ಜಯಲಲಿತಾ ಆಸ್ತಿ ಲೆಕ್ಕಾಚಾರದಲ್ಲಿ "ಹೈ" ಪ್ರಮಾದ..?
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸೋಮವಾರ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಲೋಪವಾಗಿದೆ ಎಂದು ವಿಶೇಷ...

ಬೆಂಗಳೂರು: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಸೋಮವಾರ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಲೋಪವಾಗಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ವಿ.ಆಚಾರ್ಯ ಹೇಳಿದ್ದಾರೆ.
ಜಯಲಲಿತಾ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಮತ್ತು ಡಾ.ಸುಬ್ರಮಣಿಯನ್ ಸ್ವಾಮಿ ಪರ ವಕೀಲರಾಗಿರುವ ಪವನ್‌ಚಂದ್ರ ಅವರು ತೀರ್ಪಿನಲ್ಲಿ ಮಾಡಿರುವ ಸಾಲದ ಲೆಕ್ಕಾಚಾರದಲ್ಲಿ ತಪ್ಪಾಗಿದೆ ಎಂದು ಹೇಳಿದ್ದಾರೆ.
ಜಯಲಲಿತಾ ಮತ್ತಿತರರ ಆಸ್ತಿ ಲೆಕ್ಕಾಚಾರ ಹಾಕುವಾಗ ಹೈಕೋರ್ಟ್ ಅವರ ಬ್ಯಾಂಕ್ ಸಾಲವನ್ನು ಆದಾಯ ಎಂದು ಪರಿಗಣಿಸಿತ್ತು. ಅದರಂತೆ, 24.17 ಕೋಟಿ ರೂ. ಸಾಲ ಇದೆ. ಇದನ್ನು ಮತ್ತು ಮದುವೆಗೆ ಮಾಡಿದ ಲೆಕ್ಕವಿಲ್ಲದ ಖರ್ಚನ್ನು ಕಳೆದರೆ ಜಯಲಲಿತಾ ಅವರ ಒಟ್ಟು ಆಸ್ತಿ 37.59 ಕೋಟಿ ರೂ. ಆಗುತ್ತದೆ. ಆರೋಪಿಗಳ ಒಟ್ಟು ಆದಾಯ 34.76 ಕೋಟಿ ರೂ. ಇದೆ.
ಹೀಗಾಗಿ ಅವರು ಹೊಂದಿರುವ ಆದಾಯ ಮೀರಿದ ಆಸ್ತಿ ಕೇವಲ 2.82 ಕೋಟಿ ರೂ. ಆಗಿದ್ದು, ಇದು ಆದಾಯದ ಶೇ. 8.12ರಷ್ಟಾಗುತ್ತದೆ. ಸುಪ್ರೀಂ ಕೋರ್ಟ್ ಆದೇಶದಂತೆ ಆದಾಯ ಮೀರಿದ ಆಸ್ತಿ ಶೇ. 10ರೊಳಗೆ ಇದ್ದರೆ ಆರೋಪಿಗಳು ಬಿಡುಗಡೆಗೆ ಅರ್ಹರಾಗಿರುತ್ತಾರೆ. ಇದನ್ನು ಪರಿಗಣಿಸಿ ಜಯಲಲಿತಾ ಮತ್ತಿತರರನ್ನು ಖುಲಾಸೆಗೊಳಿಸಲಾಗಿದೆ ಎಂದು ಕರ್ನಾಟಕ ಹೈ ಕೋರ್ಟ್ ತೀರ್ಪು ನೀಡಿತ್ತು.
ಆದರೆ ಈ ತೀರ್ಪಿನಲ್ಲಿ ತಪ್ಪಾಗಿ ಲೆಕ್ಕಾಚಾರ ಮಾಡಲಾಗಿದೆ ಎಂದು ಹೇಳಿರುವ ಬಿವಿ ಆಚಾರ್ಯ ಮತ್ತು ಸ್ವಾಮಿ ಪರ ವಕೀಲರ ಪವನ್‌ಚಂದ್ರ ಅವರು ಹೈಕೋರ್ಟ್ ತೀರ್ಪಿನಲ್ಲಿ ಜಯಲಲಿತಾ ಮತ್ತಿತರರು ಮಾಡಿದ ಸಾಲ ಲೆಕ್ಕ ಹಾಕುವಾಗ ತಪ್ಪಾಗಿದೆ ಎಂದು ಹೇಳಿದ್ದಾರೆ. "ತೀರ್ಪಿನಲ್ಲಿ ಆರೋಪಿಗಳು 10 ಬ್ಯಾಂಕ್‌ಗಳಲ್ಲಿ ಮಾಡಿದ ಸಾಲದ ಮೊತ್ತ 24.17 ಕೋಟಿ ರೂ. ಆಗುತ್ತದೆ ಎಂದು ಹೇಳಲಾಗಿದೆ. ಆದರೆ, ಅದೇ ತೀರ್ಪಿನಲ್ಲಿ ಇರುವ ಅಂಕಿ-ಅಂಶಗಳನ್ನು ಲೆಕ್ಕ ಹಾಕಿದರೆ ಆ ಸಾಲದ ಮೊತ್ತ ಸುಮಾರು 10.6 ಕೋಟಿಯಷ್ಟಾಗುತ್ತದೆ.
ಉಳಿದ ಸುಮಾರು 13.5 ಕೋಟಿ. ರೂ.ಗೆ ಯಾವುದೇ ಲೆಕ್ಕ ಇಲ್ಲ. ಈ ಮೊತ್ತ ಮತ್ತು ತೀರ್ಪಿನಲ್ಲಿ ಹೇಳಿರುವಂತೆ ಇರುವ ಆದಾಯ ಮೀರಿದ ಆಸ್ತಿಯನ್ನು ಲೆಕ್ಕಾಚಾರ ಹಾಕಿದಾಗ ಜಯಲಲಿತಾ ಮತ್ತಿತರರು ಹೊಂದಿರುವ ಆದಾಯ ಮೀರಿದ ಆಸ್ತಿ 16 ಕೋಟಿ ರೂ.ಗಿಂತ ಹೆಚ್ಚಾಗಿದ್ದು, ಇದು ಅವರ ಆದಾಯದ ಶೇ. 76ಕ್ಕಿಂತ ಹೆಚ್ಚಾಗುತ್ತದೆ. ಲೆಕ್ಕಾಚಾರದಲ್ಲಿ ತಪ್ಪಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಎಸ್ ಪಿಪಿ ಬಿ.ವಿ.ಆಚಾರ್ಯ ಹೇಳಿದ್ದಾರೆ.
ಮೇಲ್ಮನವಿಗೆ ಅರ್ಹ ಪ್ರಕರಣ
ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಈ ಲೆಕ್ಕಾಚಾರದಲ್ಲೇ ತಪ್ಪಾಗಿರುವುದರಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ನೀಡಿರುವ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ. ಆದರೆ, ಪ್ರಕರಣದಲ್ಲಿ ರಾಜ್ಯ ಸರ್ಕಾರ ಪ್ರತಿವಾದಿಯಾಗಿರುವುದರಿಂದ ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಮತ್ತು ತೀರ್ಪನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕ ತಮ್ಮ ಅಭಿಪ್ರಾಯವನ್ನು ಸರ್ಕಾರಕ್ಕೆ ತಿಳಿಸುವುದಾಗಿ ಬಿವಿ ಆಚಾರ್ಯ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


