ಮಹಿಳೆ-ಮನೆ-ಬದುಕು

ಹುಡುಗ ಕೈಬಿಡಲ್ಲ!

ಪ್ರೀತಿಸುತ್ತಿರುವ ಹುಡುಗಿಯರಿಗೆ ಒಂದು ರೀತಿಯ ಅಭದ್ರತೆ ಕಾಡುತ್ತಲೇ ಇರುತ್ತೆ.

ಹುಡುಗ ಕೈಬಿಡಲ್ಲ!
Published On :

ಪ್ರೀತಿಸುತ್ತಿರುವ ಹುಡುಗಿಯರಿಗೆ ಒಂದು ರೀತಿಯ ಅಭದ್ರತೆಯ ಕರಿನೆರಳು ಕಾಡುತ್ತಲೇ ಇರುತ್ತೆ. ಆ ಹುಡುಗನ ಬಗ್ಗೆ ಒಂದು ಸಣ್ಣ ಸಂಶಯ, ತಳಮಳ ಇದ್ದೇ ಇರುತ್ತೆ. ಹುಡುಗ ಎಷ್ಟೇ ಪ್ರೀತಿಸುವುದಾಗಿ ಹೇಳಿದರೂ, ಕೊನೆಗೆಲ್ಲಿ ಜೈ ಅಂತಾನೋ ಎಂಬ ದಿಗಿಲು ಅವರನ್ನು ಕ್ಷಣ ಕ್ಷಣವೂ ಆವರಿಸಿಕೊಳ್ಳುತ್ತೆ.
ತಾನು ಪ್ರೀತಿಸುವ ಹುಡುಗ ತನ್ನನ್ನು ಎಷ್ಟು ಇಷ್ಟಪಡುತ್ತಾನೆ, ಸಂಪೂರ್ಣ ನನ್ನವನಾಗಿಯೇ ಇದ್ದಾನಾ, ಅರ್ಥ ಮಾಡಿಕೊಂಡಿದ್ದಾನಾ, ಮದುವೆಯಾಗಲು ತಯಾರಿದ್ದಾನಾ ಎಂಬಿತ್ಯಾದಿ ಪ್ರಶ್ನೆಗಳು ತಲೆಯಲ್ಲಿ ಸುಳಿದಾಡುವುದು ಸಹಜ. ಇದನ್ನು ತಿಳಿಯಲು ಇಲ್ಲಿದೆ ಸಪ್ತ ಸೂತ್ರ...
ಪರಿಚಯಿಸುವ ಪರಿ
ಪ್ರಿಯಕರನೊಂದಿಗೆ ಸುತ್ತಾಡಲು ಹೋದಾಗ ಆತನ ಸ್ನೇಹಿತರ ಬಳಿ ನಿಮ್ಮನ್ನು 'ನಾನು ಪ್ರೀತಿಸುತ್ತಿರುವ ಹುಡುಗಿ' ಎಂದು ಪರಿಚಯಿಸಿದ ಎಂದರೆ ಸಾಕು. ಅದು ನಿಮ್ಮ ನಂಬಿಕೆಗೆ ದೊಡ್ಡ ಭದ್ರತೆ. ಇದರರ್ಥ ನೀವು ಆತನ ಒಂದು ಭಾಗವಾಗಿದ್ದೀರಿ. ಏಕೆಂದರೆ ಪುರುಷ ಯಾವುತ್ತೂ ಬೇಗನೆ ಕಮಿಟ್ ಆಗಲು ಇಷ್ಟಪಡುವುದಿಲ್ಲ. ಹೀಗಾದಲ್ಲಿ ನಿಮ್ಮ ಬಾಂಧವ್ಯ ಮುಂದುವರಿಸಲು ಅಡ್ಡಿಯಿಲ್ಲ.
ಜಗಳ- ಒಂದಾಗುವಿಕೆ
ಪ್ರೀತಿ ಎಂದ ಮೇಲೆ ವಿರಸ ಸಹಜ. ನೀವು ಕೆಲವೊಮ್ಮೆ ಕ್ಷುಲ್ಲಕ ಕಾರಣಕ್ಕೂ ಜಗಳವಾಡಿರಬಹುದು. ಆರೋಪ- ಪ್ರತ್ಯಾರೋಪಗಳನ್ನು ಎದುರಿಸಿರಬಹುದು. ಆದರೆ ಈ ಜಗಳದಿಂದ ಪಾಠ ಕಲಿಯಬೇಕು. ಇಬ್ಬರೂ ಈ ಜಗಳವನ್ನು ಪರಿಹರಿಸಿಕೊಳ್ಳಲು ಬಯಸಿದಲ್ಲಿ ಇದು ಉತ್ತಮ ಬೆಳವಣಿಗೆ. ಮತ್ತೆ ಮಾಡಿದ ತಪ್ಪನ್ನು ಮಾಡದೇ ತಿದ್ದುಕೊಂಡು ಹೋದಲ್ಲಿ ನಿಮ್ಮ ಪ್ರೀತಿ ಮತ್ತಷ್ಟು ಗಟ್ಟಿಯಾಗಿದೆ ಎಂದರ್ಥ.
ಇಷ್ಟ-ಕಷ್ಟ
ನಿಮ್ಮ ಪ್ರೀತಿಯ ಹುಡುಗನಿಗೆ ಕ್ರಿಕೆಟ್ ಎಂದರೆ ಪ್ರಂಚಪ್ರಾಣ. ಆದರೆ ನಿಮಗೆ ಇಷ್ಟವಿಲ್ಲ. ಆದರೂ ಆತನ ಜತೆ ಕುಳಿತು ಪಂದ್ಯ ವೀಕ್ಷಿಸಿ, ಕಂಪನಿ ಕೊಡಿ. ಮುಂದಿನ ಪರಿಣಾಮ ಏನಾಗುತ್ತೆ ಕಾದು ನೋಡಿ. ಕೆಲ ದಿನಗಳ ನಂತರ ಆತ ಯಾವಾಗಲೂ ದ್ವೇಷಿಸುತ್ತಿದ್ದ ನೀವು ಇಷ್ಟುಪಡುತ್ತಿದ್ದ, ನಾನ್‌ವೆಜ್ ಪದಾರ್ಥವೋ, ಐಸ್‌ಕ್ರೀಮ್ ಅನ್ನೋ ತಿನ್ನತೊಡಗಿದರೆ ಅದಕ್ಕಿಂತ ಹೆಚ್ಚಿಗೆ ನಿಮಗಿನ್ನೇನು ಬೇಕು? ಇದರ ಸಾರಾಂಶ ಕಾಂಪ್ರಮೈಸ್. ಇದು ನಿಮ್ಮನ್ನು ಆತನಿಗಿಂತ ಹೆಚ್ಚು ಪ್ರೀತಿಸುತ್ತಾನೆ ಎಂದು ಸೂಚಿಸುತ್ತದೆ.
ಮದುವೆ ಸಮಾರಂಭ
ಸಾಮಾನ್ಯವಾಗಿ ಹುಡುಗರು ಮದುವೆಗೆ ಮುಂಚೆ ಯಾವುದೇ ಸಭೆ, ಸಮಾರಂಭಗಳಿಗೆ ಪ್ರಿಯತಮೆಯನ್ನು ಕರೆದುಕೊಂಡು ಹೋಗುವುದಿಲ್ಲ. ಹೀಗಿದ್ದೂ ಆತ ಅವನ ಸ್ನೇಹಿತನ ಅಥವಾ ಸಂಬಂಧಿಗಳ ಮದುವೆಗೆ ನಿಮ್ಮನ್ನು ಕರೆದುಕೊಂಡು ಹೋದನೆಂದರೆ, ಆತ ನಿಮ್ಮ ಕೈ ಬಿಡುವವನಲ್ಲ.
ಆತನೇ ಮುಖ್ಯ
ನಿಮ್ಮ ಪ್ರೀತಿಗೆ ಒಂದೋ, ಎರಡೋ ವರ್ಷ ತುಂಬಿದೆ ಎಂದಿಟ್ಟುಕೊಳ್ಳೋಣ. ಹೀಗೆ ಒಮ್ಮೆ ಆ ರಸಘಳಿಗೆಯನ್ನು ನೀವು ಮೆಲುಕು ಹಾಕಿದಾಗ ಆತನ ಜತೆಗೆ ಕಳೆದ ಕ್ಷಣಗಳು ನಿಮ್ಮನ್ನು ರೋಮಾಂಚನಗೊಳಿಸಿದರೆ ಸಾಕು. ಅವನು ನಿಮಗೆ ಎಷ್ಟು ಮುಖ್ಯ ಎಂದು ತಿಳಿಯುತ್ತದೆ. ಏಕೆಂದರೆ ಆತನ ಜತೆ ನಿಮ್ಮ ಕುಟುಂಬ ಸದಸ್ಯರಿಗಿಂತಲೂ ಕಡಿಮೆ ಸಮಯ ಕಳೆದಿರುತ್ತೀರಿ. ಆದರೂ ನಿಮಗೆ ಇವರಿಗಿಂತ ಆತನ ಜತೆಗಿದ್ದ ಸಮಯ ತುಂಬಾ ಖುಷಿ ಕೊಟ್ಟಿರುತ್ತದೆ. ಇದು ನಿಮ್ಮ ಬಾಂಧವ್ಯದ ಮುಂದಿನ ಹಂತ ತೋರಿಸುತ್ತದೆ.
ಮುಂದಿನ ತಯಾರಿ
ಆತನ ಪ್ರಪಂಚದ ಬಗ್ಗೆ ನಿಮಗೆ ಮಾಹಿತಿ ನೀಡುವುದು, ಆತನ ಮನೆಯ ಸಂಸ್ಕೃತಿ, ಆಚಾರ- ವಿಚಾರ, ಕೌಟುಂಬಿಕ ವಾತಾವರಣ, ಹವ್ಯಾಸಗಳ ಬಗ್ಗೆ ಮುಂಚಿತವಾಗಿಯೇ ನಿಮಗೆ ತಿಳಿಸಲು ಇಷ್ಟಪಟ್ಟಿರುತ್ತಾನೆ ಎಂದರೆ ಆತ ನಿಮ್ಮನ್ನು ಭವಿಷ್ಯದ ಜೀವನಕ್ಕೆ ಅಣಿಗೊಳಿಸುತ್ತಿದ್ದಾನೆ ಎಂದರ್ಥ.
ಕಠಿಣ ಪರಿಸ್ಥಿತಿ
ಅವನ ಬಾಳಿನಲ್ಲಿ ದುಃಖಕರ ವಿಚಾರ ಎದುರಾದರೆ, ಅಂದರೆ ಹತ್ತಿರದವರ ಸಾವು, ಆರ್ಥಿಕ ಮುಗ್ಗಟ್ಟು, ಕೆಲಸದ ವಿಚಾರ ಹೀಗೆ ಯಾವುದಾದರೂ ಸಮಸ್ಯೆ ಬಂದಾಗ ಆತ ನಿಮ್ಮ ಜತೆ ಹೆಚ್ಚು ಸಮಯ ಇರಲು ಬಯಸುತ್ತಿದ್ದಾನೆ ಎಂದಾದಲ್ಲಿ ಅವನಿಗೆ ಧೈರ್ಯ ತುಂಬಿ. ಇದು ನಿಮ್ಮಿಬ್ಬರ ಬಾಳಿನ ಪ್ರಮುಖ ಘಟ್ಟ. ಜತೆಗೆ ಆತ ಸಂಪೂರ್ಣ ನಿಮ್ಮವನಾಗಿದ್ದಾನೆ ಎಂಬುದರಲ್ಲಿ ಅನುಮಾನವಿಲ್ಲ.

-ಆದಿ ಅಂಚೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.