"ಜಯಾ" ಹೈ ತೀರ್ಪಿನಲ್ಲಿ ದೋಷ: ದಾಖಲೆ ಪರಿಶೀಲನೆ ನಡೆಸಿದ ನ್ಯಾ. ಕುಮಾರ ಸ್ವಾಮಿ
ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಇತ್ತೀಚೆಗೆ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ವ್ಯತ್ಯಾಸವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬುಧವಾರ ನ್ಯಾ,ಸಿಆರ್ ಕುಮಾರ ಸ್ವಾಮಿ ಅವರು...

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಇತ್ತೀಚೆಗೆ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ವ್ಯತ್ಯಾಸವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬುಧವಾರ ನ್ಯಾ,ಸಿಆರ್ ಕುಮಾರ ಸ್ವಾಮಿ ಅವರು ದಾಖಲೆ ಪರಿಶೀಲನೆ ನಡೆಸಿದರು.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಮತ್ತೊಂದು ತಿರುವು ಪಡೆದಿದ್ದು, ಸರ್ಕಾರಿ ವಿಶೇಷ ಅಭಿಯೋಜಕರಾದ ಬಿವಿ ಆಚಾರ್ಯ ಅವರು ನಿನ್ನೆಯಷ್ಟೇ ಹೈಕೋರ್ಟ್ ತೀರ್ಪಿನಲ್ಲಿ ಲೋಪವಾಗಿದೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿಆರ್ ಕುಮಾರ ಸ್ವಾಮಿ ಅವರು ಕಚೇರಿಗೆ ಆಗಮಿಸಿ ದಾಖಲೆಗಳನ್ನು ಪರೀಶೀಲನೆ ನಡೆಸಿದ್ದಾರೆ.
ನಿನ್ನೆ ಹೇಳಿಕೆ ನೀಡಿದ್ದ ಸರ್ಕಾರಿ ವಿಶೇಷ ಅಭಿಯೋಕ ಬಿವಿ ಆಚಾರ್ಯ ಅವರು ಜಯಲಲಿತಾ ಅವರ ಸಾಲದ ಆದಾಯವನ್ನು ಕೂಡಿಕೆ ಮಾಡುವ ಪ್ರಕ್ರಿಯೆಯಲ್ಲಿ ಲೋಪ ಉಂಟಾಗಿದೆ. ಸಾಲದ ಮೂಲಕ ಆದಾಯವನ್ನು ನ್ಯಾಯಮೂರ್ತಿಗಳು 24 ಕೋಟಿ ಎಂದು ಪರಿಗಣಿಸಿದ್ದರು. ಆದರೆ ವಿವಿಧ ಬ್ಯಾಂಕುಗಳ ಸಾಲವನ್ನು ಕೂಡಿಕೆ ಮಾಡಿದಾಗ ಅಲ್ಲಿ ಬಂದಿದ್ದು ಕೇವಲ 10 ಕೋಟಿ ಮಾತ್ರ. ಉಳಿದ ಸುಮಾರು 13 ಕೋಟಿ 80 ಲಕ್ಷ ಹಣ ವ್ಯತ್ಯಾಸವಾಗುತ್ತಿದೆ. ಇದು ಆದಾಯ ಮೀರಿದ ಆಸ್ತಿಗಳಿಕೆ ಪ್ರಮಾಣವನ್ನು ಶೇ.76ಕ್ಕೆ ಏರಿಸುತ್ತಿದೆ ಎಂದು ಹೇಳಿದ್ದರು.
ಸುಪ್ರೀಂ ಕೋರ್ಟ್ ನ ತೀರ್ಪಿನ ಅನ್ವಯ ಶೇ.70ಕ್ಕಿಂತ ಹೆಚ್ಚು ಆದಾಯ ಮೀರಿದ ಆಸ್ತಿ ಪತ್ತೆಯಾದರೆ ಅದು ಶಿಕ್ಷಾರ್ಹ ಪ್ರಕರಣವಾಗುತ್ತದೆ. ಹೀಗಾಗಿ ಹೈಕೋರ್ಟ್ ಕಲಾಪಕ್ಕೆ ಬೇಸಿಗೆ ರಜೆ ಇದ್ದರೂ ಕೂಡ ಇಂದು ನ್ಯಾಯಮೂರ್ತಿ ಸಿಆರ್ ಕುಮಾರಸ್ವಾಮಿ ಅವರು ಕಚೇರಿಗೆ ಆಗಮಿಸಿ ತಮ್ಮ ಅಧಿಕಾರಿಗಳೊಂದಿಗೆ ಸೇರಿ ದಾಖಲೆಗಳ ಪರಿಶೀಲನೆ ನಡೆಸಿದರು. ಇನ್ನು ಮೂಲಗಳ ಪ್ರಕಾರ ದಾಖಲೆ ಪರಿಶೀಲನೆ ನಾಳೆಯೂ ಕೂಡ ನಡೆಯುತ್ತದೆ ಎಂದು ಹೇಳಲಾಗುತ್ತಿದೆ.
ಇಡೀ ದೇಶದ ಗಮನವನ್ನು ಸೆಳೆದಿದ್ದ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಕಳೆದ ಸೋಮವಾರ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕಟವಾಗಿತ್ತು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧ ಅಧೀನ ನ್ಯಾಯಾಲಯ ನೀಡಿದ್ದ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 100 ಕೋಟಿ ರುಪಾಯಿ ದಂಡ ಆದೇಶವನ್ನು ಕೂಡ ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿ, ಜಯಾ ನಿರ್ದೋಷಿ ಎಂಬ ತೀರ್ಪು ನೀಡಿತ್ತು. ಆದರೆ ತೀರ್ಪಿನ ಪ್ರತಿ ಪಡೆದು ಪರಿಶೀಲಿಸಿದ ಎಸ್ ಪಿಪಿ ಬಿವಿ ಆಚಾರ್ಯ ಅವರು ತೀರ್ಪಿನಲ್ಲಿ ಲೋಪವಿದೆ ಎಂದು ಹೇಳಿದ್ದರು.
ತೀರ್ಪಿನಲ್ಲಿ ಲೋಪ ಕಂಡಬಂದರೂ ತೀರ್ಪು ಬದಲಾವಣೆ ಇಲ್ಲ
ಇನ್ನು ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಲೆಕ್ಕಾಚಾರದ ಅಥವಾ ದಾಖಲೆಗಳ ವ್ಯತ್ಯಾಸ ಕಂಡುಬಂದರೂ ತೀರ್ಪನ್ನು ಬದಲಿಸುವ ಅಧಿಕಾರ ಹೈಕೋರ್ಟ್ ಗೆ ಇಲ್ಲ. ಸಿಆರ್ ಪಿಸಿ 362 ನಿಯಮದ ಪ್ರಕಾರ, ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಲೆಕ್ಕಾಚಾರದ, ದಾಖಲೆಗಳ ವ್ಯತ್ಯಾಸ ಕಂಡಬಂದರೆ ನ್ಯಾಯಾಲಯಕ್ಕೆ ತನ್ನ ತೀರ್ಪನ್ನು ಬದಲಿಸುವ ಅಧಿಕಾರ ಇಲ್ಲ. ಬದಲಿಗೆ ವ್ಯತ್ಯಾಸ ಕಂಡಬಂದ ಲೆಕ್ಕಾಚಾರವನ್ನು ಅಥವಾ ದಾಖಲೆಗಳನ್ನು ಸರಿಪಡಿಸಬಹುದೇ ವಿನಾಃ ತೀರ್ಪಿನ ಆದೇಶವನ್ನು ಮರು ಪರಿಶೀಲನೆ ಮಾಡುವಂತಿಲ್ಲ. ತೀರ್ಪಿನ ಮರುಪರಿಶೀಲನೆಯನ್ನು ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಮೂಲಕ ಮರುಪರಿಶೀಲನೆ ನಡೆಸಬಹುದಾಗಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


