ಟಾಪ್ ಟೆನ್ ಸ್ಟೋರೀಸ್
ಒಂದು ಕಾರನ್ನು ನಂಬಿದ ಚಿತ್ರವಿದು. ಕಥೆಯ ಕೇಂದ್ರ ಕೂಡ ಆ ಕಾರೇ. ಜನ ದಟ್ಟಣೆ, ಮುಖ್ಯ ರಸ್ತೆ, ಟ್ರಾಫಿಕ್ ದಾಟಿ ಎಲೆಲ್ಲೋ ಆ ಕಾರು ಚಲಿಸುತ್ತದೆ. ಅದು ಹೋದಂತೆ ಅದರೊಟ್ಟಿಗೆ ...

ಚಿತ್ರ: ಟೆನ್ (2002)
ಭಾಷೆ: ಪರ್ಷಿಯನ್
ನಿರ್ದೇಶನ: ಅಬ್ಬಾಸ್ ಕಿಯಾರೋಸ್ತಮಿ
ಅವಧಿ: 94 ನಿಮಿಷ
ತಾರಾಗಣ: ಮಾನಿಯಾ ಅಕ್ಬರಿ, ಅಮಿನ್ ಮಹೆರ್, ಕರ್ಮಾನ್.
ಒಂದು ಕಾರನ್ನು ನಂಬಿದ ಚಿತ್ರವಿದು. ಕಥೆಯ ಕೇಂದ್ರ ಕೂಡ ಆ ಕಾರೇ. ಜನ ದಟ್ಟಣೆ, ಮುಖ್ಯ ರಸ್ತೆ, ಟ್ರಾಫಿಕ್ ದಾಟಿ ಎಲೆಲ್ಲೋ ಆ ಕಾರು ಚಲಿಸುತ್ತದೆ. ಅದು ಹೋದಂತೆ ಅದರೊಟ್ಟಿಗೆ ಜತೆಯಾಗುವ ಪ್ರತಿ ಪಾತ್ರಧಾರಿಯ ಹಿಂದೆ ಒಂದೊಂದು ಕಥೆ ಬಿಚ್ಚುಕೊಳ್ಳುತ್ತದೆ. ಎಲ್ಲೂ ನಿಲ್ಲದೆ ಸಾಗುವ ಈ ಕಥೆಗಳಿಗೆ ಕಾರು ಮೂಖ ಸಾಕ್ಷಿ ಎನ್ನುವ 'ಟೆನ್' ಚಿತ್ರದ ಕರ್ತೃ ಅಬ್ಬಾಸ್ ಕಿಯಾರೋಸ್ತಮಿ. ಚಿತ್ರದ ಹೆಸರಿಗೆ ತಕ್ಕಂತೆ ಇಲ್ಲಿ ಹತ್ತು ಮುಖಗಳು ತೆರೆದುಕೊಳ್ಳತ್ತವೆ. ಪ್ರತಿ ಮುಖವೂ ಬೇರೆ ಬೇರೆಯಾಗಿ ಕಂಡರೂ ಅವುಗಳ ಅಂತರಂಗ ಮಾತ್ರ ಒಂದೇ.
ನಮ್ಮವರೇ ಆದ ಸತ್ಯಜಿತ್ ರೇ, ಶ್ಯಾಮ್ ಬೆನಗಲ್ ಹಾಗೂ ಜಪಾನಿನ ಅಕಿರಾ ಕುರೋಸಾವಾನಂತೆ ಅಬ್ಬಾಸ್ ಕೂಡ ಅಪ್ಪಟ ಸಿನಿಮಾ ಕಾರ್ಮಿಕ. ಮೂವತ್ತನೇ ವಯಸ್ಸಿಗೆ ಸಿನಿಮಾ ಕೃಷಿಗೆ ಬಂದ ಅಬ್ಬಾಸ್ಗೆ, ಕವಿತೆ ಬರೆಯುವುದು, ಫೋಟೋಗ್ರಫಿ ಮಾಡುವ ಹವ್ಯಾಸ. 'ಟೆನ್' ಚಿತ್ರದ ಮೂಲಕ ಇರಾನಿನ ಮಧ್ಯಮ ವರ್ಗದ ಮಹಿಳೆಯರ ವ್ಯಥೆಯನ್ನು ಕಟ್ಟಿಕೊಡುತ್ತಾರೆ. ಒಂದೆಡೆ ಆಧುನಿಕತೆಯ ಬಿರುಗಾಳಿ, ಮತ್ತೊಂದೆಡೆ ಅದನ್ನು ಅಪ್ಪಿಕೊಳ್ಳಬೇಕೋ, ಬೇಡವೋ ಎನ್ನುವ ದ್ವಂದ್ವ. ಈ ಎರಡೂ ತಾಕಲಾಟಗಳನ್ನು ಸಮರ್ಥವಾಗಿ ಇಲ್ಲಿನ ಪಾತ್ರಗಳು ನಿರೂಪಿಸುತ್ತವೆ. ಮೊದಲೇ ಹೇಳಿದಂತೆ ಚಿತ್ರ ಎಲ್ಲೂ ನಿಲ್ಲಲ್ಲ. ಅದು ಓಡುತ್ತಲೇ ಇರುತ್ತದೆ. ಈ ಓಟಕ್ಕೆ ಕಾರಣ ಚಲಿಸುವ ಕಾರು ಮತ್ತು ಅದರ ಚಾಲಕಿ.
ಆಕೆ ತೆಲೆಗೆ ದುಪ್ಪಟ್ಟಾ ಸುತ್ತಿಕೊಂಡಿದ್ದಾಳೆ. ಆದರೆ ಇರಾನಿನ ಸಾಂಪ್ರದಾಯಿಕ ಹೆಣ್ಣಿನಂತೆ ಕಾಣುತ್ತಿಲ್ಲ. ದುಬಾರಿ ಎನಿಸುವ ಗಾಗಲ್, ಚೂಡಿದಾರ, ಕಣ್ಣಿಗೆ ರಾಚುವ ಆಕೆಯ ಲಿಪ್ಸ್ಟಿಕ್, ಪ್ರಬುದ್ಧ ಚೆಲುವೆ, ಆಕೆ ಕಾರು ಡ್ರೈವ್ ಮಾಡುವಾಗಿನ ಸಮಯ ಪ್ರಜ್ಞೆ, ಟಾಫಿಕ್ನಲ್ಲಿ ಎದುರಾಗುವ ವಾಹನ ಚಾಲಕರ ಜೊತೆ ವರ್ತನೆ ಎಲ್ಲವೂ ಜವಾಬ್ದಾರಿ ಹೆಣ್ಣಿನಂತೆ. ಮೊದಲ ಗಂಡನಿಗೆ ವಿಚ್ಛೇದನ ಕೊಟ್ಟು ಎರಡನೇ ಮದುವೆಯಾಗಿರುವ ಆಕೆಗೆ ಇನ್ನೂ ಹರೆಯಕ್ಕೆ ಬಾರದ ಪುಟ್ಟ ಮಗ ಇದ್ದಾನೆ. ಅವನೊಂದಿಗೆ ಜಗಳವಾಡುವ ದೃಶ್ಯದೊಂದಿಗೆ ಚಿತ್ರ ಶುರು. ಅಮೀನ್, ತನ್ನ ತಾಯಿ ಎರಡನೇ ಮದುವೆಯಾಗಿರುವುದನ್ನು ಸಹಿಸದ ಪೋರ. ಶಾಲೆಗೆ ಹೋಗುತ್ತಿದ್ದಾನೆ. ಪ್ರತಿ ಬಾರಿ ಕಾರಿನಲ್ಲಿ ಹತ್ತುವಾಗ ಅಮ್ಮನೊಂದಿಗೆ ಜಗಳ ಮಾಡುತ್ತಾನೆ. ಸಹಜ ಹಕ್ಕುಗಳನ್ನು ಮಗನ ಮೇಲೆ ಪ್ರಯೋಗಿಸಿ ತಾಯಿ ಮಾತನಾಡುತ್ತಾಳೆ. ಇಲ್ಲೊಂದು ಮ್ಯಾಜಿಕ್ ಇದೆ. ಅಮೀನ್ನೊಂದಿಗೆ ಮಾತನಾಡುವ ಅವನ ತಾಯಿಯ ಮುಖ ನಮಗೆ ಗೋಚರಿಸಲ್ಲ. ಆತ ಕಾರಿನಿಂದ ಇಳಿದ ನಂತರವೇ ಆಕೆಯ ಮುಖದರ್ಶನ. ಅಲ್ಲಿಯವರೆಗೂ ಅವಳ ಪಾತ್ರವೇ ನಾವಾಗಿರುತ್ತೇವೆ! 'ನೀನು ಸ್ವಾರ್ಥಿ. ನಿನ್ನ ಆಸೆಗಳಿಗಾಗಿ ಇನ್ನೊಂದು ಮದುವೆಯಾದೆ. ಮಗನಿಗಿಂತ ಮದುವೆ ದೊಡ್ಡದಾಯಿತು. ನೀನು ಒಳ್ಳೆಯ ತಾಯಿಯಲ್ಲ' ಎಂದು ಅಲ್ಲಿಯ ವರೆಗೂ ಹೇಳುತ್ತಿದ್ದು ಅಮೀನ್ ನಮಗೇನಾ? ತಾನು ಬಿಟ್ಟ ಗಂಡನ ಮನಸ್ಥಿತಿಯನ್ನೇ ತನ್ನ ಮಗನಲ್ಲೂ ಕಾಣುವ ತಾಯಿ ಮುಂದೊಂದು ದಿನ ಇವನು ಅವನಂತೆಯೇ ಆಗುತ್ತಾನೆಯೇ? ಎನ್ನುವ ಪ್ರಶ್ನೆ ಅವಳದ್ದಾ, ನಮ್ಮದಾ?
ಕಾರು ಸಾಗುತ್ತಿದೆ. ಸ್ವಲ್ಪ ದೂರ ಹೋದ ಮೇಲೆ ತನ್ನ ಸೋದರಿಯನ್ನು ಕೂರಿಸಿಕೊಂಡು ಪಯಣಿಸುತ್ತಾಳೆ. ಸೋದರಿಯಿಂದ ಚಾಲಕಿಗೆ ಬುದ್ಧಿವಾದ. 'ಆಟವಾಡುವ ಮಗನಿಗೆ ತಂದೆ ಮುಖ್ಯವಲ್ಲವೆ? ಅವನಿಗೆ ಫುಟ್ಬಾಲ್ ಎಂದರೆ ತುಂಬಾ ಇಷ್ಟ. ಈಗ ನಿನಗಿಂತ ಅವನಿಗೆ ಅಪ್ಪನೇ ಬೇಕು' ಎನ್ನುತ್ತಾಳೆ. ತನ್ನ ಸೋದರಿ ಹೇಳಿದ್ದು ಸರಿ ಎನಿಸುತ್ತದೆ. ಇಲ್ಲಿ ಮತ್ತೊಂದು ವೈರುಧ್ಯವಿದೆ. ಅಕ್ಕನಿಗೆ ಬುದ್ಧಿ ಹೇಳುವ ಸೋದರಿಯ ಜೀವನವೇನು ಸುಖವಾಗಿಲ್ಲ. ಆಕೆಯ ಮುಖವನ್ನು ಕ್ಯಾಮೆರಾ ಹತ್ತಿರವಾಗಿಸಿದಾಗ ಏನೋ ಚಡಪಡಿಕೆ, ಮನಸ್ಸಿನೊಳಗೆ ತಾಕಲಾಟ, ಅತ್ತಿತ್ತ ನೋಡುತ್ತ ಬೆರಳುಗಳಿಂದ ಮುಖ ಚಿವುಟಿಕೊಳ್ಳುವ, ಕೂತಲ್ಲೇ ಚಡಪಡಿಸುವ ಅವಳ ಬದುಕೂ ಮುಸುಕುಮುಸುಕು ಎಂಬ ಕ್ಯಾಮೆರಾ ಕಣ್ಣಿನ ಸತ್ಯ. ಆದರೂ ಉಪದೇಶ ಕೊಡುತ್ತಾಳೆ! ಈಗ ವಯಸ್ಸಾದ ಮುದುಕಿ. ಆಕೆಯ ಮುಖವೂ ಕಾಣಲ್ಲ. ಪ್ರಾರ್ಥನೆ, ದೈವಭಕ್ತಿಯ ಮಾತುಗಳಿಂದಲೇ ಕಾರು ಹತ್ತಿದ್ದು ಮುಪ್ಪಿನ ಚಿಪ್ಪು ಎಂದು ತಿಳಿಯಬೇಕು. ಮುದುಕಿ ಇಳಿದಾಗ ಕಾರು ಕತ್ತಲಲ್ಲಿ ನಿಂತಿದೆ. ಕಾರಿನ ಚಾಲಕ ಗಂಡು ಎಂದುಕೊಂಡು ವೇಶ್ಯೆ ಕಾರಿನೊಳಗೆ ಕೂರುತ್ತಾಳೆ. ಆದರೆ ಚಾಲಕಿಯನ್ನು ನೋಡಿ ಇಳಿಯಲು ಹೋಗುತ್ತಾಳೆ. ಚಾಲಕಿ ಬಿಡಲ್ಲ. ವೇಶ್ಯೆ ಬದುಕಿನ ಸತ್ಯ ತಿಳಿಯುಲು ಹೋಗುತ್ತಾಳೆ. ಇಲ್ಲೂ ನಮಗೆ ವೇಶ್ಯೆ ಮುಖ ಕಾಣದು. ವಿಚಿತ್ರವಾಗಿ ನಗುತ್ತ ಸೆಕ್ಸು, ಗಂಡಸರ ಭಾವನೆಗಳು, ಮದುವೆ, ಮಕ್ಕಳು ಹೀಗೆ ಎಲ್ಲದರ ಬಗ್ಗೆ ನಿರ್ಭಯವಾಗಿ ಮಾತನಾಡುವ ವೇಶ್ಯೆಯ ಮಾತುಗಳು ಮರು ಮದುವೆಯಾಗಿರುವ ಚಾಲಕಿಯ ಪ್ರಜ್ಞೆಯನ್ನು ಕದಡುತ್ತದೆ.
ಕತ್ತಲಲ್ಲೇ ಮತ್ತೊಂದು ಕಾರಿನಲ್ಲಿ ಮಾಯವಾದ ಮೇಲೆ ನಂತರ ಮತ್ತೊಬ್ಬಳು ಬರುತ್ತಾಳೆ. ಈಕೆಯದ್ದು ವೇಶ್ಯೆ ಮತ್ತು ಚಾಲಕಿಯ ಮನಸ್ಥಿತಿಗೆ ತದ್ವಿರುದ್ಧ ವ್ಯಕ್ತಿತ್ವ. ಪ್ರೀತಿಸಿದ ಹುಡುಗನನ್ನು ಪಡೆಯಲಾಗದ ನತದೃಷ್ಟೆ. ಮಡಿವಂತ ಹೆಣ್ಣು. ಕಟ್ಟುಪಾಡುಗಳ ಮೂರ್ತ ರೂಪ. ಎರಡನೇ ಬಾರಿ ಹತ್ತಿದಾಗ ಈಕೆ ತಲೆ ಬೋಳಿಸಿಕೊಂಡು ಬಟ್ಟೆ ಸಡಿಲಾಗಿ ತಲೆಗೆ ಕಟ್ಟಿಕೊಂಡಿದ್ದಾಳೆ. ಈಗ ಅವಳು ಕಟ್ಟುಪಾಡುಗಳಿಂದ ಬಿಡುಗಡೆಯಾಗಿದ್ದಾಳೆಯೇ? ಮತ್ತೆ ಚಾಲಕಿಯ ಮಗನ ಆಗಮನ. ಈಗ ಇಬ್ಬರ ನಡುವೆ ಒಂದಿಷ್ಟು ವಿನೋದ ಮತ್ತು ಜಗಳ. ಬಂಡಾಯಗಾರನಂತೆ ಕಾಣುವ ಅಮೀನ್, ಭಗ್ನ ಪ್ರೇಮಿ, ದೈವಭಕ್ತೆ, ವಿಷಾದ ಬದುಕಿನಲ್ಲೂ ಉಪದೇಶ ಮಾಡುವಾಕೆ, ಒಬ್ಬ ವೇಶ್ಯೆ ಹೀಗೆ ವಿಭಿನ್ನ ಸ್ತರಗಳ, ಬೇರೆ ಬೇರೆ ಪಾತ್ರಗಳ ಮೂಲಕ ಸಮುದಾಯದ ಅಂತರಂಗವನ್ನು 'ಟೆನ್' ಚಿತ್ರ ಎತ್ತಿ ಹಿಡಿತ್ತದೆ. ಆ ಮೂಲಕ ಪ್ರತಿ ಶಾಟ್ನಲ್ಲೂ ಒಂದೊಂದು ಕಥೆ ಹೊತ್ತು ಪಯಣಿಸುವ ಪಾತ್ರಧಾರಿಗಳಿಂದ ಅಬ್ಬಾಸ್, ಇರಾನಿನ ಮಧ್ಯಮ ವರ್ಗದ ಜನರ ಬದುಕು, ಬವಣೆಗಳನ್ನು ಅತ್ಯಂತ ಸೂಕ್ಷ್ಮವಾಗಿ ತೆರೆದಿಡುತ್ತಾರೆ. ಹಾಗೆ ನೋಡಿದರೆ ಅಬ್ಬಾಸ್ನ ಚಿತ್ರಗಳಲ್ಲಿ ಕೊರತೆ ಇಲ್ಲ ಎನ್ನಲಾಗದು. ಪ್ರತಿ ದೃಶ್ಯದ ಒಳ ಧ್ವನಿ ಮತ್ತು ನೋಟಗಳು ಅರ್ಥವಾಗದೆ ಹೋದಾಗ ಚಿತ್ರ ಸಪ್ಪೆಯಾಗುತ್ತದೆ. ಒಮೊಮ್ಮೆ ಸನ್ನೆಗಳಿಂದಲೇ ಪಾತ್ರ ಅಥವಾ ಕಥೆಯ ಅಂತರಾಳ ಬಿಚ್ಚಿಡುವ ಇಂಥ ನಿರ್ದೇಶಕರ ಚಿತ್ರಗಳನ್ನು ನೋಡುವುದರಿಂದ ಮಾತ್ರ ಅರ್ಥವಾಗದು. ನೋಟದಲ್ಲಿ ಓದುವ ಕ್ರಮ ಬೆಳೆಸಿಕೊಂಡಾಗ ಅಬ್ಬಾಸ್ ಮಾತ್ರವಲ್ಲ, ಜಗತ್ತಿನ ಯಾವುದೇ ಸಿನಿಮಾ ಆಪ್ತ ಕಲಾಕೃತಿಗಳಾಗುತ್ತವೆ ಎಂಬುದಕ್ಕೆ 'ಟೆನ್' ಚಿತ್ರದ ಕಥೆಗಳೇ ನಿದರ್ಶನ.
- ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


