ಸಂಗೀತ ವಟವೃಕ್ಷದ ಮಹಾಬೇರು ಘರಾಣೆ
ಇನ್ನು ರಾಜಸ್ಥಾನದ 'ಮೇವತ್' ಪ್ರದೇಶದಿಂದ ಹುಟ್ಟಿದ ಮೇವಾತಿ ಘರಾಣೆ ಗ್ವಾಲಿಯರ್ ಘರಾಣೆಯಿಂದ ಹುಟ್ಟಿ ನಂತರ ತನ್ನದೇ ವಿಭಿನ್ನ ಶೈಲಿಯನ್ನು ಮೈಗೂಡಿಸಿಕೊಂಡು ...

ಇನ್ನು ರಾಜಸ್ಥಾನದ 'ಮೇವತ್' ಪ್ರದೇಶದಿಂದ ಹುಟ್ಟಿದ ಮೇವಾತಿ ಘರಾಣೆ ಗ್ವಾಲಿಯರ್ ಘರಾಣೆಯಿಂದ ಹುಟ್ಟಿ ನಂತರ ತನ್ನದೇ ವಿಭಿನ್ನ ಶೈಲಿಯನ್ನು ಮೈಗೂಡಿಸಿಕೊಂಡು ಬೆಳೆದ ಘರಾಣೆ. ಉಸ್ತಾದ್ ಘಗ್ಗೆ ನಾಝಿರ್ ಖಾನ್ ಇದರ ಪ್ರವರ್ತಕರು. ಮುಂದೆ ಪಂಡಿತ್ ಮಣಿರಾಮ್ ಹಾಗೂ ಅವರ ತಮ್ಮ ಹಾಗೂ ಶಿಷ್ಯರಾದ ಜಗತ್ಪ್ರಸಿದ್ಧ ಗಾಯಕ ಪಂ.ಜಸರಾಜ್ ಈ ಘರಾಣೆಯ ವಿಶಿಷ್ಟತೆಗೆ ತಮ್ಮ ಕಲ್ಪನೆ ಹಾಗೂ ಕ್ರಿಯಾಶೀಲತೆಯನ್ನು ಸೇರಿಸಿ ಅದನ್ನು ಇನ್ನೂ ಸುಂದರವಾಗಿಸಿ ಅದರ ಕಂಪನ್ನು ಎಲ್ಲೆಡೆ ಪಸರಿಸಿದರು.
ಹೀಗೆಯೇ ಇತಿಹಾಸವನ್ನು ಸೃಷ್ಟಿಸುವಂಥ ಕಲಾವಿದರನ್ನು ಜಗತ್ತಿಗೆ ನೀಡಿದ ಇನ್ನೊಂದು ಘರಾಣೆ ಉತ್ತರ ಪ್ರದೇಶದ ರಾಂಪುರ್ ಹಾಗೂ ಸಹಸವಾನಾ ಪ್ರದೇಶದಿಂದ ಹುಟ್ಟಿ ಬೆಳೆದ 'ರಾಂಪುರ್ ಸಹಸವಾನಾ' ಘರಾಣೆ. ಇದು ಹುಟ್ಟಿದ್ದು ರಾಂಪುರದ ಆಸ್ಥಾನ ಗಾಯಕರಾಗಿದ್ದ ಉಸ್ತಾದ್ ಮೆಹಬೂಬ್ ಖಾನರಿಂದ. ಪ್ರಸ್ತುತ ಹೆಸರಾಂತ ಕಲಾವಿದರಾದ ಉಸ್ತಾದ್ ಗುಲಾಂ ಮುಸ್ತಫಾ ಖಾನ್ ಹಾಗೂ ಉಸ್ತಾದ್ ರಶೀದ್ ಖಾನ್ ಈ ಘರಾಣೆಯನ್ನು ಪ್ರಸಿದ್ಧಿಗೆ ತಂದ ಮಹನೀಯರು.
ಇಷ್ಟೇ ಅಲ್ಲ, ತಬಲಾದಲ್ಲಿ; ಸಿತಾರ್ನಲ್ಲಿ; ಸರೋದ್ನಲ್ಲಿ; ಸಾರಂಗಿಯಲ್ಲಿ; ನೃತ್ಯದಲ್ಲಿ ಹೀಗೆ ಪ್ರತಿಯೊಂದರಲ್ಲೂ ಹತ್ತಾರು ವಿಭಿನ್ನ ಘರಾಣೆಗಳಿವೆ. ಆಯಾ ಘರಾಣೆಗೆ ತಕ್ಕಂತೆ ಅವರು ವಾದ್ಯದ ಮೇಲೆ ಕೈ ಇಡುವ ಅಂಶದಿಂದ ಹಿಡಿದು, ಅದರಲ್ಲಿ ಆಲಾಪನೆಯ ಭಾಗ, ವಿಭಿನ್ನ ರೀತಿಯ ತಾಳಗಳ ಪ್ರಯೋಗ, ಮೀಂಡ್ಗಳ ಪ್ರಯೊಗ, ತಾನ್ ಪಲಟೆಗಳ ಪ್ರಯೋಗ, ಗತ್ಗಳನ್ನು ನುಡಿಸುವ ಶೈಲಿ, ಕಣ್ಸ್ವರಗಳ ಪ್ರಯೋಗ ಹೀಗೆ ಪ್ರತೀ ಅಂಶಗಳೂ ವಿಭಿನ್ನತೆ ಹಾಗೂ ವಿಶಿಷ್ಟತೆಯನ್ನು ಹೊಂದಿರುತ್ತವೆ.
ಇವತ್ತಿನ ಈ ಗ್ಲೋಬಲೈಸೇಷನ್ - ಗ್ಲೋಬಲ್ ವಿಲೇಜ್ ಎಂಬ ಕ್ಷಿಪ್ರ ಸಂವಹನಾ ಯುಗದಲ್ಲಿ ಜನಜೀವನ, ಸಂಪ್ರದಾಯ, ಉಡುಗೆತೊಡುಗೆಗಳೆಲ್ಲ ಹೇಗೆ ಒಂದು ಶೈಲಿಯಲ್ಲಿ ಇನ್ನೊಂದು ಬೆರೆತು ಒಂದರಮೇಲೆ ಇನ್ನೊದು ಪ್ರಭಾವ ಬೀರುತ್ತ ಎಲ್ಲವೂ ಸೇರಿ ಇನ್ನೊಂದು ಹೊಸ ಶೈಲಿಯೇ ಹುಟ್ಟಿಕೊಳ್ಳುತ್ತ, ಬೆಳೆಯುತ್ತ ಹೊರಟಿದೆಯೋ ಹಾಗೆಯೇ ಈ 'ಬೆರೆಯುವ' ಗುಣ - ಸ್ವಭಾವ ಶಾಸ್ತ್ರೀಯ ಸಂಗೀತದ ಘರಾಣೆಗಳಲ್ಲೂ ಆಗಿ ಆ ಘರಾಣೆಯ ಸಂಪ್ರದಾಯದ ಕಟು ಲಕ್ಷ್ಮಣ ರೇಖೆ ತೆರವಾಗುತ್ತ ಬಂದಿದೆ. ಒಂದು ವಿಧದಲ್ಲಿ, ಇದು ಇನ್ನೊಂದು ರೀತಿಯ ಕ್ರೀಯಾಶೀಲತೆಗೆ ಕಾರಣವಾದರೂ ಇವತ್ತಿಗೂ ಉತ್ತಮ ವಿದ್ಯಾವಂತ ಕಲಾವಿದರು ಒಂದು ಘರಾಣೆಯಲ್ಲಿ ಮೊದಲು ಹತ್ತು - ಹದಿನೈದು ವರ್ಷ ಕಾಲ ಕಲಿತು - ಮನಸ್ಸು , ಚಿಂತನಾ ಶೈಲಿ ಹಾಗೂ ಧ್ವನಿಯನ್ನು ಅದರಲ್ಲಿ ತಯಾರಿಗೊಳಿಸಿ ನಂತರ ವಿವಿಧ ಘರಾಣೆಗಳ ಸುಂದರ ಅಂಶಗಳನ್ನು, ವಿಷಿಷ್ಟತೆಗಳನ್ನು ಸೇರಿಸಿಕೊಂಡು ವಿದ್ಯೆಯನ್ನು ಬೆಳೆಸುವುದನ್ನು ಅತ್ಯಂತ ಉತ್ತಮ ವಿಧಾನ ಎಂದು ಗುರುತಿಸಿ ಪ್ರಶಂಸಿಸುತ್ತಾರೆ. ಉಸ್ತಾದ್ ಮಂಜೀ ಖಾನ್, ಪಂ. ಗುರುರಾವ್ ದೇಶಪಾಂಡೆಯವರಂಥ ಕಲಾವಿದರು ಈ ಪ್ರಕ್ರಿಯೆಯನ್ನು ದಶಕಗಳ ಮೊದಲೇ ಪ್ರಾರಂಭಿಸಿ ಪ್ರಸಿದ್ಧರಾಗಿದ್ದಾರೆ. ಆದರೂ ಈ ಘರಾಣೆ ಎಂಬ ಮಹಾ ಬೇರು ಸಂಗೀತ ವೆಂಬ ವಟ ವೃಕ್ಷವನ್ನು ವಿಶಾಲವಾಗಿ ಬೆಳೆಸುವಲ್ಲಿ ಮಹತ್ತರವಾದ ಕೊಡುಗೆ ನೀಡಿದೆ ಎಂಬುದರಲ್ಲಿ ಸಂಶಯವಿಲ್ಲ.
- ಶ್ರುತಿ ಭಟ್
shrutikbhat @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


