ಲೋಕಾದಲ್ಲೀಗ ಕೈ ರಾಜಕಾರಣ
ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಹಾಗೂ ಅಲ್ಲಿನ ಬೆಳವಣಿಗೆಗಳ ಬಗ್ಗೆ ಇದುವರೆಗೂ ಮೌನವಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಈಗ ದಿಢೀರನೆ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವುದು ಅಚ್ಚರಿಯ ಬೆಳವಣಿಗೆ...

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಹಾಗೂ ಅಲ್ಲಿನ ಬೆಳವಣಿಗೆಗಳ ಬಗ್ಗೆ ಇದುವರೆಗೂ ಮೌನವಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಈಗ ದಿಢೀರನೆ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವುದು ಅಚ್ಚರಿಯ ಬೆಳವಣಿಗೆ. ಇದರೊಂದಿಗೆ ಕಾಂಗ್ರೆಸ್ ವಿಭಿನ್ನ ಹಾದಿ ತುಳಿಯಲು ಹೊರಟಿರುವುದು ಸ್ಪಷ್ಟ ಮಾತ್ರವಲ್ಲ ಲೋಕಾಯುಕ್ತ ಪ್ರಕರಣ ರಾಜಕೀಯದ ಹಾದಿ ಹಿಡಿದಿದೆ.
ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಪ್ರಕರಣಗಳು ಕೇಳಿ ಬಂದ ಹೊಸದರಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ಜಾಣತನ ಪ್ರದರ್ಶಿಸಿದ್ದ ಕಾಂಗ್ರೆಸ್ ಇಂದು `ಸಂಘಟಿತ' ವಾಗಿ ನ್ಯಾ.ಅಡಿ ವಿರುದಟಛಿ ಮುಗಿಬಿದ್ದಿದೆ. ಲೋಕಾಯುಕ್ತರ ರಾಜಿನಾಮೆ ಹಾಗೂ ಅಶ್ವಿನ್ ರಾವ್ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ನಿರಂತರವಾಗಿ ನಡೆಸಿದ ಹೋರಾಟದಿಂದ ಅಂತರ ಕಾಯ್ದುಕೊಂಡಿದ್ದ ಆಡಳಿತ ಪಕ್ಷದ ನಾಯಕರು ರಜೆ ದಿನವಾದ ಭಾನುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ನ್ಯಾ.ಅಡಿ ಅವರ ರಾಜಿ ನಾಮೆಗೆ ಆಗ್ರಹಿಸುವ ಮೂಲಕ ಇದುವರೆಗಿನ ಬಿಕ್ಕಟ್ಟಿಗೆ ಹೊಸ ತಿರುವು ಕೊಡಲು ಹೊರಟಿದ್ದಾರೋ ಅಥವಾ ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟತನದ ಬಗ್ಗೆ ವಿಶೇಷ ತನಿಖಾ ತಂಡ ಕೈಗೊಂಡಿರುವ ಹಾದಿ ತಪ್ಪಿಸುವ ತಂತ್ರವೋ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.
ಭಾಸ್ಕರರಾವ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಉಪ ಲೋಕಾಯುಕ್ತ ನ್ಯಾ.ಮಜಗೆ ಅವರು ನಿವೃತ್ತಿ ಯಾದ ದಿನ ಮಾಧ್ಯಮ ಪ್ರತಿನಿಧಿಗಳ ಜತೆ ತಮ್ಮ ಅನುಭವ ಮತ್ತು ನೋವನ್ನು ಹೇಳಿಕೊಳ್ಳುವ ಸಂದರ್ಭದಲ್ಲಿ ಮತ್ತೊಬ್ಬ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಅವರ ಬಗ್ಗೆ ವ್ಯಕ್ತಪಡಿಸಿದ ಕೆಲವೊಂದು ಅಭಿಪ್ರಾಯಗಳನ್ನೇ ಮುಂದಿಟ್ಟುಕೊಂಡಿದ್ದಾರೆ. ಈ ಅಂಶಗಳ ಮೂಲಕ ಭಾನುವಾರ ಕಾಂಗ್ರೆಸ್ ನಾಯಕರು ಪತ್ರಿಕಾಗೋಷ್ಠಿ ನಡೆಸಿ ನ್ಯಾ.ಅಡಿ ಅವರ ರಾಜಿನಾಮೆಗೆ ಆಗ್ರಹಿಸಿರುವುದು ರಾಜಕಾರಣದ ಸ್ಪಷ್ಟ ವಾಸನೆ ಬಡಿಯತೊಡಗಿದೆ.
ನ್ಯಾ. ಸುಭಾಷ್ ಅಡಿ ಅವರು ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ ಅವರ ಆತ್ಮೀಯ ಗೆಳೆಯ ಎಂಬುದು ಈಗ ಮತ್ತಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ಕಾಂಗ್ರೆಸ್ ದಾಳಿ: ವಿಧಾನ ಪರಿಷತ್ತಿನ ಸದಸ್ಯರಾದ ವಿ.ಎಸ್.ಉಗ್ರಪ್ಪ, ಎಚ್.ಎಂ. ರೇವಣ್ಣ, ಶಾಸಕ ಎ.ಮಂಜು ಹಾಗೂ ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ `ಮಾನ ಮರ್ಯಾದೆ, ಲೋಕಾ ವ್ಯವಸ್ಥೆ ಬಗ್ಗೆ ಗೌರವ, ನ್ಯಾಯಾಂಗದ ವ್ಯವಸ್ಥೆಯ ಟೆಂಪರ್‍ಮೆಂಟ್ ಇದ್ದರೆ ತಕ್ಷಣವೇ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಹೋಗಬೇಕು' ಎಂದು ಆಗ್ರಹಿಸಿದ್ದು ಮಾತ್ರವಲ್ಲ ನ್ಯಾ.ಅಡಿ ಅವರ ಮೇಲೆ ಕೆಲವೊಂದು ಗಂಭೀರ ಆರೋಪಗಳನ್ನು ಮಾಡುವ ಮೂಲಕ ಹೊಸ ವಿವಾದಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಲೋಕಾಯುಕ್ತರು ಭ್ರಷ್ಟ ವ್ಯವಸ್ಥೆಗೆ ಎಷ್ಟು ಕಾರಣರಾಗಿದ್ದರೋ ಉಪ ಲೋಕಾಯುಕ್ತ ನ್ಯಾ.ಸುಭಾಷ್ ಅಡಿ ಕೂಡ ಅಷ್ಟೇ ಕಾರಣರಾಗಿದ್ದಾರೆ. ಅವರು ಉಪ ಲೋಕಾಯುಕ್ತ ಹುದ್ದೆಯಲ್ಲಿ ಮುಂದುವರಿಯಲು ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಅವಕಾಶವಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


