ಯುವಜನ/ಮಕ್ಕಳು

ಮಹಾ ಅಳಲು

ಮಹಾ ಅಳಲು
Published On :

ಇನ್ನು ಕೆಲವೇ ತಿಂಗಳಲ್ಲಿ ನಿನ್ನ ಮಡಿಲ ಬಿಟ್ಟು ದೂರ ಹೋಗುತ್ತಿದ್ದೇವೆ. ಏನನ್ನೋ ಪಡೆದು- ಕಳೆದುಕೊಳ್ಳುತ್ತಿದ್ದೇವೆಂಬ ಭಾವನೆ ಮನಸ್ಸನ್ನು ಭಾವುಕಗೊಳಿಸಿದೆ. ಅಸಡ್ಡೆಯಿಂದ ಭವಿಷ್ಯದ ಕನಸು ಹೊತ್ತು ನಿನ್ನ ಮಡಿಲಿಗೆ ಬರುವಾಗ ಹೆತ್ತ ತಾಯಿಯಂತೆ ಸ್ವೀಕರಿಸಿ, ಸಲುಹಿ, ಆಶೀರ್ವದಿಸಿದ್ದಿ. ಇಂದು ನಮ್ಮನ್ನು ಮುಂದಿನ ಭವಿಷ್ಯಕ್ಕಾಗಿ ಬೀಳ್ಕೊಡಲು ಸಿದ್ಧವಾಗಿದ್ದಿ. ನಿನ್ನ ಬಿಟ್ಟು ಹೋಗಲು ಮನಸ್ಸು ಬಾರದಿದ್ದರೂ ಅಗಲಿಕೆ ಎಂಬುದು ಅಗತ್ಯ... ಅನಿವಾರ್ಯ..!
ನಿನ್ನ ಅಧ್ಯಯನ ವೇದಿಕೆಗೆ ಒಂದು ವಿಶಿಷ್ಟ ಸೌಂದರ್ಯವಿದೆ. ಅದು ಮೌನದಲ್ಲಿ ಪ್ರತಿಫಲಿಸುವ ಸೌಂದರ್ಯ. ನಿನ್ನ ನಂಬಿ ಬಂದ ಮೊದಲ ದಿನ ನಿನ್ನ ಇಡೀ ಸೌಂದರ್ಯದ ಕಟ್ಟಡವನ್ನು ಸುತ್ತಿಬಂದೆ. ಸಮೃದ್ಧ ಗ್ರಂಥಾಲಯದ ದೊಡ್ಡ ಪುಸ್ತಕಗಳ ಪುಟ ತಿರುವಲು ಎಷ್ಟೊಂದು ಸಮಯಬೇಕು ಎಂದು ಬೆರಗುಪಟ್ಟಿದ್ದೆ. ಸಮೃದ್ಧವಾಗಿ ಹರಡಿರುವ ಹಸಿರು, ಸ್ವಾಗತಕೋರಲೆಂದು ಹೂವಿನಿಂದ ಕಂಗೊಳಿಸುವ ಸಾಲುಮರಗಳು, ಹಸುವಿನ ಹೊಟ್ಟೆಯಾಕಾರದ ಕ್ಯಾಂಟೀನು, ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ತುಂತುರು ಮಳೆ ಹನಿಯ ಸಿಂಚನ... ಪಾರಂಪರಿಕ ಕಟ್ಟಡಗಳ ಸರಮಾಲೆ. ಸಂಜೆಯ ನಂತರದ ನೀರವತೆ, ಮೌನ... ನನಗೆ ತುಂಬಾ ಪ್ರಿಯವಾಗಿ ಬಿಟ್ಟಿತು.
ಕನ್ನಡ ಏಕೀಕರಣದ ತವರುಮನೆಯಾಗಿ, ಸಾಹಿತಿಗಳಿಗೆ, ಕವಿಗಳಿಗೆ, ರಾಷ್ಟ್ರ ನಾಯಕರಿಗೆ, ಕಲಾವಿದರಿಗೆ, ಶಿಕ್ಷಕ ವೃಂದದವರಿಗೆ, ಬುದ್ಧಿಜೀವಿಗಳಿಗೆ ಜ್ಞಾನ ದೇಗುಲವಾಗಿ ಕಂಗೊಳಿಸುತ್ತಿರುವುದು ಮೈಸೂರಿನ ಪಾರಂಪರಿಕ ಮಹಾರಾಜ ಕಾಲೇಜು. ಯಾಕೋ ನಿನ್ನನ್ನು ಬಿಟ್ಟು ಹೋಗಬೇಕೆಂದಾಗ ಮನಸ್ಸು ಭಾರವಾಗುತ್ತದೆ.
ಇವತ್ತಿಗೂ ನಾನು ಮೊಟ್ಟ ಮೊದಲು ಬರೆದುಕೊಂಡ ಟೈಮ್ ಟೇಬಲ್, ತರಗತಿಯ ನೋಟ್ಸು ಹಾಗೆಯೇ ಇವೆ. ನೆನಪುಗಳೂ ಅಷ್ಟೇ... ಮೊದಲ ಸಲ ನಿನ್ನ ಮೆಟ್ಟಿಲೇರುವಾಗಿನ ಸಂಕೋಚ, ಭಯ, ನೂರಾರು ಆಸೆ, ಮೊದಲ ಗೆಳೆತನ, ಸ್ನೇಹಿತರ ಸಹಕಾರ, ಅಧ್ಯಾಪಕ ವೃಂದದವರ ಬೆಂಬಲ, ಗೆಳೆಯನ ಕಷ್ಟಕ್ಕೆ ಮೊದಲಬಾರಿ ಒಗ್ಗಟ್ಟಿನಿಂದ ಸಂಗ್ರಹಿಸಿದ ಪರಿಹಾರ ನಿಧಿ  ಈಗಲೂ ಕಣ್ಣಿಗೆ ಅಚ್ಚೊತ್ತಿದಂತಿದೆ. ಎಲ್ಲರೂ ನಮ್ಮವರೆಂಬ ಭಾವನೆ. ಜೊತೆಗೆ ಕಾರಣ ತಿಳಿಯದ ಬಂಧಗಳಲ್ಲಿ ಭಾಗವಹಿಸಲು ತೆಗೆದುಕೊಂಡ ರಜೆಗಳು... ಮಧ್ಯಾಹ್ನದ ಹಸಿವು ನೀಗಿಸಲಿದ್ದ ತಾತನ ಪಾನಿಪುರಿ, ಸೌತೇಕಾಯಿ ಅಂಗಡಿ, ಎರವಲು ಪಡೆದ ಪುಸ್ತಕ, ಮೊದಲದಿನ ಗುರುಗಳ ಬೋಧನೆ, ಚಿಗುರೊಡೆದ ಮೀಸೆಯೊಡನೆ ಮೂಡುತ್ತಿದ್ದ ಹಸಿಬಿಸಿ ತರಲೆ ಮಾತುಗಳು, ಕಾಮೆಂಟ್‌ಗಳು ಕಣ್ಣಿಗೆ ಕಟ್ಟಿದಂತಿದೆ. ನಿಜಕ್ಕೂ ನನ್ನ ಬದುಕಿನಲ್ಲಿ ಹರ್ಷದಾಯಕ ಕ್ಷಣಗಳು ಶುರುವಾದವು.
ಏನಯ್ಯಾ ಅಷ್ಟೊಂದು ಅಷ್ಟೊಂದು ಮೆಚ್ಚಿಕೊಳ್ತಿ..? ಇಲ್ಲಿರುವಷ್ಟು ಅವ್ಯವಹಾರ ಎಲ್ಲೂ ಇಲ್ಲ. ಇದು ಮಹಾರಾಜ ಅಲ್ಲ. ಮಹಾರಜೆಗಳ ಕಾಲೇಜು. ನೀನೊಳ್ಳೆ ಬುರುಡೆ ಕವಿ ರೀತಿ ಮಹಾರಾಜ ಕಾಲೇಜನ್ನ ಹೊಗಳ್ತಿಯಾ ಎಂದು ಕೆಲ ಸ್ನೇಹಿತರು ಹೀಗಳೆಯುತ್ತಿದ್ದರು. ಆದರೆ ಸಾಮಾನ್ಯ ವಿದ್ಯಾರ್ಥಿಯಾಗಿ ನಾನು ನಿನ್ನನ್ನು ನೋಡುತ್ತಿದ್ದುದೇ ಬೇರೆ ರೀತಿಯಲ್ಲಿ. ನಿನ್ನನ್ನು ನಾನು ತುಂಬಾ ಇಷ್ಟಪಡುತ್ತಿದ್ದೆ ಅಥವಾ ಇನ್ನೊಂದು ಅರ್ಥದಲ್ಲಿ ಪ್ರೀತಿಸುತ್ತಿದ್ದೇನೆ... ಪೂಜಿಸುತ್ತಿದ್ದೇನೆ... ಆರಾಧಿಸುತ್ತಿದ್ದೇನೆ...
ನನ್ನ ನಿರೀಕ್ಷೆಗಳೆಲ್ಲ ನಿಜವಾಗದಿರಬಹುದು. ಇದಕ್ಕೆ ನಿನ್ನನ್ನೇಕೆ ದೂರಲಿ. ನಿನ್ನ ಶ್ರೇಷ್ಠತೆಗೆ ನಾನು ಯಾವ ಮಹಾನ್ ಕೊಡುಗೆ ಕೊಟ್ಟೆ ಎಂದು ಅಂದುಕೊಂಡಾಗ ಈ ಭ್ರಮನಿರಸಕ್ಕೆ ನಾನು ಹೊಣೆ ಅನ್ನಿಸೋದಿಲ್ವೇ? ಎಲ್ಲರೂ ಉತ್ತಮವಾಗಿರದೆ ವ್ಯವಸ್ಥೆಯೊಂದು ಹೇಗೆ ಉತ್ತಮವಾದೀತು..? ನಾವೇ ಶುದ್ಧವಾಗದೇ, ಕೊಳಚೆಯಲ್ಲಿ ಮಿಂದೆದ್ದು, ಸುತ್ತಣ ಪರಿಸರದಲ್ಲಿ ಶ್ರೀಗಂಧದ ಸುವಾಸನೆಗೆ ಮೂಗರಳಿಸಿ ಲೋಕದ ಶುದ್ಧಿ ಬಯಸಿದಂತಲ್ಲವೇ..?
ನಾನು ಎಲ್ಲಿಗೆ ಹೋದರೂ, ಹೇಗಿದ್ದರೂ, ನಮ್ಮ ತಾಯಿಬೇರು ನೀನು, ನಿನ್ನ ಮಡಿಲ ಬಿಡುವುದು ಕಷ್ಟ. ಆದರೂ ಭವಿಷ್ಯಕ್ಕಾಗಿ ಇದು ಅನಿವಾರ್ಯ. ಎಲ್ಲ ಸುದೀರ್ಘ ಪಯಣಕ್ಕೂ ಮೊದಲ ಹೆಜ್ಜೆಯಂತೆ ಕೊನೆಯ ಹೆಜ್ಜೆಯೂ ಬರುತ್ತಲ್ಲದವೇ? ಹಾಗೆ. ನಮಗೆಲ್ಲ ಸಾವಿರಾರು ನೆನಪಿನ ಬುತ್ತಿಯನ್ನು ಕಟ್ಟಿಕೊಟ್ಟಿದ್ದೀಯ. ಜೀವನದ ದಾರಿಯನ್ನು ತೋರಿಸಿದ್ದೀಯ. ಆದ್ದರಿಂದಲೇ ನಿನ್ನ ನನ್ನ ತಾಯಿ ಬೇರು ಎಂದದ್ದು.
ನಿನ್ನ ಪ್ರೀತಿಯ ಆಶೀರ್ವಾದಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಈ ಸಿಹಿ ನುಡಿ ಮುತ್ತು.
ನಾನು, ನಿನ್ನ ಈ ಕಮ್ಮಟದಲ್ಲಿ ಪುಟಗೊಂಡು
ಹೊರಬಿದ್ದ ವರಹ, ಹೊತ್ತು
ಉರುಳಿದ್ದೇನೆ ನಿನ್ನ ಮುದ್ರೆಯ ವರವ.
ಇಲ್ಲಿ ಸಂದದ್ದು ಎಲ್ಲಿಯೂ ಸಲ್ಲುವುದೆಂಬ
ನಂಬಿಗೆಯಿಂದ ಪಡೆದಿದ್ದೇನೆ ಬೆಲೆ
ನೀನು ಕನ್ನಡದ ಜನಮನದ ನಿಧಿಯ ನಿಲಯ...

= ಆನಂದ ಕೆ.ಎಸ್.
ಪತ್ರಿಕೋದ್ಯಮ ವಿಭಾಗಮಹಾರಾಜ ಕಾಲೇಜು, ಮೈಸೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.