ಮಹದಾಯಿ ತೀರ್ಪು ವಿರೋಧಿಸಿ ಬಂದ್; ಕರ್ನಾಟಕ ಸ್ಥಬ್ದ
ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.

ಬೆಂಗಳೂರು: ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ.
ಪ್ರಮುಖವಾಗಿ ರಾಜಧಾನಿ ಬೆಂಗಳೂರು, ಮೈಸೂರು, ಬೆಳಗಾವಿ, ಅವಳಿ ನಗರಗಳಾದ ಹುಬ್ಬಳಿ-ಧಾರವಾಡ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದ್ದು, ಸಂಪೂರ್ಣ ಸ್ಥಬ್ಧವಾಗಿದೆ. ಸರ್ಕಾರಿ ಸಾರಿಗೆ ನೌಕರರು ಕೂಡ ಬಂದ್ ಗೆ ಬೆಂಬಲ ನೀಡಿದ್ದು, ಸರ್ಕಾರಿ ಬಸ್ ಸೇವೆಗಳು ಸ್ಥಗಿತಗೊಂಡಿವೆ. ಇದಲ್ಲದೆ ಆಟೋ ಸೇವೆಗಳು, ಟ್ಯಾಕ್ಸಿ, ಕ್ಯಾಬ್ ಸೇವೆಯನ್ನು ನಿಲ್ಲಿಸಲಾಗಿದೆ.
ಧಾರವಾಡದಲ್ಲಿ ನಡೆಯುತ್ತಿರುವ ಬಂದ್ ಗೆ ಕನ್ನಡಪರ ಸಂಘಟನೆಗಳ ಮಹಿಳಾ ಕಾರ್ಯಕರ್ತರು ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಹೆದ್ದಾರಿ ತಡೆ ನಡೆಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಇನ್ನು ಚಾಮರಾಜನಗರದಲ್ಲಿಯೂ ಕೂಡ ಬಂದ್ ಆಚರಣೆ ಮಾಡಲಾಗುತ್ತಿದ್ದು, ಬಂದ್ ಪರಿಣಾಮ ಯಾವುದೇ ಸರ್ಕಾರಿ ಬಸ್ ಗಳು ರಸ್ತೆಗಿಳಿದಿಲ್ಲ. ಇನ್ನು ಶಾಲಾ-ಕಾಲೇಜುಗಳಿಗೆ ರಜೆ ನೀಡದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ತೀವ್ರ ಪರದಾಡುತ್ತಿದ್ದಾರೆ. ಬಂದ್ ಘೋಷಣೆಯಾಗಿದ್ದರೂ ರಜೆ ಬಗ್ಗೆ ಚಾಮರಾಜನಗ ಜಿಲ್ಲಾಧಿಕಾರಿಗಳಾದ ಬಿರಾಮು ಅವರು ಈವರೆಗೂ ಮಾಹಿತಿ ನೀಡಿಲ್ಲ. ಆಲ್ಲದೆ ಈ ಬಗ್ಗೆ ಪೋಷಕರು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೆ ಕರೆ ಕೂಡ ಸ್ವೀಕರಿಸುತ್ತಿಲ್ಲ. ಈ ಹಿನ್ನಲೆಯಲ್ಲಿ ಪೋಷಕರು ಜಿಲ್ಲಾಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಾನಗರಿ ಬೆಳಗಾವಿಯಲ್ಲೂ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಖಾಸಗಿ ಬಸ್ ಸೇವೆ ಹಾಗೂ ಸರ್ಕಾರಿ ಬಸ್ ಸೇವೆಗಳು ಸ್ಥಗಿತಗೊಂಡಿವೆ. ಸಕ್ಕರೆ ನಾಡು ಮಂಡ್ಯದಲ್ಲೂ ಬಂದ್ ನಡೆಸಲಾಗುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರು-ಮಂಡ್ಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ವ್ಯಾಪಕ ಪ್ರತಿಭಟನೆ
ಇನ್ನು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್ ವೇಳೆ ಹಿಂಸಾಚಾರ ನಡೆಯುವ ಭೀತಿ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ತುರ್ತು ಪ್ರಹಾರ ದಳ , ಗೃಹ ರಕ್ಷಕ ದಳ, ಅಶ್ರುವಾಯು ದಾಳಿ, ಜಲಫಿರಂಗಿ ದಳಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಅಲ್ಲದೆ ಅಗತ್ಯ ಬಿದ್ದರೆ ಅರೆ ಸೇನಾ ಪಡೆಗಳನ್ನು ಕೂಡ ಬಳಿಸಿಕೊಳ್ಳುವುದಾಗಿ ಗೃಹ ಸಚಿವಾಲಯ ಮಾಹಿತಿ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


