ರೈತರ ಆತ್ಮಹತ್ಯೆಯಿಂದ ಪಾಠ ಕಲಿಯುವರೇ?
ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ನೊಂದ ಹಾಗೂ ಆತ್ಮಸ್ಥೈರ್ಯ ಕಳೆದುಕೊಂಡ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.

ಬೆಂಗಳೂರು: ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ನೊಂದ ಹಾಗೂ ಆತ್ಮಸ್ಥೈರ್ಯ ಕಳೆದುಕೊಂಡ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ.
ಇದನ್ನು ತಡೆಯಲಾಗದೇ ರಾಜ್ಯ ಸರ್ಕಾರ ಹೈರಾಣಾಗಿರುವುದು ಇದೇ ಮೊದಲಲ್ಲ. ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸತತ ನಾಲ್ಕು ವರ್ಷ ಕಾಡಿದ ಬರಗಾಲದಿಂದ ಕಂಗೆಟ್ಟ ಅನ್ನದಾತರು ಆತ್ಮಹತ್ಯೆಯ ದಾರಿ ತುಳಿದಿದ್ದರು. ಇದು ರಾಷ್ಟ್ರವ್ಯಾಪಿ ಸಾಕಷ್ಟು ಸುದ್ದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಸರ್ಕಾರ ರೈತರ ಆತ್ಮಹತ್ಯೆ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಡಾ. ವೀರೇಶ್ ಸಮಿತಿ ರಚಿಸಿತು. ಆದರೆ, 2010ರಲ್ಲಿ ಸಲ್ಲಿಕೆಯಾದ ಆ ಸಮಿತಿಯ ವರದಿಗಳನ್ನು ಸರ್ಕಾರ ಇದು ವರೆಗೆ ಒಪ್ಪಿಕೊಂಡಿಲ್ಲ, ನಿರಾಕರಿಸಿಯೂ ಇಲ್ಲ.
ರಾಜ್ಯದಲ್ಲಿ ಈಗ ರೈತರು ಮತ್ತೆ ಆತಂಕದಲ್ಲಿದ್ದಾರೆ. ಕಬ್ಬು ಬೆಳೆಗಾರರ ಜತೆಗೆ, ಉದ್ದು, ನವಣೆ, ಮೆಕ್ಕೆಜೋಳ, ಅಡಕೆ, ದಾಳಿಂಬೆ, ಭತ್ತ ಬೆಳೆದವರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಘಟನೆಗಳು ಸಂಪೂರ್ಣವಾಗಿ ನಿಂತಿಲ್ಲ. 2010-11ರಲ್ಲಿ 243 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, 117ರಲ್ಲಿ ಸರ್ಕಾರ ಪರಿಹಾರ ನೀಡಿದೆ. 2011-12ರಲ್ಲಿ ದಾಖಲಾದ 187 ಪ್ರಕರಣ ಪೈಕಿ 112ಕ್ಕೆ, 2013-14ರಲ್ಲಿ ದಾಖಲಾದ 130 ಪ್ರಕರಣ ಪೈಕಿ 77ಕ್ಕೆ ಹಾಗೂ 2014-15ರಲ್ಲಿ ದಾಖಲಾದ 61 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ 48ಕ್ಕೆ ಸರ್ಕಾರ ಪರಿಹಾರ ನೀಡಿದೆ. ಅಂದರೆ, ದಾಖಲಾದ ಪ್ರಕರಣಗಳ ಪೈಕಿ ಸರಾಸರಿ 50ಕ್ಕಿಂತ ಹೆಚ್ಚಿನದರಲ್ಲಿ ಸತ್ಯಾಂಶ ಅಡಗಿರುವುದನ್ನು ಸರ್ಕಾರವೇ ಪರಿಹಾರ ನೀಡುವ ಮೂಲಕ ದೃಢೀಕರಿಸಿದ್ದು, ಅನ್ನದಾತ ಸಂಕಷ್ಟದಲ್ಲಿದ್ದಾನೆ ಎಂಬುದನ್ನು ಒಪ್ಪಿಕೊಂಡಿದೆ.
ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಆತ್ಮಹತ್ಯೆ ತಡೆಯುವುದಕ್ಕಾಗಿ ವೈಜ್ಞಾನಿಕ ಅಧ್ಯಯನ ನಡೆಸಬಲ್ಲರೆ? ಜತೆಗೆ ಆ ವರದಿಯನ್ನು ಬಹಿರಂಗಪಡಿಸಬಲ್ಲರೆ? ಆತ್ಮಹತ್ಯೆ ಕಲಿಸುವ ಪಾಠ ಕಲಿತು ಶಾಶ್ವತ ಪರಿಹಾರಕ್ಕೆ ಮುಂದಾಗುವರೆ ಎಂಬ ಪ್ರಶ್ನೆ ಈಗ ರಾಜ್ಯದ ರೈತರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


