ರಕ್ಷಣೆ, ಶಿಕ್ಷಣ, ರೈಲ್ವೇ ಸೇರಿದಂತೆ 16 ಮಹತ್ವದ ಒಪ್ಪಂದಗಳಿಗೆ ಇಂಡೋ-ರಷ್ಯಾ ಸಹಿ!
ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ ಸುಮಾರು 398 ಸಾವಿರ ಕೋಟಿ ರು.ಮೌಲ್ಯದ 16 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.

ಪಣಜಿ: ಬ್ರಿಕ್ಸ್ ಶೃಂಗಸಭೆಗಾಗಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದೊಂದಿಗೆ ಸುಮಾರು 398 ಸಾವಿರ ಕೋಟಿ ರು.ಮೌಲ್ಯದ 16 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶಿಕ್ಷಣ, ರಕ್ಷಣೆ ಸೇರಿದಂತೆ ಸುಮಾರು 16 ಮಹತ್ವದ ಒಪ್ಪಂದಗಳಿಗೆ ಪರಸ್ಪರ ಸಹಿಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಮುಖವಾಗಿ ಶಿಕ್ಷಣ ಕ್ಷೇತ್ರ, ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಭಾರತದಲ್ಲಿ ನೈಸರ್ಗಿಕ ಅನಿಲ ಉತ್ಪಾದನೆ ಕುರಿತ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಇದಲ್ಲದೆ ಕೂಡಂಕುಳಂ ಅಣುಸ್ಥಾವರ 2ನೇ ಘಟಕ ನಿರ್ಮಾಣ ಹಾಗೂ ಭಾರತದ ರೈಲ್ವೇ ಕ್ಷೇತ್ರದಲ್ಲಿ ರಷ್ಯಾ ಬಂಡವಾಳ ಹೂಡುವ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ರಕ್ಷಣೆಗೆ ಹೆಚ್ಚು ಒತ್ತು
ಮೂಲಗಳ ಪ್ರಕಾರ ಪ್ರಸ್ತುತ ಭಾರತ ಮತ್ತು ರಷ್ಯಾ ಸಹಿ ಹಾಕಿರುವ ಈ ಒಪ್ಪಂದಗಳಲ್ಲಿ ರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದ್ದು, ರಷ್ಯಾದ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ಭಾರತದಲ್ಲಿ ನಿರ್ಮಿಸುವ ಒಪ್ಪಂದ ಹಾಗೂ ಭಾರತೀಯ ಸೇನೆ ಆಧುನೀಕರಣಕ್ಕೆ ನೆರವಾಗಬಲ್ಲ ರಷ್ಯಾದ ಕೆಲ ಪ್ರಮುಖ ಕ್ಷಿಪಣಿಗಳನ್ನು ಪೂರೈಕೆ ಮಾಡುವ ಮಹತ್ವದ ಒಪ್ಪಂದಗಳಿಗೆ ಉಭಯ ನಾಯಕರು ಸಹಿಹಾಕಿದ್ದಾರೆ.
ನೂತನ ಒಪ್ಪಂದದ ಅನ್ವಯ ರಷ್ಯಾ ಸೇನೆಯ ಪ್ರಬಲ ಯುದ್ಧ ಹೆಲಿಕಾಪ್ಟರ್ ಎಂದು ಹೇಳಲಾಗುತ್ತಿರುವ ಕಮಾವ್ 226ಟಿ ಹೆಲಿಕಾಪ್ಟರ್ ಭಾರತದಲ್ಲೇ ತಯಾರಾಗಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಸುಮಾರು 200 ಹೆಲಿಕಾಪ್ಟರ್ ಗಳನ್ನು ಭಾರತದಲ್ಲಿ ತಯಾರಿಸುವ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಿದೆ. ಇದಲ್ಲದೆ ಅತ್ಯಾಧುನಿಕ ಎಸ್-400 ಟ್ರಂಪ್ ಕ್ಷಿಪಣಿ ಒಪ್ಪಂದಕ್ಕೂ ರಷ್ಯಾ ಭಾರತದೊಂದಿಗೆ ಸಹಿಹಾಕಿದ್ದು, ಸುಮಾರು 39 ಸಾವಿರ ಕೋಟಿ ರು. ವೆಚ್ಚದಲ್ಲಿ 5 ಎಸ್-400 ಟ್ರಂಪ್ ಕ್ಷಿಪಣಿಗಳನ್ನು ಭಾರತ ರಷ್ಯಾದಿಂದ ಖರೀದಿಸಲಿದೆ.
ಈ ಅತ್ಯಾಧುನಿಕ ಕ್ಷಿಪಣಿ ಮೂಲಕ ಭಾರತದ ಗಡಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲಿಷ್ಟವಾಗಲಿದ್ದು, ಭಾರತದತ್ತ ನುಗ್ಗಿ ಬರುವ ಶತ್ರುರಾಷ್ಟ್ರದ ಯಾವುದೇ ಮಿಸೈಲ್, ಯುದ್ಧ ವಿಮಾನ, ಡ್ರೋನ್ ಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ಸಾಮರ್ಥ್ಯ ಈ ವಿಶೇಷ ಕ್ಷಿಪಣಿಗಿದೆ. ಸುಮಾರು 400 ಕಿ.ಮೀ ವ್ಯಾಪ್ತಿಯಲ್ಲಿ ಈ ಕ್ಷಿಪಣಿ ಕಾರ್ಯಾಚರಿಸಲಿದೆ.
ಇಂಡೋ-ರಷ್ಯಾ ಪ್ರಮುಖ ಒಪ್ಪಂದಗಳು ಇಂತಿವೆ.
ಆಂಧ್ರ ಪ್ರದೇಶ ಸ್ಮಾರ್ಟ್ ಸಿಟಿ ಯೋಜನೆ
ಆಂಧ್ರ ಪ್ರದೇಶ ಹಡಗು ತಯಾರಿಕಾ ಯೋಜನೆ
ಹರಿಯಾಣ ಸ್ಮಾರ್ಟ್ ಸಿಟಿ ಯೋಜನೆ
ರಾಸ್ನೆಫ್ಟ್ ಮತ್ತು ಎಸ್ಸಾರ್ ತೈಲ ಶುದ್ಧೀಕರಣ ಮೂಲಸೌಕರ್ಯ ಅಭಿವೃದ್ಧಿ
ರಾಸ್ನೆಫ್ಟ್ ಮತ್ತು ಒವಿಎಲ್ ಇಂಧನ ಒಪ್ಪಂದ
ನಾಗ್ಪುರ-ಸಿಕಂದರಾಬಾದ್-ಹೈದರಾಬಾದ್ ವೇಗದ ರೈಲು ಯೋಜನೆ
ಭಾರತದಲ್ಲಿ ರಷ್ಯಾದ ಕೆಎ 226 ಹೆಲಿಕಾಪ್ಟರ್ ನಿರ್ಮಾಣ ಒಪ್ಪಂದ
2016-17 ಶಕ್ತಿ ಸಹಕಾರ ಒಪ್ಪಂದ
ಭಾರತ ಮತ್ತು ರಷ್ಯಾ ವಿದೇಶಾಂಗ ಸಚಿವಾಲಯಗಳು ನಡುವೆ ಶಿಷ್ಟಾಚಾರ ಸಮಾಲೋಚನೆ
ಸೈಬರ್ ಭದ್ರತಾ ಒಪ್ಪಂದ
ರಷ್ಯಾ ಯುದ್ಧನೌಕೆಯು ಖರೀದಿ ಒಪ್ಪಂದ
ಎಸ್-400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ
ಸಮಕಾಲೀನ ಪರಿಸ್ಥಿತಿಗೆ ಅನುಗುಣವಾಗಿ ಭಾರತ-ರಷ್ಯಾ ಜಾಗತಿಕ ಭದ್ರತಾ ಜಂಟಿ ಪಾಲುದಾರಿಕೆ ಒಪ್ಪಂದ
ಕೂಡಂಕುಳಂ ಘಟಕ 3 ಮತ್ತು 4 ಅಣು ಸ್ಥಾವರಗಳ ಒಪ್ಪಂದ
ಕೂಡಂಕುಳಂ ಘಟಕ 2 ಶಕ್ತಿಯ ಉತ್ಪಾದನೆಯ ಪ್ರಾರಂಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


