ನಗರದಲ್ಲಿ ಪ್ಲಾಸ್ಟಿಕ್ ನಿಷೇಧ?
ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಪ್ರಕ್ರಿಯೆಗೆ ಚಿಂತನೆ ನಡೆದಿದ್ದು, ಇದು ಅನುಷ್ಠಾನವಾದರೆ ಕಸ ವಿಂಗಡಣೆ ಸಮಸ್ಯೆ ಪರಿಹಾರವಾಗಲಿದೆ ಬಿಬಿಎಂಪಿ ವಿಶೇಷ ಆಯುಕ್ತ ಸುಬೋಧ್ ಯಾದವ್ ಹೇಳಿದ್ದಾರೆ...

ಬೆಂಗಳೂರು: ನಗರದಲ್ಲಿ ಪ್ಲಾಸ್ಟಿಕ್ ನಿಷೇಧದ ಪ್ರಕ್ರಿಯೆಗೆ ಚಿಂತನೆ ನಡೆದಿದ್ದು, ಇದು ಅನುಷ್ಠಾನವಾದರೆ ಕಸ ವಿಂಗಡಣೆ ಸಮಸ್ಯೆ ಪರಿಹಾರವಾಗಲಿದೆ ಬಿಬಿಎಂಪಿ ವಿಶೇಷ ಆಯುಕ್ತ ಸುಬೋಧ್ ಯಾದವ್ ಹೇಳಿದ್ದಾರೆ.
ಒಣಕಸದಲ್ಲಿ ಪ್ಲಾಸ್ಟಿಕ್ ಇರಲೇಬಾರದು ಎಂಬ ಕಟ್ಟುನಿಟ್ಟಿನ ನಿರ್ಧಾರದಿಂದ ಸಮಸ್ಯೆಯುಂಟಾಗಿದೆ. ರಸ್ತೆಬದಿಗಳಲ್ಲಿ ಈಗ ಕಂಡುಬಂದಿರುವ ಕಸ ಪೂರ್ಣವಾಗಿ ಪ್ಲಾಸ್ಟಿಕ್‍ನಿಂದಲೇ ಕೂಡಿದೆ. 2003ರಿಂದಲೇ ಕಸ ವಿಂಗಡಣೆ ಬಗ್ಗೆ ಚರ್ಚೆಯಾಗಿತ್ತು. ಆದರೆ ಕಟ್ಟುನಿಟ್ಟಿನ ಅನುಷ್ಠಾನವಾಗಿರಲಿಲ್ಲ. ಹೊಸ ಬದಲಾವಣೆಯಿಂದ ಕೆಲವು ದಿನಗಳ ಸಮಸ್ಯೆ ಇದ್ದೇ ಇರುತ್ತದೆ. ಸ್ವಲ್ಪ ಸಮಯ ಕಳೆದ ಬಳಿಕ ಎಲ್ಲ ಸಮಸ್ಯೆ ಪರಿಹಾರವಾಗಲಿದೆ ಎಂದು ಸುದ್ದಿಗಾರರಿಗೆ ಹೇಳಿದರು.
ಕಸ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಂತದಲ್ಲಿ ರಸ್ತೆಬದಿಯಲ್ಲಿ ಒಣ ಕಸ ಅಲ್ಲಲ್ಲಿ ಬಿದ್ದಿರುತ್ತದೆ. ಒಣತ್ಯಾಜ್ಯ ಹಾಗೂ ಹಸಿತ್ಯಾಜ್ಯ ಎಂದು ವಿಂಗಡಿಸುವ ಪ್ರಕ್ರಿಯೆಯನ್ನು ಈಗ ವೇಗಗೊಳಿಸಲಾಗಿದೆ. ರಸ್ತೆಬದಿಯಲ್ಲಿ ಕಸ ಬಿದ್ದಿರುವುದು ನಿಜವಾದರೂ ಹಸಿತ್ಯಾಜ್ಯ ಎಲ್ಲೂ ಕಂಡುಬಂದಿಲ್ಲ. ಒಣತ್ಯಾಜ್ಯವನ್ನು ಪ್ಲಾಸ್ಟಿಕ್ ರಹಿತ ಮಾಡುವ ಹಂತದಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದರು.
ನಗರದಲ್ಲಿ 13 ಬಯೋಮಿಥನೈಜೇಶನ್ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಘಟಕಗಳಲ್ಲಿ ಬಿಲ್ ಪಾವತಿಯ ಸಮಸ್ಯೆ ಎದುರಾಗಿದೆ. ಇದನ್ನು ಮಾತುಕತೆ ಮೂಲಕ ಪರಿಹರಿಸಲಾಗುತ್ತಿದೆ ಎಂದರು. ಹೈಟೆಕ್ ನಿಯಂತ್ರಣ ಕೊಠಡಿ: ಹೊಸ ಹೈಟೆಕ್ ನಿಯಂತ್ರಣ ಕೊಠಡಿ ಮೂಲಕ ವಾರ್ಡ್ ಗಳಲ್ಲಿ ಕಸ ವಿಲೇವಾರಿ ಪ್ರಕ್ರಿಯೆ ಸೂಕ್ತವಾಗಿ ನಡೆಯಲಿದೆ. ಪ್ರತಿ ವಾರ್ಡ್‍ನ ರಸ್ತೆ, ಮನೆ, ಉದ್ಯಾನ, ಸ್ಮಶಾನ, ಪಾದಚಾರಿ ಮಾರ್ಗ, ವ್ಯಾಪ್ತಿ ಸೇರಿದಂತೆ ಎಲ್ಲ ಮಾಹಿತಿಗಳನ್ನು ದಾಖಲಿಸಿ ಇದಕ್ಕೆ ತಕ್ಕಂತೆ ಕಸದ ಆಟೋ, ಟಿಪ್ಪರ್ ಹಾಗೂ ಪೌರಕಾರ್ಮಿಕರನ್ನು ನಿಗದಿ ಮಾಡಲಾಗುವುದು ಸುಬೋಧ್ ಹೇಳಿದರು.
ಹೊಸ ಟೆಂಡರ್‍ನಂತೆ ಗುತ್ತಿಗೆದಾರರು ಕಸದ ವಾಹನಗಳ ಮೇಲೆ ಶೇ.80 ರಷ್ಟು ಮಾಲೀಕತ್ವ ಹೊಂದಿರಬೇಕು. 5 ವಾರ್ಡ್ ಮೀರಿ ವಾಹನಗಳನ್ನು ಕೊಂಡೊಯ್ಯಬಾರದು. ನಗರದಲ್ಲಿ 8,000ಕ್ಕೂ ಅಧಿಕ ಕಸದ ವಾಹನಗಳಿದ್ದು, ಎಲ್ಲದಕ್ಕೂ ಜಿಪಿಎಸ್ ಅಳವಡಿಸಿ ಹೈಟೆಕ್ ನಿಯಂತ್ರಣ ಕೊಠಡಿಯಿಂದ ಟ್ರ್ಯಾಕ್ ಮಾಡಲಾಗುತ್ತದೆ. ಗುತ್ತಿಗೆ ದಾರರು ಬೇಜವಾಬ್ದಾರಿ ತೋರಿದರೆ ಅಥವಾ ಸಾರ್ವಜನಿಕರಿಂದ ದೂರು ಬಂದರೆ ಪರಿಶೀಲಿಸಿ ಕೂಡಲೇ ದಂಡ ವಿಧಿಸಲಾಗುವುದು. ಕಸದ ವಾಹನ ಆಯಾ ವಾರ್ಡ್‍ಗೆ ಹೋಗಲು ಸಾಧ್ಯವಾಗದಿದ್ದರೆ, ಕೂಡಲೇ ನಿಯಂತ್ರಣ ಕೊಠಡಿ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು. ಕಸ ವಿಲೇವಾರಿ ಹಾಗೂ ವಿಂಗಡಣೆ ವಿಚಾರದಲ್ಲಿ ಎಲ್ಲವನ್ನೂ ನಿಯಂತ್ರಣ ಕೊಠಡಿ ಮೂಲಕ ನಿಯಂತ್ರಿಸಲಾಗುವುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


