ಕಳಸಾ ಬಂಡೂರಿ ಯೋಜನೆ: ಕಾಂಗ್ರೆಸ್ ಮೊದಲು ಮಾತಾಡಲಿ: ಜೋಶಿ
ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಎಂದಿದ್ದರು....

ಹುಬ್ಬಳ್ಳಿ: ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಹನಿ ನೀರು ಕರ್ನಾಟಕಕ್ಕೆ ಬಿಡುವುದಿಲ್ಲ ಎಂದಿದ್ದರು. 2007ರಲ್ಲಿ ಮಡಗಾಂವ್‍ನಲ್ಲಿ ಮಾತನಾಡುವ ವೇಳೆ ಅವರು ವಿಚಾರ ಪ್ರಸ್ತಾಪಿಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಆರೋಪಿಸಿದ್ದರು.
ಈ ಬಗ್ಗೆ ಕಾಂಗ್ರೆಸ್ ಮೊದಲು ಮಾತನಾಡಲಿ. ಇಲ್ಲವಾದಲ್ಲಿ ಅಂದು ಕಾಂಗ್ರೆಸ್ ಅಧ್ಯಕ್ಷೆ ಮಾತನಾಡಿರುವುದನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಸವಾಲು ಹಾಕಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಮಹದಾಯಿ ವ್ಯಾಜ್ಯ ನ್ಯಾಯಾಧಿಕರಣದಲ್ಲಿರಲು ಕಾಂಗ್ರೆಸ್ ಕಾರಣ. ಹಿಂದೆ ಯುಪಿಎ ಸರ್ಕಾರ ಈ ವಿಷಯವಾಗಿ ರಾಜಿಸಂಧಾನ ಸಾಧ್ಯವಿಲ್ಲವೆಂದು ಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿತ್ತು ಎಂದಿದ್ದಾರೆ.
ಈ ಭಾಗದಲ್ಲಿ ಮೂಲೆಗುಂಪಾದ ಕಾಂಗ್ರೆಸ್ ಹಾಗೂ ಜೆಡಿಎಸ್, ಬಿಜೆಪಿ ವಿರುದ್ಧ ಜನರನ್ನು ಎತ್ತಿ ಕಟ್ಟಲು ಇಂತಹ ಆರೋಪ ಮಾಡುತ್ತಿದೆ. ಬಿಜೆಪಿ ಮುಖಂಡರ ಮನೆ ಮುಂದೆ ಧರಣಿ ಮಾಡಿ ಅವಹೇಳನಕಾರಿ ಮಾತುಗಳನ್ನಾಡಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು. ಗೋವಾ ಬಸ್ ಸುಟ್ಟಿದ್ದು ಕೂಡ ಇವರೇ ಎಂದು ಆರೋಪಿಸಿದ ಅವರು, ಮಹದಾಯಿ ಕೂಗು ನಮ್ಮ ಜನರದ್ದು, ಹೀಗಾಗಿ ಬಿಜೆಪಿ ಮಹದಾಯಿ ನೀರು ಮಲಪ್ರಭೆ ಸೇರುವವರೆಗೂ ಬಿಜೆಪಿ ಹೋರಾಟ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.
ಕತ್ತಲಲ್ಲಿ ಕರಿ ಬೆಕ್ಕು ಹುಡುಕುತ್ತಿದೆ: ಎಚ್ಕೆ
ಗದಗ: ಮಹದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಕತ್ತಲಲ್ಲಿ ಕರಿ ಬೆಕ್ಕು ಹುಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಲೇವಡಿ ಮಾಡಿದರು.
ಶುಕ್ರವಾರ ಮಾತನಾಡಿದ ಅವರು, ``ಆ. 24 ರಂದು ಪ್ರಧಾನಿ ಬಳಿ ಸರ್ವ ಪಕ್ಷ ನಿಯೋಗ ತೆರಳಿ ಮಾತುಕತೆ ನಡೆಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದಾಯಿ ವಿಚಾರವಾಗಿ ಪ್ರಧಾನಿ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದರು. ಆದರೆ ಪ್ರಹ್ಲಾದ ಜೋಶಿ, ಅನಂತಕುಮಾರ, ವೆಂಕಯ್ಯ ನಾಯ್ಡು, ಪ್ರಧಾನಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನುತ್ತಿದ್ದಾರೆ. ನಿಂಯೋಗದಲ್ಲಿ 52 ಜನ ಇದ್ದರು. ಎಲ್ಲರಿಗೂ ಹಿಂದಿ, ಇಂಗ್ಲಿಷ್ ಅರ್ಥವಾಗುತ್ತದೆ ಎಂಬುದನ್ನು ಬಿಜೆಪಿ ನಾಯಕರು ಅರಿತಿರಲಿ ಎಂದರು. ಅಂದಿನ ಸಭೆಯಲ್ಲಿ ಏನು ಚರ್ಚೆಯಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ.''
ನಿಂಯೋಗದಲ್ಲಿ ಕಾಂಗ್ರೆಸ್ ಪ್ರತಿನಿಧಿಗಳು ಮಾತ್ರವಲ್ಲ, ಎಲ್ಲ ಪಕ್ಷದ ಪ್ರಮುಖರೂ ಇದ್ದರು ಎಂಬುದನ್ನು ಮರೆಯಬೇಡಿ. ಎಲ್ಲ ವಿಷಯದಲ್ಲೂ ರಾಜಕೀಯ ಮಾಡುವುದು ಸರಿಯಲ್ಲ, ಪ್ರಧಾನಮಂತ್ರಿ ಸ್ಪಂದಿಸಿದ್ದಾರೆ ಎನ್ನುವುದಾದರೆ ತಕ್ಷಣವೇ 3 ರಾಜ್ಯಗಳ ಸಭೆ ಕರೆದು ಈ ಹಿಂದೆ ಇಂದಿರಾಗಾಂಧಿ ಕುಡಿವ ನೀರಿಗಾಗಿ ತೆಗೆದುಕೊಂಡ ರೀತಿಯ ದಿಟ್ಟ ನಿಲುವು ಏಕೆ ತೆಗೆದುಕೊಳ್ಳುತ್ತಿಲ್ಲ ಎಂದುಪ್ರಶ್ನಿಸಿದರು. ಮಹದಾಯಿ ನದಿಯಲ್ಲಿನ 200 ಟಿಎಂಸಿ ನೀರು ಅನ್ಯಾಯವಾಗಿ ಸಮುದ್ರ ಸೇರುತ್ತಿದೆ. ಈ ವಿಷಯದಲ್ಲಿ ಪ್ರಧಾನಮಂತ್ರಿ ಮುತ್ಸದ್ದಿತನ ತೋರಬೇಕು. ಅಷ್ಟೊಂದು ಪ್ರಮಾಣದ ನೀರು ರಾಷ್ಟ್ರದ ಸೊತ್ತಾಗಿದೆ. ರೈತರ ಸಮಸ್ಯೆಯನ್ನು ರಾಜಕೀಯ ದೃಷ್ಟಿ ಯಿಂದ ನೋಡಬೇಡಿ. ಈ ಹಿಂದೆ ಯೋಜನೆಗೆ ಕೇಂದ್ರದ ಅನುಮತಿ ಸೇರಿದಂತೆ ಹಲವಾರು ಮಹತ್ವದ ಅನುಮತಿಗಳನ್ನು ಪಡೆದಿದ್ದು ಕಾಂಗ್ರೆಸ್ ಸರ್ಕಾರವೇ. ಆದರೆ ಆನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನೀವು ಮಾಡಿದ್ದಾದರೂ ಏನು ಎಂದು ಟೀಕಿಸಿದರು.
ಇನ್ನೊಂದು ತಿಂಗಳಲ್ಲಿ ಪ್ರಧಾನಿಯವರು ಕಳಸಾ ಬಂಡೂರಿ ಸಮಸ್ಯೆಯನ್ನುಬಗೆಹರಿಸದಿದ್ದರೆ ನಾವೇ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜತೆ ಸಂಧಾನದ ಮಾತುಕತೆ ನಡೆಸುವ ಕುರಿತು ಚಿಂತನೆ ನಡೆಸಿದ್ದೇವೆ.
-ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ
ಪ್ರಧಾನಿ ಸ್ಪಂದನೆ
ಪ್ರಧಾನಿ ನರೇಂದ್ರ ಮೋದಿ ಮಹದಾಯಿ, ಕಳಸಾ ಬಂಡೂರಿ ನಾಲಾ ಜೋಡಣೆ ಕುರಿತು ಸಕಾರಾತ್ಮಕವಾಗಿ ಎಂದರು ಜೋಶಿ. ಕಾಂಗ್ರೆಸ್ ಹಾಗೂ ಜೆಡಿಎಸ್ ಅದನ್ನು ತಿರುಚಿ ಹೋರಾಟಗಾರರ ದಿಕ್ಕು ತಪ್ಪಿಸುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಆರೋಪಿಸಿದರು. ಈ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ, ಮಹಾರಾಷ್ಟ್ರ, ಗೋವಾದಲ್ಲಿ ಪ್ರತಿಪಕ್ಷದಲ್ಲಿರುವ ಕಾಂಗ್ರೆಸ್ ಶಾಸಕರೊಂದಿಗೆ ಮಾತುಕತೆ ನಡೆಸಿ ಮೊದಲು ಈ ವಿಷಯವಾಗಿ ಅವರನ್ನು ಒಪ್ಪಿಸಿ ಆ ನಂತರ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಮ್ಮತದ ನಿರ್ಧಾರಕ್ಕೆ ಬನ್ನಿ. ನಾನು ಮತ್ತೊಮ್ಮೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಈ ಕುರಿತು ಮಾತುಕತೆ ನಡೆಸುತ್ತೇನೆ. ಇದು ಜನರ ಭಾವನೆಗೆ ಸ್ಪಂದಿಸಿದ ವಿಚಾರವಾದ್ದರಿಂದ ಸೂಕ್ತ ನಿರ್ಧಾರಕ್ಕೆ ಬನ್ನಿ. ನಾನು ನಿಮ್ಮ ಬೆನ್ನಿಗಿರುತ್ತೇನೆಂಬ ಮಾತುಗಳನ್ನಾಡಿದ್ದಾರೆ ಎಂದು ಹೇಳಿದರು.
ಹೆಗಲ ಮೇಲೆ ಹಸಿರು ಟಾವೆಲ್ ಹೊದ್ದವರೆಲ್ಲ ರೈತರಲ್ಲ. ನಿಜವಾದ ರೈತರ್ಯಾರೂ ಗೂಂಡಾ ವರ್ತನೆ ಮಾಡುವುದಿಲ್ಲ. ನನ್ನ ಮತ್ತು ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮನೆಗಳ ಮುಂದೆ ಗಲಾಟೆ ಮಾಡಿದವರು ರೈತರೇ ಅಲ್ಲ, ಅವರೆಲ್ಲ ಸಮಾಜ ಘಾತುಕ ಶಕ್ತಿಗಳು.
-ಪ್ರಹ್ಲಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


