ಮಹಾರಾಷ್ಟ್ರದಲ್ಲಿ ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ: ಆರಂಭ ಯಾವಾಗ ಗೊತ್ತಾ..?
2018–19ರಲ್ಲಿ ಅನುಮೋದನೆ ಪಡೆದ ಈ ಸಬ್‌ಮರಿನ್ ಪ್ರವಾಸೋದ್ಯಮ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಸಮುದ್ರದ ಒಳಜಗತ್ತನ್ನು ಸಮೀಪದಿಂದ ನೋಡುವ ಅವಕಾಶವನ್ನು ಒದಗಿಸಲಿದೆ.

ಒಂದು ಕಾಲದಲ್ಲಿ ಪ್ರವಾಸೋದ್ಯಮ ಎಂದರೆ ಬ್ಯಾಗ್ ಪ್ಯಾಕ್ ಮಾಡುವುದು, ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಹೋಗುವುದು ಎಂದು ತಿಳಿಯಲಾಗುತ್ತಿತ್ತು. ಆದರೆ, ಇಂದಿನ ದಿನಗಳಲ್ಲಿ ಪ್ರವಾಸೋದ್ಯಮವು ಹೊಸ ಹೊಸ ರೂಪಗಳನ್ನು ಪಡೆದುಕೊಂಡಿದೆ.
ಆಧ್ಯಾತ್ಮಿಕ ಪ್ರವಾಸೋದ್ಯಮ, ಪರಂಪರಾ ಪ್ರವಾಸೋದ್ಯಮ, ಏಕಾಂಗಿ ಪ್ರವಾಸ, ವೈನ್ ಪ್ರವಾಸೋದ್ಯಮ ಮುಂತಾದ ಹಲವು ಆಯ್ಕೆಗಳು ಈಗ ಜನಪ್ರಿಯವಾಗಿವೆ. ಶೀಘ್ರದಲ್ಲೇ ಈ ಪಟ್ಟಿಗೆ ಮತ್ತೊಂದು ಹೊಸ ಪದ ಸೇರ್ಪಡೆಯಾಗಲಿದೆ. ಅದು, ಸಬ್‌ಮರಿನ್ ಪ್ರವಾಸೋದ್ಯಮ. ಅಂದರೆ, ಜಲಾಂತರ್ಗಾಮಿ ಪ್ರವಾಸೋದ್ಯಮ.
ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮವನ್ನು ಮಹಾರಾಷ್ಟ್ರದಲ್ಲಿ ಆರಂಭವಾಗುತ್ತಿದೆ. ಎಲ್ಲವೂ ಯೋಜನೆಯಂತೆ ನಡೆದಿದ್ದೇ ಆದರೆ, ಮೊದಲ ಬುಕಿಂಗ್ 2026 ರಿಂದಲೇ ಪ್ರಾರಂಭವಾಗುತ್ತದೆ.
ಮಹಾರಾಷ್ಟ್ರವು ಪರಿಚಯಿಸಲು ಸಿದ್ಧವಾಗಿರುವ ಜಲಾಂತರ್ಗಾಮಿ ಪ್ರವಾಸೋದ್ಯಮ ಯಾವುದು?
ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೊಂಕಣ ಕರಾವಳಿಯಲ್ಲಿ ಈ ಜಲಾಂತರ್ಗಾಮಿ ಪ್ರವಾಸೋದ್ಯಮ ಆರಂಭವಾಗುತ್ತಿದ್ದು, ಯೋಜನೆ ಜಾರಿಗೆ ಸಿದ್ಧತೆಗಳು ಭರದಿಂದ ಸಾಗಿದೆ.
2018–19ರಲ್ಲಿ ಅನುಮೋದನೆ ಪಡೆದ ಈ ಸಬ್‌ಮರಿನ್ ಪ್ರವಾಸೋದ್ಯಮ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದ್ದು, ಸಮುದ್ರದ ಒಳಜಗತ್ತನ್ನು ಸಮೀಪದಿಂದ ನೋಡುವ ಅವಕಾಶವನ್ನು ಒದಗಿಸಲಿದೆ.
ಬ್ಯಾಟರಿ ಚಾಲಿತ ಸಬ್‌ಮರಿನ್‌ಗಳಲ್ಲಿ ಒಂದೇ ಸಮಯದಲ್ಲಿ ಸುಮಾರು 24 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಈ ಸಬ್‌ಮರಿನ್ ಮೂಲಕ ಸಮುದ್ರದ ಒಳಗಿನ ಅದ್ಭುತ ಜಗತ್ತನ್ನು ನೇರವಾಗಿ ಕಾಣುವ ಅವಕಾಶ ಸಿಗುತ್ತದೆ. ವಿವಿಧ ಬಗೆಯ ಮೀನುಗಳು, ಜಲಸಸ್ಯಗಳು ಹಾಗೂ ಇತರೆ ಜಲಚರ ಜೀವಿಗಳನ್ನು ಪರದೆಯ ಮೂಲಕವಲ್ಲದೆ ನೈಜವಾಗಿ ನೋಡುವ ಅನುಭವ ಸಿಗಲಿದೆ. ಯೋಜನೆಯ ಭಾಗವಾಗಿ Artificial Reefs ಹಾಗೂ ಒಂದು ಅಂಡರ್‌ವಾಟರ್ ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ.
ಈ ಯೋಜನೆ ಪ್ರವಾಸಿಗರಿಗೆ ಕೇವಲ ರೋಮಾಂಚಕ ಅನುಭವವನ್ನು ಮಾತ್ರವಲ್ಲದೆ, ಸಬ್‌ಮರಿನ್ ಎಂಬ ಅತ್ಯಾಧುನಿಕ ತಂತ್ರಜ್ಞಾನದ ಒಳಜಗತ್ತನ್ನು ಪರಿಚಯಿಸುವ ಉದ್ದೇಶವನ್ನೂ ಹೊಂದಿದೆ.

ಸಾಮಾನ್ಯವಾಗಿ ಸಬ್‌ಮರಿನ್‌ಗಳು ನೌಕಾಪಡೆಯ ಬಳಕೆಗೆ ಮಾತ್ರ ಸೀಮಿತವಾಗಿದ್ದು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿತವಾಗಿರುತ್ತದೆ. ಕೆಲವು ಮ್ಯೂಸಿಯಂಗಳು ಅಥವಾ ಡಾಕ್ಯುಮೆಂಟರಿಗಳ ಮೂಲಕ ಮಾತ್ರ ಅವುಗಳ ಪರಿಚಯ ಸಾಧ್ಯವಾಗುತ್ತದೆ. ಆದರೆ, ಇದೀಗ ಇದೇ ಮೊದಲ ಬಾರಿಗೆ ದೇಶದಲ್ಲಿ ಸಬ್‌ಮರಿನ್‌ಗಳು ಪ್ರವಾಸಿಗರ ಸಾರಿಗೆಗಾಗಿ ಬಳಕೆಯಾಗಲಿವೆ.
ಇದಲ್ಲದೆ, ಈ ಯೋಜನೆಯು ಸಮುದ್ರದ ಪರಿಸರ ವ್ಯವಸ್ಥೆಯ ಮಹತ್ವವನ್ನು ಜನರಿಗೆ ತಿಳಿಸುವುದು, ಜಲಜಗತ್ತಿನ ಸಂರಕ್ಷಣೆ ಮತ್ತು ಸಂವರ್ಧನೆಯ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನೂ ಹೊಂದಿದೆ.
ಸಬ್‌ಮರಿನ್ ಪ್ರವಾಸೋದ್ಯಮ ಸೇವೆ ಆರಂಭವಾಗುವ ನಿಖರ ದಿನಾಂಕ ಇನ್ನೂ ಪ್ರಕಟಿಸಲಾಗಿಲ್ಲವಾದರೂ, ಈ ವರ್ಷ ಅಥವಾ ಮುಂದಿನ ವರ್ಷದಲ್ಲಿ ಸೇವೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


