ಗಡಿ ನಿಯಂತ್ರಣ ರೇಖೆ ಮರು ವಿನ್ಯಾಸ ಬೇಡಿಕೆ ಮುಂದಿಟ್ಟಿದ್ದ ಪಾಕ್!
ಸರ್ತಾಜ್ ಎಜಾಜ್ ಪಾಕಿಸ್ತಾನ ಸೇನೆ ವಶಪಡಿಸಿಕೊಂಡಿರುವ ಕಾರ್ಗಿಲ್ ಸೇರಿದಂತೆ ಕೆಲ ಗಡಿ ಪ್ರದೇಶಳನ್ನು ಪಾಕಿಸ್ತಾನಕ್ಕೆ ಸೇರಿಸುವ ಗಡಿ ನಿಯಂತ್ರಣ ರೇಖೆ ಮರು ವಿನ್ಯಾಸಕ್ಕೆ ಬೇಡಿಕೆ ಇಟ್ಟಿದ್ದರಂತೆ.

ನವದೆಹಲಿ: ಅತ್ತ ಕಾರ್ಗಿಲ್ ನಲ್ಲಿ ಪಾಕಿಸ್ತಾನ ಸೇನೆ ಅಕ್ರಮವಾಗಿ ಪ್ರವೇಶ ಮಾಡುತ್ತಿದ್ದಂತೆಯೇ ಭಾರತದ ಅಂದಿನ ವಿದೇಶಾಂಗ ಸಚಿವ ಜಸ್ವತ್ ಸಿಂಗ್ ಹಾಗೂ ಪಾಕಿಸ್ತಾನದ ಸರ್ತಾಜ್ ಎಜಾಜ್ ಅವರ ನಡುವೆ ಚರ್ಚೆ ಏರ್ಪಡಿಸಲಾಗಿತ್ತು. ಆದರೆ ಮಾತುಕತೆ ವಿಫಲವಾದ ಹಿನ್ನಲೆಯಲ್ಲಿ ಭಾರತ ಈ ಕಠಿಣ ನಿರ್ಧಾರಕ್ಕೆ ಬಂದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಯುದ್ಧಕ್ಕೆ ಸಿದ್ಧರಾಗಿ ಬಂದಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಸರ್ತಾಜ್ ಎಜಾಜ್ ಅವರು ಮಾತುಕತೆ ವೇಳೆ ಪಾಕಿಸ್ತಾನ ಸೇನೆ ವಶಪಡಿಸಿಕೊಂಡಿರುವ ಕಾರ್ಗಿಲ್ ಸೇರಿದಂತೆ ಕೆಲ ಗಡಿ ಪ್ರದೇಶಳನ್ನು ಪಾಕಿಸ್ತಾನಕ್ಕೆ ಸೇರಿಸುವ ಗಡಿ ನಿಯಂತ್ರಣ ರೇಖೆ ಮರು ವಿನ್ಯಾಸಕ್ಕೆ ಬೇಡಿಕೆ ಇಟ್ಟಿದ್ದರಂತೆ. ಆದರೆ ಭಾರತ ಸರ್ಕಾರ ಇದಕ್ಕೆ ಒಪ್ಪಲಿಲ್ಲ. ಅಲ್ಲದೆ ಭಾರತೀಯ ಸೈನಿಕರಾದ ಸೌರಭ್ ಕಾಲಿಯಾ ಸೇರಿದಂತೆ 6 ಮಂದಿ ಸೈನಿಕರನ್ನು ಭೀಕರವಾಗಿ ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದ ಪಾಕ್ ಸೈನಿಕರನ್ನು ಶಿಕ್ಷಿಸುವ ಭಾರತ ಸರ್ಕಾರ ಮುಂದಿಟ್ಟಿದ್ದ ಬೇಡಿಕೆಯನ್ನು ಕೂಡ ಪಾಕಿಸ್ತಾನ ತಿರಸ್ಕರಿಸಿತ್ತು. ಹೀಗಾಗಿ ಉಭಯ ನಾಯಕರ ನಡುವಿನ ಮಾತುಕತೆ ಮುರಿದು ಬಿದ್ದಿತ್ತು. ಬಳಿಕ ಜೂನ್ 12ರಂದು ಎಜಾಜ್ ಪಾಕಿಸ್ತಾನಕ್ಕೆ ಹಿಂದಿರುಗಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ತೀವ್ರ ಆಕ್ರೋಶಗೊಂಡಿದ್ದ ಭಾರತೀಯ ವಾಯು ಸೇನೆ ಅಧಿಕಾರಿಗಳು ತನ್ನ ಎಲ್ಲ ಪೈಲಟ್ ಗಳನ್ನು ನೆಲೆಗೆ ತುರ್ತಾಗಿ ವಾಪಸ್ ಆಗುವಂತೆ ಸೂಚನೆ ನೀಡಿತ್ತು. ಅಲ್ಲದೆ ಜೂನ್ 13ರಂದು ಪಾಕಿಸ್ತಾನದ ಮೇಲೆ ವಾಯುದಾಳಿಗೆ ಸಜ್ಜಾಗುವಂತೆ ತುರ್ತು ಆದೇಶ ರವಾನಿಸಿತ್ತು. ಅದರಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಚಕ್ಲಾಲಾ ಏರ್ ಬೇಸ್(ರಾವಲ್ ಪಿಂಡಿ)ಮೇಲೆ ದಾಳಿ ಮಾಡಿ ಯುದ್ಧ ವಿಮಾನಗಳ ಸಹಿತ ರನ್ ವೇ ನಾಶಮಾಡಲು ಸೂಚನೆ ನೀಡಲಾಗಿತ್ತು. ಈ ಕಾರ್ಯಕ್ಕಾಗಿ 4 ಮಿಗ್ 27 ಯುದ್ಧ ವಿಮಾನಗಳನ್ನು ಸಜ್ಜು ಗೊಳಿಸಿ ನಿಯೋಜಿಸಲಾಗಿತ್ತು. ಇದಲ್ಲದೆ ಪಾಕ್ ಗಡಿಯಲ್ಲಿನ ನೆಲೆಗಳ ನಾಶ ಮಾಡಲು 16 ಮಿಗ್ 21 ಯುದ್ಧ ವಿಮಾನಗಳನ್ನು ನಿಯೋಜಿಸಲಾಗಿತ್ತು. ಇದಕ್ಕೆ ವಾಯುಸೇನೆಯ ಇತರೆ ಸ್ಕ್ವಾಡ್ರನ್ ಗಳು ಕೂಡ ಸಾಥ್ ನೀಡಲು ಮುಂದಾಗಿದ್ದವು.
ಪಾಕಿಸ್ತಾನ ಕೂಡ ಭಾರತದ ಸಂಭಾವ್ಯ ದಾಳಿ ಎದುರಿಸಲು ಮತ್ತು ಪ್ರತಿ ದಾಳಿ ನಡೆಸಲು ಸಜ್ಜಾಗಿತ್ತು. ಇದಕ್ಕಾಗಿ ಚೀನಾ ನಿರ್ಮಿತ 190 ಕೆಜಿ ಸ್ಫೋಟಕ ಹೊತ್ತು ಶಬ್ಧದ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಸಾಗಬಲ್ಲ ಹೆಚ್ ಕ್ಯೂ2ಬಿ ಖಂಡಾಂತರ ಕ್ಷಿಪಣಿಗಳು ಸೇರಿದಂತೆ ಯುದ್ಧ ವಿಮಾನಗಳನ್ನು ಹೊಡೆದುರುಳಿಸಬಲ್ಲ ಕ್ಷಿಪಣಿಗಳನ್ನು ಸಜ್ಜು ಮಾಡಿತ್ತು. ಹೀಗಾಗಿ ಭಾರತ ಸರ್ಕಾರ ಕೊನೇ ಕ್ಷಣದಲ್ಲಿ ವಾಯುದಾಳಿಗೆ ಬ್ರೇಕ್ ಹಾಕಿತು ಎಂದು ವರದಿಯಲ್ಲಿ ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


