ನಾರಂಗ್ ತನಿಖೆಗೆ ಹೈಕೋರ್ಟ್ ಬ್ರೇಕ್
ಲೋಕಾ ಸಂಸ್ಥೆಯೊಳಗಿನ ರು.1 ಕೋಟಿ ಲಂಚದ ಸಂಬಂಧ ಎಸ್‍ಪಿ ಸೋನಿಯಾ ನಾರಂಗ್ ತನಿಖೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ...

ಬೆಂಗಳೂರು: ಲೋಕಾ ಸಂಸ್ಥೆಯೊಳಗಿನ ರು.1 ಕೋಟಿ ಲಂಚದ ಸಂಬಂಧ ಎಸ್‍ಪಿ ಸೋನಿಯಾ ನಾರಂಗ್ ತನಿಖೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಈ ಪ್ರಕರಣದ ಬಗ್ಗೆ ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಅವರು ಎಸ್‍ಪಿ ಸೋನಿಯಾ ನಾರಂಗ್ ಅವರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಆದರೆ ಉಪಲೋಕಾಯುಕ್ತರ ಆದೇಶ ಪ್ರಶ್ನಿಸಿ ಲೋಕಾಯುಕ್ತ ನ್ಯಾ.ವೈ. ಭಾಸ್ಕರರಾವ್ ಅವರ ಪುತ್ರ ಬಿ. ಅಶ್ವಿನ್ ರಾವ್ ಹೈಕೋರ್ಟ್‍ನಲ್ಲಿ ತಕರಾರು ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ. ಎನ್.ಕುಮಾರ್ ಮತ್ತು ನ್ಯಾ. ಬಿ. ಶ್ರೀನಿವಾಸಗೌಡ ಅವರಿದ್ದ ವಿಭಾಗೀಯ ಪೀಠ, ಒಂದೇ ಪ್ರಕರಣ ಸಂಬಂಧ ಎರಡು ತನಿಖೆ ಏಕೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಸರ್ಕಾರ ನೇಮಕ ಮಾಡಿರುವ ಎಸ್‍ಐಟಿ ವರದಿ ಪೂರ್ಣಗೊಳ್ಳುವ ತನಕ ಯಾವುದೇ ಕ್ರಮ ಜರುಗಿಸಬಾರದು ಎಂದಿದೆ.
ಹೊರಗಿನ ತಂಡದ ಅವಶ್ಯ: ಲೋಕಾಯುಕ್ತ ಮತ್ತು ಉಪ ಲೋಕಾಯುಕ್ತ ಒಂದೇ ಪ್ರಕರಣದ ತನಿಖೆ ನಡೆಸುವಂತಹ ಅಧಿಕಾರ ಹೊಂದಿರುವ ಕುರಿತ ಅವಕಾಶಗಳು ನ್ಯಾಯಪೀಠಕ್ಕೆ ಕಂಡುಬರುತ್ತಿಲ್ಲ. ಲೋಕಾಯುಕ್ತ ಅಧಿಕಾರಿಗಳ ಮೇಲೆಯೇ ದೂರು ಇರುವುದರಿಂದ ಹೊರಗಿನ ಸಂಸ್ಥೆ ತನಿಖೆ ನಡೆಸುವುದು ಸೂಕ್ತ. ಅದರಂತೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ನೇಮಿಸಿದೆ. ಪ್ರಕರಣದ ಸತ್ಯಶೋಧನೆಯಲ್ಲಿ ವೈರುಧ್ಯಗಳು ಏರ್ಪಡುವುದನ್ನು ತಪ್ಪಿಸಲು ಲೋಕಾಯುಕ್ತರು ಅಥವಾ ಉಪಲೋಕಾಯುಕ್ತರು, ಪ್ರಕರಣವನ್ನು ಆಂತರಿಕ ತನಿಖೆಗೆ ವಹಿಸಬಾರದು ಎಂದು ಪೀಠ ತನ್ನ ಆದೇಶದಲ್ಲಿ ನಿರ್ದೇಶಿಸಿದೆ.
ತನಿಖೆಗೆ ಆದೇಶಿಸುವ ಅಧಿಕಾರ ಉಪಲೋಕಾಯುಕ್ತರಿಗಿಲ್ಲ: ಲೋಕಾಯುಕ್ತ ಕಾಯ್ದೆ ಸೆಕ್ಷನ್ 7(ಬಿ) ಪ್ರಕಾರ ಪ್ರಕರಣದ ತನಿಖೆ ನಡೆಸಲು ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸಿದೆ. ಒಮ್ಮೆ ತನಿಖೆಯನ್ನು ಲೋಕಾಯುಕ್ತ ಎಸ್‍ಐಟಿಗೆ ವಹಿಸಿದ ನಂತರ ಮತ್ತದೇ ಪ್ರಕರಣದ ತನಿಖೆಯನ್ನು ನಡೆಸುವಂತೆ ಉಪಲೋಕಾಯುಕ್ತ ಆದೇಶಿಸುವಂತಿಲ್ಲ ಮತ್ತು ಈ ರೀತಿ ತನಿಖೆ ನಡೆಸುವಂತೆ ಆದೇಶಿಸುವ ಅಧಿಕಾರ ಉಪಲೋಕಾಯುಕ್ತಗೆ ಇಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಅಕ್ರಮ ಅರ್ಜಿ ಇಲ್ಲ: ಅಕ್ರಮದ ಕುರಿತು ವಿಶೇಷ ತನಿಖಾ ತಂಡ ರಚಿಸಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿ ದಾಖಲಾಗಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಹರಡಿತ್ತು. ಆದರೆ, ಯಾವುದೇ ಅರ್ಜಿ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


