ಪ್ರಧಾನ ಸುದ್ದಿ

ಸ್ವದೇಶಿ ನಿರ್ಮಿತ ಐಎನ್ ಎಸ್ ತಿಲ್ಲಾಂಚಾಂಗ್ ನೌಕಾಪಡೆಗೆ ಸೇರ್ಪಡೆ

ಬಹು ನಿರೀಕ್ಷಿತ ಐಎನ್ ಎಸ್ ತಿಲ್ಲಾಂಚಾಂಗ್ಯುದ್ಧ ನೌಕೆಯನ್ನು ಗುರುವಾರ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

ಸ್ವದೇಶಿ ನಿರ್ಮಿತ ಐಎನ್ ಎಸ್ ತಿಲ್ಲಾಂಚಾಂಗ್ ನೌಕಾಪಡೆಗೆ ಸೇರ್ಪಡೆ
ನೌಕಾಪಡೆಗೆ ಸೇರ್ಪಡೆಯಾದ ಐಎನ್ಎಸ್ ತಿಲ್ಲಾಂಚಾಂಗ್
Published On :

ಕಾರವಾರ: ಬಹು ನಿರೀಕ್ಷಿತ ಐಎನ್ ಎಸ್ ತಿಲ್ಲಾಂಚಾಂಗ್ಯುದ್ಧ ನೌಕೆಯನ್ನು ಗುರುವಾರ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.

ಕ್ಷಿಪ್ರ ಕಾರ್ಯಾಚರಣೆ ಸಾಮರ್ಥ್ಯ ಹೊಂದಿರುವ ಐಎನ್ ಎಸ್ ತಿಲ್ಲಾಂಚಾಂಗ್ ಯುದ್ಧ ನೌಕೆಯನ್ನು ಪಶ್ಚಿಮ ನೌಕಾದಳದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಗಿರೀಶ್ ಲೂತ್ರಾ ಅವರು ಕರ್ನಾಟಕದ ಕಾರವಾರದ  ಐಎನ್‌ಎಸ್ ನೌಕಾನೆಲೆಯಲ್ಲಿ ಗುರುವಾರ ಭಾರತೀಯ ನೌಕಾಪಡೆಗೆ ಲೋಕಾರ್ಪಣೆ ಮಾಡಿದರು.

ಜಿಆರ್‌ಎಸ್‌ಸಿ ಕೋಲ್ಕತ್ತಾ ಸಂಸ್ಥೆ ಈ ಯುದ್ಧನೌಕೆಯನ್ನು ಸಿದ್ಧಪಡಿಸಿದ್ದು,  ಈ ಸರಣಿಯಲ್ಲಿ 4 ಯುದ್ಧ ನೌಕೆಗಳನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ 2 ನೌಕೆಗಳು ವಿಶಾಖಪಟ್ಟಣದಲ್ಲಿ ಕಾರ್ಯಾಚರಿಸುತ್ತಿದ್ದು, ತಿಲ್ಲಾಂಚಾಂಗ್‌ ಯುದ್ಧ  ನೌಕೆಯಲ್ಲಿ ಪ್ರೊಪೆಲ್ಲರ್ ತಂತ್ರಜ್ಞಾನದ ಬದಲಾಗಿ ಮೂರು ಬಲಿಷ್ಠ ವಾಟರ್ ಜೆಟ್ ಇಂಜಿನ್‌ ಗಳನ್ನು ಅಳವಡಿಸಲಾಗಿದೆ. ಈ ವಾಟರ್ ಜೆಟ್‌ಗಳು ನೀರನ್ನು ಸೆಳೆದುಕೊಂಡು ನೌಕೆಯನ್ನು ವೇಗವಾಗಿ ಮುನ್ನಡೆಸಿಕೊಂಡು ಹೋಗಲು  ನೆರವಾಗುತ್ತದೆ. ಕರಾವಳಿ ಮತ್ತು ಸಮುದ್ರದಲ್ಲಿ ಕಣ್ಗಾವಲು, ನುಸುಳುಕೋರರು ಅಥವಾ ಕಳ್ಳಸಾಗಣೆದಾರರ ಮೇಲೆ ನಿಗಾ ಮತ್ತು ತಡೆ, ಇಇಝಡ್ ನಿಯಂತ್ರಣ, ಕಾನೂನು ಪರಿಪಾಲನೆ ಮಾತ್ರವಲ್ಲದೆ ಮಿಲಿಟರಿಯೇತರ  ಕಾರ್ಯಗಳಾದ ರಕ್ಷಣಾ ಕಾರ್ಯಾಚರಣೆ, ಮಾನವೀಯ ನೆರವುಗಳು, ವಿಪತ್ತು ಸಂದರ್ಭದಲ್ಲಿ ರಕ್ಷಣಾ ಕಾರ್ಯಗಳಿಗೆ ಈ ಯುದ್ಧನೌಕೆ ಸನ್ನದ್ಧವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಐಎನ್ಎಸ್ ತಿಲ್ಲಾಂಚಾಂಗ್ಅನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿ ಮಾತನಾಡಿದ ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ವೈಸ್ ಅಡ್ಮಿರಲ್ ಗಿರೀಶ್ ಲೂತ್ರಾ ಅವರು,  ಸಂಪೂರ್ಣ ಸ್ವದೇಶಿ ನಿರ್ಮಿತವಾಗಿರುವ ವಾಟರ್ ಜೆಟ್  ತಂತ್ರಜ್ಞಾನ ಹೊಂದಿರುವ ತಿಲ್ಲಾಂಚಾಂಗ್ ಯುದ್ಧನೌಕೆಯನ್ನು ಕರ್ನಾಟಕ ಕರಾವಳಿ ತೀರ ಪ್ರದೇಶ ಹಾಗೂ ಸಮುದ್ರ ಭಾಗದಲ್ಲಿ ಗಸ್ತು ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಇದು ಕಾರವಾರ ನೌಕಾನೆಲೆಯಲ್ಲಿ ಕೇಂದ್ರಸ್ಥಾನವನ್ನು  ಹೊಂದಿದ್ದು, ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಸನ್ನದ್ಧವಾಗಿರುತ್ತದೆ. ಈ ಯುದ್ಧನೌಕೆಯಲ್ಲಿ ನೌಕಾಪಡೆಯ ಅಧಿಕಾರಿಗಳು ಸೇರಿದಂತೆ 50 ಮಂದಿ ನೌಕಾ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ತಿಲ್ಲಾಂಚಾಂಗ್ ಕನಿಷ್ಠ ನೀರಿನಲ್ಲಿಯೂ  ಸಂಚರಿಸುವ ಸಾಮರ್ಥ್ಯ ಹೊಂದಿದೆ. ಪಶ್ಚಿಮ ಕರಾವಳಿಗೆ ನೀಡಿರುವ ಪ್ರಥಮ ಯುದ್ಧನೌಕೆ ಇದಾಗಿದೆ ಎಂದು ಮಾಹಿತಿ ನೀಡಿದರು.

ಅಂತೆಯೇ ಕಮಾಂಡರ್ ಅದಿತಿ ಪಟ್ನಾಯಕ್ ಐಎನ್‌ಎಸ್ ತಿಲ್ಲಾಂಚಾಂಗ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕರ್ನಾಟಕ ನೌಕಾ ವಲಯದ ರಿಯರ್ ಅಡ್ಮಿರಲ್ ಕೆ. ಜೆ. ಕುಮಾರ್ ತಿಳಿಸಿದರು. ಜಿಆರ್‌ಎಸ್‌ಇ  ಸಂಸ್ಥೆಯ ಅಧ್ಯಕ್ಷ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಕೆ. ಸಕ್ಸೇನಾ, ನೌಕಾನೆಲೆಯ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.