ಭಾರತ ಯುದ್ಧ ಸಾರಿದರೆ ನಾವು ಸುಮ್ಮನಿರಲ್ಲ: ಪಾಕ್
ಭಾರತ ಯುದ್ಧವನ್ನು ಸಾರಿದರೆ ಅದರಲ್ಲಿ ಭಾರತಕ್ಕೆ ಹೆಚ್ಚು ನಷ್ಟವಾಗುವಂತೆ ನಾವು ಮಾಡುತ್ತೇವೆ ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಗುರುವಾರ ಹೇಳಿದ್ದಾರೆ.

ಇಸ್ಲಾಮಾಬಾದ್: ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಆಗಾಗ್ಗೆ ಗುಂಡಿನ ದಾಳಿ ನಡೆಯುತ್ತಿದೆ. ಹೀಗಿರುವಾಗ ಒಂದು ವೇಳೆ ಭಾರತ ನಮ್ಮ ವಿರುದ್ಧ ಯುದ್ಧ ಸಾರಿದರೆ ನಾವು ಅದಕ್ಕೆ ಸರಿಯಾದ ಉತ್ತರ ನೀಡುತ್ತೇವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಗುರುವಾರ ಹೇಳಿದ್ದಾರೆ.
ಭಾರತ ಯುದ್ದವನ್ನು ಸಾರಿದರೆ ಅದರಲ್ಲಿ ಭಾರತಕ್ಕೆ ಹೆಚ್ಚು ನಷ್ಟವುಂಟಾಗುವಂತೆ ನಾವು ಮಾಡುತ್ತೇವೆ ಎಂದು ಆಸಿಫ್ ಗುಡುಗಿದ್ದಾರೆ.
ಅಗತ್ಯ ಬಂದರೆ ಪಾಕ್ ವಿರುದ್ಧ ಯಾವುದೇ ಕ್ಷಣದಲ್ಲಿ ಯುದ್ಧವನ್ನು ಮಾಡಲು ನಾವು ಸನ್ನದ್ಧರಾಗಿದ್ದೇವೆ ಎಂದು ಭಾರತದ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಪಾಕ್‌ನಿಂದ ಈ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೇಡಿಯೋ ಪಾಕಿಸ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಸಿಫ್, ಪಾಕಿಸ್ತಾನ ಶಾಂತಿ ಸಮಾಧಾನವನ್ನು ಬಯಸುತ್ತಿದೆ. ಆದರೆ ಆಕ್ರಮಣಾ ಪ್ರವೃತ್ತಿಗೆ ಹೇಗೆ ಉತ್ತರಿಸಬೇಕು ಎಂಬುದು ಕೂಡಾ ನಮಗೆ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.
ಭಾರತೀಯ ಸೇನಾ ಮುಖ್ಯಸ್ಥರ ಮಾತಿಗೆ ಪ್ರತಿಕ್ರಿಯೆ ನೀಡಿದ ಪಾಕ್ ಸಚಿವ, ಭಾರತವು ಪಾಕ್ ವಿರುದ್ಧ ದೀರ್ಘ ಅಥವಾ ಹೃಸ್ವ ಅವಧಿಯ ಯುದ್ಧ ಸಾರಿದರೂ ನಾವದಕ್ಕೆ ತಿರುಗೇಟು ನೀಡಲು ಸಿದ್ಧರಿದ್ದೇವೆ. ಈ ಹಿಂದಿನ ಯುದ್ಧಗಳ ಬಗ್ಗೆ ಮಾತನಾಡಿದ ಅವರು 1965ರಲ್ಲಿ ಭಾರತ ಲಾಹೋರ್‌ನ್ನು ಕಬಳಿಸಲು ಯತ್ನಿಸಿತ್ತು. ಅದಕ್ಕೆ ತಕ್ಕ ಉತ್ತರವನ್ನು ನೀಡಿದ ನಾವು ಭಾರತೀಯ ಸೇನೆಯ ಸ್ಥಿತಿಯನ್ನೇ ಬದಲಾಯಿಸಿದ್ದೆವು. ಭವಿಷ್ಯತ್ತಿನಲ್ಲಿ ಭಾರತಕ್ಕೆ ನಾವು ಇದೇ ರೀತಿಯ ಹೊಡೆತವನ್ನು ನೀಡಲಿದ್ದೇವೆ.
ನಮ್ಮ ಸೇನೆಯು ಹಲವಾರು ವರುಷಗಳಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಲೇ ಇದೆ. ನಮ್ಮ ಸೈನಿಕರಿಗೆ ಸವಾಲುಗಳನ್ನು ಹೇಗೆ ಎದುರಿಸಬೇಕೆಂಬುದು ಗೊತ್ತಿದೆ. ಏತನ್ಮಧ್ಯೆ, ನಮ್ಮ ಪ್ರಧಾನಿ ನವಾಜ್ ಶರೀಫ್ ಕೂಡಾ ಶಾಂತಿ, ಸಮಾಧಾನವನ್ನೇ ಬಯಸುತ್ತಾರೆ ಎಂದು ಆಸಿಫ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


