ಸಾಪ್ತಾಹಿಕಪ್ರಭ

ದೇಶಕ್ಕಾಗಿ ಊಟ ಬಿಟ್ಟರು!

ಲಾಲ್ ಬಹದ್ದೂರ್ ಶಾಸ್ತ್ರಿಯವರು ಶಾರದಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಯ ಮಗನಾಗಿ 1904 ಅಕ್ಟೋಬರ್ 2ರಂದು ಉತ್ತರ ಪ್ರದೇಶದ ...

Published On :

ಲಾಲ್ ಬಹದ್ದೂರ್ ಶಾಸ್ತ್ರಿಯವರು ಶಾರದಪ್ರಸಾದ್ ಹಾಗೂ ರಾಮ್ದುಲಾರಿ ದೇವಿ ದಂಪತಿಯ ಮಗನಾಗಿ 1904 ಅಕ್ಟೋಬರ್ 2ರಂದು ಉತ್ತರ ಪ್ರದೇಶದ ರುದ್ರಪ್ರಯಾಗದಲ್ಲಿ ಜನಿಸಿದರು. ಭಾರತದ ಸ್ವಾತಂತ್ರ್ಯ ಆಂದೋಲನದಲ್ಲಿ ಮಹಾತ್ಮಗಾಂಧಿ ಜತೆ ಕೈಜೋಡಿಸುವ ನಿಟ್ಟಿನಲ್ಲಿ ತಮ್ಮ ಓದನ್ನು ಅರ್ಧಕ್ಕೇ ಮೊಟಕುಗೊಳಿಸಿದರು. 1926ರಲ್ಲಿ ಇವರಿಗೆ 'ಶಾಸ್ತ್ರಿ' ಎಂಬ ಬಿರುದು ಕಾಶಿ ವಿದ್ಯಾಪೀಠದಿಂದ ಪ್ರಾಪ್ತವಾಯಿತು. ಬ್ರಿಟಿಷರ ವಿರುದ್ಧ ಹೋರಾಡಿ 9 ವರ್ಷ ಸೆರೆವಾಸ ಅನುಭವಿಸಿದರು. ಇವರಿಗೆ ಮರಣಾನಂತರ 'ಭಾರತ ರತ್ನ' ಗೌರವ ನೀಡಲಾಯಿತು.
ಇವರ ಬಾಲ್ಯದ ದಿನಗಳು ರೋಚಕವಾದುದು. ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು. ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು ಕೀಳುತ್ತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತ್ತಿದ್ದ. ಮಾಲಿ ಅಲ್ಲಿಗೆ ಬಂದ ಕೂಡಲೇ ಹುಡುಗರೆಲ್ಲ ಕಾಲ್ಕಿತ್ತರು. ಈ ಬಾಲಕ ಸಿಕ್ಕಿಬಿದ್ದ. ಮಾಲಿ ಹುಡುಗನಿಗೆ ಬಯ್ದು, ಥಳಿಸಲಾರಂಭಿಸಿದ. ಆ ಬಾಲಕ 'ನನ್ನನ್ನು ಬಿಟ್ಟು ಬಿಡಿ, ನಾನು ಅಪ್ಪ ಇಲ್ಲದ ಹುಡುಗ' ಎಂದು ಅಂಗಲಾಚಿದ. ಕರಗಿದ ಮಾಲಿ, 'ಅಪ್ಪ ಇಲ್ಲದವನು ಇನ್ನು ಮೇಲೆ ಜವಾಬ್ದಾರಿಯುತವಾಗಿ ಇರುವುದನ್ನು ಕಲಿ' ಎಂದು ಹೇಳಿ ಬಿಟ್ಟುಬಿಟ್ಟ. ಅಲ್ಲಿಂದ ಇನ್ನೆಂದೂ ಇಂಥ ಕೆಲಸ ಮಾಡುವುದಿಲ್ಲವೆಂದು ಪ್ರತಿಜ್ಞೆ ತೊಟ್ಟ ಆ ಹುಡುಗನಿಗೆ ಆಗ 6-7 ವರ್ಷವಿದ್ದಿರಬೇಕು. ಅವರೇ ಮುಂದೇ ಶಾಸ್ತ್ರೀಜಿ.
'ಜೈ ಜವಾನ್ ಜೈ ಕಿಸಾನ್‌' ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ ಇವರು. ದೇಶ ಕಂಡ ಅಪರೂಪದ ಪ್ರಧಾನಿ. 1965ರಲ್ಲಿ ಪಾಕ್ ನಮ್ಮ ಮೇಲೆ ಯುದ್ಧ ಸಾರಿದಾಗ ಇಡೀ ದೇಶ ಭಾರಿ ಸಂಕಷ್ಟಕ್ಕೆ ಗುರಿಯಾಯಿತು. ಕಾಶ್ಮೀರವನ್ನು ನಾವು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದೆವು. ಅಂಥ ಒತ್ತಡದಲ್ಲೂ ಧೃತಿಗೆಡದೆ ಭಾರತವನ್ನು ಅಪಾಯದ ಅಂಚಿನಿಂದ ಪಾರುಮಾಡಿದ ಧೀಮಂತ ನಾಯಕ ಇವರು. 1965ರ ಈ ಗೆಲುವು, 1962ರ ಚೀನಾ ಯುದ್ಧದ ಸೋಲಿನಿಂದ ಕಂಗೆಟ್ಟಿದ್ದ ಇಡೀ ಭಾರತಕ್ಕೆ ಹೆಮ್ಮೆ ತಂದಿತ್ತು. ಭಾರತಕ್ಕೆ ಕೇವಲ 17 ತಿಂಗಳು ಪ್ರಧಾನಿಯಾಗಿದ್ದ ಶಾಸ್ತ್ರಿಯವರ ಕೊಡುಗೆ ಅವಿಸ್ಮರಣೀಯ. ಇಡೀ ದೇಶವನ್ನು ಇವರು ಸ್ವಾಭಿಮಾನಿಯನ್ನಾಗಿ ಮಾಡಿದರು. ಇವರ ಆಡಳಿತಾವಧಿಯಲ್ಲಿ ಬರಗಾಲ ಬಂತು. ಹೊರದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲಭಾರ ಅಧಿಕವಾಯಿತು. ಅದನ್ನರಿತ ಶಾಸ್ತ್ರಿಯವರು ವಾರದಲ್ಲಿ ಒಂದು ದಿನ ಊಟ ಬಿಟ್ಟರೆ ಎಷ್ಟು ಆಹಾರ ಸಂಗ್ರಹವಾಗುವುದೆಂದು ಲೆಕ್ಕಾಚಾರ ಹಾಕಿ ಪ್ರತಿ ಸೋಮವಾರ ರಾತ್ರಿ ಊಟ ಬಿಡಲು ಜನರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟ ತ್ಯಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.