ದೆಹಲಿ ಸರ್ಕಾರಕ್ಕೆ ಸಹಾಯ ಮಾಡುತ್ತೇವೆ; ಹೈಕೋರ್ಟ್ ಆದೇಶದ ನಂತರ ಜಂಗ್
ದೆಹಲಿ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್ ಜಿ) ನಜೀಬ್ ಜಂಗ್ ಅವರ ಸರ್ವೋಚ್ಚತೆಯನ್ನು ಎತ್ತಿ ಹಿಡಿದು ದೆಹಲಿ ಹೈಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ

Published On :
ನವದೆಹಲಿ: ದೆಹಲಿ ಸರ್ಕಾರದ ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ (ಎಲ್ ಜಿ) ನಜೀಬ್ ಜಂಗ್ ಅವರ ಸರ್ವೋಚ್ಚತೆಯನ್ನು ಎತ್ತಿ ಹಿಡಿದು ದೆಹಲಿ ಹೈಕೋರ್ಟ್ ನೀಡಿರುವ ಆದೇಶದ ಹಿನ್ನಲೆಯಲ್ಲಿ ಇದು ಯಾರೊಬ್ಬರ ಸೋಲಾಗಲಿ ಗೆಲುವಾಗಲಿ ಅಲ್ಲ ಎಂದಿದ್ದಾರೆ ಜಂಗ್.
"ಇದು ದೇಶದ ಪ್ರಜಾಪ್ರಭುತ್ವವನ್ನು ಕೋರ್ಟ್ ಎತ್ತಿ ಹಿಡಿದ ಪ್ರಕರಣ ಅಷ್ಟೇ, ಯಾರೊಬ್ಬರ ಗೆಲುವಿನ ಬಗ್ಗೆಯಲ್ಲ" ಎಂದು ಜಂಗ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಎಲ್ ಜಿ ಕಾರ್ಯಾಲಯ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದೆ ಎಂಬ ಆಮ್ ಆದ್ಮಿ ಸರ್ಕಾರದ ಆರೋಪವನ್ನು ತಳ್ಳಿಹಾಕಿದ ಜಂಗ್ "ಚುನಾಯಿತ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೆ ಅವರಿಗೆ ಸಹಾಯ ಮಾಡುತ್ತೇವೆ. ಸರ್ಕಾರಕ್ಕೆ ಸಾಂವಿಧಾನಿಕ ಸಹಕಾರವನ್ನು ಮುಂದುವರೆಸುತ್ತೇವೆ" ಎಂದು ಕೂಡ ಅವರು ಹೇಳಿದ್ದಾರೆ.
ಅವರು ದೆಹಲಿಯ ಎಲ್ ಜಿ ಆಗಿ ಅಧಿಕಾರ ಸ್ವೀಕರಿಸಿದಾಗ ಮಾಡಿದ ಪ್ರಮಾಣವಚನವನ್ನು ಪುನರುಚ್ಛಿಸಿದ್ದಾರೆ. "ಲೆಫ್ಟಿನೆಂಟ್ ಗವರ್ನರ್ ಭಾರತದ ಸಂವಿಧಾನವನ್ನು ಪಾಲಿಸುವ ವಚನ ತೆಗೆದುಕೊಳ್ಳಬೇಕು. ನಾನು ಅದನ್ನು ಅನುಸರಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.
ಕಳೆದ ಒಂದೂವರೆ ವರ್ಷದಲ್ಲಿ ದೆಹಲಿ ಸರ್ಕಾರ ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳನ್ನು ಎಲ್ ಜಿ ಕಾರ್ಯಾಲಯ ಪರಿಶೀಲಿಸಲಿದೆ ಎಂದು ಕೂಡ ಅವರು ಹೇಳಿರುವುದು ವಿಶೇಷ.
ಕೇಂದ್ರ ಸರ್ಕಾರದ ಹಿಡಿತದಲ್ಲಿ ಅವರು (ಜಂಗ್) ಕೆಲಸ ಮಾಡುತ್ತಿದ್ದಾರೆ ಎಂಬ ದೆಹಲಿ ಸರ್ಕಾರದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು ಕೇಂದ್ರಕ್ಕೆ ವರದಿ ಒಪ್ಪಿಸುವುದರಲ್ಲಿ ನನಗೆ ಯಾವುದೇ ಮುಜುಗರವಿಲ್ಲ ಎಂದಿದ್ದಾರೆ.
"ನನ್ನನ್ನು ನೇಮಿಸಿದವರು ರಾಷ್ಟ್ರಪತಿ . ನಾನು ಕೇಂದ್ರ ಸರ್ಕಾರಕ್ಕೆ ವರದಿ ಮಾಡಿಕೊಳ್ಳುತ್ತೇನೆ. ಅದಕ್ಕೆ ನನಗೇಕೆ ಮುಜುಗರವಾಗಬೇಕು? ಆದರೆ ನಾವೆಲ್ಲರೂ ಸಾಂವಿಧಾನಿಕ ಚೌಕಟ್ಟಿನೊಳಗೆ ಕೆಲಸ ಮಾಡಬೇಕು" ಎಂದು ಅವರು ಹೇಳಿದ್ದಾರೆ.
ದೆಹಲಿ ಸರ್ಕಾರದ ಸಚಿವರ ಸೂಚನೆ ಮತ್ತು ಸಲಹೆಗೆ ಲೆಫ್ಟಿನೆಂಟ್ ಗವರ್ನರ್ ಬದ್ಧರಾಗಿರಬೇಕಿಲ್ಲ ಎಂದು ದೆಹಲಿ ಹೈಕೋರ್ಟ್ ಗುರುವಾರ ಹೇಳಿತ್ತು. ಅಲ್ಲದೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಸಂಪರ್ಕಿಸಿದ ಮೇಲೆಯೇ ಸರ್ಕಾರ ಸೂಚನೆಗಳನ್ನು ನೀಡಬೇಕು ಎಂದು ತಿಳಿಸಿತ್ತು.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಗೃಹದ ಹೊರಗೆ ಪ್ರತಿಭಟನೆಯನ್ನು ನಿಷೇಧಿಸಿ ನೀಡಿದ್ದ ಉಪ ವಿಭಾಗೀಯ ಮೆಜೆಸ್ಟ್ರೇಟ್ ಅವರ ಆದೇಶ ಮಾನ್ಯವಲ್ಲ ಎಂದು ಕೂಡ ಜಂಗ್ ಹೇಳಿದ್ದು "ಇಂತಹ ಆದೇಶಗಳನ್ನು ನೀಡಲು ಉಪ ವಿಭಾಗೀಯ ಮೆಜೆಸ್ಟ್ರೇಟ್ ಅವರಿಗೆ ಅಧಿಕಾರ ಇಲ್ಲ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


