಡವಾಗಿದೆ, ಅದಕ್ಕೆ ಚೋಳ್ತಾಳೆ ಅಂದುಕೊಂಡು ಅವಳತ್ತ ನೋಡಿದೆ. ನಿಜವಾಗಿಯೂ ಗೌರಿ ಕಣ್ಣಲ್ಲಿ ನೀರಿತ್ತು. ಸೆರಗಂಚಿಗೆ ಒತ್ತಿಕೊಂಡಳು.
'ಯಾರಿಗೆ ಏನಾಯ್ತು' ಅಂತ ನಾನು ಕೇಳುತ್ತಲೇ ಅವಳ ದುಃಖ ಉಮ್ಮಳಿಸಿತು. 'ಅದೇ ಕಣಕ್ಕ, ಹಿಂದಿನ ರಸ್ತೇಲಿ ಮನೆಯೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದನಲ್ಲ, ಆ ಮನೆಯ ಹೆಣ್ಣು ಇಲ್ಲಿ ಇಷ್ಟುದ್ದ ಜಡೆ ಅಕ್ಕಾ... ಅವಳ ಮೈ ಬಣ್ಣ ಎಂಗಿತ್ತು ಅಂತೀರಾ? ಅಯ್ಯೋ ಶಿವನೇ ಬಲ್ಲ ಆ ಚೆಲುವು.' 'ಸರಿ, ಏನಾಯ್ತು ಹೇಳು?'.
ಗುಟ್ಟು ಹೇಳುವಂಥ ದನಿಯಲ್ಲಿ ಸಣ್ಣಗೆ 'ಮದುವೆ ಆಗಿ ಎಂಟೋ ಹತ್ತು ವರ್ಷವಾದ್ರೂ ಮಕ್ಕಳಾಗಿಲ್ಲ ಅಂತ ದಿನಾ ಆ ಹೆಣ್ಣು ಕುಂತ್ರೂ ನಿಂತ್ರೂ ಬೈಯೋರು ಅತ್ತೆ ಮಾವ. ಇಲ್ಲದ ಕೆಲಸ ಹುಡುಕಿ ಹುಡುಕಿ ಹೇಳೋರು. ಅದೇನಾಯ್ತೋ, ಈಗೀಗ ನಾ ಹೋದ್ರೂ ಮುಖ ನೋಡಿ ನಗ್ತಿರಲಿಲ್ಲ. ಒಗೆಯೋ ಕಲ್ಲಿನ ಮೇಲೆ ಕುಂತಿರೋದು. ಅಯ್ಯೋ ಬೆಳಗ್ಗೆ ಬೆಳಗ್ಗೆ ಬೆಂಕಿ ಹಚ್ಕೊಂಡು ಸತ್ತುಹೋಯ್ತು. ಒಂದು ಜನ ನೆರೆದಿದ್ದಾರೆ ಅಷ್ಟಿಷ್ಟಲ್ಲ. ನನಗೆ ಕೈಕಾಲು ತಣ್ಣಗಾಗಿದೆ ಅಕ್ಕಾ.. '
ಅವಳು ಹೇಳುತ್ತಲೇ 'ಬಾ ಹೋಗಿಬರೋಣ' ಅಂತ ಹೊರಟೆ. ಜನ ತುಂಬಿದ್ದರು. ಎಲ್ಲರ ಬಾಯಲ್ಲೂ ಹೆಣವಾದ ಅವಳ ಗುಣಗಾನ. ಪಾಪ, ಒಂದು ಮಗುವಾಗಬೇಕಿತ್ತು ಎನ್ನುವ ಅವೇ ಮಾತುಗಳು. ಅದರಲ್ಲೊಬ್ಬ ಹೆಂಗಸು ಪಿಸುಗುಟ್ಟಿದಳು. 'ನನಗೇನೂ ದೋಷವಿಲ್ಲ. ನನ್ನ ಗಂಡನಿಗೇ ತೊಂದರೆ ಇದೆ ಅಂತ ಡಾಕ್ಟರ್ ಹೇಳಿದ್ರು ಅಂತ ನಾಲ್ಕು ದಿನಕ್ಕೆ ಮೊದಲು ನನ್ನ ಮಗಳ ಹತ್ರ ಹೇಳ್ಕೊಂಡು ಅತ್ಲಂತೆ ಪಾಪ'. ಇನ್ನೊಬ್ಬಳು ಬಂದಳು ಅವಳ ಸ್ನೇಹಿತೆಯಂತೆ. ಗೋಳೋ ಎಂದು ಅತ್ತಳು. 'ಈಗ ನಾ ಇಲ್ವಾ? ನನಗೇನು ಈ ಹಾಳು ಜನ ಕಡಿಮೆ ಉಪದ್ರವ ಕೊಡ್ತಾರಾ? ನೀ ಯಾಕೆ ಹೀಗೆ ಮಾಡಿಕೊಂಡೆ ದೀಪಾ...' ಮುಗ್ಗರಿಸಿ ಕೂತವಳನ್ನು ಯಾರೋ ಮೇಲೆತ್ತಿದರು. 'ಆಂಟೀ ಈ ಹಾಳು ಸೊಸೈಟಿಗೆ ಹೃದಯ ಇಲ್ವಾ? ಇದರಲ್ಲಿ ನಮ್ಮ ತಪ್ಪೇನು? ಎಲ್ಲಿ ಹೋದ್ರೂ ವ್ಯಂಗ್ಯ. ನಮಗೆಷ್ಟು ನೋವಿರುತ್ತೆ ಅಂತ ಅರ್ಥ ಮಾಡಿಕೊಳ್ಳೋರು ಯಾರು? ಆ ನೋವು ಮರೆಯೋಕಂತ ಒಂದು ಮಗೂನ ಎತ್ತಿಕೊಂಡ್ರೂ ಪಟ್ಟಂತ ಕಿತ್ತುಕೊಂಡು ನಮ್ಮ ಎದುರಿಗೇ ಬಂಜೇರು ಹಾಗೆಲ್ಲ ಮಗೂನ ಮುಟ್ಟಿದ್ರೆ ಮಗೂಗೆ ತೊಂದರೆ ಆಗ್ತದೆ ಅಂತ ಪ್ರಾಣ ಕಳ್ಕೋಬೇಕು, ಹಾಗೆ ಮಾತಾಡ್ತಾರೆ ಗೊತ್ತಾ? ಇನ್ನೊಬ್ಬರು ಮಕ್ಕಳಿಲ್ಲದವರು ಮದುವೆ ಚಪ್ಪರದ ಕೆಳಗೆ ನಿಂತ್ರೆ ಮದುವೆ ನಿಂತು ಹೋಗತ್ತೆ ಅಂತಾರೆ. ನಾವು ಒಳ್ಳೆಯ ಯಾವ ಕೆಲಸಕ್ಕೂ ಬರಲ್ಲವೆಂದು ಕೇಳೋ ಹಾಗೆ ಮಾತಾಡ್ತಾರೆ.'
'ಹೋಗ್ಲಿ ಬಿಡಮ್ಮಾ, ಸಮಾಧಾನ ಮಾಡ್ಕೋ. ಜನಕ್ಕೇನು? ಮಾತಾಡ್ತಾರೆ...'ಇನ್ನು ಯಾರೋ ಭುಜ ತಟ್ಟಿ ಸಮಾಧಾನಿಸಿದರು.
ನನಗೇಕೋ ಸುಮ್ಮನಿರಲಾಗದೇ 'ಈಗೇನು ಸೈನ್ಸ್ ಇಷ್ಟು ಮುಂದುವರಿದಿದೆ. ಮಕ್ಕಳಾಗದ್ದು ಒಂದು ಸಮಸ್ಯೆಯೇ ಅಲ್ಲ. ಬೇಕೆಂದರೆ ನಿಮ್ಮ ತಾಯಿ ವಯಸ್ಸಿನವರೂ ಮಕ್ಕಳಿಗೆ ಜನ್ಮ ಕೊಡಬಹುದು' ಅಂದುಬಿಟ್ಟೆ. 'ನೀವು ಹೇಳ್ತಿರೋದು ಒಂದು ವರ್ಗದ ಮಾತು ಆಂಟಿ. ಎಲ್ಲರ ಮನೆಯಲ್ಲೂ ಅದಕ್ಕೆ ಒಪ್ಪಿಗೆ ಕೊಡಲ್ಲ. ವರ್ಷ ಕಳೆಯಕ್ಕಿಲ್ಲ, ಕಾಯ್ತಿರ್ತಾರೆ, ವಿಶೇಷ ಏನಾದ್ರೂ..? ಅಂತ ಹುಬ್ಬು ಹಾರಿಸ್ತಾರೆ. 2-3 ವರ್ಷ ಕಳೆದರಂತೂ ಅವರ ನಾಲಗೆ ಪಿಸುಗುಡುತ್ತೆ. ಈ ಪ್ರಪಂಚದಲ್ಲಿರೋರಿಗೆಲ್ಲ ವರ್ಷಕ್ಕೆ ಸರಿಯಾಗಿ ಮಕ್ಕಳಾಗಬೇಕು ಈ ಜನಕ್ಕೆ.' ಅವಳ ಮಾತು ಕೇಳಿ ಮುಂದುವರಿದ ಜಗತ್ತಿಗೆ ಈಗಲೂ ಇದು ದೊಡ್ಡ ಸಂಗತಿಯೇ? ಬೇರೆ ಬೇರೆ ರೀತಿಯ ನಿಯೋಗ ಪದ್ಧತಿಗಳ ನೆನಪಾಯ್ತು. ಮಾತು ತಡೆದುಕೊಂಡೆ. ವಿಜ್ಞಾನ ಎಷ್ಟೇ ಮುಂದುವರಿದಿದ್ರೂ ನಮ್ಮ ಜನ ಪ್ರಯೋಜನ ಪಡೆದುಕೊಳ್ಳಲು ಹಿಂಜರಿಯುತ್ತಾರೆ. ದೇಹದಲ್ಲಿ ಏನೇ ಏರುಪೇರುಗಳಿದ್ರೂ ಸರಿಯಾದ ರೀತಿಯಲ್ಲೇ ಮಗುವಾಗ್ಬೇಕು ಅಂತ ಕಾಯುತ್ತಾ ಕೂರುತ್ತಾರೆ. ಇದೆಲ್ಲ ಬೇಕಾ? ಸಾಧ್ಯವೇ ಇಲ್ಲ ಅನ್ನುವಂತಿದ್ದರೆ ತಡವೇಕೆ ಮಾಡಬೇಕು? ವಿಶಾಲವಾದ ಈ ಪ್ರಪಂಚದಲ್ಲಿ ಅನಾಥ ಶಿಶುಗಳಿಗೇನು ಬರವೇ? ನಮ್ಮ ಹೊಟ್ಟೆಯಲ್ಲಿ ಹುಟ್ಟಿದರೂ ಆ ಬಸಿರಿನ ಭಾರ ಹೊರಬೇಕಲ್ಲದೆ ಮತ್ತೇನೂ ಅಲ್ಲ. ಆ ಗರ್ಭಾವಸ್ಥೆಯಲ್ಲಿ ಯಾವ ತಾಯಿಯೂ ಮಗುವನ್ನು ನೋಡಲು ಸಾಧ್ಯವಿಲ್ಲ. ನೀವೊಂದು ಹೊಸ ಜೀವದ ಸೃಷ್ಟಿಯಲ್ಲಿ ತೊಡಗಿರುವುದು ಸುಂದರ ಅನುಭವ ಹೌದು. ಆದರೆ ನೀವು ಇತರರಿಗಿಂತ ಶ್ರೇಷ್ಠರು. ಬೇರೊಂದು ಮಗುವನ್ನು ಅದೇ ತಾಯ್ತನದಿಂದ ಸಲಹುತ್ತೀರಿ. ನಿಮ್ಮ ಜಗತ್ತು, ಮನಸ್ಸು ವಿಶಾಲ. ಒಂದು ಸಾಕು ಪ್ರಾಣಿ ತಂದರೂ ಜತನದಿಂದ ಕಾಣುವ ನಾವು ಏನೇನೂ ಅರಿಯದ ಕಂದನ ತಂದು ಸಲಹಿದರೆ ಹೃದಯ ಅರಳದೇ?
'ಬಾಡಿ ಬಂತು ಜರುಗಿ ನಿಲ್ಲಿ,' ಯೋಚನೆಗಳಿಂದ ಹೊರಬಂದು ದೂರ ಸರಿದೆ. ಮೂರು ಜಡೆಯ ಹುಡುಗಿಯ ಮುಖವೂ ಮುದ್ದಾಗಿತ್ತು. ಜೀವ ತೆಗೆದುಕೊಂಡು ಏನು ಸಾಧಿಸಿದಳು? ಗಂಡನಿಗೆ ದೋಷವಿದ್ದರೆ ನಿಮ್ಮ ಮಗನಿಗೇ ದೋಷವಿರುವುದು ಎಂದು ಹೇಳಬೇಕಿತ್ತು. ತಾನು ಸತ್ತು, ಅವರು ತಮ್ಮ ಮಗನಿಗೆ ಇನ್ನೊಂದು ಮದುವೆ ಮಾಡಿ, ಇನ್ನೊಬ್ಬಳ ಜೀವ ತೆಗೆಯಲು ದಾರಿ ಮಾಡಿಕೊಟ್ಟಳೇ? ದುಡುಕಿದಳು ಎನಿಸಿ ಕಣ್ಣು ಕೊಳವಾಯಿತು.
- ಭಾಗ್ಯ ಕೃಷ್ಣಮೂರ್ತಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


