2 ವರ್ಷಗಳ ಎನ್ ಡಿಎ ಆಡಳಿತದಲ್ಲಿ ರೈಲ್ವೆ ಇಲಾಖೆಯಲ್ಲಿನ ಬದಲಾವಣೆಗಳು
ರೈಲ್ವೆ ಇಲಾಖೆಯ ಸಚಿವರಾದ ಸುರೇಶ್ ಪ್ರಭು ಕಳೆದ 2 ವರ್ಷಗಳಲ್ಲಿ ಸಿದ್ಧಸೂತ್ರಗಳು ಅಥವಾ ಹಿಂದಿನ ಸಂಪ್ರದಾಯಗಳಿಗೆ ಸಡ್ಡು ಹೊಡೆದು ರೈಲ್ವೆಯನ್ನು ಹೀಗೂ ನಿರ್ವಹಣೆ ಮಾಡಬಹುದು,

ಭಾರತೀಯ ರೈಲ್ವೆ ಇಲಾಖೆ ವಿಶ್ವದ ನಾಲ್ಕನೇ ಅತಿ ದೊಡ್ಡ ರೈಲು ಜಾಲ( ನೆಟ್ ವರ್ಕ್) ಹೊಂದಿದೆ. ತೀರಾ ಇತ್ತೀಚಿನವರೆಗೂ ರೈಲ್ವೆ ಇಲಾಖೆಯನ್ನು ಸಮರ್ಥವಾಗಿ ಹಾಗೂ ಲಾಭದಾಯಕ ಹಾದಿಯಲ್ಲಿ ಮುನ್ನಡೆಸಿದ್ದ ಸಚಿವ ಎಂದರೆ ಅದು ಲಾಲೂ ಪ್ರಸಾದ್ ಯಾದವ್ ಎಂಬ ಉತ್ತರ ಬರುತ್ತಿತ್ತು.ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ರಾಜ್ಯದ ಸದಾನಂದ ಗೌಡರು ರೈಲ್ವೆ ಇಲಾಖೆಯ ಜವಾಬ್ದಾರಿಯನ್ನು ಕೆಲಕಾಲ ವಹಿಸಿಕೊಂಡಿದ್ದರು. ನಂತರ ರೈಲ್ವೆ ಇಲಾಖೆಯ ಸಚಿವರಾದ ಸುರೇಶ್ ಪ್ರಭು ಕಳೆದ 2 ವರ್ಷಗಳಲ್ಲಿ ಸಿದ್ಧಸೂತ್ರಗಳು ಅಥವಾ ಹಿಂದಿನ ಸಂಪ್ರದಾಯಗಳಿಗೆ ಸಡ್ಡು ಹೊಡೆದು ರೈಲ್ವೆಯನ್ನು ಹೀಗೂ ನಿರ್ವಹಣೆ ಮಾಡಬಹುದು, ತಂತ್ರಜ್ಞಾನದೊಂದಿಗೆ ಜೋಡಿಸಿ ಜನಸ್ನೇಹಿಯನ್ನಾಗಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಇಲಾಖೆಯಲ್ಲಿನ ಕೆಲವು ಸಂಪ್ರದಾಯಗಳನ್ನು ಮುರಿದು ಮೋದಿ ಸರ್ಕಾರ ಕಳೆದ 2 ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲವು ಸುಧಾರಣೆಗಳಿಗೆ ದಾರಿ ಮಾಡಿಕೊಟ್ಟಿದೆ. ಸಾರ್ವಜನಿಕರಿಂದ ಹಲವು ಟೀಕೆಗಳು ವ್ಯಕ್ತವಾದರೂ ಹಿಂಜರಿಯದೇ ಇಲಾಖೆಯ ಸಚಿವ ಸುರೇಶ್ ಪ್ರಭು ಆನ್ ಲೈನ್ ಟೆಂಡರ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಅಷ್ಟೇ ಅಲ್ಲದೇ ರೈಲ್ವೆ ಇಲಾಖೆಯಲ್ಲಿನ ಅಧಿಕಾರ ವಿಕೇಂದ್ರೀಕರಣ ಹಾಗೂ ರೈಲುಗಳ ವೇಗವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ.
ಸಾಮಾನ್ಯವಾಗಿ ಬಜೆಟ್ ಗಳಲ್ಲಿ ಹೆಚ್ಚು ಯೋಜನೆಗಳನ್ನು ಘೋಷಿಸದೇ ಈಗಿರುವ ರೈಲ್ವೆ ವ್ಯವಸ್ಥೆಯನ್ನೇ ಉತ್ತಮಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಸುರೇಶ್ ಪ್ರಭು, ಖಾತೆ ವಹಿಸಿಕೊಂಡ ಬಳಿಕ ಮಾಡಿದ ದೊಡ್ಡ ಘೋಷಣೆ ಎಂದರೆ ಅದು 97 .636 ಕೋಟಿ ವೆಚ್ಚದ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ರೈಲು ಯೋಜನೆ. ಸುಮಾರು 508 ಕಿಮೀ ನಷ್ಟು ದೂರವನ್ನು ಕೇವಲ ಎರಡು ಗಂಟೆಗಳಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಬುಲೆಟ್ ರೈಲಿಗೆ ಜಪಾನ್ ನ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ(ಜೆಐಸಿಎ) ಹಣಕಾಸಿನ ನೆರವು ನೀಡಿದೆ.
ಮೋದಿ ಸರ್ಕಾರ ಕಳೆದ 2 ವರ್ಷಗಳಲ್ಲಿ ಸುಮಾರು 4,800 ಕಿಮೀ ನಷ್ಟು ವ್ಯಾಪ್ತಿಗೆ ಬ್ರಾಡ್ ಗೇಜ್ ರೈಲು ಹಳಿಗಳನ್ನು ನಿರ್ಮಿಸಿದ್ದರೆ 1,200 ಕಿಮೀ ನಷ್ಟು ವ್ಯಾಪ್ತಿಗೆ ಹೊಸ ರೈಲು ಮಾರ್ಗಗಳನ್ನು ನೀಡಿದೆ.ಇನ್ನು 1,900 ಕಿಮೀ ಗೇಜ್ ಪರಿವರ್ತನೆ ಹಾಗೂ 1,700 ಕಿಮೀ ನಷ್ಟು ಜೋಡಿ ಹಳಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಯುಪಿಎ ಸರ್ಕಾರ ವಾರ್ಷಿಕವಾಗಿ 1,530 ಕಿಮೀ ರೈಲ್ವೆ ಮಾರ್ಗವನ್ನು ನಿರ್ಮಿಸಲಾಗಿತ್ತು. ಇನ್ನು ಯುಪಿಎ ಸರ್ಕಾರ ವಾರ್ಷಿಕವಾಗಿ 763 ಮೇಲ್ಸೇತುವೆಗಳನ್ನು ನಿರ್ಮಿಸಿದ ದಾಖಲೆ ಹೊಂದಿದ್ದರೆ, ಎನ್ ಡಿಎ ಸರ್ಕಾರ ವಾರ್ಷಿಕವಾಗಿ 1,066 ರಂತೆ ಎರಡು ವರ್ಷಗಳಲ್ಲಿ 2,132 ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆ ನಿರ್ಮಾಣ ಮಾಡಿದೆ. ಇನ್ನು ಎರಡು ವರ್ಷಗಳಲ್ಲಿ ನಿರ್ಮಾಣವಾದ ಮಾನವರಹಿತ ಕ್ರಾಸಿಂಗ್ ನ ಸಂಖ್ಯೆ 2,433.
ರೈಲ್ವೆ ಇಲಾಖೆಯನ್ನು ಪುನರ್ ರಚಿಸಲು ಸುರೇಶ್ ಪ್ರಭು ಎರಡು ಹೊಸ ನಿರ್ದೇಶನಾಲಯಗಳನ್ನು ಅಸ್ತಿತ್ವಕ್ಕೆ ತಂದರು, ಒಂದು ರೈಲ್ವೆ ಇಲಾಖೆಯ ಕ್ರಿಯಾಶೀಲತೆಯ ಬಗ್ಗೆ ಗಮನ ಹರಿಸಲು ರೈಲುಗಳ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈಲ್ವೆ ಕಾರಿಡಾರ್ ಗಳನ್ನು ಗುರುತಿಸಲು ಮೊಬಿಲಿಟಿ ನಿರ್ದೇಶನಾಲಯ, ಮತ್ತೊಂದು ರೈಲ್ವೆ ಆದಾಯವನ್ನು ರೈಲ್ವೆ ಟಿಕೆಟ್ ದರದ ಹೊರತಾಗಿ ಶೇ.10 ರಿಂದ 20 ರಷ್ಟು ಹೆಚ್ಚಿಸಲು ನಾನ್ ಫೇರ್ ರೆವಿನ್ಯೂ ನಿರ್ದೇಶನಾಲಯ ಸ್ಥಾಪಿಸಲಾಯಿತು.
ರೈಲ್ವೆಗೆ ಆದಾಯ ಹೆಚ್ಚಿಸಲು ಪ್ರಯಾಣ ದರ ಹೆಚ್ಚಿಸುವ ಮೂಲಕ ಪ್ರಯಾಣಿಕರ ಮೇಲೆ ಹೆಚ್ಚು ಹೊರೆ ಹೊರಿಸುವ ಬದಲು ಸುರೇಶ್ ಪ್ರಭು ಹೊಸ ಆಲೋಚನೆಗಳನ್ನು ಹರಿಬಿಟ್ಟರು. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳನ್ನು ಸಹಭಾಗಿದಾರರನ್ನಾಗಿ ಮಾಡುವ ಮೂಲಕ ರೈಲ್ವೆ ಇಲಾಖೆ ಯೋಜನೆಗಳ ಹೊರೆಯನ್ನು ಹಂಚಿಕೊಳ್ಳಲು ಪ್ರಾರಂಭಿಸಿತು. ಇದರ ಹೊರತಾಗಿ ಜಾಹಿರಾತು ಮೂಲಕ ರೈಲ್ವೆ ಇಲಾಖೆ ಆದಾಯ ಗಳಿಸುವ ಯೋಜನೆಯನ್ನು ಸುರೇಶ್ ಪ್ರಭು ನೀಡಿದ್ದು ಈ ಪೈಕಿ ರೈಲು, ಪ್ಲಾಟ್-ರಂ ಮತ್ತಿತರೆಡೆಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಜಾಹೀರಾತು ನೀಡಲು ಅವಕಾಶ ಮತ್ತು ಬಳಕೆ ಯಾಗದೆ ಉಳಿದಿರುವ ಇಲಾಖೆಯ ಭೂಮಿಯನ್ನು ಖಾಸಗಿ ಬಳಕೆಗೆ ನೀಡುವ ಮೂಲಕ ಆದಾಯ ಗಳಿಕೆ ಕೂಡಾ ಸೇರಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಳೆದ ಎರಡು ವರ್ಷಗಳಲ್ಲಿ ರೈಲ್ವೆ ಇಲಾಖೆಯ ಸಚಿವರೊಂದಿಗೆ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳ ಮೂಲಕ ಸಮಸ್ಯೆ/ ಕೊರತೆಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಸಾಧ್ಯವಾಗುವಂತಹ ವ್ಯವಸ್ಥೆ ರೂಪಿಸಿರುವುದು ರೈಲ್ವೆ ಇಲಾಖೆಯನ್ನು ಮತ್ತಷ್ಟು ಉತ್ತಮಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


