ಸುಪ್ರೀಂ ಕೋರ್ಟ್ ಗೆ ಕಾವೇರಿ ತಜ್ಞರ ಸಮಿತಿ ವರದಿ ಸಲ್ಲಿಕೆ
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕದನಕ್ಕೆ ಕಾರಣವಾಗಿದ್ದ ಕಾವೇರಿ ವಿವಾದ ಸಂಬಂಧ ಕೇಂದ್ರ ಸರ್ಕಾರ ರಚನೆ ಮಾಡಿದ್ದ ತಜ್ಞರ ಸಮಿತಿ ಸೋಮವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ಗೆ ತನ್ನ ವರದಿಯನ್ನು ಸಲ್ಲಿಸಿದೆ.

ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕದನಕ್ಕೆ ಕಾರಣವಾಗಿದ್ದ ಕಾವೇರಿ ವಿವಾದ ಸಂಬಂಧ ಕೇಂದ್ರ ಸರ್ಕಾರ ರಚನೆ ಮಾಡಿದ್ದ ತಜ್ಞರ ಸಮಿತಿ ಸೋಮವಾರ ಬೆಳಗ್ಗೆ ಸುಪ್ರೀಂ ಕೋರ್ಟ್ ಗೆ ತನ್ನ ವರದಿಯನ್ನು ಸಲ್ಲಿಸಿದೆ.
ಕೇಂದ್ರ ಜಲ ಆಯೋಗದ ಮುಖ್ಯಸ್ಥ ಜಿಎಸ್ ಝಾ ಅವರ ನೇತೃತ್ವದ ತಜ್ಞರ ಸಮಿತಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪ್ರವಾಸ ಮಾಡಿ ತನ್ನ ವರದಿ ತಯಾರಿಸಿದ್ದು, ಸುಮಾರು 39 ಪುಟಗಳ ವರದಿಯನ್ನು ಸುಪ್ರೀಂ ಕೋರ್ಟ್ ಗೆ ಸಲ್ಲಿಕೆ ಮಾಡಿದೆ. ಎರಡೂ ರಾಜ್ಯಗಳ ನೀರಿನ ಲಭ್ಯತೆ ಹಾಗೂ ನೀರಿನ ಅವಶ್ಯಕತೆಗಳ ಕುರಿತು ಮಾತ್ರ ಮಾಹಿತಿ ನೀಡಲಾಗಿದ್ದು, ತಮಿಳುನಾಡಿಗೆ ನೀರು ಬಿಡುವ ಕುರಿತು ಅಥವಾ ನೀರು ಬಿಡಬಾರದು ಎಂಬುದರ ಕುರಿತು ಯಾವುದೇ ರೀತಿಯ ಶಿಫಾರಸ್ಸು ಮಾಡಿಲ್ಲ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಜಿಎಸ್ ಝಾ ನೇತೃತ್ವದ ತಂಡ ಸಲ್ಲಿಕೆ ಮಾಡಲಾಗಿರುವ ಈ ವರದಿಯಲ್ಲಿ ಕರ್ನಾಟಕಕ್ಕೆ ಆಶಾದಾಯಕವಾದ ಅಂಶಗಳಿವೆಯಾದರೂ ವರದಿ "ಅಡ್ಡಗೋಡೆ ಮೇಲೆ ದೀಪ" ಇಟ್ಟಂತಿದೆ ಎಂದು ಹೇಳಲಾಗುತ್ತಿದೆ. ಜಿಎಸ್ ಝಾ ಅವರು, ತಮ್ಮ ವರದಿಯಲ್ಲಿ ಎರಡೂ ರಾಜ್ಯಗಳ ನೀರಿನ ಕೊರತೆ ಹಾಗೂ ನೀರಿನ ಲಭ್ಯತೆ ಕುರಿತಂತೆ ಮಾಹಿತಿ ನೀಡಿದ್ದಾರೆ.
ಅದರಂತೆ ಕರ್ನಾಟಕದಲ್ಲಿ ನೀರಿನ ಸಮಸ್ಯೆಯಿಂದಾಗಿ 42 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಕರ್ನಾಟಕದಲ್ಲಿನ ನೀರಿನ ಕೊರತೆಯಿಂದಾಗಿ ಅಲ್ಲಿ ಉದ್ಯೋಗ ಸೃಷ್ಟಿಗೂ ಸಮಸ್ಯೆಯಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಬೆಳೆ ನಾಶದಿಂದಾಗಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ಕೊರತೆಯಿಂದಾಗಿ ಕರ್ನಾಟಕದ ಮೀನುಗಾರರು ಕೂಡ ಸಮಸ್ಯೆ ಎದುರಿಸುತ್ತಿದ್ದು, ಆರ್ಥಿಕವಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕದ ಜಲಾಶಯಗಳಲ್ಲಿ ಕೇವಲ 30 ಟಿಎಂಸಿ ನೀರಿನ ಸಂಗ್ರಹ ಮಾತ್ರವಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಅಂತೆಯೇ ಕರ್ನಾಟಕದ ರೈತರ ಕುರಿತಂತೆ ಮಾಹಿತಿ ನೀಡಿರುವ ಜಿಎಸ್ ಝಾ, ಕರ್ನಾಟಕದ ರೈತರಲ್ಲಿ ಅಭಿವೃದ್ಧಿ ಆಕಾಂಕ್ಷೆ ಹಾಗೂ ಆಶೋತ್ತರಗಳಿದ್ದು, ಅವರನ್ನು ನೀರಿನ ಸದ್ಭಳಕೆ ಕುರಿತಂತೆ ಶಿಕ್ಷಿತರನ್ನಾಗಿ ಮಾಡುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ತಮಿಳುನಾಡು ವಿಚಾರಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ರೈತರಿಗೂ ನೀರಿ ಅವಶ್ಯಕತೆ ಇದ್ದು, ಬೆಳೆದು ನಿಂತ ಬೆಳೆಗಳನ್ನು ರಕ್ಷಿಸಿಕೊಳ್ಳಲು ಅಲ್ಲಿನ ರೈತರಿಗೆ ನೀರು ಅನಿವಾರ್ಯವಾಗಿದೆ. ತಮಿಳುನಾಡು ಸರ್ಕಾರ ರೈತರಿಗೆ ಸಾಕಷ್ಟು ಸಬ್ಸಿಡಿ ಘೋಷಣೆ ಮಾಡಿದ್ದು, ಈ ಸಬ್ಸಿಡಿ ಪರಿಣಾಮಕಾರಿಯಾಗಿ ರೈತರ ತಲುಪಲು ನೀರು ಬೇಕೇ ಬೇಕು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೇ ವೇಳೆ ಬೆಳೆ ಉಳಿಸಿಕೊಳ್ಳಲು ನೀರು ಬೇಕು ಬೇಕು ಎಂದು ಹೇಳಿರುವ ಝಾ ಮುಂದುವರೆದ ತಂತ್ರಜ್ಞಾನವನ್ನು ರೈತರು ಅಳವಡಿಸಿಕೊಳ್ಳುವ ಮೂಲಕ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಬಹುದು. ತಮಿಳುನಾಡಿಗೆ ಶೇ.50ರಷ್ಟು ನೀರು ಕಡಿತವಾದರೂ ಬೆಳೆ ನಿಭಾಯಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ತಜ್ಞರ ಪ್ರಕಾರ ಈ ಅಂಶ ನಾಳೆ ಕರ್ನಾಟಕ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಲು ನೆರವಾಗಬಹುದು ಎಂದು ಹೇಳಲಾಗುತ್ತಿದೆ.
ಅಕ್ಟೋಬರ್ 6ರಿಂದ 10ರವರೆಗೂ ಜಿ.ಎಸ್.ಝಾ ನೇತೃತ್ವದ ತಂಡ ಎರಡು ರಾಜ್ಯಗಳ ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಧ್ಯಯನ ನಡೆಸಿತ್ತು. ಕೆಆರ್‍ಎಸ್, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳ ಹಾಗೂ ಜಲಾಶಯ ವ್ಯಾಪ್ತಿಯಲ್ಲಿ 2 ದಿನಗಳ ಕಾಲ ಅಧ್ಯಯನ ನಡೆಸಿ ವರದಿ ಸಿದ್ಧ ಮಾಡಿತ್ತು. ಈ ವೇಳೆ ಕಾವೇರಿ ಕೊಳ್ಳದ ಜನ ಕೂಡಾ ಕಾವೇರಿ ಟೀಂ ಮುಂದೆ ತಮ್ಮ ಕಷ್ಟವನ್ನು ಹೇಳಿಕೊಂಡು ಅಳಲು ತೋಡಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


