ಭಾರತ ಸೇರಿದಂತೆ ವಿವಿಧ ಸದಸ್ಯ ರಾಷ್ಟ್ರಗಳ ಬಹಿಷ್ಕಾರ; ಸಾರ್ಕ್ ಶೃಂಗಸಭೆ ಮುಂದೂಡಿಕೆ
ಭಯೋತ್ಪಾದನೆ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದ್ದು, ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ 19 ಸಾರ್ಕ್ ಶೃಂಗಸಭೆ ಭಾರತದ ಅಸಹಕಾರದಿಂದಾಗಿ ಮುಂದೂಡಲ್ಪಟ್ಟಿದೆ.

ಇಸ್ಲಾಮಾಬಾದ್: ಭಯೋತ್ಪಾದನೆ ವಿಚಾರದಲ್ಲಿ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಮರ್ಮಾಘಾತವಾಗಿದ್ದು, ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ 19 ಸಾರ್ಕ್ ಶೃಂಗಸಭೆ ಭಾರತದ ಅಸಹಕಾರದಿಂದಾಗಿ ಮುಂದೂಡಲ್ಪಟ್ಟಿದೆ.
ಉರಿ ಉಗ್ರ ದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದಿನಲ್ಲಿ ಇದೇ ನವೆಂಬರ್ 9 ಮತ್ತು ರಂದು ನಡೆಯಬೇಕಿದ್ದ 19ನೇ ಸಾರ್ಕ್ ಶೃಂಗಸಭೆಯನ್ನು ಭಾರತ ಬಹಿಷ್ಕರಿಸಿದ ಬೆನ್ನಲ್ಲೇ ಬಾಂಗ್ಲಾದೇಶ, ಆಫ್ಘಾನಿಸ್ತಾನ, ಭೂತಾನ್ ಮತ್ತು ನೇಪಾಳ ರಾಷ್ಟ್ರಗಳು ಕೂಡ ಭಾರತವನ್ನು ಬೆಂಬಲಿಸಿ ಸಾರ್ಕ್ ಶೃಂಗಸಭೆ ಬಹಿಷ್ಕರಿಸಿದ್ದವು. ಹೀಗಾಗಿ ಸಾರ್ಕ್ ಶೃಂಗಸಭೆ ರದ್ದಾಗುವುದು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಸಾರ್ಕ್ ಶೃಂಗಸಭೆಯನ್ನು ರದ್ದು ಮಾಡುವ ಬದಲು ಮುಂದೂಡಲು ನಿರ್ಧರಿಸಲಾಗಿದೆ.
ಪ್ರಮುಖವಾಗಿ ಸಾರ್ಕ್ ಶೃಂಗ ಸಮ್ಮೇಳನದ ಮುಖ್ಯಸ್ಥ ರಾಷ್ಟ್ರ ನೇಪಾಳವೇ ಇಸ್ಲಾಮಾಬಾದ್ ಶೃಂಗಸಭೆಯನ್ನು ಬಹಿಷ್ಕರಿಸಿರುವುದು ಪಾಕಿಸ್ತಾನಕ್ಕೆ ವಿಶ್ವಸಮುದಾಯದ ಎದುರು ಮರ್ಮಾಘಾತ ನೀಡಿದೆ. ಹೀಗಾಗಿ ಶೃಂಗಸಭೆಯನ್ನು ಮುಂದೂಡುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಪಾಕಿಸ್ತಾನ ಸಾರ್ಕ್ ಶೃಂಗಸಭೆ ನಿಗದಿತ ದಿನಾಂಕದಲ್ಲಿ ಅಥವಾ ಬೇರೆ ದಿನಾಂಕದಲ್ಲಿ ಬೇರೊಂದು ಪ್ರದೇಶದಲ್ಲಿ ನಡೆಯಲಿದೆ ಎಂದು ಹೇಳಿದೆ. ಇನ್ನು ಈ ಬಗ್ಗೆ ಸಾರ್ಕ್ ಮುಖ್ಯಸ್ಥ ರಾಷ್ಟ್ರ ಈ ವರೆಗೂ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಇದೇ ಶನಿವಾರ ಈ ಬಗ್ಗೆ ಅಧಿಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ.
ಜಾಗತಿಕ ಮಟ್ಟದಲ್ಲಿ ಭಾರತದ ಶಕ್ತ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ ಸಾರ್ಕ್
ಇದೇ ವೇಳೆ 19ನೇ ಸಾರ್ಕ್ ಶೃಂಗಸಭೆ ವಿಚಾರ ಪಾಕಿಸ್ತಾನಕ್ಕೆ ಮುಖಭಂಗವಾದರೆ ಭಾರತದ ಪಾಲಿಗೆ ಮಾತ್ರ ತನ್ನ ಶಕ್ತಿ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆಯಾಗಿ ಪರಿಣಮಿಸಿತು. ಉರಿ ಉಗ್ರ ದಾಳಿ ಕುರಿತಂತೆ ಪಾಕಿಸ್ತಾನಕ್ಕೆ ಪಾಠ ಕಲಿಸಬೇಕು ಎನ್ನುವ ಭಾರತದ ನಿಲುವಿಗೆ ಇಸ್ಲಾಮಾಬಾದ್ ನಲ್ಲಿ ಆಯೋಜನೆಯಾಗಿದ್ದ 19ನೇ ಸಾರ್ಕ್ ಶೃಂಗಸಭೆ ವೇದಿಕೆ ಒದಗಿಸಿತು. ಸಭೆಯನ್ನು ಭಾರತ ಪ್ರಧಾನಿ ನರೇಂದ್ರ ಮೋದಿ ಬಹಿಷ್ಕರಿಸುವ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದರ ಬೆನ್ನಲ್ಲೇ ಭಾರತದ ನೆರವಿನೊಂದಿಗೆ ಪಾಕಿಸ್ತಾನದಿಂದ ಸ್ವತಂತ್ರ ಪಡೆದ ಬಾಂಗ್ಲಾದೇಶ ಕೂಡ ಭಾರತಕ್ಕೆ ಬೆಂಬಲ ನೀಡಿ ತಾನೂ ಕೂಡ ಸಾರ್ಕ್ ಶೃಂಗಸಭೆ ಬಹಿಷ್ಕರಿಸಿತು.
ಇದೇ ವೇಳೆ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಆಫ್ಘಾನಿಸ್ತಾನ ಹಾಗೂ ಭೂತಾನ್ ಸರ್ಕಾರ ಕೂಡ ಸಾಥ್ ನೀಡಿ, ತನ್ನ ನೆಲದಲ್ಲಿ ಉಗ್ರತ್ವ ಪ್ರಾಯೋಜಿಸುತ್ತಿರುವ ರಾಷ್ಟ್ರದಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ತಾವು ಸಿದ್ಧವಿಲ್ಲ ಎಂದು ಹೇಳಿ ಸಭೆಯನ್ನು ಬಹಿಷ್ಕರಿಸಿ ಪತ್ರಬರೆದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


