ಪ್ರಧಾನ ಸುದ್ದಿ

ಉಪಚುನಾವಣೆ ಆರಂಭ: ನಂಜನಗೂಡು, ಗುಂಡ್ಲುಪೇಟೆಯಲ್ಲಿ ಹೆಚ್ಚಿದ ಭದ್ರತೆ

ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಉಪ ಚುನಾವಣೆ ನಡೆಯುತ್ತಿದ್ದು...

ಉಪಚುನಾವಣೆ ಆರಂಭ: ನಂಜನಗೂಡು, ಗುಂಡ್ಲುಪೇಟೆಯಲ್ಲಿ ಹೆಚ್ಚಿದ ಭದ್ರತೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಭಾನುವಾರ ಉಪ ಚುನಾವಣೆ ನಡೆಯುತ್ತಿದ್ದು, ಗೀತಾ ಮಹದೇವಪ್ರಸಾದ್, ಶ್ರೀನಿವಾಸ ಪ್ರಸಾದ್ ಹಾಗೂ ಕಳಲೆ ಕೇಶವಮೂರ್ತಿಯವರ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ. 

ಬೆಳಿಗ್ಗೆ 7 ರಿಂದ ಸಂಜೆ 5ರವರೆಗೂ ನಡೆಯಲಿರುವ ಮತದಾನ ಈ ಕ್ಷೇತ್ರಗಳ ಅಭ್ಯರ್ಥಿಗಳ ಹಣೆಬರಹ ಮಾತ್ರವಲ್ಲದೆ, ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಎದುರಾಳಿ ಬಿಜೆಪಿಯ ಪ್ರಮುಖ ನಾಯಕರ ಪ್ರಭಾವವನ್ನು ನಿಕಷಕ್ಕೆ ಒಡ್ಡಲಿದೆ. 

ಮಾಜಿ ಸಚಿವ ಹೆಚ್.ಎಸ್. ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ತೆರವಾಗಿರುವ ಸ್ಥಾನಕ್ಕೆ ಗುಂಡ್ಲುಪೇಟೆಯಲ್ಲಿ ಮತದಾನ ನಡೆಯುತ್ತಿದ್ದರೆ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ದರಿಂದ ನಂಜನಗೂಡಿನಲ್ಲಿ ಚುನಾವಣೆ ನಡೆಯುತ್ತಿದೆ. ಉಭಯ ಕ್ಷೇತ್ರಗಳಲ್ಲೂ ಕಾಂಗ್ರೆಸ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ.

ಗುಂಡ್ಲುಪೇಟೆ ಉಪ ಚುನಾವಣೆಯ ಕಣದಲ್ಲಿ ಒಟ್ಟು 7 ಅಭ್ಯರ್ಥಿಗಳಿದ್ದು, ನೇರ ಸ್ಪರ್ಧೆ ಇರುವುದು ಕಾಂಗ್ರೆಸ್ ನ ಡಾ.ಗೀತಾ ಮಹದೇವಪ್ರಸಾದ್ ಹಾಗೂ ಬಿಜೆಪಿಯ ಸಿ.ಎಸ್. ನಿರಂಜನ್ ಕುಮಾರ್ ನಡುವೆ. ಉಳಿದಂತೆ ರಿಪಬ್ಲಿಕನ್ ಪಾರ್ಟಿಯ ಎಂ.ಶಿವರಾಜು, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿಯ ಎಂ.ಹೊನ್ನಾರಯ್ಯ ಹಾಗೂ ಪಕ್ಷೇತರರಾದ ಬಿ.ಮಹದೇವಪ್ರಸಾದ್, ಕೆ.ಸೋಮಶೇಖರ್ ಹಾಗೂ ಎಂ.ಶಿವರಾಮು ಕಣದಲ್ಲಿದ್ದಾರೆ. 

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಾಗೂ ಪ್ರಾಮುಖ್ಯತೆಯನ್ನು ಈ ಉಪಚುನಾವಣೆ ನಿರ್ಧರಿಸುತ್ತದೆ ಎಂಬ ಅರಿವಿರುವ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕ್ಷೇತ್ರಗಳಲ್ಲೇ ಬೀಡು ಬಿಟ್ಟು ಸಂಪೂರ್ಣ ಸಾಮರ್ಥ್ಯವನ್ನು ಧಾರೆಯೆರೆದಿದ್ದಾರೆ. ಈ ನಾಯಕರಿಗೆ ಸಂವಾದಿಯಾಗಿ ಪ್ರಮುಖ ಹುದ್ದೆಗಳ ನಿರೀಕ್ಷೆಯಲ್ಲಿರುವ ಎರಡೂ ಪಕ್ಷಗಳ 2ನೇ ಹಂತದ ನಾಯಕರು ಸಹ ಇವರಿಗೆ ಹೆಗಲು ಕೊಟ್ಟು ದುಡಿದಿದ್ದಾರೆ. ಈ ಎಲ್ಲಾ ದುಡಿಮೆಗೆ ಉಪ ಚುನಾವಣೆ ನಡೆಯುವ ನಂಜನಗೂಡು ಹಾಗೂ ಗುಂಡ್ಲುಪೇಟೆ ಮತದಾರರು ಯಾವ ರೀತಿಯ ಕೂಲಿ ನೀಡಲಿದ್ದಾರೆಂದು ಇಂದು ನಿರ್ಧಾರವಾಗಲಿದೆ. 
ಚುನಾವಣೆ ಹಿನ್ನಲೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಭದ್ರತೆಗೆ ಕೇಂದ್ರೀಯ ಅರೆ ಮೀಸಲು ಪೊಲೀಸ್ ಪಡೆಯ ತುಕಡಿಗಳು ಸೇರಿದಂತೆ ಸುಮಾರು 2 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಚುನಾವಣಾ ಕರ್ತವ್ಯಕ್ಕೆ 1,375 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತದಾನ ಮಾಡುವವರ ಎಡಗೈ ತೋರು ಬೆರಳಿಗೆ ಅಳಿಸಲಾಗ ಶಾಹಿಯನ್ನು ಹಾಕಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.