ಪ್ರಧಾನ ಸುದ್ದಿ

ಎತ್ತಿನ ಹೊಳೆ: ಕೆಲಸ ಶುರುವಾದ ಮೇಲೆ ಅಧ್ಯಯನ

ವಿವಾದಾತ್ಮಕ ಎತ್ತಿನಹೊಳೆ ಯೋಜನೆ ಕಾಮಗಾರಿ ಆರಂಭವಾದ ಬಳಿಕ ರಾಜ್ಯ ಸರ್ಕಾರ ಅದರಿಂದಾಗುವ ಸಾಮಾಜಿಕ ಪರಿಣಾಮಗಳ ಅಧ್ಯಯನಕ್ಕೆ ಹೊರಟಿದೆ...

ಎತ್ತಿನ ಹೊಳೆ: ಕೆಲಸ ಶುರುವಾದ ಮೇಲೆ ಅಧ್ಯಯನ
ಸಚಿವ ಸಂಪುಟ ಸಭೆ (ಸಂಗ್ರಹ ಚಿತ್ರ)
Published On :

ಬೆಂಗಳೂರು: ವಿವಾದಾತ್ಮಕ ಎತ್ತಿನಹೊಳೆ ಯೋಜನೆ ಕಾಮಗಾರಿ ಆರಂಭವಾದ ಬಳಿಕ ರಾಜ್ಯ ಸರ್ಕಾರ ಅದರಿಂದಾಗುವ ಸಾಮಾಜಿಕ ಪರಿಣಾಮಗಳ ಅಧ್ಯಯನಕ್ಕೆ ಹೊರಟಿದೆ.

ಸಚಿವ ಸಂಪುಟ ಸಭೆಯಲ್ಲಿ ಸೋಮವಾರ ಇದಕ್ಕೆ ಒಪ್ಪಿಗೆ ನೀಡಿದೆ. ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಮುಕ್ಕಾಲು ಗಂಟೆ ಕಾಲ ಎತ್ತಿನಹೊಳೆ ಮತ್ತು ಪಶ್ಚಿಮ  ವಾಹಿನಿ ಯೋಜನೆ ಬಗ್ಗೆ ಕಾವೇರಿದ ಚರ್ಚೆ ನಡೆದಿದ್ದು, ಬಯಲು ಸೀಮೆ ಭಾಗದ ಸಚಿವರು ಯೋಜನೆಯ ಪರ ನಿಂತರೆ, ಅರಣ್ಯ ಸಚಿವ ಬಿ.ರಮಾನಾಥ್ ರೈ, ಆರೋಗ್ಯ ಸಚಿವ ಯು.ಟಿ.ಖಾದರ್  ಈ ಸಂಬಂಧ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಗಮನ ಸೆಳೆದರು. ಮಾತ್ರವಲ್ಲ ಉಭಯ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನೀದಿಸಲು  ಪಶ್ಚಿಮವಾಹಿನಿ ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿದರು.

ನಿಯೋಗ ಭೇಟಿಗೆ ಒಪ್ಪಿಗೆ
ಎತ್ತಿನಹೊಳೆ ಸಾಮಾಜಿಕ ಪರಿಣಾಮದ ಅಧ್ಯಯನದ ಬಗ್ಗೆ ಸರ್ಕಾರ ಪ್ರಸ್ತಾಪ ಮಾಡುತ್ತಿದ್ದಂತೆ ಅವಕಾಶ ಸದ್ಬಳಕೆ ಮಾಡಿಕೊಂಡ ರೈ ಹಾಗೂ ಖಾದರ್ ಉಭಯ ಜಿಲ್ಲೆಗಳಲ್ಲಿ ಮನೆ ಮಾಡಿರುವ  ಆತಂಕದ ಬಗ್ಗೆ ವಿವರಣೆ ನೀಡಿದರು. ರು.700 ಕೋಟಿ ವೆಚ್ಚದ ಪಶ್ಚಿಮ ವಾಹಿನಿಗೆ ಸರ್ಕಾರ ಆರಂಭಿಕ ಹಂತದಲ್ಲಿ ಉತ್ಸುಕತೆ ತೋರಿತ್ತು. 7 ವರ್ಷ ಹಿಂದೆ ಈ ಬಗ್ಗೆ ಪ್ರಸ್ತಾಪವಾದಾಗ ರು.300  ಕೋಟಿ ಯೋಜನಾ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಲೇಬೇಕು. ಇಲ್ಲವಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ ಹೆಚ್ಚುತ್ತದೆ.

ಜತೆಗೆ ಎತ್ತಿನಹೊಳೆ ವಿಚಾರದಲ್ಲಿ ಸ್ಥಳೀಯ ಹೋರಾಟಗಾರರ ನಿಯೋಗದ ಜತೆಗೆ ಸಿಎಂ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವರು ಚರ್ಚೆ ನಡೆಸಿ ಗೊಂದಲ ಪರಿಹರಿಸಬೇಕೆಂದು  ಒತ್ತಾಯಿಸಿದರು. ಇದಕ್ಕೆ ಸಮ್ಮತಿಸಿದ ಸಿಎಂ ಮುಂದಿನ ತಿಂಗಳು ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಎತ್ತಿನಹೊಳೆ ಯೋಜನೆಯಿಂದ ನೇತ್ರಾವತಿ ನದಿ ಭಾಗದಲ್ಲಿ ಅಂತರ್ಜಲ ಪ್ರಮಾಣ ಕುಗ್ಗುತ್ತದೆ. 24 ಟಿಎಂಸಿ ನೀರು ಅಲಭ್ಯ ಎಂಬ ಮಾಹಿತಿಯೂ ಇದ್ದು,  ಯೋಜನೆಯ ಕೊನೆ ಭಾಗಕ್ಕೆ ನೀರು ಲಭಿಸದೇ ಇರಬಹುದೆಂಬ ಆತಂಕವಿದೆ. ಈ ಬಗ್ಗೆ ಸ್ಪಷ್ಟತೆ ಬೇಕು ಎಂದು ರೈ ಹಾಗೂ ಖಾದರ್ ಅಭಿಪ್ರಾಯಪಟ್ಟಿದ್ದಾರೆ ಎಂದು ಗೊತ್ತಾಗಿದೆ. ಸಂಪುಟ ಸಭೆ  ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಎತ್ತಿನಹೊಳೆ ಯೋಜನೆ ಸಾಮಾಜಿಕ ಪರಿಣಾಮದ ಬಗ್ಗೆ ಅಧ್ಯಯನ  ನಡೆಸುವುದಕ್ಕೆ ಒಪ್ಪಿಗೆ ನೀಡಲಾಗಿದೆ. ಕಂದಾಯ ಇಲಾಖೆ ಈ ಅಧ್ಯಯನ ನಡೆಸುತ್ತದೆ ಎಂದರು.

ಎತ್ತಿನಹೊಳೆ ಯೋಜನೆ ಬಗ್ಗೆ
ರಾಜ್ಯ ಸರ್ಕಾರ ಸಾಮಾಜಿಕ ಅಧ್ಯಯನ ನಡೆಸಲು ತೀರ್ಮಾನಿಸಿರುವುದು ಕಪಟ ನಾಟಕದ ಮುಂದುವರಿದ ದೃಶ್ಯ. ಇದರ ಹಿಂದೆ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ನದಿ ಉಳಿಸಿ ಹೋರಾ
ಟದ ಕಾವು ತಣಿಸುವ ಯತ್ನವೂ ಅಡಗಿದೆ.
-ಡಾ. ನಿರಂಜನ್ ರೈ
ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ ಸಂಚಾಲಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.