ಕಬ್ಬು ಬಾಕಿ ತಕ್ಷಣ ಬಿಡುಗಡೆ, ಕಾರ್ಖಾನೆಗಳಿಗೆ ಸರ್ಕಾರ ತಾಕೀತು

ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರು ತಾವು ಬಾಕಿ ಉಳಿಸಿಕೊಂಡಿರುವ ರು. 1802.86 ಕೋಟಿ ಹಣವನ್ನು ಹೈಕೋರ್ಟ್ ಪೀಠದ ಆದೇಶದ ಹಿನ್ನೆಲೆಯಲ್ಲಿ ಕೂಡಲೇ ರೈತರಿಗೆ ಬಿಡುಗಡೆ ಮಾಡಬೇಕು ಎಂದು ಸಕ್ಕರೆ ಮತ್ತು ಸಹಕಾರ ಸಚಿವ ಎಚ್.ಎಸ್. ಮಹಾದೇವಪ್ರಸಾದ್ ತಾಕೀತು ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ರಾಜ್ಯದ ಕಬ್ಬು ಬೆಲೆ ನಿಗದಿ ಮತ್ತು ಸಾರಿಗೆ ನಿಯಂತ್ರಣ ವಿಧೇಯಕದ ಪ್ರಕಾರ ರು. 2500 ಎಸ್‌ಎಪಿ ಬೆಲೆ ನಿಗದಿ ಮಾಡಲಾಗಿತ್ತು. ಆದರೆ, ಇದರ ವಿರುದ್ಧ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆ ಮಾಲೀಕರ ಒಕ್ಕೂಟ(ಸಿಸ್ಮಾ) ಒಟ್ಟು 24 ರಿಟ್ ಅರ್ಜಿಗಳನ್ನು ಹೈಕೋರ್ಟ್ ಪೀಠ ವಜಾಗೊಳಿಸಿದ್ದು, ತಕ್ಷಣ ಹಣ ಬಿಡುಗಡೆ ಮಾಡುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ ಎಂದರು.
ಸರ್ಕಾರ ಎಸ್‌ಎಪಿ ನಿಗದಿ ಮಾಡಿದ್ದರೂ ಮೈಶುಗರ್ಸ್, ಎಂಪಿಎಂ, ಪಾಂಡವಪುರ ಹಾಗೂ ಬಣ್ಣಾರಿ ಶುಗರ್ಸ್ ಮಾಲೀಕರು ಮಾತ್ರ ನಿಗದಿಯಂತೆ ಹಣ ಪಾವತಿ ಮಾಡಿದ್ದರು. ರಿಟ್ ಹಿನ್ನೆಲೆಯಲ್ಲಿ ಈ ಕಾರ್ಖಾನೆಗಳು ಪಾವತಿಯನ್ನು ಬಾಕಿ ಇರಿಸಿಕೊಂಡಿದ್ದವು. ಈಗ ಆ ಹಣವನ್ನು ರೈತರಿಗೆ ನೀಡಲೇಬೇಕು. ಜತೆಗೆ ನಾವು ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಕೇವಿಯಟ್ ಹಾಕುತ್ತೇವೆ. ಈ ಸಂಬಂಧ ರಾಜ್ಯ ಅಡ್ವೊಕೇಟ್ ಜನರಲ್ ಜತೆ ಚರ್ಚೆ ನಡೆಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭವಾಗಿದೆ. 16 ಕಾರ್ಖಾನೆಗಳು ಕಾರ್ಯ ಆರಂಭವಾಗಿದೆ. 16 ಕಾರ್ಖಾನೆಗಳು ಕಾರ್ಯ ಆರಂಭಿಸಿವೆ. ಈಗಾಗಲೇ 16.56 ಲಕ್ಷ ಮೆಟ್ರಿಕ್ ಟನ್ ಕಬ್ಬ ಅರೆಯಲಾಗಿದ್ದು, 1.39 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಶೇ.8.56 ಸರಾಸರಿ ಇಳುವರಿಯಲ್ಲಿ ಉತ್ಪಾದಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸರಾಸರಿ ಶೇ. 9.56 ಇಳುವರಿ ಆಧಾರದಲ್ಲಿ ಮೊದಲ ಹಂತದಲ್ಲಿ ರು. 2200 ಎಫ್‌ಆರ್‌ಪಿ ದರ ನಿಗದಿ ಮಾಡಲಾಗಿದ್ದು, ಉಪಉತ್ಪನ್ನ ಒಳಗೊಂಡಂತೆ ಕೊನೆಯ ಹಂಗಾಮಿನಲ್ಲಿ ಮತ್ತೊಮ್ಮೆ ಬೆಲೆ ನಿಗದಿ ಮಾಡಲಾಗುವುದು ಎಂದರು.
ಆದರೆ, ಈ ವರ್ಷ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ವ್ಯಾಟ್ ಸೇರಿದಂತೆ ಇತರೆ ತೆರಿಗೆಗಳ ವಿನಾಯಿತಿ ನೀಡುವ ಪ್ರಸ್ತಾಪವಿಲ್ಲ. ಅದು ಕಳೆದ ವರ್ಷಕ್ಕೆ ಮಾತ್ರ ಎಂದು ಸಚಿವರು ಸ್ಪಷ್ಟಪಡಿಸಿದರು.
ಆದಷ್ಟು ಬೇಗ ಮುಖ್ಯಮಂತ್ರಿ ಮಧ್ಯಪ್ರವೇಶಿಸಿ ರೈತರ ವ್ಯತ್ಯಾಸದ ಕಬ್ಬಿನ ಶುಲ್ಕ ರು.500 ಅನ್ನು ಕೊಡಿಸಲು ಯತ್ನಿಸಬೇಕು. ಪ್ರಸಕ್ತ ಹಂಗಾಮಿಗೆ ಸರ್ಕಾರ ಕಬ್ಬಿನ ದರ ನಿಗದಿ ಮಾಡಿ ಕಾರ್ಖಾನೆಗೆ ಸಹಕಾರ ನೀಡಬೇಕು. ನಾವು ಎಂದಿಗೂ ರೈತರ ಪರ ನಿಲುವನ್ನೇ ಹೊಂದಿದ್ದೇವೆ.
- ಉಮೇಶ ಕತ್ತಿ, ಮಾಜಿ ಸಚಿವ, ಸಕ್ಕರೆ ಕಾರ್ಖಾನೆ ಮಾಲೀಕರು
ಸರ್ಕಾರ ನಿಗದಿಪಡಿಸಿದ ರು. 2500 ಬೆಲೆಯನ್ನು ಹೈಕೋರ್ಟ್ ಎತ್ತಿ ಹಿಡಿದಿರುವದರಿಂದ ಕಾರ್ಖಾನೆಗಳು ಇದೇ ಮೊತ್ತ ಪಾವತಿಸುವುದು ಅನಿವಾರ್ಯ. ಪ್ರಸಕ್ತ ಸಾಲಿಗೆ ಸರ್ಕಾರ ಎಸ್‌ಎಪಿ ದರ ಆಧರಿಸಿ ಇಳುವರಿ ಮೇಲೆ ದರ ನಿಗದಿಪಡಿಸಿದೆ, ಕಾರ್ಖಾನೆಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
-ಎಸ್. ಆರ್. ಪಾಟೀಲ ಸಚಿವ, ಸಕ್ಕರೆ ಕಾರ್ಖಾನೆ ಮಾಲೀಕರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


