ಬೇಸಿಗೆ ಆಗಿದೆ ಜೋರು, ಕೊರತೆ ಆಗಲ್ಲ ನೀರು
ನೀರಾವರಿಗೆಂದೇ ಮೀಸಲಾಗಿರುವ ಭದ್ರಾ ಜಲಾಶಯ ಹಾಗೂ ವಿದ್ಯುತ್... ಉತ್ಪಾದನೆಗಾಗಿಯೇ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಈ ವರ್ಷ ಹೆಚ್ಚೇನು ಸಮಸ್ಯೆ ಇಲ್ಲ....

ನೀರು, ವಿದ್ಯುತ್ ಎರಡೂ ಧಾರಾಳ
ಶಿವಮೊಗ್ಗ: ನೀರಾವರಿಗೆಂದೇ ಮೀಸಲಾಗಿರುವ ಭದ್ರಾ ಜಲಾಶಯ ಹಾಗೂ ವಿದ್ಯುತ್... ಉತ್ಪಾದನೆಗಾಗಿಯೇ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಈ ವರ್ಷ ಹೆಚ್ಚೇನು ಸಮಸ್ಯೆ ಇಲ್ಲ. ಕಳೆದ ವರ್ಷ ಆಗಿರುವ ಉತ್ತಮ ಮಳೆ ಜಿಲ್ಲೆಯನ್ನು ಬಚಾವ್ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಭದ್ರಾ ಜಲಾಶಯದಲ್ಲಿ ಈ ವರ್ಷ ಪರಿಸ್ಥಿತಿ ಉತ್ತಮವಾಗಿದೆ. ಜಲಾಶಯದ ಗರಿಷ್ಠ ಮಟ್ಟ 185 ಅಡಿ. ಕಳೆದ ವರ್ಷ ಇದೇ ದಿನ, ಅಂದರೆ ಬುಧವಾರ 34.5 ಟಿಎಂಸಿ (ಮಟ್ಟ 150 ಅಡಿ) ನೀರು ಇತ್ತು. ಆದರೆ, ಈ ವರ್ಷ 39.90 ಟಿಎಂಸಿ (156.7 ಅಡಿ) ನೀರು ಇದೆ. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾ ಣಿಕಾರದ ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಇನ್ನೂ ಒಂದು ತಿಂಗಳು ಭದ್ರಾಜಲಾಶಯದ ನಾಲೆಗಳಲ್ಲಿ ನೀರು ಹರಿಸಬೇಕು. ಇಷ್ಟು ದಿನ ನೀರು ಹರಿಸಲು ಯಾವುದೇ ಸಮಸ್ಯೆ ಇಲ್ಲ.
ವಿದ್ಯುತ್ ಉತ್ಪಾದನೆಗೆಂದೇ ನಿರ್ಮಿಸಿರುವ ಲಿಂಗನಮಕ್ಕಿ ಜಲಾಶಯದಲ್ಲಿಯೂ ಈ ವರ್ಷ ಪರಿಸ್ಥಿತಿಯು ಜನರಿಗೆ ಮಂಕುಬೂದಿ ಎರಚಿ ವಿದ್ಯುತ್ ಕಡಿತ ಘೋಷಣೆ ಮಾಡುವಷ್ಟೇನೂ ಇಲ್ಲ. ಈ ಬಿರುಬೇಸಿಗೆಯಲ್ಲಿಯೂ ಗರಿಷ್ಠ 1819 ಅಡಿ ನೀರು ಸಂಗ್ರಹ ಸಾಮರ್ಥ್ಯದ ಈ ಜಲಾಶಯದಲ್ಲಿ ಬುಧವಾರ 1,775.23 ಅಡಿ ನೀರು ಇದೆ. ಅಂದರೆ ಇದು ನೀರಿನ ಒಟ್ಟು ಸಂಗ್ರಹ ದ ಶೇಕಡಾ 39.95ರಷ್ಟು. ಕಳೆದ ವರ್ಷ ಇದೇ ದಿನ 1,772.55 ಅಡಿ ನೀರು ಇತ್ತು. ಲಿಂಗನಮಕ್ಕಿ ಮಡಿಲಿನಲ್ಲಿರುವ ವಿದ್ಯುದಾಗಾರದಲ್ಲಿ ಅತಿ ಹೆಚ್ಚು ಸಾಮರ್ಥ್ಯ ಹೊಂದಿರುವುದು ಶರಾವತಿ ವಿದ್ಯುದಾಗಾರ. ಇಲ್ಲಿ 103.5 ಮೆವ್ಯಾ ಸಾಮರ್ಥ್ಯದ 10 ಸ್ಥಾವರಗಳು ಇಲ್ಲಿವೆ. ಒಟ್ಟು ಉತ್ಪಾದನೆ 1,035 ಮೆವ್ಯಾ.
ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹ 1,715 ಅಡಿಯಷ್ಟು ಇಳಿಯುವವರೆಗೂ ಇಲ್ಲಿ ವಿದ್ಯುತ್ ಉತ್ಪಾ ದನೆ ಮಾಡಬಹುದು. 55 ಮೆವ್ಯಾ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಲಿಂಗನಮಕ್ಕಿ ವಿದ್ಯುದಾಗಾರದಲ್ಲಿಯೂ ನೀರಿನ ಮಟ್ಟ 1,742 ಅಡಿ ಮಟ್ಟಕ್ಕೆ ಇಳಿಯುವವರೆಗೂ ವಿದ್ಯುತ್ ಉತ್ಪಾ ದನೆ ನಿರಾಂತಕವಾಗಿ ನಡೆಯುತ್ತ ದೆ.
ಮಾರ್ಕೋನಹಳ್ಳಿ ಡ್ಯಾಂ ತುಂಬಿದೆ
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕು ಅಮೃತೂರು ಬಳಿಯ ಮಾರ್ಕೋನಹಳ್ಳಿಯಲ್ಲಿ ನೀರಾವರಿ ಉದ್ದೇಶದ ಹಿನ್ನೆಲೆಯಲ್ಲಿ ಶಿಂಷಾ ನದಿಗೆ ಜಲಾಶಯ ನಿರ್ಮಿಸಲಾಗಿದೆ. ಒಟ್ಟು 22.25 ಮೀಟರ್ ಎತ್ತರ, 1609 ಮೀಟರ್ ಉದ್ದದ 1336 ಎಕರೆ ವಿಸ್ತೀರ್ಣದ ಈ ಜಲಾಶಯ 2.42 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಾಲಿ 2.30 ಟಿಎಂಸಿ ನೀರಿದೆ. 150 ಎಂಸಿ ಎಫ್ ಟಿ ಡೆಡ್ ಸ್ಟೋರೇಜ್ ಇದೆ. ಕೃಷಿ ಉದ್ದೇಶದ ಈ ಡ್ಯಾಂ ವ್ಯಾಪ್ತಿಗೆ ಸುಮಾರು 14 ಹಳ್ಳಿಗಳು ಸೇರುತ್ತವೆ. ಮಂಡ್ಯದ ನಾಗಮಂಗಲ ತಾಲೂಕಿನ 4 ರಿಂ ದ 5 ಹಳ್ಳಿಗಳಿಗೂ ಹಿನ್ನೀರು ಆವರಿಸಿದೆ. ಹಾಲಿ ಹೇಮಾವತಿ ನೀರೇ ಈ ಮಾರ್ಕೋನಹಳ್ಳಿ ಜಲಾಶಯಕ್ಕೆ ಮೂಲಾ ಧಾರವಾಗಿದೆ. ಕುಡಿಯುವ ನೀರು ಪೂರೈಕೆಗೆ ಅ ಣಿಕ ಬೇಡಿಕೆಯಿದ್ದು, ಅದನ್ನು ಒದಗಿಸಲು ಅಗತ್ಯ ಕಾಮಗಾರಿಗಳಿಗಿನ್ನೂ ಅನುಷ್ಠಾನವಾಗಿಲ್ಲ. ಚಿಕ್ಕನಾಯಕನಹಳ್ಳಿಯ ಹುಳಿಯಾರು ಸಮೀಪ ದ ಬೋರನಕಣಿವೆಯಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕೃಷಿ ಉದ್ದೇಶದ ಹಿನ್ನೆಲೆಯಲ್ಲಿ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯ 2,423 ಎಂಸಿಎಫ್.ಟಿ ನೀರು ಸಂಗ್ರಹ ಸಾಮರ್ಥ್ಯಹೊಂದಿದ್ದು, 675 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. 20 ಕಿ.ಮೀ. ಕಾಲುವೆಯಿದೆ. ಹಾಲಿ 5 ಅಡಿ ಡೆಡ್ ಸ್ಟೋರೇಜ್ ನೀರಿದ್ದು, ಹುಳಿಯಾರಿಗೆ ಕುಡಿಯಲು ಮಾತ್ರ ಬಳಕೆಯಾಗುತ್ತಿ ದೆ.
ಬೆಂಗಳೂರಿಗೆ ತೊಂದರೆ ಇಲ್ಲ
ಮಂಡ್ಯ: ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಕೃಷ್ಣರಾಜಸಾಗರ ಜಲಾಶಯ (ಕೆಆರ್‍ಎಸ್)ದ ನೀರಿನ ಮಟ್ಟ ಕ್ಷೀಣಿಸುತ್ತಿದ್ದರೂ 2 ತಿಂಗಳ ಕಾಲ (ಏಪ್ರಿಲ್, ಮೇ) ಕುಡಿಯುವ ನೀರು ಮತ್ತು ಬೆಳೆದುನಿಂತ ಬೆಳೆಗಳಿಗೆ ನೀರಿನ ಅಭಾವದ ಸ್ಥಿತಿ ತಲೆದೋರುವುದಿಲ್ಲ ಎಂಬ ಆಶಾಭಾವ ವ್ಯಕ್ತವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಜಲಾಶಯದಲ್ಲಿ ಈ ವರ್ಷವೂ ಅದೇ ಪ್ರಮಾಣದ ನೀರು ಸಂಗ್ರಹವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಇತರ ಪಟ್ಟಣಗಳಿಗೂ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಮತ್ತು ಬೆಳೆದುನಿಂತ ಬೆಳೆಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನೀರಾವರಿ ಇಲಾಖೆ ಅಧಿಕಾರಿಗಳು ನೀರು ನಿರ್ವಹಣೆಯ ಬಗ್ಗೆ ಹೆಚ್ಚುನಿಗಾ ವಹಿಸಿದ್ದಾರೆ. ಕೆಆರ್‍ಎಸ್ ಗರಿಷ್ಠ ಮಟ್ಟ 124.80ಅಡಿ. ಈ ದಿನ (ಏ.8) 95.79 ಅಡಿ ನೀರಿದೆ. ಒಳ ಹರಿವು 212 ಕ್ಯುಸೆಕ್, ಹೊರ ಹರಿವು 462 ಕ್ಯುಸೆಕ್ ಇದೆ.
ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 19.68 ಟಿಎಂಸಿ ನೀರು. 11.03 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಎರಡು ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಸೇರಿದಂತೆ ಚನ್ನಪಟ್ಟಣ, ರಾಮನಗರ ಪಟ್ಟಣಗಳು ಹಾಗೂ ನೂರಾರು ಹಳ್ಳಿಗಳಿಗೆ ಕುಡಿಯುವ ನೀರನ್ನು ಯಾವುದೇ ತೊಂದರೆ ಇಲ್ಲದೇ ಪೂರೈಕೆ ಮಾಡಲು ಯೋಜನೆ ರೂಪಿಸಲಾಗಿದೆ.
ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ನೀಗಲು ಈ ಬಾರಿ ಯಾವುದೇ ತೊಂದರೆ ಇಲ್ಲ. ಕಬಿನಿ ಮತ್ತು ಕೆ.ಆರ್.ಎಸ್‍ನಲ್ಲಿ ತೃಪ್ತಿದಾಯಕವಾದ ನೀರು ಸಂಗ್ರಹಣೆಯಾಗಿರುವುದರಿಂದ ಪ್ರತಿನಿತ್ಯ ಕನಿಷ್ಠ 600 ಕ್ಯುಸೆಕ್ ನೀರನ್ನು ಬೆಂಗಳೂರಿಗೆ ನೀಡಬಹುದಾಗಿದೆ.
ಜಾನುವಾರುಗಳಿಗೆ ಸಂಕಷ್ಟ
ಕಲಬುರಗಿ: ಹೈದರಾಬಾದ್ ಕರ್ನಾಟಕ ಯಾದಗಿರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಜಲಾಶಯಗಳನ್ನು (ಕಾರಂಜಾ ಹೊರತಾಗಿ) ಅವಲಂಬಿಸಿಯೇ ಇಲ್ಲ. ಅಲ್ಲಿನ ಅಣೆಕಟ್ಟೆಗಳ ಪ್ರಮುಖ ಉದ್ದೇಶವೇ ಕೃಷಿ ನೀರಾವರಿ. ಯಾದಗಿರಿ ಜಿಲ್ಲೆಯ ಬಸವಸಾಗರ (ನಾರಾಯಣಪುರ) ಜಲಾಶಯದಲ್ಲಿ 15 ಟಿಎಂಸಿ ನೀರು ಸಂಗ್ರಹವಿದ್ದು, ಅದರಲ್ಲಿ ಡೆಡ್‍ಸ್ಟೋರೇಜ್ 13 ಟಿಎಂಸಿ. ಹೀಗಾಗಿ ಬಳಕೆಗೆ ಲಭ್ಯವಿರುವುದು 2 ಟಿಎಂಸಿ. 0. 3522 ಟಿಎಂಸಿ ಸಂಗ್ರಹ ಸಾಮರ್ಥ್ಯದ ಹತ್ತಿಕುಣಿ ಜಲಾಶಯದಲ್ಲಿಯೂ 0. 0685 ಟಿಎಂಸಿ ನೀರು ಇದೆ.
ಹೀಗಾಗಿ ಹತ್ತಿಕುಣಿ ಜಲಾಶಯ ಸಂಪೂರ್ಣ ಖಾಲಿ ಎಂದೇ ಹೇಳಬೇಕು. ಇನ್ನು ಬೀದರ್ ಜಿಲ್ಲೆಯ 13 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾರಂಜಾ ಜಲಾಶಯದಲ್ಲಿ 1.36 ಟಿಎಂಸಿ ನೀರು ಇದೆ. ಇದರಿಂದಾಗಿ ಈ ಗ್ರಾಮಗಳಲ್ಲಿ ನೀರಿನ ತೊಂದರೆ ಇಲ್ಲ.
ಇನ್ನು ಕಲಬುರಗಿ ಜಿಲ್ಲೆಯ ಬೆಣ್ಣೆತೊರಾ, ಗಂಡೋರಿ, ಭೀಮಾ ಏತ ನೀರಾವರಿ ಯೋಜನೆ, ಮುಲ್ಲಾಮಾರಿ, ಅಮರ್ಜಾ ಜಲಾಶಯಗಳು ಸಂಪೂರ್ಣ ಬರಿದಾಗಿವೆ. ಈ ಎಲ್ಲ ಜಲಾಶಯಗಳಲ್ಲಿ ಡೆಡ್ ಸ್ಟೋರೇಜ್‍ಗಿಂತ ಕೆಳಗೆ ನೀರಿನ ಮಟ್ಟ ಕುಸಿದಿದೆ. ಇಲ್ಲೆಲ್ಲ ಮನುಷ್ಯರಿಗಿಂತ ಜಾನುವಾರುಗಳಿಗೆ ನೀರಿನ ಕೊರತೆ ತೀವ್ರವಾಗಿ ಕಾಡಲಾರಂಭಿಸಿದೆ.
ಕೆರೆಯಾಗಿದೆ ಹಾರಂಗಿ
ಕುಶಾಲನಗರ: ಕೃಷಿ ಚಟುವಟಿಕೆಗೆ ಒತ್ತು ನೀಡಿ ನಿರ್ಮಾಣವಾದ ಹಾರಂಗಿ ಜಲಾಶಯ ಯೋಜನೆ ಇದೀಗ ಕೃಷಿಕರಿಗೆ ಮಾತ್ರ ಮರೀಚಿಕೆಯಾದಂತಿದೆ. ಕೃಷಿ ಚಟುವಟಿಕೆಗಳ ಟಾರ್ಗೆಟ್ ನೀಡಬೇಕಾದ ಯೋಜನೆ ಇತ್ತೀಚಿನ ದಿನಗಳಲ್ಲಿ ಅನ್ಯ ಉದ್ದೇಶಗಳ ಗುರಿ ತಲುಪಿಸಲು ಸಹಕರಿಸುವ ಯೋಜನೆಯಾಗುವುದರೊಂದಿಗೆ ಜಲಾಶಯ ಕೆರೆಯಾಗಿ ಪರಿವರ್ತನೆಗೊಂಡಿದೆ ಎನ್ನಬಹುದು. ಜಲಾನಯನ ಪ್ರದೇಶದಲ್ಲಿ ಮಳೆಯ ಅಭಾವ ಕಾಣುವುದರೊಂದಿಗೆ ಅಣೆಕಟ್ಟಿನಲ್ಲಿ ನೀರಿನ ನಿರ್ವಹಣೆಯ ಕೊರತೆಯಿಂದ ಸಂಗ್ರಹ ಮಟ್ಟ ಬಹುತೇಕ ಕುಸಿದು ನಿಂತಿದೆ.
ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು, ಇದೀಗ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಮಟ್ಟ 2798.30 ಅಡಿಗಳಾಗಿವೆ. ನೀರಿನ ಸಂಗ್ರಹ 1.15 ಟಿಎಂಸಿ ಪ್ರಮಾಣವಿದ್ದು, ಇದರಲ್ಲಿ ಕೇವಲ 0.4 ಟಿಎಂಸಿ ಪ್ರಮಾಣದ ನೀರು ಬಳಕೆ ಮಾಡಬಹುದಾಗಿದೆ. ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿನ ನಿರ್ವಹಣೆಯಲ್ಲಿ ಅಧಿಕಾರಿಗಳು ಎಡವಿರುವುದೇ ಈ ಆವಾಂತರಕ್ಕೆ ಕಾರಣವಾಗಿದ್ದು, ರೈತಾಪಿ ವರ್ಗ ಬೇಸಿಗೆ ಬೆಳೆಗೆ ನೀರಿಗಾಗಿ ಮಳೆಯನ್ನೇ ಅವಲಂಬಿಸಬೇಕಾಗಿದೆ. ಪ್ರಸಕ್ತ ಜಲಾನಯನ ಪ್ರದೇಶದಲ್ಲಿ 32.4 ಮಿಲಿ ಮೀಟರ್ ಪ್ರಮಾಣದ ಮಳೆ ಬಿದ್ದಿದ್ದು, ಮಾರ್ಚ್ ಪ್ರಾರಂಭದಿಂದ ಈ ಬಾರಿ ಜಲಾಶಯಕ್ಕೆ ಒಟ್ಟು 1 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು, ಇದೀಗ 88 ಕ್ಯುಸೆಕ್ ಪ್ರಮಾಣದ ನೀರಿನ ಒಳಹರಿವು ಕಂಡು ಬಂದಿದೆ. ಜಲಾಶಯದ ಗರಿಷ್ಠ ಸಂಗ್ರಹ ಸಾಮರ್ಥ್ಯ 8.5 ಟಿಎಂಸಿ ಪ್ರಮಾಣವಾಗಿದ್ದು, ಅಣೆಕಟ್ಟಿನ ವಾರ್ಷಿಕ ಜಲಾಧಾರಣ ಸಾಮರ್ಥ್ಯ 35.8 ಟಿಎಂಸಿ ಪ್ರಮಾಣವಾಗಿದೆ.
ಹಿಂದಿನ ವರ್ಷಕ್ಕಿಂತ ಸಮಾಧಾನಕರ
ಬಳ್ಳಾರಿ / ಮುನಿರಾಬಾದ್: ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಭಾಗದ ನೀರಾವರಿ ಹಾಗೂ ಬಳ್ಳಾರಿ, ರಾಯಚೂರು, ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಸೇರಿದಂತೆ ಕೆಲವು ಜಿಲ್ಲೆಗಳಿಗೆ ಜಲಾಶಯದ ನೀರೇ ಕುಡಿಯುವುದಕ್ಕೆ ಆಧಾರವಾಗಿದೆ. 100.855 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಏ. 8ರಂದು
ಕೇವಲ 3.34 ಟಿಎಂಸಿ ನೀರು ಉಳಿದಿದೆ. ಹೊರ ಹರಿವು ಮಾತ್ರ ಇದ್ದು, ಒಳ ಹರಿವು ಋಣಾತ್ಮಕತೆಯಿಂದ ಕೂಡಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತಕ ನೀರಿನ ಸಾಮರ್ಥ್ಯ ಕೊಂಚ ಹೆಚ್ಚಾಗಿರುವುದು ತುಸು ಸಮಾಧಾನ ತಂದಿದೆ. ಜಲಾಶಯವು ನೀರಿನ ಗರಿಷ್ಠ ಮಟ್ಟ 1633 ಅಡಿಗಳಷ್ಟು, ಏ. 8ರಂದು 1577.95 ಅಡಿಗಳ ಮಟ್ಟದಲ್ಲಿ ನೀರು ಸಂಗ್ರಹವಿದೆ.
ಈಗಿರುವ ನೀರಿನಲ್ಲಿ 1.34 ಟಿಎಂಸಿ ಮಾತ್ರ ನೀರು ಬಳಕೆಗೆ ಯೋಗ್ಯವಾಗಿದ್ದು, ಇನ್ನುಳಿದಂತೆ 2 ಟಿಎಂಸಿ ರಿಸರ್ವ್ ಸ್ಟೋರೇಜ್ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ, ಈ ವರ್ಷದಲ್ಲಿ ಈ ಸಮಯದಲ್ಲಿ ನೀರಿನ ಸಂಗ್ರಹದ ಪ್ರಮಾಣ ಹೆಚ್ಚಾಗಿದೆ. ಕಳೆದ ವರ್ಷ ಏ. 8ರಂದು ಜಲಾಶಯದಲ್ಲಿ 2.71 ಟಿಎಂಸಿ ನೀರಿತ್ತು. ಆದರೆ, ಈ ಬಾರಿ 0.63 ಟಿಎಂಸಿ ನೀರು ಹೆಚ್ಚಾಗಿದೆ. ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜಲಾಶಯದ ಸಂಗ್ರಹ ಸಾಮರ್ಥ್ಯಕ್ಕೆ ಭಾರಿ ಧಕ್ಕೆ ಬರುತ್ತಿದೆ.
ಮಲೆನಾಡ ಸೆರಗಲ್ಲೇ ಸಮಸ್ಯೆ
ಶಿರಸಿ: ಜಿಲ್ಲೆಯಲ್ಲಿ ಬಿಸಿಲಿನ ಝಳ ತೀವ್ರವಾಗಿದೆ. ಜಿಲ್ಲೆಯಲ್ಲಿ ಹಲವಾರು ಅಣೆಕಟ್ಟುಗಳು, ಜಲಾಶಯಗಳಿದ್ದು, ಅವುಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಇಳಿಮುಖವಾಗಿದೆ. ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ ಸೂಪಾ, ಬೊಮ್ಮನಹಳ್ಳಿ ಅಣೆಕಟ್ಟೆಗಳಿವೆ.
ಅಲ್ಲದೇ ಕೊಡಸಳ್ಳಿ, ಕದ್ರಾ ಅಣೆಕಟ್ಟೆಗಳೂ ಇವೆ. ಈ ಎಲ್ಲ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೀವ್ರ ಇಳಿಕೆಯಾಗಿದೆ. ಜೋಯಿಡಾ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿದೆ. ಕಾಳಿ ನದಿಯಿಂದ ವ್ಯವಸಾಯಕ್ಕೆ ನೀರು ಬಳಕೆಯಾಗದೆ ಇದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ, ನೀರಿನ ಪ್ರಮಾಣ ಕಡಿಮೆ ಇದೆ. ರಾಜ್ಯದ ಅತಿ ಎತ್ತರದ್ದು ಎನ್ನುವ ಖ್ಯಾತಿ ಸೂಪಾ ಅಣೆಕಟ್ಟಿಗಿದೆ. ಕಳೆದ ವರ್ಷ ಸೂಪಾ ಜಲಾಶಯದ ನೀರಿನ ಮಟ್ಟ 544.50 ಮೀ. ಇತ್ತು. ಆದರೆ ಈ ವರ್ಷ ಇಂದಿನ ನೀರಿನ ಮಟ್ಟ 540.95 ಮೀ ಇದೆ. ಕಳೆದ ವರ್ಷಕ್ಕಿಂತ 4 ಮೀಟರ್ಗೂ ಕಡಿಮೆ ನೀರಿದೆ. ಜಲಾಶಯದ ಗರಿಷ್ಠ ಮಟ್ಟ 564 ಮೀಟರ್ ಇದ್ದು, ಕನಿಷ್ಠ ಮಟ್ಟ 515 ಮೀ. ಇರುತ್ತದೆ.
ಕಬಿನಿಯಿಂದ ಎಲ್ಲರ ಆತಂಕ ಮಾಯ
ಮೈಸೂರು: ವರ್ಷಕ್ಕೆ ಎರಡು- ಮೂರು ಬಾರಿ ತುಂಬುವ ಹೆಗ್ಗಳಿಕೆ ಹೊಂದಿರುವ ಎಚ್.ಡಿ. ಕೋಟೆ ತಾಲೂಕು ಬೀಚನಹಳ್ಳಿ ಬಳಿ ಇರುವ ಕಬಿನಿ ಜಲಾಶಯದಲ್ಲಿ ಈ ವರ್ಷ ಆಶಾದಾಯಕ ಪರಿಸ್ಥಿತಿ ಕಂಡು ಬಂದಿದೆ. ಜಲಾಶಯದ ಗರಿಷ್ಠ ಮಟ್ಟ 2,284 ಅಡಿ. ಬುಧವಾರ ಜಲಾಶಯದಲ್ಲಿ 2271 ಅಡಿ ನೀರಿತ್ತು.
ಜಲಾಶಯಕ್ಕೆ 215 ಕ್ಯುಸೆಕ್ ನೀರು ಬರುತ್ತಿದ್ದು, 300 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಇದಲ್ಲದೇ ಕಬಿನಿ ಬಲದಂಡೆ ನಾಲೆಗೆ 100 ಕ್ಯುಸೆಕ್ ಮತ್ತು ಎಡದಂಡೆಗೆ 50 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 2268.54 ಅಡಿ ಇತ್ತು. ಒಳ ಹರಿವು 418 ಕ್ಯುಸೆಕ್, ಹೊರ ಹರಿವು 800 ಕ್ಯುಸೆಕ್ ಇತ್ತು. ಇದರಿಂದ ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಜನಜಾನುವಾರುಗಳು, ನಾಗರಹೊಳೆ, ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ವನ್ಯಜೀವಿಗಳಿಗೆ ಉಂಟಾಗುತ್ತಿದ್ದ ನೀರಿನ ತತ್ವಾರ ಇನ್ನೂ ಕಂಡು ಬಂದಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಜಲಾಶಯದಲ್ಲಿ ಸುಮಾರು 3 ಅಡಿ ಹೆಚ್ಚು ನೀರಿದೆ. ಗರಿಷ್ಠ ಮಟ್ಟಕ್ಕಿಂತ 13 ಅಡಿ ಮಾತ್ರ ಕಡಿಮೆ ಇದೆ.
ಈಗಾಗಲೇ ಎರಡು- ಮೂರು ಜೋರು ಮಳೆ ಬಿದ್ದಿದ್ದು, ಮುಂಗಾರು ಮಳೆಯು ಉತ್ತಮವಾಗಿ ಬೀಳುವ ಲಕ್ಷಣಗಳಿವೆ. ಹೀಗಾಗಿ ಕಬಿನಿಯಿಂದ ಸದ್ಯಕ್ಕೆ ತೊಂದರೆ ಇಲ್ಲ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ, ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಜಲಾಶಯದ ಮಟ್ಟ ತೀವ್ರವಾಗಿ ಕುಸಿದಿತ್ತು.
ಇದರಿಂದ ಕಬಿನಿ ಬಲ ಹಾಗೂ ಎಡದಂಡೆ ನಾಲಾ ವ್ಯಾಪ್ತಿಯ ರೈತರು ಮತ್ತು ಕುಡಿಯುವ ನೀರಿಗಾಗಿ ಕಬಿನಿ ಜಲಾಶಯವನ್ನು ಆಶ್ರಯಿಸಿರುವ ಮೈಸೂರು, ನಂಜನಗೂಡು, ಚಾಮರಾಜನಗರ, ಗುಂಡ್ಲುಪೇಟೆ, ಟಿ. ನರಸೀಪುರ, ಬೆಂಗಳೂರು ಮೊದಲಾದ ಪ್ರದೇಶಗಳ ಸಾರ್ವಜನಿಕರು ಆತಂಕಕ್ಕೊಳಗಾಗುತ್ತಿದ್ದರು. ಆದರೆ ಈ ಬಾರಿ ಇವರೆಲ್ಲಾ ಸಂತಸದಿಂದ ಇದ್ದಾರೆ.
ಉತ್ತರ ಕರ್ನಾಟಕ ನಿರಾಳ
ಬೆಳಗಾವಿ: ಏಪ್ರಿಲ್ ತಿಂಗಳಲ್ಲಿ ಎಲ್ಲೆಡೆ ಜಲಾಶಯಗಳ ನೀರಿನ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗೂ ಪರದಾಡುವಂತಾಗುತ್ತದೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಈ ವರ್ಷ ಜಲಾಶಯಗಳಲ್ಲಿ ಕುಡಿಯುವ ನೀರು ಪೂರೈಸಲು ಕೊರತೆಯಾಗದಷ್ಟು ನೀರು ಈಗಲೂ ಸಂಗ್ರಹವಾಗಿದೆ. ಸಪ್ತ ನದಿಗಳ ಬೀಡಾಗಿರುವ
ಬೆಳಗಾವಿ ಜಿಲ್ಲೆ ಪಶ್ಚಿಮ ಘಟ್ಟದ ಸೆರಗಿನಲ್ಲಿದ್ದು, ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳಲ್ಲಿ ಕುಡಿವ ನೀರಿಗೆ ಅಗತ್ಯವಿರುವ ನೀರಿನ ಸಂಗ್ರಹವಿದೆ. ಘಟಪ್ರಭಾ ಜಲಾಶಯದ ನೀರಿನ ಸಂಗ್ರಹದ ಸಾಮರ್ಥ್ಯ ಒಟ್ಟು 51 ಟಿಎಂಸಿ. ಆದರೆ ಕಳೆದ ವರ್ಷ ಇದೇ ಅವಧಿಗೆ 3.56 ಟಿಎಂಸಿ ನೀರಿನ ಲಭ್ಯತೆಯಿತ್ತು. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ 5 ಟಿಎಂಸಿ ಹೆಚ್ಚು ನೀರಿನ ಸಂಗ್ರಹವಿದ್ದು, ಒಟ್ಟು 8.16 ಟಿಎಂಸಿ ನೀರಿನ ಸಂಗ್ರಹವಿದೆ. ಇದೇ ಜಲಾಶಯದಿಂದ ಕಳೆದ ವಾರ ಅರ್ಧ ಟಿಎಂಸಿ ನೀರನ್ನು ಕುಡಿವ ನೀರಿಗಾಗಿ ಘಟಪ್ರಭಾ ಬಲದಂಡೆ ಕಾಲುವೆಗೆ ಮತ್ತು ಘಟಪ್ರಭಾ ನದಿ ತೀರದ ಜನ ಜಾನುವಾರುಗಳಿಗಾಗಿ ಬಿಡುಗಡೆ ಮಾಡಲಾಗಿದೆ. ನಿತ್ಯವೂ ಬೆಳಗಾವಿ ನಗರ ಕುಡಿಯುವ ನೀರಿನ ಯೋಜನೆಗಾಗಿ 623 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ಮಲಪ್ರಭಾ ಜಲಾಶಯ 37.73 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕಳೆದ ವರ್ಷ ಮಲಪ್ರಭಾ ಜಲಾನಯನ ಪ್ರದೇಶ ದಲ್ಲಿ ಉತ್ತಮ ಮಳೆಯಾಗಿದ್ದರಿಂದ ಕಳೆದ ವರ್ಷಕ್ಕಿಂತ 3 ಟಿಎಂಸಿ ಹೆಚ್ಚಿಗೆ ಅಂದರೆ, 4.031 ಟಿಎಂಸಿ ನೀರಿನ ಸಂಗ್ರವಿದೆ. ಕಳೆದ ವರ್ಷ ಇದೇ ಅವಧಿಗೆ ಕೇವಲ 1.682 ನೀರಿನ ಸಂಗ್ರಹವಿತ್ತು. ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ಕುಡಿಯುವ ನೀರಿಗಾಗಿ ನಿತ್ಯವೂ ಈ ಜಲಾಶಯದಿಂದ 164 ಕ್ಯುಸೆಕ್ ನೀರು ಪೂರೈಕೆ ಮಾಡಲಾಗುತ್ತಿದೆ.
ಮೂರು ಜಿಲ್ಲೆಗಳಿಗೆ ಜೀವ ಜಲ ಪೂರೈಸುತ್ತಿದ್ದು, ಇದೇ ಜಲಾಶಯದಿಂದ ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಬಾಗಲ ಕೋಟೆ ಜಿಲ್ಲೆಯ ಬಾದಾಮಿ, ಮುಧೋಳ, ಗದಗ ಮತ್ತು ಧಾರವಾಡ ಜಿಲ್ಲೆಗಳ ತಾಲೂಕುಗಳಾದ ನವಲಗುಂದ, ನರಗುಂದ, ಬ್ಯಾಹಟಿ ತಾಲೂಕುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.
ಇಲ್ಲಿ ಕೂಡಾ ಜೂನ್ ತಿಂಗಳಾಂತ್ಯದ ವರೆಗೆ ಕುಡಿವ ನೀರಿನ ಸಮಸ್ಯೆ ಉಂಟಾಗುವದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿಂಗಳಿಗೊಮ್ಮೆ ನೀರು
ರಾಮನಗರ: ಬರದ ಬವಣೆಗೆ ಸಿಲುಕಿರುವ ಬಯಲುಸೀಮೆಯ ರಾಮನಗರ ಜಿಲ್ಲೆಯಲ್ಲಿ ನದಿ, ತೊರೆ, ಕೆರೆ, ಕಟ್ಟೆಗಳು ಬರಿದಾಗಿವೆ. ಸಣ್ಣಪುಟ್ಟ ಅಣೆಕಟ್ಟೆಗಳೂ ನೀರಿಲ್ಲದೆ ಭಣಗುಡುತ್ತಿದ್ದು, ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ.
ನೆರೆಯ ಮಂಡ್ಯ ಜಿಲ್ಲೆ ಗಡಿಯಂಚಿನಲ್ಲಿ ಹರಿಯುವ ಶಿಂಷಾ ನದಿಯಿಂದ ಚನ್ನಪಟ್ಟಣ ತಾಲೂಕಿಗೆ ಕೊಂಚ ನೀರಿನ ಆಸರೆ ಸಿಕ್ಕಿದ್ದರೆ, ತಮಿಳುನಾಡಿನತ್ತ ಹರಿದು ಹೋಗುತ್ತಿರುವ ಕಾವೇರಿಯಿಂದ ಕನಕಪುರ ತಾಲೂಕಿನ ಸೀಮಿತ ಭಾಗದಲ್ಲಿ ಕುಡಿಯುವ ನೀರಿನ ದಾಹ ನೀಗಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ತಿಂಗಳಿಗೆ ಗರಿಷ್ಠ 2 ರಿಂದ 3 ಬಾರಿಯಷ್ಟೇ ಕುಡಿಯುವ ನೀರಿನ ಪೂರೈಕೆ ಆಗುತ್ತಿದ್ದರೆ, ಜಿಲ್ಲಾದ್ಯಂತ ಜಲ ಮೂಲವೇ ಬತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಪೂರೈಸುವಂತಹ ಸ್ಥಿತಿ ಈ ಬಾರಿಯೂ ಮರುಕಳಿಸಿದೆ. ಈ ಜಿಲ್ಲೆಯಲ್ಲಿ ದೊಡ್ಡ ಜಲಾಶಯಗಳಿಲ್ಲ. ಸದ್ಯಕ್ಕೆ ಕೆಆರ್‍ಎಸ್ ಮತ್ತು ಹೇಮಾವತಿಯ ಸೋರಿಕೆ ನೀರು ಹರಿವಿನಿಂದ ಕೂಡಿದ ಶಿಂಷಾ ನದಿಗೆ ಇಗ್ಗಲೂರು ಬಳಿ ನಿರ್ಮಿಸಿರುವ 0.18 ಟಿಎಂಸಿ ನೀರು ಶೇಖರಣಾ ಸಾಮರ್ಥ್ಯವಿರುವ ಎಚ್.ಡಿ.ದೇವೇಗೌಡ ಬ್ಯಾರೇಜ್ ಒಂದೇ ಜಿಲ್ಲೆ ಪಾಲಿಗೆ ಜೀವಂತವಾಗಿದೆ. ನಿರ್ಮಾಣಗೊಂಡು ಆರೂವರೆ ದಶಕದಿಂದ ಎಂಥ ಬರಗಾಲದಲ್ಲೂ ಕಣ್ವ ಜಲಾಶಯ ಬರಿದಾಗಿರಲಿಲ್ಲ. ಕಳೆದ ವರ್ಷ ಮೊಟ್ಟ ಮೊದಲ ಬಾರಿ ಕಣ್ವದಲ್ಲಿ ಹನಿ ನೀರು ಇಲ್ಲದಂತಾಗಿತ್ತು. ಈ ಬಾರಿಯೂ ಮಳೆ ಕೊರತೆಯಿಂದ ಜಲಾಶಯ ಬರಿದಾಗಿಯೇ ಉಳಿದಿದೆ. 1.45 ಟಿಎಂಸಿ ಶೇಖರಣಾ ಸಾಮರ್ಥ್ಯದ ಮಂಚನಬಲೆ ಜಲಾಶಯದಲ್ಲಿ ಸದ್ಯ 0.50 ಟಿಎಂಸಿ ನೀರಿದೆ. ಈ ಪೈಕಿ 0.25 ಟಿಎಂಸಿಯಷ್ಟು ನೀರು ಡೆಡ್ ಸ್ಟೋರೇಜ್. ಉಳಿಕೆ ಲಭ್ಯವಿರುವ ನೀರು ಮಾಗಡಿ ಮತ್ತು ಆಶ್ರಿತ ಗ್ರಾಮಗಳಿಗೆ ಕುಡಿಯುವುದಕ್ಕಷ್ಟೇ ಸಾಕಾಗುತ್ತದೆ. ಇನ್ನು ತಿಪ್ಪಗೊಂಡನಹಳ್ಳಿ ಜಲಾಶಯವು ಈ ಜಿಲ್ಲೆ ವ್ಯಾಪ್ತಿಯಲ್ಲೇ ಇದ್ದರೂ ಈ ಭಾಗದ ಬೇಸಾಯ ಮತ್ತು ಕುಡಿಯುವ ನೀರಿಗೆ ಆಸರೆಯಾಗಿಲ್ಲ. ಅದೇನಿದ್ದರೂ ಬೆಂಗಳೂರು ಮಹಾ ನಗರಕ್ಕಷ್ಟೇ ಸೀಮಿತ. 3 ಟಿಎಂಸಿ ನೀರು ಶೇಖರಿಸಬಹುದಾದ ಅಲ್ಲಿ ಸದ್ಯ 1 ಟಿಎಂಸಿ ನೀರಿದ್ದು, ಅದೂ ಕಲುಷಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


