ಪ್ರಧಾನ ಸುದ್ದಿ

ವಿದ್ಯಾರ್ಥಿ ಸಂಘಟನೆ ನಿಷೇಧ: ನಿರ್ಧಾರ ಸಮರ್ಥಿಸಿಕೊಂಡ ಸ್ಮೃತಿ ಇರಾನಿ

ವಿದ್ಯಾರ್ಥಿ ಸಂಘಟನೆಗಳು ಪಾಲಿಸಲೇ ಬೇಕಾದ ಕೆಲ ನಿಬಂಧನೆಗಳಿದ್ದು, ಅವುಗಳನ್ನು ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆ ಪಾಲಿಸಿಲ್ಲ...

ವಿದ್ಯಾರ್ಥಿ ಸಂಘಟನೆ ನಿಷೇಧ: ನಿರ್ಧಾರ ಸಮರ್ಥಿಸಿಕೊಂಡ ಸ್ಮೃತಿ ಇರಾನಿ
ನವದೆಹಲಿಯಲ್ಲಿ ವಿದ್ಯಾರ್ಥಿ ಸಂಘಟನೆಳ ಪ್ರತಿಭಟನೆ
Published On :

ಚೆನ್ನೈ: ಮದ್ರಾಸ್ ಐಐಟಿ ಕಾಲೇಜು ವಿದ್ಯಾರ್ಥಿ ಸಂಘಟನೆ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎಎಪಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ನಿಷೇಧ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಐಐಟಿ ಸಂಸ್ಥೆಯ ಪ್ರಕಾರ ವಿದ್ಯಾರ್ಥಿ ಸಂಘಟನೆಗಳು ಪಾಲಿಸಲೇ ಬೇಕಾದ ಕೆಲ ನಿಬಂಧನೆಗಳಿದ್ದು, ಅವುಗಳನ್ನು ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆ ಪಾಲಿಸಿಲ್ಲ. ಹೀಗಾಗಿ ಸಂಸ್ಥೆಯ ಮುಖ್ಯಸ್ಥರು ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿದ್ದಾರೆ ಎಂದು ಹೇಳಿದರು. ಇನ್ನು ಇದೇ ವಿಚಾರವನ್ನು ಸಂಸ್ಥೆಯ ನಿರ್ದೇಶಕರು ಕೂಡ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದು, ಸಂಸ್ಥೆಯ ನಿಬಂಧನೆಗಳ ಪ್ರಕಾರ ಯಾವುದೇ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಾಗಲಿ ಅಥವಾ ಇನ್ನಾವುದೇ ಪರಿಸ್ಥಿತಿಗಳಿಗಾಗಲಿ ಸಂಸ್ಥೆಯ ಹೆಸರನ್ನು ಆಡಳಿತ ಮಂಡಳಿಯ ಒಪ್ಪಿಗೆ ಇಲ್ಲದೇ ಬಳಸಿಕೊಳ್ಳುವಂತಿಲ್ಲ ಎಂದು ಮದ್ರಾಸ್ ಐಐಟಿಯ ನಿರ್ದೇಶಕರಾದ ಪ್ರೊ.ರಾಮಮೂರ್ತಿ ಹೇಳಿದ್ದಾರೆ.

ಶೈಕ್ಷಣಿಕ ತಜ್ಞರು ಅಭಿಪ್ರಾಯಪಟ್ಟಂತೆ  ಮದ್ರಾಸ್ ಐಐಟಿಯಿಂದ ನಿಷೇಧಕ್ಕೆ ಒಳಗಾಗಿರುವ ಅಂಬೇಡ್ಕರ್-ಪೆರಿಯಾರ್ ವಿದ್ಯಾರ್ಥಿ ಸಂಘಟನೆ (Ambedkar-Periyar Study Circle-
APSC) ಐಐಟಿ-ಮದ್ರಾಸ್ ವಿಧಿಸಿರುವ ಮಾರ್ಗದರ್ಶನ ನಿಬಂಧನೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅತ್ತ ವಿದ್ಯಾ ಸಂಸ್ಥೆ ಮತ್ತು ಕೇಂದ್ರ ಸರ್ಕಾರ ಐಐಟಿ ಮದ್ರಾಸ್ ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದರೆ, ಇತ್ತ ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ಮತ್ತು ಕಾಂಗ್ರೆಸ್, ಎಎಪಿ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಅವರು ಮಾತನಾಡಿ ವಿದ್ಯಾರ್ಥಿ ಸಂಘಟನೆ ನಿಷೇಧದ ಹಿಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಒತ್ತಡವಿದ್ದು, ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಇದಾಗಿದೆ ಎಂದು ಹೇಳಿದ್ದಾರೆ.

ಇನ್ನು ಆಪ್ ಪಕ್ಷದ ವತಿಯಿಂದ ಮಾತನಾಡಿದ ಆಶುತೋಷ್ ಅವರು, ದಲಿತ ವಿದ್ಯಾರ್ಥಿಗಳು ಪ್ರಧಾನಮಂತ್ರಿ ಕುರಿತ ಅಭಿಪ್ರಾಯ ವ್ಯಕ್ತಪಡಿಸುವುದೂ ಮಹಾಪರಾಧವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಒಟ್ಟಾರೆ ಮದ್ರಾಸ್ ಐಐಟಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಂಘಟನೆ ನಿಷೇಧ ಪ್ರಕರಣ ಇದೀಗ ರಾಜಕೀಯ ಕೆಸರೆರಾಚಟಕ್ಕೆ ವೇದಿಕೆಯಾಗಿದ್ದು, ರಾಜಕೀಯ ಮುಖಂಡರು ಪರಸ್ಪರ ವಾಕ್ಸಮರಕ್ಕೆ ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.