ಪ್ರೇಮಿಗಳ ಒಂದುಗೂಡಿಸಿದ ಹೈಕೋರ್ಟ್
ಅಂತರ್ ಧರ್ಮೀಯ ವಿವಾಹಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ ದಶಕಗಳೇ ಕಳೆದರೂ ಇಂದಿಗೂ ಮೂಲಭೂತವಾದಿಗಳ...

Published On :
ಬೆಂಗಳೂರು: ಅಂತರ್ ಧರ್ಮೀಯ ವಿವಾಹಕ್ಕೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿ ದಶಕಗಳೇ ಕಳೆದರೂ ಇಂದಿಗೂ ಮೂಲಭೂತವಾದಿಗಳ ಕಾಟ ತಪ್ಪುತ್ತಿಲ್ಲ. ಇದಕ್ಕೆ ಗುರುವಾರ ಹೈಕೋರ್ಟ್‍ನಲ್ಲಿ ಬೆಳಕಿಗೆ ಬಂದ ಪ್ರಕರಣವೇ ಸಾಕ್ಷಿ.
ಸಂವಿಧಾನದ ಆಶಯಗಳನ್ನು ಉಳಿಸುವುದಕ್ಕಾಗಿ, ಸತತ ಪ್ರಯತ್ನ ಮಾಡುತ್ತಿರುವ ನ್ಯಾಯಾಂಗವು ಪ್ರೀತಿಸಿ ವಿವಾಹವಾಗಿದ್ದ ಅಂತರ್ ಧರ್ಮೀಯ ದಂಪತಿಯನ್ನು ಒಂದು ಮಾಡುವ ಮೂಲಕ ಅವರ ರಕ್ಷಣೆಗೆ ನಿಂತಿದೆ.
ನ್ಯಾಯಮೂರ್ತಿ ಮೋಹನಶಾಂತನ ಗೌಡ ಹಾಗೂ ನ್ಯಾ.ಕೆಎನ್ ಫಣೀಂದ್ರರ ಪೀಠವು ಈ ಪ್ರೇಮಿಗಳನ್ನು ಒಗ್ಗೂಡಿಸಿತು. ಮುಸ್ಲಿಂ ಹೆಣ್ಣು ಮಗಳು ಮತ್ತು ಹಿಂದೂ ಯುವಕನಿಗೆ ಪದವಿ ಪೂರ್ವ ಶಿಕ್ಷಣದಲ್ಲಿಯೇ ಪ್ರೇಮಾಂಕುರವಾಗಿದ್ದು, ಕಳೆದ ಎಂಟು ವರ್ಷಗಳಿಂದ ಗಾಢವಾಗಿ ಪ್ರೀತಿಸಿ ಮದುವೆಯಾಗಿದ್ದರು. ಅಂತರ್ ಧರ್ಮೀಯ ದಂಪತಿಯನ್ನು ಬೇರ್ಪಡಿಸುವುದಕ್ಕೆ ಮುಂದಾಗಿದ್ದ ಪೋಷಕರ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿರುವುದಲ್ಲದೆ, ದಂಪತಿಯನ್ನು ಹೈಕೋರ್ಟ್‍ನಿಂದ ಅವರ ಮನೆಯವರೆಗೂ ಪೊಲೀಸ್ ಭದ್ರತೆಯಲ್ಲಿ ಬಿಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.
ಪ್ರಕರಣವೇನು?: ಮೈಸೂರಿನ ಯುವಕ ಅಭಿರಾಮ್ ಮತ್ತು ಮಂಗಳೂರಿನ ಯುವತಿ ನಫೀಜಾ (ಇಬ್ಬರ ಹೆಸರನ್ನು ಬದಲಿಸಲಾಗಿದೆ) ಮಂಗಳೂರಿನ ಸೆಂಟ್ ಅಲೋಸಿಯಸ್ ಕಾಲೇಜಿನಲ್ಲಿ ಒಟ್ಟಿಗೆ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಪರಿಚಯವಾಗಿತ್ತು, ಪರಿಚಯ ಸ್ನೇಹಕ್ಕೆ ತಿರುಗಿ ಪ್ರೇಮಾಂಕುರವಾಗಿತ್ತು. ಈ ನಡುವೆ ಮಂಗಳೂರಿನ ಪ್ರತ್ಯೇಕ ಕಾಲೇಜಿಗಳಲ್ಲಿ ನಫೀಜಾ ಎಂಬಿಎ ಪದವಿ ಮಾಡಿದರೆ ಅಭಿರಾಮ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ. ಆದರೆ, ಪ್ರೀತಿ ಮಾತ್ರ ಅದೇ ರೀತಿಯಲ್ಲಿ ಮುಂದುವರೆದಿತ್ತು. ಪದವಿಯ ಬಳಿಕ ಅಭಿರಾಮ್ ಮತ್ತು ನಫೀಜಾ ಪ್ರಾಜೆಕ್ಟ್ ವೊಂದನ್ನು ರೆಡಿ ಮಾಡಿದ್ದರು. ತಾವು ಸಿದ್ದ ಪಡಿಸಿದ್ದ ಪ್ರಾಜೆಕ್ಟ್ ಗೆ ಅನುಮೊದನೆ ಪಡೆದುಕೊಳ್ಳಲು ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಾಜೆಕ್ಟ್ ಕುರಿತಂತೆ ಮಾತುಕತೆ ನಡೆಸಲು ಅಭಿರಾಮ್ ಆಗಾಗ ನಫೀಜಾಳ ಮನೆಗೆ ಹೋಗಿಬರುವುದು ಸಾಮಾನ್ಯವಾಗಿತ್ತು. ಈ ಮಧ್ಯೆ ನಫೀಜಾ ತನ್ನ ತಾಯಿಯ ಬಳಿ ಅಭಿರಾಮ್ನನ್ನು ಪ್ರೀತಿಸುತ್ತಿದ್ದು, ವಿವಾಹವಾಗುವುದಾಗಿ ತಿಳಿಸಿದ್ದಳು. ಆದ ಪರಿಣಾಮ ಮನೆಯಲ್ಲಿ ಗಲಾಟೆಯೂ ನಡೆದಿತ್ತು.
ವಿವಾಹ: ಬಳಿಕ 2015ರ ಮೇ 14 ರಂದು ಮೈಸೂರಿನ ಒಂಟಿಕೊಪ್ಪಲ್ ಬಳಿಯ ವೆಂಕಟರಮಣ ದೇವಾಲಯದಲ್ಲಿ ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಕಳೆದ ಏಳು ತಿಂಗಳಿಂದ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಆದರೆ, ಅಂತರ್ ಧರ್ಮೀಯ ವಿವಾಹವಾಗಿರುವುದರಿಂದ ವಿಶೇಷ ಕಾಯಿದೆಯ ಮೂಲಕ ನೋಂದಣಿಗೆ ಅರ್ಜಿ ಸಲ್ಲಿಸಿದರು.
ಈ ನಡುವೆ ಯುವತಿಯ ಪೋಷಕರು ತಮ್ಮ ಮಗಳಿಗೆ ಈಗಾಗಲೆ ವಿವಾಹವಾಗಿದ್ದು, ಯುವಕನೊಬ್ಬ ಅಪಹರಣ ಮಾಡಿದ್ದಾನೆ ಎಂದು ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿಬಿಟ್ಟರು. ದೂರನ್ನು ಪರಿಶೀಲಿಸಿ ವಿಚಾರಣೆ ನಡೆಸಿದ ಪೊಲೀಸರು ಮದುವೆಯಾಗಿರುವುದು ಸುಳ್ಳು ಎಂದು ಅಬಿಪ್ರಾಯಪಟ್ಟು, ಯುವಕ ಮತ್ತು ಯುವತಿಯನ್ನು ಕಳುಹಿಸಿಕೊಟ್ಟಿದ್ದರು.
ಮೈಸೂರಿನಲ್ಲಿ ದಂಪತಿ ವಾಸವಿದ್ದ ಮನೆಗೆ ನಫೀಜಾಳ ಚಿಕ್ಕಪ್ಪ ಎರಡು ಮೂರು ಬಾರಿ ಬಂದು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಅಭಿರಾಮ್ ನನ್ನು ಒತ್ತಾಯಿಸಿದ್ದರು. ಆದರೆ, ಯುವಕ ಒಪ್ಪಿರಲಿಲ್ಲ. ಇದರಿಂದಾಗಿ ಸಿಟ್ಟಾಗಿದ್ದ ಯುವತಿಯ ಕಡೆಯವರು ಡಿಸೆಂಬರ್ 4 ರಂದು ಮನೆಗೆ ಸಾಮಾಗ್ರಿಗಳನ್ನು ತೆಗೆದುಕೊಂಡು ಬರುವುದಕ್ಕೆ ಹೋದ ಸಂದರ್ಭದಲ್ಲಿ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ನಫೀಜಾರ ಪೋಷಕರು ಅಭಿರಾಮ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ನಫೀಜಾಳನ್ನು ಅಪಹರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿಯನ್ನು ಅಪಹರಣ ಮಾಡಿರುವ ಸಂಬಂಧ ಯುವಕ ಲಕ್ಷ್ಮೀಪುರ ಠಾಣೆಯಲ್ಲಿ ದೂರು ನೀಡಿದ್ದ. ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಹೇಬಿಯಸ್ ಕಾರ್ಪ್‍ಸ್ ಅರ್ಜಿ ಸಲ್ಲಿಸಿದ್ದ.
ಹಿಂಬಾಲಕರ ಭಯವಿದೆ
ವಿಚಾರಣೆ ವೇಳೆ ಹಾಜರಿದ್ದ ಯುವ ದಂಪತಿ ಒಬ್ಬರನ್ನೊಬ್ಬರು ಕೈ ಹಿಡಿದುಕೊಂಡು ನಿಂತು ನ್ಯಾಯಪೀಠಕ್ಕೆ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದೇವಲೆ, ಸಾಯುವವರೆಗೂ ಒಂದಾಗಿ ಜೀವನ ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದು ಹೇಳಿಕೆ ನೀಡಿದರು.
ಅಲ್ಲದೆ, ಯುವತಿ ನನ್ನ ತಂದೆಯ ಬಗ್ಗೆ ಯಾವುದೇ ರೀತಿಯ ಭಯವಿಲ್ಲ. ಆದರೆ, ಅವರ ಹಿಂಬಾಲಕರ ಬಗ್ಗೆ ಭಯವಿದೆ ಎಂದು ಹೇಳಿಕೆ ನೀಡಿದಳು. ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ದಂಪತಿಯನ್ನು ಪೊಲೀಸ್ ಭದ್ರತೆಯಲ್ಲಿಯೇ ಮನೆಗೆ ಕಳುಹಿಸಿಕೊಡಬೇಕು ಎಂದು ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು. ಅರ್ಜಿ ವಿಚಾರಣೆ ಸಂದರ್ಭದಲ್ಲಿ ಯುವತಿ ಮತ್ತು ಯುವಕನ ಕಡೆಯ ನೂರಾರು ಜನ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


