ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ನಾಳೆ ಹೈಕೋರ್ಟ್ ತೀರ್ಪು
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ...

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರು ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಜಯಲಲಿತಾ ಪರ ವಕೀಲರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ಮುಕ್ತಾಯವಾಗಿದ್ದು, ಇದೇ ಮೇ 11ರಂದು ಹೈಕೋರ್ಟ್ ನ ವಿಶೇಷ ಪೀಠ ತೀರ್ಪು ಪ್ರಕಟಿಸಲಿದೆ. ಅಕ್ರಮ ಆಸ್ತಿಗಳಿಕೆ ಆರೋಪ ಸಾಬೀತಾದ ಕಾರಣ, ಬೆಂಗಳೂರು ವಿಶೇಷ ನ್ಯಾಯಾಲಯ ಜಯಲಲಿತಾ ಸೇರಿದಂತೆ ಅವರ ಸ್ನೇಹಿತೆ ಶಶಿಕಲಾ, ದಿನಕರನ್ ಮತ್ತು ಇಳವರಸಿ ಸೇರಿ ನಾಲ್ವರು ಆರೋಪಿಗಳಿಗೂ 4 ವರ್ಷ ಶಿಕ್ಷೆ ವಿಧಿಸಿ ಆದೇಶ ನೀಡಿತ್ತು. ಬಳಿಕ ಜೈಲು ಸೇರಿದ್ದ
ಜಯಲಲಿತಾ ಅವರು ಸೆಷನ್ಸ್ ಕೋರ್ಟ್ ನ ತೀರ್ಪು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ವಿಶೇಷ ಪೀಠ ನಾಳೆ ತೀರ್ಪು ಪ್ರಕಟಿಸಲಿದ್ದು, ನಾಳೆ ಬೆಳಗ್ಗೆ 11 ಗಂಟೆಯೊಳಗೆ ಜಯಲಲಿತಾ ಅವರ ಭವಿಷ್ಯ ನಿರ್ಧಾರವಾಗಲಿದೆ.
ಒಂದು ವೇಳೆ ಜಯಲಲಿತಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದೇ ಆದರೆ ಜಯಲಲಿತಾ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಬೇಕಾಗುತ್ತದೆ. ಸುಪ್ರೀಂ ಕೋರ್ಟ್‍ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದಾದರೂ, ಕೋರ್ಟ್ ಗೆ ಸರೆಂಡರ್ ಸರ್ಟಿಫಿಕೇಟ್ ಸಲ್ಲಿಸಬೇಕಿರುವುದರಿಂದ ಜೈಲಿಗೆ ಹೋದ ಬಳಿಕವಷ್ಟೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇನ್ನು ಅಧೀನ ನ್ಯಾಯಾಲಯದ ಪ್ರಕಟಿಸಿರುವ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದರೂ ಜಯಾಗೆ ಜಾಮೀನು ಸಿಗುವುದು ಕಷ್ಟಸಾಧ್ಯ. ಏಕೆಂದರೆ ವಿಶೇಷ ನ್ಯಾಯಾಲಯದಲ್ಲಿ ಮಾತ್ರ 3 ವರ್ಷಕ್ಕಿಂತ ಕಡಿಮೆ ಶಿಕ್ಷೆ ಪ್ರಕಟವಾದರೆ ತಕ್ಷಣ ಜಾಮೀನು ಪಡೆಯಬಹುದು. ಹೀಗಾಗಿ ಮೇಲ್ಮನವಿಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾದರೂ ಜಯಾ ಜಾಮೀನಿಗಾಗಿ ಸುಪ್ರೀಂ ಮೊರೆ ಹೋಗಲೇಬೇಕು.
ಎಸ್‍ಪಿಪಿಯಾಗಿ ನೇಮಕವಾದ ಬಿ.ವಿ. ಆಚಾರ್ಯ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಯಾ ಪ್ರಕರಣ ತಮಿಳುನಾಡಿನಿಂದ ಕರ್ನಾಟಕಕ್ಕೆ ವರ್ಗವಾದ ಬಳಿಕ ಅದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾರದ್ದೇ ಆಗಿದೆ. ಆದರೆ ಮೇಲ್ಮನವಿ ಅರ್ಜಿಯಲ್ಲಿ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಆದ್ದರಿಂದಾಗಿ ಜಯಾ ಅರ್ಜಿ ವಿಚಾರಣೆಗೆ ಯೋಗ್ಯವಾದದ್ದಲ್ಲ ಎಂದು ಪ್ರಬಲವಾದ ಲಿಖಿತ ಹೇಳಿಕೆ ಮಂಡಿಸಿದ್ದಾರೆ. ಹೀಗಾಗಿ ನಾಳೆ ಹೈಕೋರ್ಟ್ ನೀಡಲಿರುವ ತೀರ್ಪು ಏನಾಗಲಿಗೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


