ಪ್ರಧಾನ ಸುದ್ದಿ

ಕಾರ್ಗಿಲ್ ಯುದ್ಧದ ವೇಳೆ ಪಾಕ್ ಮೇಲೆ ವಾಯುದಾಳಿಗೆ ಮುಂದಾಗಿದ್ದ ಭಾರತ!

ಕದನ ವಿರಾಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಭಾರತದ ಕಾರ್ಗಿಲ್ ಅನ್ನು ವಶಪಡಿಸಿಕೊಂಡಿದ್ದ ಪಾಕಿಸ್ತಾನ ಮೇಲೆ ತೀವ್ರ ಆಕ್ರೋಶಗೊಂಡಿದ್ದ ಭಾರತೀಯ ವಾಯುಸೇನೆ ಪಾಕ್ ಸೇನಾ ನೆಲೆಗಳ ಮೇಲೆ ಭೀಕರ ವಾಯುದಾಳಿಗೆ ಸಜ್ಜಾಗಿತ್ತು ಎಂಬ ಕುತೂಹಲಕಾರಿ ಅಂಶವನ್ನು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಕಾರ್ಗಿಲ್ ಯುದ್ಧದ ವೇಳೆ ಪಾಕ್ ಮೇಲೆ ವಾಯುದಾಳಿಗೆ ಮುಂದಾಗಿದ್ದ ಭಾರತ!
ಭಾರತೀಯ ವಾಯು ಸೇನೆ (ಸಂಗ್ರಹ ಚಿತ್ರ)
Published On :

ನವದೆಹಲಿ: ಕದನ ವಿರಾಮ ಉಲ್ಲಂಘನೆ ಮಾಡಿ ಅಕ್ರಮವಾಗಿ ಭಾರತದ ಕಾರ್ಗಿಲ್ ಅನ್ನು ವಶಪಡಿಸಿಕೊಂಡಿದ್ದ ಪಾಕಿಸ್ತಾನ ಮೇಲೆ ತೀವ್ರ ಆಕ್ರೋಶಗೊಂಡಿದ್ದ ಭಾರತೀಯ ವಾಯುಸೇನೆ ಪಾಕ್  ಸೇನಾ ನೆಲೆಗಳ ಮೇಲೆ ಭೀಕರ ವಾಯುದಾಳಿಗೆ ಸಜ್ಜಾಗಿತ್ತು ಎಂಬ ಕುತೂಹಲಕಾರಿ ಅಂಶವನ್ನು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಮಾಧ್ಯಮದ ವರದಿ ಪ್ರಕಾರ ಕಾರ್ಗಿಲ್ ಯುದ್ಧಾರಂಭವಾದ ಆರಂಭಿಕ ಕ್ಷಣಗಳಲ್ಲೇ ಅಂದರೆ 1999 ಜೂನ್ 13ರಲ್ಲಿ ಭಾರತ ಪಾಕಿಸ್ತಾನದ ಮೇಲೆ ಮುಗಿಬೀಳಲು ಸಜ್ಜಾಗಿತ್ತು. ಭಾರತಕ್ಕೆ ಸೇರಿದ್ದ  ಕಾರ್ಗಿಲ್ ಕಣಿವೆಯನ್ನು ಅಕ್ರಮವಾಗಿ ಪಾಕಿಸ್ತಾನ ಸೇನೆ ವಶಪಡಿಸಿಕೊಂಡಿದ್ದ ವಿಚಾರ ತಿಳಿಯುತ್ತಲೇ ತೀವ್ರ ಆಕ್ರೋಶಗೊಂಡಿದ್ದ ಭಾರತೀಯ ವಾಯುಸೇನೆ ಪಾಕಿಸ್ತಾನದ ಸೇನಾ ನೆಲೆಗಳ  ಮೇಲೆ ಬಾಂಬ್ ದಾಳಿ ನಡೆಸಲು ಸಜ್ಜಾಗಿತ್ತಂತೆ. ಸೇನಾ ವಿಭಾಗದ ಎಲ್ಲ ಪ್ರಮುಖ ಯುದ್ಧ ವಿಮಾನಗಳನ್ನು ದಾಳಿಗೆ ಸಿದ್ಧಪಡಿಸಿ, ಪೈಲಟ್ ಗಳು "ಗೆಲುವು ಇಲ್ಲವೇ ವೀರಮರಣ"ಕ್ಕೆ  ಸನ್ನದ್ದರಾಗಿದ್ದರಂತೆ.

ಇದೇ ಕಾರಣಕ್ಕೆ ಸಂಪೂರ್ಣ ಸಜ್ಜಾಗಿದ್ದ ಪೈಲಟ್ ಗಳು ತಮ್ಮ ಯುದ್ಧ ವಿಮಾನಗಳನ್ನು ಎಲ್ಲ ರೀತಿಯಲ್ಲೂ ಸಜ್ಜು ಮಾಡಿದ್ದರಂತೆ. ಭಾರತದ ವಾಯುದಾಳಿ ಸಿದ್ದತೆ ಎಷ್ಟರಮಟ್ಟಿಗೆ ಇತ್ತು ಎಂದರೆ,  ದಾಳಿಗೆ ಸಿದ್ಧರಾಗಿದ್ದ ಪೈಲಟ್ ಗಳು ದಾಳಿ ವೇಳೆ ವಿಮಾನ ಪತನವಾಗಿ ಕೆಳಗೆ ಬಿದ್ದಾಗ ಪಾಕ್ ಸೈನಿಕರ ಮೇಲೆ ದಾಳಿ ನಡೆಸಲು ವೈಯುಕ್ತಿಕ ಪಿಸ್ತೂಲ್ ಗಳನ್ನು ಕೂಡ ಹೊಂದಿದ್ದರು ಎಂದು  ವರದಿಯಲ್ಲಿ ಹೇಳಲಾಗಿದೆ.

ಮಿಗ್-21 ಯುದ್ಧ ವಿಮಾನಗಳನ್ನು ಬಳಸಿಕೊಂಡು ‘ಗೋಲ್ಡನ್ ಆರೋಸ್’ ಹೆಸರಲ್ಲಿ ದಾಳಿ ಯೋಜನೆ ರೂಪಿಸಲಾಗಿತ್ತು. ದಾಳಿಗೆ 16 ಯುದ್ಧ ವಿಮಾನಗಳನ್ನು ಬಳಸುವುದರ ಜತೆಗೆ ಪೈಲಟ್​ಗಳಿಗೆ ಟಾರ್ಗೆಟ್ ಸೂಚಿಸಿ, ರೂಟ್​ ಮ್ಯಾಪ್ ಕೊಡಲಾಗಿತ್ತು. ಶ್ರೀನಗರದ ವಾಯುನೆಲೆಯಿಂದ ಹೊರಡಲಿದ್ದ ಯುದ್ಧ ವಿಮಾನಗಳ ಪೈಲಟ್​ಗಳಿಗೆ ದಾಳಿಯ ವಿಚಾರ ಹಾಗೂ ಸಮಯವನ್ನು ಪಾಕಿಸ್ತಾನ ಕರೆನ್ಸಿಯಲ್ಲಿ ಬರೆದು ಮುಂಚಿತವಾಗಿ ತಿಳಿಸಲಾಗಿತ್ತು.

ದಾಖಲೆಗಳ ಪ್ರಕಾರ ಜೂನ್ 13 1999ರ ಬೆಳಗ್ಗೆ 6.30ಕ್ಕೆ ಮೊದಲ ದಾಳಿಗಾಗಿ ಟೇಕ್ ಆಫ್ ಆಗಲು ಭಾರತದ 2 ಮಿಗ್ 21 ಯುದ್ಧ ವಿಮಾನಗಳನ್ನು ಸಜ್ಜು ಮಾಡಲಾಗಿತ್ತು. ಪಾಕಿಸ್ತಾನದ ಪ್ರಮುಖ  ಸೇನಾ ನೆಲೆ ರಾವಲ್ ಪಿಂಡಿಯ ರನ್ ವೇ ಗೆ ಹಾನಿ ಮಾಡುವುದು ಮೊದಲ ಗುರಿಯಾಗಿತ್ತು. ಅಲ್ಲದೆ ಅಲ್ಲಿದ್ದ ಯುದ್ಧ ವಿಮಾನಗಳ ನಾಶ ಕೂಡ ಈ ಪಟ್ಟಿಯಲ್ಲಿ ಸೇರಿತ್ತು. ರನ್ ವೇ ಗೆ ಹಾನಿ  ಮಾಡುವ ಮೂಲಕ ಅಲ್ಲಿಂದ ಯಾವುದೇ ಯುದ್ಧ ವಿಮಾನ ಹಾರದಂತೆ ಮಾಡುವುದು ಮೊದಲ ಗುರಿಯಾಗಿತ್ತು. ಇನ್ನು 16 ಫೈಟರ್ ಜೆಟ್ ವಿಮಾನಗಳನ್ನು ಎಲ್ ಒಸಿ ಯಲ್ಲಿರುವ ಪಾಕಿಸ್ತಾನಿ  ಸೇನೆಯನ್ನು ಹಿಮ್ಮೆಟಿಸಲು ಬಳಕೆ ಮಾಡಲು ನಿರ್ಧರಿಸಲಾಗಿತ್ತು. ಈ ದಾಳಿಗೆ ಸೇನೆಯ ಇತರೆ ಪಡೆಗಳು ಕೂಡ ಸಾಥ್ ನೀಡಲು ಮುಂದಾಗಿದ್ದವು ಎಂದು ಹೇಳಲಾಗಿದೆ.

12.30ರ ವೇಳೆಗೆ "ನೋಗೋ" ಆದೇಶ

ದಾಳಿಗೆ ವಾಯುಸೇನೆ ಎಲ್ಲ ರೀತಿಯ ಸಿದ್ಧ ಮಾಡಿಕೊಂಡಿರುವಂತೆಯೇ ಕೊನೆ ಕ್ಷಣದಲ್ಲಿ ಭಾರತ ಸರ್ಕಾರ ಈ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಕಾರ್ಗಿಲ್ ವಶಪಡಿಸಿಕೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿದ್ದ ಪಾಕಿಸ್ತಾನ, ಚೀನಾದ ಪರೋಕ್ಷ ಕುಮ್ಮಕ್ಕಿನ ನರವಿನೊಂದಿಗೆ ಸಿದ್ಧತೆ ಮಾಡಿಕೊಂಡಿತ್ತು. ಇನ್ನು ದಾಖಲೆಗಳ ಪ್ರಕಾರ ಪಾಕಿಸ್ತಾನ  ಸೇನೆ ಕಾರ್ಗಿಲ್ ವಶಪಡಿಸಿಕೊಳ್ಳಲು ಎಷ್ಟರಮಟ್ಟಿಗೆ ಸಿದ್ಧತೆ ಮಾಡಿಕೊಂಡಿತ್ತು ಎಂದರೆ, ಅತ್ತ ಕಾರ್ಗಿಲ್ ಸೈನಿಕರನ್ನು ಬಿಟ್ಟಿದ್ದು ಮಾತ್ರವಲ್ಲದೇ ಇತ್ತ ಭಾರತ ಇದಕ್ಕೆ ಪ್ರತಿಯಾಗಿ ವಾಯುದಾಳಿ  ನಡೆಸಬಹುದು ಎಂದು ಮೊದಲೇ ಯೋಚಿಸಿ ತನ್ನ ರಾವಲ್ ಪಿಂಡಿ ಮತ್ತು ಕಹುತಾ ಸೇನಾ ನೆಲೆಗಳಲ್ಲಿ ಚೀನಾದ ಸಹಕಾರದೊಂದಿಗೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಮತ್ತು ಕ್ಷಿಪಣಿಗಳನ್ನು  ಸಜ್ಜುಗೊಳಿಸಿತ್ತಂತೆ. ಒಂದು ವೇಳೆ ಭಾರತೀಯ ಯುದ್ಧ ವಿಮಾನಗಳು ದಾಳಿ ಮಾಡಿದರೆ ಅವುಗಳನ್ನು ಹೊಡೆದುರುಳಿಸಲು ಅಪಾರ ಪ್ರಮಾಣದ ಕ್ಷಿಪಣಿಗಳು, ಬಾಂಬ್ ಗಳನ್ನು ಸಜ್ಜು  ಮಾಡಿಕೊಂಡಿತ್ತು ಎಂದು ಹೇಳಲಾಗಿದೆ.

ಇದರ ಮುನ್ಸೂಚನೆ ಅರಿತ ಭಾರತ ಸರ್ಕಾರ ಕೊನೆಯ ಕ್ಷಣದಲ್ಲಿ ವಾಯುಸೇನೆಗೆ "ನೋ ಗೋ" ಎಂಬ ಸಂದೇಶ ರವಾನಿಸಿ, ಸಂಭಾವ್ಯ ಅಪಾಯವನ್ನು ತಡೆಯಿತು ಎಂದು ವರದಿಯಲ್ಲಿ  ಹೇಳಲಾಗಿದೆ.

ಮತ್ತೊಂದು ವರದಿಯನ್ವಯ ಜುಲೈ ಆರಂಭದ ವೇಳೆಗೆ ಪಾಕಿಸ್ತಾನಿ ಪಡೆಯು ಸೇನೆ ಹಿಂದಕ್ಕೆ ಪಡೆದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿತ್ತು ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಕಾರ್ಗಿಲ್ ಯುದ್ಧದ ವೇಳೆ ಪಾಕ್​ಗೆ ಹೋಲಿಸಿದರೆ ಭಾರತೀಯ ವಾಯುಸೇನೆ ಹೆಚ್ಚು ಬಲಾಢ್ಯವಾಗಿದ್ದರಿಂದ ಇಂತಹ ಸಾಹಸಕ್ಕೆ ಕೈಹಾಕಿತ್ತು ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.