ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರ ಕಡ್ಡಾಯ: ಸಿಎಂ ಸಿದ್ದು ತಾಕೀತು
ಕನ್ನಡ ಚಿತ್ರೋಧ್ಯಮದ ಮಾರುಕಟ್ಟೆ ವಿಸ್ತರಿಸುವ ದೃಷ್ಟಿಯಿಂದ ಮಲ್ಟಿಪ್ಲೆಕ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆಧ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸೂಚನೆ ನೀಡಿದ್ದಾರೆ.

ಬೆಂಗಳೂರು: ಕನ್ನಡ ಚಿತ್ರೋಧ್ಯಮದ ಮಾರುಕಟ್ಟೆ ವಿಸ್ತರಿಸುವ ದೃಷ್ಟಿಯಿಂದ ಮಲ್ಟಿಪ್ಲೆಕ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆಧ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸೂಚನೆ ನೀಡಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಇಂದು ನಡೆದ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಕುರಿತಂತೆ ಮಲ್ಟಿಪ್ಲೆಕ್ಸ್ ಚಿತ್ರಮಂದಿಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ, ಕನ್ನಡ ಚಿತ್ರರಂಗದ ಹಿತದೃಷ್ಟಿಯಿಂದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳಿಗೇ ಹೆಚ್ಚಿನ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದು, ಅಲ್ಲದೆ ಟಿಕೆಟ್ ದರ ಕಡಿತಗೊಳಿಸುವಂತೆಯೂ ಹೇಳಿದ್ದಾರೆ.
"ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಸಂದರ್ಭ ಬಂದರೂ ಕನ್ನಡಕ್ಕೆ ಮೊದಲ ಆದ್ಯತೆ ನೀಡಲೇಬೇಕು. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಸಬೂಬು ಹೇಳದೆ ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಹೇಳಿದರು. ಅಲ್ಲದೆ ಕಳೆದ ಬಜೆಟ್‌ನಲ್ಲಿ ಘೋಷಿಸಿರುವ 300 ಜನತಾ ಚಿತ್ರಮಂದಿರಗಳ ನಿರ್ಮಾಣ ಯೋಜನೆಗೆ ಶೀಘ್ರವೇ ಚಾಲನೆ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಚಿತ್ರಮಂದಿರಗಳ ಮುಖ್ಯಸ್ಥರು ಮಾತನಾಡಿ, ತಾವು ಕೋಟ್ಯಂತರ ಬಂಡವಾಳ ಹಾಕಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ನಿರ್ಮಿಸಿದ್ದು, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರು ಅಷ್ಟಾಗಿ ಬರುವುದಿಲ್ಲ. ಸರ್ಕಾರದ ಈ ನಿರ್ಧಾರದಿಂದ ನಮಗೆ ಆರ್ಥಿಕವಾಗಿ ನಷ್ಟವಾಗಲಿದೆ ಎಂದು ಅಳಲು ತೋಡಿಕೊಂಡರು.
ಆದರೆ ಇದನ್ನು ಒಪ್ಪದ ಚಿತ್ರರಂಗದ ಗಣ್ಯರು ಕನ್ನಡ ಭಾಷೆಯ ಪೋಸ್ಟರ್‌ಗಳನ್ನು ಅಂಟಿಸಿ ಒಳಗೆ ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶನ ಮಾಡಿ ಕೋಟ್ಯಂತರ ರು. ತೆರಿಗೆ ವಿನಾಯ್ತಿಯ ಲಾಭ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು. ಅಂತಿಮವಾಗಿ ಸಭೆಯಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ ಮತ್ತು ಅದರಲ್ಲೂ ಪ್ರಮುಖ ಸಮಯ (Prime Time)ದಲ್ಲಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕು. ಟಿಕೆಟ್ ದರ ಹಾಗೂ ತಿಂಡಿ, ತಿನಿಸು, ಪಾನೀಯಗಳ ದರಗಳನ್ನು ಗಣನೀಯವಾಗಿ ಕಡಿಮೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ಅಸಹಮತ ಸೂಚಿಸಿದ ಹಿನ್ನಲೆಯಲ್ಲಿ ವಾರ್ತಾ ಸಚಿವ ರೋಷನ್ ಬೇಗ್ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


