ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ 'ಪಾಶ್ಚಿಮಾತ್ಯ' ಕಾರಣ: ಪರಮೇಶ್ವರ
ನಗರದ ಪ್ರತಿಷ್ಠಿತ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನಕ್ಕೆ...

Published On :
ಬೆಂಗಳೂರು: ನಗರದ ಪ್ರತಿಷ್ಠಿತ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಯೇ ಕಾರಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೋಮವಾರ ವಿವಾದಾತ್ಮ ಹೇಳಿಕೆ ನೀಡಿದ್ದಾರೆ
ಹೊಸ ವರ್ಷದಂದು ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಸಿದ ಗೃಹ ಸಚಿವರು, ಹೊಸ ವರ್ಷಾಚರಣೆ ದಿನ ಭದ್ರತೆಗಾಗಿ ನೂರಾರು ಪೊಲೀಸರು ಹಾಗೂ 25ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದ್ದರೂ ಇಂತಹ ಘಟನೆ ಘಟಿಸಿದ್ದು ದುರದೃಷ್ಟಕರ ಎಂದಿದ್ದಾರೆ.
ನಾವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಹೊಸ ವರ್ಷ ಮತ್ತು ಕ್ರಿಸ್ ಮಸ್ ಸಂದರ್ಭದಲ್ಲಿ ಇಂತಹ ಘಟನೆಗಳು ಘಟಿಸಿತ್ತವೆ. ಇದಕ್ಕೆ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆಯೇ ಕಾರಣ ಎಂದು ಹೇಳಿದ್ದಾರೆ.
ಇನ್ನು ಗೃಹ ಸಚಿವ ಹೇಳಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಅವರು, ಪರಮೇಶ್ವರ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಕುಮಾರಮಂಗಲಂ ಅವರು, ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಹೊಸ ವರ್ಷಾಚರಣೆ ವೇಳೆಯಲ್ಲಿ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಯುವಕರ ಗುಂಪಿನಿಂದ ಕೆಲವು ಮಹಿಳೆಯರ ಮಾನಭಂಗ ನಡೆಯಿತು. ಅಳುತ್ತಿದ್ದ ಈ ಮಹಿಳೆಯರು ಮಹಿಳಾ ಪೊಲೀಸರತ್ತ ಧಾವಿಸಿ ದೂರು ನೀಡಿದ್ದು ಕಂಡು ಬಂತು ಎಂದು ಪತ್ರಿಕೆಯೊಂದು ಕೆಲವು ಮಹಿಳೆಯರು ಪೊಲೀಸರು ದೂರು ನೀಡುತ್ತಿದ್ದ ಫೊಟೋ ಸಹಿತವಾಗಿ ವರದಿ ಮಾಡಿತ್ತು.
ಹೊಸ ವರ್ಷದ ಉದಯ ಹತ್ತಿರವಾಗುತ್ತಿದ್ದಂತೆ ಎಲ್ಲೆಲ್ಲಿಂದಲೋ ಕಾರು, ಬೈಕ್‌ಗಳಲ್ಲಿ ಬಂದ ಪಡ್ಡೆ ಹುಡುಗರ ದಂಡು ಪುಂಡಾಟಕ್ಕೆ ಶುರುವಿಟ್ಟುಕೊಂಡಿತು. ಯುವತಿಯರು ಕಾಣುತ್ತಲೇ ಹೊಲಸು ಭಾಷೆಯಲ್ಲಿ ಕೇಕೆ ಹಾಕುವುದು, ಗುಂಪು ಗುಂಪಾಗಿ ಅವರತ್ತ ನುಗ್ಗಿ ಹಿಡಿದು ಎಳೆದಾಡುವುದು, ಎಲ್ಲೆಂದರಲ್ಲಿಗೆ ಕೈ ಹಾಕುತ್ತಿದ್ದರು ಎಂದು ವರದಿ ಮಾಡಲಾಗಿದೆ. ಈ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


